ಜೋಗಿ ಬರೆಯುತ್ತಾರೆ- ನೆಲೆಗಟ್ಟಿನವರು, ಮೊಲೆಗಟ್ಟಿನವರು, ತಲೆಗಟ್ಟಿನವರು…

jogi21ಜೋಗಿ

ತಾತ್ವಿಕ ನೆಲೆಗಟ್ಟು ಎಂಬ ತುತ್ತೂರಿಯೂ..ಸುಡುಗಾಡು ಸಾಹಿತ್ಯವೂ….

ನನ್ನಂಥ ಕವಿಯಿಲ್ಲ, ನನ್ನ ಕವಿತೆಗಳನ್ನು ಅರ್ಥ ಮಾಡಿಕೊಳ್ಳುವವರಿಲ್ಲ ಎಂದು ಕೊರಗುವ ಕವಿ ಪುಂಗವರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಅಂಥದ್ದೇ ಆಕ್ಷೇಪವನ್ನು ಆಗಗ ಕತೆಗಾರರೂ, ಕಾದಂಬರಿಕಾರರೂ ವ್ಯಕ್ತಪಡಿಸಿ ತೃಪ್ತರಾಗುವುದುಂಟು. ಶಿವರಾಮ ಕಾರಂತ, ತೇಜಸ್ವಿ, ಗಂಗಾಧರ ಚಿತ್ತಾಲ, ಖಾಸನೀಸರಂಥ ಕೆಲವರನ್ನು ಬಿಟ್ಟರೆ ಬಹುತೇಕ ಮಂದಿ ವಿಮರ್ಶೆಗಾಗಿ ಹಾತೊರೆಯುವ ಮಿಡುಕು ಜೀವಿಗಳೇ.

image52

ಹನ್ನೆರಡು ಮಂದಿ ವಿಮರ್ಶಕರೂ ಆವರನ್ನ ಉಘೇ ಉಘೇ ಅನ್ನುವ ಮತ್ತೊಂದಿಪ್ಪತ್ತೆರಡು ಮಂದಿ ಸಹವಾಸಿಗಳೂ ಸೇರಿದರೆ ಸಾಹಿತ್ಯ ಲೋಕ ಸಂಪನ್ನವಾಗುತ್ತದೆ ಎಂಬ ನಂಬಿಕೆಯೇ ಈ ಕೊರಗುವಿಕೆಗೆ ಮೂಲ. ಇವತ್ತು ಬರೆಯುತ್ತಿರುವ, ಓದಿಸಿಕೊಳ್ಳುತ್ತಿರುವ ಲೇಖಕರ ಪಟ್ಟಿಯನ್ನೇ ತೆಗೆದು ನೋಡಿ: ವಸುಧೇಂದ್ರನಿಂದ ಹಿಡಿದು ರವಿ ಬೆಳಗೆರೆಯ ತನಕ, ವಿವೇಕ ಶಾನಭಾಗರಿಂದ ಹಿಡಿದು ಕೆ. ಎನ್. ಗಣೇಶಯ್ಯನ ತನಕ ಯಾರೊಬ್ಬರ ಕೃತಿಯನ್ನೂ ಓದುಗರು ವಿಮರ್ಶಕರ ಮಾತನ್ನು ನೆಚ್ಚಿಕೊಂಡು ಕೊಂಡುಕೊಂಡಿಲ್ಲ. ಅವರ ಕತೆಗಳೂ ಬರಹಗಳೂ ಚೆನ್ನಾಗಿದ್ದವು. ಹೀಗಾಗಿ ಅವು ಸ್ವಂತ ಶಕ್ತಿಯಿಂದ ಓದುಗರನ್ನು ಹುಡುಕಿಕೊಂಡವು. ವಿಮರ್ಶಕರು ಅವುಗಳ ಬಗ್ಗೆ ಬರೆದಿದ್ದರೆ ಬಹುಶಃ ಮಾರಾಟ ಕಡಿಮೆ ಆಗುತ್ತಿತ್ತೋ ಏನೋ?

ಈ ಮಧ್ಯೆ ಮಾರಾಟವಾಗುವುದು, ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದೇ ಅಪರಾಧ ಎಂದು ಭಾವಿಸುವ ಬುದ್ದಿವಂತರೂ ನಮ್ಮಲ್ಲಿದ್ದಾರೆ. ಪುಸ್ತಕ ಬರೆಯುವುದೂ, ಅದು ಮಾರಾಟವಾಗುವುದೂ, ಪ್ರಕಾಶಕ ಹಣ ಮಾಡುವುದೂ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದೂ ಘೋರ ಅಪರಾಧ ಎಂಬಂತೆ ಬ್ಲಾಗುಗಳಲ್ಲಿ ಬರೆಯುವವರಿದ್ದಾರೆ. ಇನ್ನೊಬ್ಬ ಲೇಖಕನ ಬಗ್ಗೆ ಮೆಚ್ಚುಗೆಯ ಮಾತಾಡಿದರೆ ಅದನ್ನು ಪರಸ್ಪರ ಬೆನ್ನು ತಟ್ಟಿಕೊಳ್ಳುವ ಗುಣ ಎಂದು ವರ್ಣಿಸಲಾಗುತ್ತದೆ. ವಿಮರ್ಶಕರು ಹಳೆಯ ಮಾನದಂಡಗಳನ್ನಿಟ್ಟುಕೊಂಡು ವಿಮರ್ಶೆ ಮಾಡುತ್ತಾರೆ ಎಂದು ಕೊರಗತೊಡಗುತ್ತಾರೆ. ಇಂಥವರ ಕನಸಿನಲ್ಲಿ ಪದೇ ಪದೇ ಡಿ. ಆರ್. ನಾಗರಾಜ್ ಪ್ರತ್ಯಕ್ಷರಾಗುತ್ತಾರೆ.

ಈ ಪಂಗಡದಲ್ಲಿ ಕಾಣಿಸಿಕೊಳ್ಳುವ ಪ್ರತಿಭಾವಂತರ ಗುಣ ಲಕ್ಷಣಗಳನ್ನಿಲ್ಲಿ ಪಟ್ಟಿಮಾಡಲಾಗಿದೆ. ಸಹೃದಯ ಓದುಗರು ಈ ಪ್ರಬೇಧಕ್ಕೆ ಸೇರಿದ ಜೀವಿಗಳಿಂದ ದೂರ ಇರುವಂತೆ ಕೋರಲಾಗಿದೆ.

ನೆಲೆಗಟ್ಟಿನವರು:

ಇವರು ಜನಸಂಖ್ಯೆ ಕಡಿಮೆ ಇರುವ ಕವಿಗೋಷ್ಠಿಗಳಲ್ಲಿ ಕಾಣ ಸಿಗುತ್ತಾರೆ. ಕವಿತೆಗಳಿಗೆ ಹೇಗೆ ಪ್ರತಿಕ್ರಿಯೆ ಬರುತ್ತದೆ ಎಂದು ಕಾಯುತ್ತಾ ಕೂರುತ್ತಾರೆ. ಕವಿತೆಗಳನ್ನು ಅಲ್ಲಿಗೆ ಬಂದ ಮಂದಿ ಮೆಚ್ಚಿಕೊಂಡರೆ ನಿರಾಶರಾಗುತ್ತಾರೆ. ಕವಿತೆ ಎಲ್ಲರಿಗೂ ಅರ್ಥವಾಗಿ, ಸಂತೋಷ ಹುಟ್ಟಿಸಿ, ನಗು ತರಿಸಿದರೆ ಅದು ಅಪರಾಧ ಎಂಬುದನ್ನು ಇವರು ಬಲ್ಲರು.

ತಾತ್ವಿಕ ನೆಲೆಗಟ್ಟು ಎಂಬುದುಇವರಿಗೆ ಪ್ರಿಯವಾದ ಪದ. ಅದನ್ನು ಹೆಬ್ಬೆರಳಿನ ಹಾಗೆ ಚೀಪುತ್ತಾ ಇರುವ ಇವರು ಯಾವುದಕ್ಕೂ ತಾತ್ವಿಕ ನೆಲೆಗಟ್ಟನ್ನು ಅನ್ವಯಿಸಿಕೊಂಡು ಮಾತಾಡಬಲ್ಲರು. ಎಲ್ಲರೂ ಹಸಿವಾದಾಗ ಇಡ್ಲಿ ತಯಾರಾದ ಕ್ರಮವನ್ನು ಯೋಚಿಸುತ್ತಾ ಇಡ್ಲಿ ತಿನ್ನುತ್ತಾರೆ. ಇಡ್ಲಿಯನ್ನು ಚಟ್ನಿಯ ಜೊತೆ ತಿನ್ನಬೇಕೋ ಸಾಂಬಾರಿನ ಜೊತೆಗೋ ಎಂಬ ಬಗ್ಗೆ ತಮ್ಮ ಹಿರಿಯ ತಲೆಮಾರಿನ ಚಿಂತಕರು ಹೇಳಿದ ಮಾತನ್ನು ಆಗಾಗ ಹೇಳುತ್ತಿರುತ್ತಾರೆ.

ಯಾವುದು ಮಾರಾಟವಾಗುತ್ತದೋ ಅದು ಕಳಪೆ ಸಾಹಿತ್ಯ ಎಂಬ ತೀರ್ಮಾನಕ್ಕೆ ಇವರು ಹಿಂದಿನ ಜನ್ಮದಲ್ಲೇ ಬಂದಾಗಿರುತ್ತದೆ. ಮುಂದಿನ ಜನ್ಮದ ತನಕ ತಾತ್ವಿಕ ನೆಲೆಗಟ್ಟಿನ ಬಗ್ಗೆ ಮಾತಾಡುವುದೆಂದು ನಿರ್ಧಾರ ಮಾಡಿಕೊಂಡಿರುತ್ತಾರೆ. ಉದ್ಯೋಗ ಯಾವುದೇ ಆಗಿರಲಿ, ಖಾಸಗಿ ಚಿಂತನೆ ಬೇರೆ ಎಂದು ನಂಬಿರುವ ಇವರು ಹಗಲು ನಿದ್ರೆ ಮಾಡುತ್ತಾರೆ, ರಾತ್ರಿ ಮಾತನಾಡುತ್ತಾರೆ. ಅದಕ್ಕೆ ಯಾರ ಕನಸಾದರೂ ಚಿಂತೆಯಿಲ್ಲ. ಆದರೆ ಕನಸನ್ನು ಕನಸು ಎಂದು ಕರೆಯುವದಕ್ಕೆ ಇವರ ಪ್ರಬಲ ವಿರೋಧವಿದೆ.

ಮೊಲೆಗಟ್ಟಿನವರು:

ಇವರದು ಏಕೈಕ ಸಿದ್ಧಾಂತ. ಜಗತ್ತಿನ ಅತ್ಯಂತ ಶ್ರೇಷ್ಠ ಕವಿ ಬೋಧಿಲೇರ ಎಂದು ನಂಬಿದ ಜನಾಂಗ ಇದು. ದುರದೃಷ್ಟವಶಾತ್ ಬೋಧಿಲೇರನ ಒಂದಾದರೂ ಸಂಕಲನವನ್ನು ಲಂಕೇಶ್ ಅನುವಾದಿಸಿಕೊಟ್ಟು ದಿವಂಗತರಾದ್ದರಿಂದ ಇವರ ಪಾಲಿಗೆ ಪವಿತ್ರ ಗ್ರಂಥವೊಂದು ಲಭ್ಯವಾದಂತಾಯಿತು. ಕನ್ನಡ ಸಾಹಿತ್ಯದ ಅದೃಷ್ಟವೆಂದರೆ ಬೋಧಿಲೇರ್ ಜಾಸ್ತಿ ಬರೆಯಲು ಹೋಗಲಿಲ್ಲ. ಲಂಕೇಶರೂ ಲಂಕೇಶರು ಜಾಸ್ತಿ ಅನುವಾದಿಸಲಿಲ್ಲ.

ಇವರ ಮೊಲೆಗಟ್ಟು ಸಿದ್ಧಾಂತದ ಪ್ರಕಾರ ಎಲ್ಲವೂ ಇಂದ್ರಿಯ ಗಮ್ಯ. ಬರೆಯುವದಕ್ಕೂ ಆಚರಣೆಗೂ ಸಂಬಂಧ ಇರಬೇಕಾಗಿಲ್ಲ. ಹೇರಳವಾಗಿ ಅಂಗಾಂಗಗಳನ್ನು ವರ್ಣಿಸುವುದು ಕಡ್ಡಾಯ ಮತ್ತು ಅದನ್ನು ಕೇವಲ ಅಂಗಾಂಗದ ವರ್ಣನೆ ಎಂದು ಭಾವಿಸುವುದು ಅಪರಾಧ. ಅಂಗಾಂಗವನ್ನು ಕೆತ್ತಿ, ಕಡೆದು, ಗುದ್ದಿ, ತಡವಿ ರಚಿಸಿದ ಕಾವ್ಯ ಆದ್ದರಿಂದ ಅವು ಕೇವಲ ಸಂಕೇತಗಳಷ್ಟೇ.

ಈ ಪಂಗಡದಲ್ಲಿ ಮಹಿಳೆಯರ ಸಂಖ್ಯೆಯೂ ಸಾಕಷ್ಟಿದೆ. ಆದರೆ ಅವರನ್ನು ಮಹಿಳೆಯರು ಎಂದು ಕರೆದರೆ ಅವರ ಪ್ರತಿಭೆಗೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಅನ್ಯ ಅಭಿವ್ಯಕ್ತಿ ಎಂದು ಹೊಸ ಹೆಸರಿನಲ್ಲಿ ಕರೆಯಬೇಕೆಂದು ಸಾಹಿತ್ಯ ಜಗತ್ತನ್ನು ವಿನಂತಿಸಿಕೊಳ್ಳಲಾಗುತ್ತಿದೆ.

ತಲೆಗಟ್ಟಿನವರು:

ಪತ್ರಿಕೆಗಳನ್ನೂ ಮಾಧ್ಯಮಗಳನ್ನೂ ದೂಷಿಸುತ್ತಾ ಬದುಕುವ ಉಪ ಸಾಹಿತ್ಯ ಜೀವಿಗಳ ಪಂಗಡವೊಂದು ಹುಟ್ಟಿಕೊಂಡಿದೆ. ಇವರು ಹೇಳಿಕೆ ವೀರರೆಂದೂ ಕರೆಸಿಕೊಂಡವರು. ಪತ್ರಿಕೆಗಳಲ್ಲಿ ಹೇಳಿಕೆ ಬರುವುದಕ್ಕಾಗಿ ಏನನ್ನು ಬೇಕಾದರೂ ಮಾಡಬಲ್ಲವರು. ಮಾಧ್ಯಮಗಳನ್ನು ದೂಷಿಸುವುದು ಕೂಡ ಇವರ ಪ್ರಚಾರದ ಒಂದು ವಿಧಾನ.

ಸಾಪ್ತಾಹಿಕ ಪುರವಣಿಗಳಲ್ಲಿ ಬರುವುದು ವಿಮರ್ಶೆ ಅಲ್ಲ ಎಂಬುದು ಇವರ ಇತ್ತೀಚಿನ ಸಂಶೋಧನೆ. ಅವುಗಳನ್ನು ವಿಮರ್ಶೆ ಎಂದು ಕರೆದರು ಎಂಬುದಿನ್ನೂ ನಿರ್ಧಾರ ಆಗಬೇಕಿದೆ. ಅಂಥ ವಿಮರ್ಶಕರನ್ನು ಬಹಿಷ್ಕರಿಸಲು ಇವರು ಕರೆ ನೀಡಿದ್ದಾರೆ. ಹೊಸ ಪುಸ್ತಕ ಬಂದದ್ದು ಹೊರ ಜಗತ್ತಿಗೆ ಕನಿಷ್ಠ ಗೊತ್ತಾಗುವ ಹಾಗಾದರೂ ಆಗಲಿ ಎಂದು ಒದ್ದಾಡುತ್ತಿರುವ ಹೊತ್ತಲ್ಲಿ, ಪ್ರಚಾರ ತಪ್ಪು ಎನ್ನುವ ಈ ತಲೆಗಟ್ಟಿನ ಮಂದಿ, ಸಾಹಿತ್ಯ ಎಲ್ಲರಿಗೂ ಅಲ್ಲ ಎನ್ನುತ್ತಾ ಆ ಗುಂಪು ಕ್ರಮೇಣ ಕ್ಷೀಣಿಸುವುದನ್ನು ನೋಡುತ್ತಾ ಸಂಭ್ರಮಿಸುತ್ತಿದ್ದಾರೆ.

ಇವರು ಕೂಡ ನೆಲೆಗಟ್ಟು ಮತ್ತು ಮೊಲೆಗಟ್ಟು ಸಂಘದ ಅಜೀವ ಸದಸ್ಯರು. ಇವರಲ್ಲದೇ ಇನ್ನೊಂದಷ್ಟು ಅಂತಾರಾಷ್ಟ್ರೀಯ ಮನೋಸಂಸ್ಥೆಗಳೂ ನಮ್ಮಲ್ಲಿವೆ. ಅಲ್ಲಿ ಬರಾಕ್ ಒಬಾಮ್ ಅಧ್ಯಕ್ಷನಾದರೆ ಇಲ್ಲಿ ಬಾದಾಮಿ ಹಾಲು ಕುಡಿಯುವ ವರ್ಗದವರಿದ್ದಾರೆ. ಅಲಿ ಬುಷ್ ಮೇಲೆ ಚಪ್ಪಲಿ ಎಸೆದರೆ ಇಲ್ಲಿ ಬರಿಗಾಲಲ್ಲಿ ಓಡಾಡುವ ಉತ್ಸಾಹಿಗಳಿದ್ದಾರೆ. ಹಿಂದೆ ರಷ್ಯಾದಲ್ಲಿ ಆಲೂಗಡ್ಡೆ ತಿಂದರೆ ಇಂಡಿಯಾದಲ್ಲಿ ‘ಗ್ಯಾಸೆಕ್ಸ್’ ಮಾತ್ರೆ ತೆಗೆದುಕೊಳ್ಳುವ ಎಡಪಂಥೀಯರಿದ್ದರಂತೆ. ಅಂಥವರ ಪಂಗಡಕ್ಕೆ ಸೇರ್ಪಡೆಯಾಗುತ್ತಿರುವ ತಳಿ ಇದು.

* * * * * * * *

ಗಟ್ಟಿಗಿತ್ತಿ ಹೆಣ್ಣು ರಮಾಭಾಯಿ, ಹೇತ್ಲಾಂಡಿ ಹುಲಿಕುಂಟಿಯನ್ನು ನಿಭಾಯಿಸಿಕೊಂಡು ಸಂಸಾರ ತೂಗಿಸುತ್ತಾ ಸದಾ ಬೈಗಳು ಮಳೆ ಸುರಿಸುತ್ತಾ, ಈ ಸನ್ಯಾಸಿ ಗಂಡಸಿಗೆ ಅದೇನು ಹೂ ಮುಡುಕೊಳ್ಳೋ ಹುಚ್ಚೋ ಎಂದು ರಾಘವೇಂದ್ರ ಸ್ವಮಿಯನ್ನೇ ಕಿಚಾಯಿಸುತ್ತಾ ಬದುಕುತ್ತಿದ್ದಾರೆ. ಆಕೆ ಅಣ್ಣನ ಮಗಳ ಮದುವೆಗೆಂದು ತಿರುಪತಿಗೆ ಹೊರಟು ನಿಲ್ಲುತ್ತಾಳೆ. ಕದ್ದ ಸೀಳು ಲೋಟವನ್ನು ತಿರುಪತಿಯ ಹುಂಡಿಗೆ ಮಗನ ಕೈಯಿಂದ ಹಾಕಿಸುತ್ತಾಳೆ.

ತನ್ನ ವಸ್ತು ತನ್ನಗೆ ಸಿಕ್ಕಿದಕ್ಕೆ ಗರ್ಭಗುಡಿಯಲ್ಲಿ ವೆಂಕಟರಮಣ ಸ್ವಾಮಿ ಸಮಾಧಾನದ ನಿಟ್ಟುಸಿರು ಬಿಡುತ್ತಾನೆ.

ವಸುಧೇಂದ್ರರ ‘ಹಂಪಿ ಎಕ್ಸ್ಪ್ರೆಸ್’ ಸಂಕಲನದ ಮೊದಲ ಕತೆ ಹೀಗೆ ವಿಚಿತ್ರವಾಗಿ ಬೆಚ್ಚಿಬೀಳಿಸುತ್ತದೆ. ಕಳ್ಳಕಾಣಿಕೆ ಒಪ್ಪಿಸೋದಕ್ಕೆಂದು ಕದಿಯುವ ತಂದೆ ಮಗ, ನಿಜವಾಗಿಯೂ ಕಳ್ಳತನದ ಅಪವಾದ ಹೊತ್ತು ನಿಲ್ಲುವ ತಂದೆ, ಅವನನ್ನು ಕಾಪಾಡಿಕೊಳ್ಳುವ ರಮಾಭಾಯಿ, ಕಡ ತಂದ ಬಳೆಯನ್ನು ಅಡವಿಡುವ ದುಸ್ತರ, ಅದನ್ನು ಬಿಡಿಸಿಕೊಡುವ ಅಣ್ಣನ ಸಹಾನುಭೂತಿ- ಹೀಗೆ ಕತೆಯೊಂದು ಮುನುಕುಲದ ಚರಿತ್ರೆಯ ಹಗೆ ಕಣ್ಮುಂದೆ ಏನೇನನ್ನೋ ತರುತ್ತದೆ. ಎಲ್ಲೋ ಶುರುವಾಗಿ ಹೇಗೋ ಮುಗಿಯುವ ‘ಸೀಳುಲೋಟ’ ಇತ್ತೀಚಿನ ವರ್ಷಗಳಲ್ಲಿ ನಾನು ಓದಿದ ಅತ್ಯತ್ತಮ ಕತೆ. ಅದಕ್ಕಿಂತ ‘ಕೆಂಪುಗಿಣಿ’ ಸೊಗಸಾಗಿದೆ ಎಂದು ಅನೇಕರು ವಾದಿಸುತ್ತಾರಾದರೂ ನನಗೆ ‘ಕೆಂಪುಗಿಣಿ’ಯ ಕೊನೆಯಲ್ಲಿ ಬರುವ ಚಿತ್ರಣ ಅತಿ ಎನಿಸುತ್ತದೆ. ಭೂಮಿಯಲ್ಲಿ ಆಗುವ ಮಾಪರ್ಾಡುಗಳು ನನ್ನನ್ನು ಅಷ್ಟಾಗಿ ಕಂಗೆಡಿಸದೇ ಇರುವುದೂ ಅದಕ್ಕೆ ಕಾರಣ ಇರಬಹುದು.

ನಾನು ಮೆಚ್ಚಿಕೊಂಡ ಮತ್ತೊಂದು ಕತೆ ‘ಕ್ಷಮೆಯಿಲ್ಲದೂರಿನಲ್ಲಿ’. ನಮ್ಮ ಜಗತ್ತಿನ ಸಂಗತಿಗಳನ್ನು ಕಥೆಯಾಗಿಸುವ ಶೈಲಿ ಮತ್ತು ಪರಿಣತಿಗೆ ಇದು ಅತ್ಯುತ್ತಮ ಉದಾಹರಣೆ. ಕೊಎನಕೊನೆಗೆ ಇದೂ ಕೂಡ ಅತಿಯಾಯಿತು ಅನ್ನಿಸಿದರೂ ಆ ಅತಿಯಲ್ಲೂ ಒಂದು ಎಚ್ಚರಿಕೆಯಿದೆ. ತಾವು ತಲುಪಬಹುದಾದ ಪಾತಾಳದ ಅರಿವನ್ನೂ ಈ ಕತೆ ಮೂಡಿಸುತ್ತದೆ.

ಓದಬೇಕು, ಓದಲೇಬೇಕು, ಅದೇನು ಬರೆದಿದ್ದಾರೋ ನೋಡೇಬಿಡೋಣ-ಎಂಬ ಕುತೂಹಲ ಮೂಡಿಸುತ್ತಾ ಬರೆಯುತ್ತಿರುವ ಐದಾರು ಲೇಖಕರ ಪಟ್ಟಿಯಲ್ಲಿ ವಸುಧೇಂದ್ರ ಕೂಡ ಇದ್ದಾರೆ. ಅವರ ಪುಸ್ತಕ ಪ್ರೀತಿ ಈ ಕಥನ ಪ್ರೀತಿಯನ್ನೂ ಮೀರಿದ್ದು.

‘ಹಂಪಿ ಎಕ್ಸ್ಪ್ರೆಸ್’ ನಾವೆಲ್ಲರೂ ಪ್ರಯಾಣ ಮಾಡಬಹುದಾದ, ಪಯಣದ ನೆನಪನ್ನು ಸದಾಕಾಲ ಸ್ಮರಿಸಿಕೊಳ್ಳಬಹುದಾದ, ನಮ್ಮ ದೂರಗಳಿಗೆ ತಲುಪಬಹುದಾದ ಯಾನವಿಮಾನ.

ಮೀಸೆ ಮಾಮ…

ಈ ಮೀಸೆ ಮಹಿಮೆ ಓದಲು ಭೇಟಿ ಕೊಡಿ- ಅತ್ರಿ ಬುಕ್ ಸೆಂಟರ್

athri-copyashoka

ದೇವು ಬಿಚ್ಚಿಟ್ಟ ನೆನಪು

‘ನಾನು’ ಅಂದರೆ ದೇವು

-ದೇವು ಪತ್ತಾರ

ದೇವು ಪತ್ತಾರ ಪ್ರಜಾವಾಣಿಯ ಬೀದರ್ ಪ್ರತಿನಿಧಿ

 

pain5km

 

ನೋಡಿ ಸ್ವಾಮಿ ನಾನೊಬ್ಬ ಸಣ್ಣ ಮನುಷ್ಯ. ಕರ್ಣಾಟವೆಂಬ ದೇಶದ ಆಚೆಗೆ ಏನಿದೆ? ಎಂದು ಕಂಡವನಲ್ಲ. ಅಷ್ಟೇ ಏಕೆ ಕರ್ನಾಟಕದ ಒಳಗಡೆ ಕೂಡ ಹೆಚ್ಚು ಓಡಾಡಿದವನಲ್ಲ. ಏಳೆಂಟು ವರ್ಷದಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತ ಬಂದಿದ್ದೇನೆ. ಅದೂ ಹೊಟ್ಟೆಯ ಪಾಡಿಗಾಗಿ. ‘ಕೋಶ ಓದು, ದೇಶ ನೋಡು’ ಎಂಬ ಗಾದೆ ಕೇಳಿದ್ದೇನೆ. ಅದನ್ನು ಜಾರಿಗೆ ತರುವಷ್ಟು ದೊಡ್ಡ ಮನಸ್ಸು, ಮನುಷ್ಯ ನಾನಾಗಿಲ್ಲ. ಆಗಲು ಆಸೆ ಇತ್ತು, ಇದೆ. ಆದರೆ, ಎಲ್ಲ ಕನಸು- ಆಸೆಗಳು ಈಡೇರುವುದಿಲ್ಲ ಅಲ್ಲವೇ? ಎಷ್ಟೋ ಬಾರಿ ಅವು ನಮ್ಮ ಕಣ್ಣಮುಂದೆಯೇ ಕಮರಿಹೋಗುವುದನ್ನು ನೋಡುತ್ತ ಅಸಹಾಯಕರಾಗಿ ಇರಬೇಕಾಗುತ್ತದೆ. ನಾನು ಕನರ್ಾಟಕ ಎಂಬ ಬಾವಿ ಅಲ್ಲಲ್ಲ. ‘ಬೀದರ್’ ಎಂಬ ರಾಜಧಾನಿಯಿಂದ ದೂರ ಇರುವ, ನಾಲ್ಕೈದು ತಾಲ್ಲೂಕುಗಳಿರುವ ಸಣ್ಣ ಬಾವಿಯೊಳಗಿನ ಕಪ್ಪೆ. ಅದಕ್ಕೆ ತಾನಂದುಕೊಂಡದ್ದೇ ದೊಡ್ಡ ಜಗತ್ತು.

ಇದೇ ನೆಪದಲ್ಲಿ ನನ್ನ ಬಗ್ಗೆ ಒಂದಿಷ್ಟು ಬರೆಯುತ್ತೇನೆ. ಹೈದರಾಬಾದ್ ಕರ್ನಾಟಕ ಎಂಬ ಬಿರುಬಿಸಿಲಿನ ಗುಲ್ಬರ್ಗ ಜಿಲ್ಲೆಯ ಶಹಾಪುರ ಎಂಬ ಪಟ್ಟಣ ನನ್ನ ಊರು. ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಈಗ ನಿವೃತ್ತರಾಗಿದ್ದಾರೆ. ಅವರು ಕೆಲಸ ಮಾಡುತ್ತಿದ್ದ ‘ಅಣಬಿ’ ಕುಗ್ರಾಮದಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ಕರೆಂಟ್ ಇಲ್ಲದ, ಬಸ್ಗಳೇ ಬಾರದ ಯಾವ ದಿಕ್ಕಿನಿಂದ ಹೋದರೆ ನಡೆದುಕೊಂಡೇ ಹೋಗಬೇಕಾಗಿದ್ದ ಗ್ರಾಮ ಅದು. ಕತ್ತಲಾಗುತ್ತಿದ್ದಂತೆ ಸಿರಿವಂತರಂತೆ ಕಂದೀಲು ಖರೀದಿಸಲಾಗದೆ ಚಿಮಣಿಯ ಬೆಳಕಿನಲ್ಲಿ ಜೀವನ ನಡೆಸುತ್ತಿದ್ದೆವು. ಹೊಟ್ಟೆ ಬಟ್ಟೆಗೆ ಕೊರತೆ ಇರಲಿಲ್ಲ ಬಿಡಿ. ಕಲ್ಲು ಹಾಸಿನ ಛಾವಣಿ ಇದ್ದ ಕಟ್ಟಿದ ‘ಹರಜಾಪರ’ ಮನೆಗಳವು. ಶಹಾಬಾದ್ ಫರಸಿಗಳನ್ನು ಬೆಳಕು, ಗಾಳಿ ಬರುವಂತೆ ನೀರು ಸುರಿಯದೆ ಆಶ್ರಯ ನೀಡದಂತೆ ಕಲಾತ್ಮಕವಾಗಿ ಅವುಗಳನ್ನು ಒಂದರ ಮೇಲೊಂದು ಇಟ್ಟು ಮಾಳಿಗೆ ಮಾಡುತ್ತಾರೆ. ಅಂತಹ ಮಾಳಿಗೆಯಿಂದ ದೊಡ್ಡ ಗಾತ್ರದ ಕರಿಚೇಳುಗಳು ಬಿದ್ದು ಗಾಬರಿ- ಭಯ ಆತಂಕ ಪಟ್ಟ ಘಳಿಗೆಗಳು ಕಡಿಮೆಯೇನಿಲ್ಲ.

ಮೊದಲೇ ಹೇಳಿದ ಹಾಗೆ ನಮ್ಮ ಮನೆಯಲ್ಲಿ ಕಂದೀಲು ಇರಲಿಲ್ಲ. ಕರಿಚೇಳುಗಳು ಬಿದ್ದರೆ ತಕ್ಷಣ ಗೊತ್ತಾಗಲಿ ಎಂಬ ಕಾರಣಕ್ಕಾಗಿ ರಾತ್ರಿಯಿಡೀ ಚಿಮಣಿ ಹಚ್ಚಿರುತ್ತಿದ್ದೆವು. ದೊಡ್ಡ ಗಾತ್ರದ ಒಂದೇ ಕೋಣೆ ಇರುವ ಮನೆಯದು. ಆ ಊರಿನ ಕುಲಕಣರ್ಿಯವರು ತಮ್ಮ ಮನೆಯ ಹೊರಗಡೆಯಿದ್ದ ಕಟ್ಟಿಗೆ- ದನಗಳಿಗೆ ಮೇವು ಸಂಗ್ರಹಿಸಿಡುತ್ತಿದ್ದ ‘ಕೊಟಗಿ’ಯನ್ನು ಖಾಲಿ ಮಾಡಿಸಿದ್ದರು. ನಮ್ಮ ತಂದೆಯವರೇ ಹಣ ನೀಡಿ ಅದಕ್ಕೆ ಛತ್ತು ಹಾಕಿಸಿದ್ದು ನೆನಪಿದೆ. ಅದಕ್ಕಾಗಿ ‘ಬಾಡಿಗೆ’ ಕೂಡ ಕೊಡುತ್ತಿದ್ದೆವು. ಒಂದು ಮೂಲೆಯಲ್ಲಿ ಒಲೆಗಳನ್ನು ಹೂಡಿ ಅಡುಗೆ ಮಾಡಲಾಗುತ್ತಿತ್ತು. ಮತ್ತೊಂದು ಮೂಲೆಯಲ್ಲಿ ನನ್ನ ಪಾಟಿ-ಪುಸ್ತಕಗಳ ಬ್ಯಾಗು ಇಡುತ್ತಿದ್ದೆ. ಮಧ್ಯದಲ್ಲಿ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದೆವು. ಸಣ್ಣ ಪುಟ್ಟ ಸಪ್ಪಳವಾದರೂ ಎದ್ದು ಕೂಡಬೇಕು. ಹಾವು ಕಡಿದು ಸತ್ತ ಸುದ್ದಿ ಮೇಲಿಂದ ಮೇಲೆ ಕೇಳುತ್ತಿದ್ದೆವು. ಹಾವುಗಳಿರಲಿ ದೊಡ್ಡವರ ಅಂಗೈ ಅಗಲದಷ್ಟು ದೊಡ್ಡದಾಗಿದ್ದ ಚೇಳು ಕಚ್ಚುವುದೇ ಸಾಕಾಗುತ್ತಿತ್ತು ಸಾಯಲು.

ಇಂತಹದೇ ದಿನಗಳಲ್ಲಿ ನಾವು ಒಂದು ಹೊಲ ಖರೀದಿಸಿದೆವು. ನಮ್ಮ ತಂದೆಯವರ ದೂರದ ಸಂಬಂಧಿಯೇ ಅದನ್ನು ನಮಗೆ ಮಾರಿದರು. ಎಂಟು ಎಕರೆಯ ಹೊಲ ಅದು. ಜನ ಅದನ್ನು ಹೊಲ ಎಂದು ಕರೆಯುತ್ತಿದ್ದರು. ಹಾಗೆ ನೋಡಿದರು ಅದು ದೊಡ್ಡದೊಡ್ಡ ಬಂಡೆಗಳಿದ್ದ ಬಂಜರು ಭೂಮಿ. ಮೊದಲ ವರ್ಷ ಅದರಲ್ಲಿ ಬಂದ ಬೆಳೆಯ ಪ್ರಮಾಣ ಬೇರೆಯವರ ಒಂದು ಎಕರೆ ಹೊಲದ ಬೆಳೆಗೆ ಸಮನಾಗಿತ್ತು. ನಮ್ಮ ಕಡೆ ಯಾರೇ ಹೊಲ ಖರೀದಿಸಿದರೂ ‘ಮುತ್ತು’ ಬೆಳೆಯಬೇಕು ಅನ್ನುವ ಕಾರಣಕ್ಕಾಗಿ ಮೊದಲ ವರ್ಷ ಜೋಳ ಬಿತ್ತುತ್ತಾರೆ. ನಿತ್ಯ ರೊಟ್ಟಿ/ಭಕ್ರಿ ತಿನ್ನುವ ನಮ್ಮ ಮನೆಗಳಲ್ಲಿ ಆಗಾಗ ಅಂದರೆ ಹಬ್ಬ- ಹುಣ್ಣಿವೆಗಳ ಸಂದರ್ಭದಲ್ಲಿ ಅನ್ನ ಮಾಡಲಾಗುತ್ತಿತ್ತು.

ದುಬಾರಿ ಅಕ್ಕಿ ಖರೀದಿಸಿ ಅನ್ನ ಮಾಡಿ ಊಟ ಮಾಡುವುದು ಸಾಧ್ಯವೇ ಇರಲಿಲ್ಲ. ಶಹಪುರದಲ್ಲಿ ನನ್ನ ತಂದೆಯವರಿಗೆ ಪಿತ್ರಾರ್ಜಿತವಾಗಿ ಬಂದ ಗದ್ದೆಯಲ್ಲಿ ಬೆಳೆಯುತ್ತಿದ್ದ ಭತ್ತವು ನಮ್ಮ ಇಡೀ ವರ್ಷಕ್ಕೆ ಸಾಕಾಗುವಷ್ಟು ಇರುತ್ತಿತ್ತು. ಅಣಬಿಯಲ್ಲಿ ಹೊಲ ಖರೀದಿಸಿದ ನಂತರ ಜೋಳ ಬಿತ್ತಿದ ಬಗ್ಗೆ ಪ್ರಸ್ತಾಪಿಸಿದೆ. ಜೋಳ ತೆನೆ ಬಿಟ್ಟದ್ದನ್ನು ನೋಡಿದ ಗಳಿಗೆ ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಅನುಭವಗಳಲ್ಲಿ ಒಂದು. ಎತ್ತಿನ ಬಂಡಿಕಟ್ಟಿಕೊಂಡು ಸೀತನಿ (ಸಿಹಿತೆನೆ= ಜೋಳದ ಕಾಳು ಎಳೆಯವಾಗಿದ್ದಾಗ ಅದನ್ನು ಸುಟ್ಟು ತಿನ್ನುತ್ತಾರೆ. ಅತ್ಯಂತ ರುಚಿಯಾದ ಕಾಳುಗಳನ್ನು ತಿನ್ನುವುದೇ ವಿಶಿಷ್ಟ ಅನುಭವ) ತಿನ್ನಲು ಹೋಗಿದ್ದೆವು. ಎರಡನೇ ವರ್ಷ ಹತ್ತಿ ಬಿತ್ತಲಾಯಿತು. ಮೊದಲ ವರ್ಷಕ್ಕಿಂತ ಬೇರೆಯದೇ ಬೆಳೆ ಆಗಿದ್ದರಿಂದ ನಮಗೂ ಅದನ್ನು ನೋಡುವುದೇ ಖುಷಿ. ಬಿಡಿಸಿದ ಹತ್ತಿಯ ತೊಳೆಗಳನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ಮನೆಯಲ್ಲಿ ಸುರಿಯಲಾಯಿತು. ಇಡಲು ಬೇರೆ ಜಾಗವೇ ಇಲ್ಲದ್ದರಿಂದ ಮನೆಯಲ್ಲಿಯೇ ಇಟ್ಟುಕೊಳ್ಳುವುದು ಅನಿವಾರ್ಯವೂ ಅಗತ್ಯವೂ ಆಗಿತ್ತು. ಮನೆಯ ಕಾಲುಭಾಗವನ್ನು ಹತ್ತಿ ಆಕ್ರಮಿಸಿಕೊಂಡು ಬಿಟ್ಟಿತು. ಹೀಗೆ ಹಾಕಿದ ಹತ್ತಿಯಿಂದ ಕೆಲವೇ ಅಡಿ ದೂರದಲ್ಲಿ ನಾವು ಮಲಗಿದ್ದವು. ಅವ್ವನ ಆರೋಗ್ಯ ಸರಿಯಿರಲಿಲ್ಲ. ಆಸ್ಪತ್ರೆಗೆ ತೋರಿಸುವುದಕ್ಕಾಗಿ ದೂರ ದೇಶದ ಬಿಜಾಪುರಕ್ಕೆ ಕರೆದುಕೊಂಡು ಹೋಗಿದ್ದರು.

More

ಪ್ರೀತಿ ಅರ್ಥ ಪ್ರೀತಿಸುವುದೇ…

ಪ್ರೀತಿಯನ್ನು ಪ್ರೀತಿಸುತ್ತಾ…
– ಪರಶುರಾಮ ಕಲಾಲ್

valentine04_lg

ಪ್ರೀತಿಸುವುದು ತಪ್ಪೇ? ಪ್ರೀತಿ ಎಂದರೆ ಏನು? ಒಂದು ಹುಡುಗ-ಹುಡುಗಿಯ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿದರೆ ಇದರಲ್ಲಿ ತಪ್ಪೇನು? ಇವರ ಮದುವೆಗೆ ಜಾತಿ-ಮತ, ಅಂತಸ್ತುಗಳು ಅಡ್ಡಬಂದರೆ ಅದನ್ನು ಮೀರುವಂತೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯವಲ್ಲವೇ? ಅದನ್ನು ವಿರೋಧಿಸಿದರೆ ಅದೆಂತಹ ನಾಗರಿಕ ಸಮಾಜ?

’ಪ್ರೀತಿ ಅಂದರೆ ಅದೊಂದು ಉತ್ಪಾದನಾ ವಸ್ತುವಿನ ಅಭಿವ್ಯಕ್ತಿ ಇದ್ದಂತೆ
ಅದಕ್ಕೆ ಹೊಣೆಗಾರಿಕೆ, ಜವಾಬ್ದಾರಿ ಎಂಬೆಲ್ಲಾ ಅಮೂಲ್ಯ ಅರ್ಥಗಳಿವೆ’ ಎನ್ನುತ್ತಾನೆ ಮಾನವ ಶಾಸ್ತ್ರಜ್ಞ ಎರಿಕ್ ಫ್ರಾಮ್.

ಜಾಗತೀಕರಣದಲ್ಲಿ ಸಿಲುಕಿರುವ ನಾವುಗಳ ಎಲ್ಲವನ್ನೂ ವಾಣಿಜ್ಯಭಾಷೆಯಲ್ಲಿ ಅರ್ಥೈಸಿಕೊಳ್ಳುತ್ತಿರುವಾಗ ಮಾನವೀಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಮನುಷ್ಯ, ಮನುಷ್ಯರ ನಡುವೆ ದೊಡ್ಡ ಕಂದಕ ಉಂಟಾಗುತ್ತದೆ. ಸುಖ ಎನ್ನುವುದು ಹಣದಿಂದ ಕೊಂಡು ಕೊಳ್ಳುವ ’ಸರಕಾಗಿ’ ಮಾರ್ಪಾಡುತ್ತದೆ. ಇಂತಹ ಸಂದರ್ಭದಲ್ಲಿ ಪಾಪ ಒಂದು ಎಳೆಯ ಪ್ರೀತಿ ಬದುಕುವುದುಂಟೆ? ಪ್ರೀತಿ ಉಸಿರುಗಟ್ಟಿ ಅತ್ತ ಸಾಯದೆ, ಇತ್ತ ಬದುಕದೆ ಏದುಸಿರು ಬಿಡುತ್ತಾ ’ಪಂಜರದ ಗಿಳಿ’ಯಾಗಿ ಅರ್ತನಾದ ಮಾಡುತ್ತದೆ. ಶಬ್ದಮಾಲಿನ್ಯದಲ್ಲಿ ಸಿಲುಕಿದವರಿಗೆ ಈ ಧ್ವನಿ ಕೇಳುಸುತ್ತಲೇ ಇಲ್ಲ. 

ಇಂತಹ ಸಮಾಜದಲ್ಲಿ ಒಂದು ಹುಡುಗ-ಹುಡುಗಿ ಪ್ರೀತಿಸುವುದು ದೊಡ್ಡ ಅಪರಾಧವಾಗಿ ಕಂಡು, ಅದನ್ನು ’ಸ್ವೆಚ್ಛಾಚಾರ’ ಎಂದೇ ಬಣ್ಣಿಸುವ ವಾತಾವರಣ ಸೃಷ್ಠಿಯಾಗಿ ಬಿಡುತ್ತದೆ.
ಇದರ ತಾರಕರೂಪವೇ ಅನ್ಯ ಧರ್ಮಿಯರ ಒಂದು ಹುಡುಗ-ಹುಡುಗಿ ಪರಸ್ಪರ ಸ್ನೇಹ ಬೆಳೆಸುವುದು ’ಅಸಭ್ಯ’ ಎನ್ನುವ ಮನಸ್ಥಿತಿಗೆ ಕಾರಣವಾಗುತ್ತದೆ. 
ಕರಾವಳಿಯಲ್ಲಿ ಇವತ್ತು ನಡೆಯುತ್ತಿರುವುದು ಇದೇ. 

ಪ್ರೀತಿಯನ್ನು ಸ್ವೇಚ್ಛಾಚಾರ, ಸ್ನೇಹವನ್ನು ಅಸಭ್ಯ ಎಂದು ಬಗೆಯುವ ಮಂದಿ ಅದರ ರಕ್ಷಣೆಗಾಗಿ ಸೇನೆ ಕಟ್ಟಿಕೊಂಡು ಅಂತವರನ್ನು ಹಿಡಿದು ’ಬುದ್ಧಿ ಕಲಿಸುತ್ತಾರೆ, ’ ’ಸಂಸ್ಕೃತಿಯ ಪಾಠ’ ಹೇಳಿಕೊಡುತ್ತಾರೆ, ಪ್ರೀತಿಸುವುದು ಗೊತ್ತಿಲ್ಲದ ಜನ.

ಜಗತ್ತಿನ ಬೇರೆ ಯಾವುದೇ ಭಾಷೆಗಳಲ್ಲಿ ಬರದಷ್ಟು ಪ್ರೀತಿ-ಪ್ರೇಮದ ಕಥಾವಸ್ತು ಹೊಂದಿದ ಚಲನಚಿತ್ರಗಳು ಭಾರತದಲ್ಲಿ ಬಂದಿವೆ. ಈಗಲೂ ಬರುತ್ತಿವೆ. ’ಪರಸ್ಪರ ಪ್ರೇಮಿಸುವ ಹೃದಯಗಳು, ಇವರಿಬ್ಬರೂ ನಾಯಕ-ನಾಯಕಿಯರು, ಅವರನ್ನು ಬೇರ್ಪಡಿಸಲು ಯತ್ನಿಸುವವರು ಅವರೆಲ್ಲಾ ಖಳನಾಯಕರು’ ಇದೇರೀತಿಯ ಅಸಂಖ್ಯಾತ ಚರ್ವಿತಚರ್ವಿಣ ಕಥೆಗಳು.

ಪ್ರೀತಿಸಲಾಗದ ಸಮಾಜವೊಂದರಲ್ಲಿ ಪ್ರೀತಿಸುವ ಕನಸು ಯಾವತ್ತೂ ಆಶಯವಾಗಿಯೇ ಉಳಿದಿರುವುದರಿಂದ ಇಂತಹ ಕಥಾ ಚಿತ್ರಗಳು ಯಾವತ್ತಿಗೂ ಇಲ್ಲಿ ಜೀವಂತ ಇರುತ್ತವೆ. ಇದನ್ನೇ ನಮ್ಮ ಸಿನಿಮಾಗಳು ಬಂಡವಾಳ ಮಾಡಿಕೊಂಡಿವೆ.

ಪ್ರೀತಿಸಲು ಸಾಧ್ಯವಾಗದ ಸಮಾಜದಲ್ಲಿ ಕಾಮ ಮಾತ್ರ ಹುಚ್ಚೆದ್ದು ಕುಣಿಯುತ್ತದೆ. ಇಂತಹ ಹುಚ್ಚೆ ದೇವದಾಸಿ ಪದ್ಧತಿಯನ್ನು ಇನ್ನೂ ಜೀವಂತವಾಗಿಟ್ಟಿದೆ. ಏಷ್ಯಾ ಖಂಡದಲ್ಲಿಯೇ ಭಾರತದಲ್ಲಿರುವಷ್ಟು ಕೆಂಪು ದೀಪಗಳ ಏರಿಯಾಗಳು ಬೇರೆಲ್ಲೂ ಇಲ್ಲ. ಪ್ರತಿನಿಮಿಷಕ್ಕೊಮ್ಮೆ ಆಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆಯುತ್ತಲೆ ಇದೆ. ಇವೆಲ್ಲಾ ಬಂಧಿಸಿರುವ ಸಂಕೋಲೆಗಳನ್ನು ಮುರಿಯಲು ಕಂಡು ಕೊಂಡ ಅಡ್ಡಮಾರ್ಗಗಳು ಅಥವಾ ಅಡ್ಡ ಪರಿಣಾಮಗಳು. 

ನಮ್ಮ ಪುರಾಣದ ಅನೇಕ ಕಥಾನಾಯಕರು ಅಂತರ್ಜಾತಿಯ ವಿವಾಹವಾಗಿದ್ದಾರೆ. ವಿವಾಹದಲ್ಲೂ ಗಂಧರ್ವ ವಿವಾಹ ಸೇರಿದಂತೆ ಅನೇಕ ಬಗೆಯ ವಿವಾಹಗಳು ಇವೆ. ಋಷಿಪುಂಗವರಂತೂ ತಮ್ಮ ತಪಸ್ಸನ್ನು ರಂಭಾ, ಊರ್ವಶಿ, ಮೇನಕೆಯರು ಬಂದು ಕೆಡಸಬೇಕೆಂದೆ ತಪಸ್ಸಿಗೆ ಕುಳಿತಿದ್ದಾರೆ ಎಂದು ಭಾವಿಸುವಷ್ಟು ರಂಜಕ ಕಥೆಗಳಿವೆ. 
ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿ ಅಲ್ಲ, ವಾದಕ್ಕಾದರೂ ಒಪ್ಪಿಕೊಳ್ಳೋಣ. ನಮ್ಮ ಸಂಸ್ಕೃತಿ ಯಾವುದು? ಭಾರತೀಯ ಸಂಸ್ಕೃತಿ ಎನ್ನುವಂತಾದ್ದು ಏನಾದರೂ ಇದೆಯೇ? ಬರ್ತಡೇ ಆಚರಿಸುವುದು ಯಾವ ಸಂಸ್ಕೃತಿ? ಪ್ಯಾಂಟ್, ಷರ್ಟು ಹಾಕಿಕೊಳ್ಳುವುದು ಯಾವ ಸಂಸ್ಕೃತಿ? ಸಂಸ್ಕೃತಿ ಎನ್ನುವುದು ಹರಿಯುವ ನೀರಿನಂತೆ ಹೊಸದನ್ನು ಸ್ವೀಕರಿಸುತ್ತಲೇ ಹೋಗುವ ಪರಿಯದು. ಒಂದು ಸಂಸ್ಕೃತಿ ಹೊರಗಿನದನ್ನು ಸ್ವೀಕರಿಸಿದರೆ ಅದು ಸಾಯುತ್ತದೆ ಎನ್ನುವುದಾದರೆ ನಾನು ಅದು ಸತ್ತು ಹೋಗಲಿ ಎಂದೇ ಹೇಳುತ್ತೇನೆ. ಅಷ್ಟೊಂದು ಪೊಳ್ಳಾದ, ಶಕ್ತಿಹೀನ ಸಂಸ್ಕೃತಿ ನಮಗೆ ಬೇಕಿಲ್ಲ. 

ಐದುಸಾವಿರ ವರ್ಷದ ಇತಿಹಾಸವಿರುವ ದೇಶ ಭಾರತ. ಇಲ್ಲಿ ಸಂಸ್ಕೃತಿ, ಪರಂಪರೆ ಬೆಳೆದಿರುವುದು ಕೊಡುಕೊಳ್ಳುವಿಕೆಯ ಮೂಲಕವೇ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ನಾವು ಸಂಸ್ಕೃತಿಯನ್ನು ನಿಜವಾದ ಅರ್ಥದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ಅಂತಹ ಜನಪರ ಸಂಸ್ಕೃತಿಯೊಂದರ ವಾರುಸುದಾರರಾದ ನಾವುಗಳು ಒಂದು ವ್ಯಾಲೆಂಟೈನ್ ಡೇಗೆ ಹೆದರುವ ಅಗತ್ಯವಿಲ್ಲ. 

’ಪ್ರೀತಿಯೇ ನಿನ್ನನ್ನು ನಾನು ಪ್ರೀತಿಸುತ್ತೇನೆ. ಪ್ರೀತಿಸುತ್ತಲೇ ಹೋಗುತ್ತೇನೆ. ಪ್ರೀತಿಯೇ ನನಗೆ ಗಾಢ ನಂಬಿಕೆ ನೀಡು, ಜವಾಬ್ದಾರಿ, ಹೊಣೆಗಾರಿಕೆ ಹೆಚ್ಚು ಮಾಡು, ಪ್ರೀತಿಸುವ ಸುಖ ಉಣಿಸು’ ಎಂದು ಪ್ರೀತಿಯನ್ನು ಪ್ರೀತಿಸುತ್ತಾ..

(‘ನಾವು-ನಮ್ಮಲ್ಲಿ’ ಬ್ಲಾಗಿನಲ್ಲಿ ’ಕಲಾಲ್ ಕಾಲಂ’ನಲ್ಲಿ ಇದು ಪ್ರಕಟವಾಗಿದೆ)

%d bloggers like this: