ನಾಗೇಶ ಹೆಗಡೆ ಹೇಳಿದ್ದು…

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಹಾಗೂ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರಿನಲ್ಲಿ  ಆಯೋಜಿಸಿದ್ದ ‘ಕೃಷಿ ಪತ್ರಿಕೋದ್ಯಮ ಮತ್ತು ಸವಾಲುಗಳು’ ಕಾರ್ಯಾಗಾರದಲ್ಲಿ ನಾಗೇಶ ಹೆಗಡೆ ಅವರು ಮಾತನಾಡಿದ್ದರ ಸಾರಾಂಶ ಇಲ್ಲಿದೆ-

nagesh-hegde-inaugurating-workshop-1

ಇಂದು ಮಾಹಿತಿಯ ಸುಂಟರಗಾಳಿ ಎದ್ದಿದೆ; ಆದರೆ ಇದರ ಕೇಂದ್ರಬಿಂದುವಾಗಿರುವ ರೈತ ಮಾಹಿತಿಯ ಕೊರತೆ ಅನುಭವಿಸುತ್ತಿದ್ದಾನೆ. ನಾವಿಂದು ಸುದ್ದಿಯ ಸಂತೆಯಲ್ಲಿದ್ದೇವೆ. ಅಭಿವೃದ್ಧಿಹೊಂದಿದ ದೇಶಗಳ ಕಾರ್ಪೋರೆಟ್ ವಲಯದಿಂದ ಮಾಹಿತಿ ಮಹಾಪೂರವೇ ಹರಿದುಬರುತ್ತಿದೆ; ಆದರೆ ನಮ್ಮ ಕೃಷಿ-ಗ್ರಾಮೀಣ ವಲಯದಿಂದ ಮಾಹಿತಿ ಲಭ್ಯವಾಗುತ್ತಿಲ್ಲ; ರೈತ ಸಮುದಾಯಕ್ಕೂ ಅಗತ್ಯಾಧಾರಿತ ಮಾಹಿತಿ ದೊರಕುತ್ತಿಲ್ಲ.

ಕನ್ನಡದ ಯಾವ ಪತ್ರಿಕೆಯಲ್ಲೂ ಕೃಷಿ ವಲಯಕ್ಕೆ ಸಂಬಂಧಿಸಿ  ಪೂರ್ಣಾವಧಿ ವರದಿಗಾರರಿಲ್ಲ; ಹೀಗಾಗಿ ಈ ಕುರಿತು ಆಳ ಅಧ್ಯಯನದ ವಿಶ್ಲೇಷಣಾತ್ಮಕ ವರದಿಗಳು ಪ್ರಕಟಗೊಳ್ಳುತ್ತಿಲ್ಲ; ಬದಲಾಗಿ ವಾಣಿಜ್ಯ ಹಿತಾಸಕ್ತಿಯ  ಮಾಹಿತಿಗಳೇ ಮೇಲುಗೈ ಸಾಧಿಸುತ್ತಿವೆ. 

ಇತ್ತೀಚಿನ ದಿನಗಳಲ್ಲಿ ಇಂಧನ ಅಗತ್ಯ ಪೂರೈಸುವ ಬೆಳೆಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಆಹಾರಬೆಳೆ ಕಡಿಮೆಯಾಗುತ್ತಿರುವುದು  ಕಳವಳಕಾರಿ ಸಂಗತಿ ಎಂದ ಅವರು, ಕೃಷಿ ಅರಣ್ಯ ಕೂಡ ಉದ್ದಿಮೆಗಳ ಅಗತ್ಯವನ್ನು ಪೂರೈಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ; ಇನ್ನೊಂದೆಡೆ, ವಿವಿಧ ಕಾರಣಗಳಿಂದ ಕೃಷಿಭೂಮಿಗೂ ಸಂಚಕಾರ ಬಂದೊದಗಿದೆ. 

ಒಂದೆಡೆ, ನಗರಗಳತ್ತ ಗ್ರಾಮೀಣ ಜನತೆಯ ವಲಸೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಇನ್ನೊಂದೆಡೆ ಕಾರ್ಪೋರೆಟ್  ವಲಯ  ಕೃಷಿರಂಗದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ ; ಈ ಮಧ್ಯೆ ರೈತರ ಆತ್ಮಹತ್ಯೆ ಮುಂದುವರಿದಿದೆ. ಕೃಷಿ ವಲಯದ ಸಂಕಟವನ್ನು ಇಡೀ ಪ್ರಜಾತಂತ್ರದ ಸಂಕಟವೆಂದೇ ಪರಿಗಣಿಸಿ, ಇದರ ಉಳಿವು ಹಾಗೂ ಸುಸ್ಥಿರ ಪ್ರಗತಿಗಾಗಿ ಕಾರ್ಯೋನ್ಮುಖವಾಗುವುದು ಇಂದಿನ ತುರ್ತು ಅಗತ್ಯ.

ವ್ಯಾಪಕ ರೈತ ಸಮುದಾಯವನ್ನು ತಲುಪುವಲ್ಲಿ ಟಿವಿಯಂತಹ ದೃಶ್ಯಮಾಧ್ಯಮ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದು, ಅವನ್ನು ಸಮರ್ಥವಾಗಿ ಬಳಸಿಕೊಳ್ಳಲು ಅಭಿವೃದ್ಧಿ ಪತ್ರಕರ್ತರು ಮುಂದಾಗಬೇಕು.

 

ಕಾಂಡೋಮ್ ಕೊಡ್ತಿರೋವಾಗ್ಲೆ ಗ್ಯಾಂಗ್ ವಾರ್

P for…

img_8235

-ಲೀಲಾ ಸಂಪಿಗೆ

 

ಎರಡು ಗುಂಪುಗಳ ನಡುವೆ  ಏಕ್ದಂ ಮಾರಾಮಾರಿ!

ಯಾಕೆ? ಏನು? ಅಂತ ಯೋಚಿಸೋದ್ರೊಳಗೆ ಎರಡೂ ಗ್ಯಾಂಗ್ಗಳು ಪರಸ್ಪರ ಹೊಡೆದಾಡಿಕೊಳ್ತಿದ್ವು, ಗೌರಮ್ಮನ ಗುಂಪು, ಮಾದಯ್ಯನ ಗುಂಪುಗಳು ಕೈ ಕೈ ಮಿಲಾಯಿಸಿ ಬಿಟ್ಟಿದ್ದವು, ಗೌರಮ್ಮ ಮಾದಯ್ಯ, ತಮ್ಮ ಧ್ವನಿಯನ್ನು ತಾರಕಕ್ಕೇರಿಸಿ ಬೈಗುಳಗಳ ರಾಶಿರಾಶಿ ಹಾಕ್ತಿದ್ರು. ನನ್ನ ಸುತ್ತ ಕುಂತಿದ್ದ ಹುಡ್ಗೀರೆಲ್ಲಾ ಚೆಲ್ಲಾಪಿಲ್ಲಿಯಾದ್ರು, ಅವರಿಗೆಲ್ಲಾ ಇದೇನೂ ಹೊಸದಲ್ಲ. ಅಂಥದೊಂದು ಸಂದರ್ಭ ಬಂದಾಗಲೆಲ್ಲಾ ಅವರದ್ದೇ ಆದ ಜಾಗಗಳನ್ನು ಮಾಡ್ಕೊಂಡ್ಬಿಟ್ಟಿರುತ್ತಾರೆ. ಆದ್ರೆ ಇದಾವುದರ ಪರಿವೆಯೂ ಇಲ್ಲದೆ ಬಂಡೆಗೆ ತಲೆ ಕೊಡಲು ಸಿದ್ಧರಾಗೇ ಹೋಗಿದ್ದು, ನಾವು!

ನಾನು, ನನ್ನ ಸಹಾಯಕರಾದ ನಾರಾಯಣಸ್ವಾಮಿ, ಪಂಕಜ. ಅಲ್ಲಿ ಏನಾಗ್ತಿದೆ ಅನ್ನೋ ಆತಂಕ ಒಂದ್ಕಡೆಯಾದ್ರೆ, ಆ ಬೆಟ್ಟಗಳ, ಬಂಡೆಗಳ ಸಂದುಗಳಿಂದ ತಪ್ಪಿಸ್ಕೊಂಡು ಎಲ್ಲಿಗೆ ಓಡ್ಬೇಕು ಅನ್ನೋದು ಇನ್ನೊಂದ್ಕಡೆ.

orangutan-painting-2-towan

ತಿರುಪತಿಗೆ ಹೋಗುವ ಹೆದ್ದಾರಿಯದು, ರಸ್ತೆಯ ಎಡಕ್ಕೆ ಉದ್ದಕ್ಕೂ ಕಿರುಬೆಟ್ಟಗಳ ಸಾಲು, ರಸ್ತೆಯಿಂದ ಒಂದು-ಒಂದೊವರೆ ಕಿ.ಮೀನಷ್ಟು ಎರಡು ದೊಡ್ಡ ಬಂಡೆಗಳ ನಡುನಡುವೆ ಕಿರಿದಾಗಿ, ಮತ್ತೆ ಹರಿವಿಕೊಂಡಿದ್ದ ಸ್ಥಳಕ್ಕೆ ನಾವು ಹೋಗಿದ್ದು.

ಗೌರಮ್ಮ, ಮಾದಯ್ಯ ತಲಾ ಗುಂಪಿನ ನಾಯಕತ್ವ ವಹಿಸಿದ್ದವರು. ಅವರಿಬ್ಬರೂ ನಡೆಸುವ ವೇಶ್ಯಾವಾಟಿಕೆಗೆ ಅದೊಂದು ಎಗ್ಗಿಲ್ಲದ ಸ್ಥಳ. ಪ್ರತಿ ಗುಂಪಿನಲ್ಲೂ ಹತ್ತರಿಂದ ಹನ್ನೆರಡು ಹುಡುಗೀರು. ಗಿರಾಕಿಗಳೆಲ್ಲಾ ಪಕ್ಕಾ ಗುತ್ತಿದ್ದೋರೆ ಅಥವಾ ಅಲ್ಲಿಗೆ ಗಿರಾಕಿಗಳು ಕರಾರಾದ ರೇಟು ಕೊಟ್ಟು ಹುಡ್ಗೀರ್ನ ಕರ್ಕೊಂಡು ಅಲ್ಲವೇ ಕಿರುಜಾಗಗಳಿಗೋ, ಬೇರೆ ಬಂಡೆಗಳ ಸಂದುಗೊಂದಿಗಳಿಗೋ ಹೋಗ್ತಿದ್ರು.

ಗೌರಮ್ಮ ಮಾದಯ್ಯ ಇಬ್ಬರೂ ಸ್ಟ್ರಾಂಗೇ. ದೊಡ್ಡ ದೊಡ್ಡ ಮನುಷ್ಯರ ನಿಕಟವತರ್ಿಗಳು. ಅತಿಹೆಚ್ಚು ಮಾಮೂಲಿಯನ್ನು ತಿಂಗಳು ತಿಂಗಳಿಗೆ ಸಲ್ಲಿಸ್ತಿದ್ದೋರು. ಇಬ್ಬರ ಹತ್ರಾನೂ ಸಾಕಷ್ಟು ಧಾಂಡಿಗರು ಇದ್ರು. ಎಲ್ಲವನ್ನೂ ರಕ್ಷಣೆ ಮಾಡೋಕೆ ಅಲ್ಲೇ ಬೇಕಾದ್ದನ್ನ ಬೇಯಿಸ್ಕೊಳ್ಳೋ ವ್ಯವಸ್ಥೆನೂ ಇತ್ತು. ಗಾಂಜಾ ಸರಬರಾಜು, ಕಳ್ಳಭಟ್ಟಿ ಸರಬರಾಜು ಎಲ್ಲಾ ಹೋಲೆಸೇಲ್ ಅಲ್ಲಿ. ಅಲ್ಲಲ್ಲಿ ಇಸ್ಪೀಟ್ ಗಡಂಗೂ ಇತ್ತು.

ಅಬ್ಬಾ! ಆ ಇಡೀ ವಾತಾವರಣವೇ ಒಂದು ಅಂಡರ್ ಗ್ರೌಂಡ್.. ಥರಾ ಕಾಣ್ತು. ಆ ಸ್ಥಳಾನ ಪತ್ತೆ ಮಾಡಿದ್ದೇ ಒಂದು ಸಾಹಸ ಆಗಿತ್ತು. ಆ ಗೌರಮ್ಮನ ಗ್ಯಾಂಗಿನಲ್ಲಿದ್ದ ಪಂಕಜ ನಮಗೆ ತೆನಾಲಿಯಲ್ಲಿ ಸಿಕ್ಕಿದ್ಲು. ಹೀಗೇ ಮಾತಾಡೋವಾಗ ಇದನ್ನೆಲ್ಲಾ ಹೇಳಿದ್ಲು. ಅವಳ ಮೂಲಕ ಗೌರಮ್ಮನ ದೋಸ್ತಿ ಮಾಡ್ಕೊಂಡು ಒಂದು ಟ್ರಸ್ಟ್ ಬಿಲ್ಡ್ ಮಾಡಿ ನಂತರ ಅಲ್ಲಿಗೆ ಹೋದ್ವು, ಇಷ್ಟಾದ್ರೂ ಮಾದಯ್ಯನ ಗ್ಯಾಂಗಿನಲ್ಲಿದ್ದ ಹುಡ್ಗೀರನ್ನು ಟಚ್ ಮಾಡೋಕೆ ಆಗಿರ್ಲೇ ಇಲ್ಲ. ‘ನಾವು ಆರೋಗ್ಯದ ಕುರಿತು ಮಾತಾಡೋರು ಅಷ್ಟೇ. ನಿನ್ನ ಗಿರಾಕಿಗಳಿಗೆ ಕೊಡೋಕೆ ಫ್ರೀ ಕಾಂಡೋಮ್ಸ್ ಕೊಡ್ತೀವಿ. ಹುಡ್ಗೀರು ಆರೋಗ್ಯವಾಗಿದ್ರೆ ಏಡ್ಸ್ ಬಗ್ಗೆ ನೀನು ಎಚ್ಚರಿಕೆ ವಹಿಸಿದ್ದೀಯಾಂತ ಗೊತ್ತಾದ್ರೆ ನಿನ್ನ ವ್ಯಾಪಾರ ಚೆನ್ನಾಗಿ ನಡೆಯುತ್ತೆ’ ಅಂತೆಲ್ಲಾ ಹೇಳಿ ಅವಳ ಕೋಟೆಯೊಳಗೆ ಹೋಗೋವಷ್ಟು ವಿಶ್ವಾಸಗಳಿಸಿದ್ದು, ಸಾಮಾನ್ಯವಾಗಿ ಎಂಥೆಂಥಾ ಹೊಗಲಾರದ ಬ್ರಾಥೆಲ್ಗಳನ್ನು ಹೋಗುವಾಗೆಲ್ಲಾ ಇದೇ ಸ್ಟ್ರಾಟಜಿ ನಮ್ದು.

ಆ ದಿನವೂ ಗೌರಮ್ಮನನ್ನು ಮಾತಾಡಿಸಿ ಅಲ್ಲೊಂದಿಷ್ಟು ಕಾಂಡೋಮ್ಸ್ ಕೊಟ್ಟು ಹುಡ್ಗೀರ ಹತ್ರ ಸ್ವಲ್ಪ ಮಾತಾಡ್ತೀನಿ, ಅವರ ಆರೋಗ್ಯದ ಬಗ್ಗೆ ಅಂದೆ. ಆದ್ಯಾವ ಮೂಡಲ್ಲಿದ್ಲೋ ಪುಸಕ್ಕಂತ ‘ಪಂಕಜಾ ಅವರ್ನೆಲ್ಲಾ ಕರೆಯೇ, ಅಲ್ಲೆಲ್ಲಾದ್ರೂ ಕೂತ್ಕೊಳ್ಳಿ. ಹೆಚ್ಚು ಹೊತ್ತು ಇಲ್ಲಿರ್ಬೇಡಿ,’ ಅಂದ್ಲು. ಅವಳ ಮುಖದಲ್ಲೇ ಎಂಥದೋ ದುಗುಡವಿತ್ತು. ಆ ದಿನ ವಾತಾವರಣ ಸ್ವಲ್ಪ ಗರಂ ಆಗಿತ್ತು. ‘ಇದೆಲ್ಲಾ ಇಲ್ಲಿ ಮಾಮೂಲಿ ಬಾರಮ್ಮ ಅಂತ ಪಂಕಜ ಕರ್ಕೊಂಡ್ಹೋದ್ಲು. ಒಂದಷ್ಟು ದೂರ ಬಂದು ಬಂಡೆಯೊಂದರ ಮೇಲೆ ಕುಳಿತೆ. ಹಾಗೇ ಆ ಗೌರಮ್ಮನನ್ನು ನೋಡ್ತಾ ಇದ್ದೆ. ಅವಳ ಮನಸ್ಥಿತಿ ಸ್ಥಿಮಿತ ಕಳ್ಕೊಂಡಂಗಿತ್ತು.

More

ಗುಬ್ಬಿಯಲ್ಲಿರುವ, ಗುಬ್ಬಿ ಕಂಪನಿಯ, ಗುಬ್ಬಿ ವೀರಣ್ಣನವರ ಮನೆ ಎಲ್ಲಿದೆ?

me_and_jaishreeಬಿ ಜಯಶ್ರೀ ಅವರಿಗೆ ಗೌರವ ಡಾಕ್ಟರೇಟ್ ಧಕ್ಕಿದೆ. ರಾಜ್ಯ ಮುಕ್ತ ವಿಶ್ವವಿದ್ಯಾಲಯ ಈ ಮೂಲಕ ಜಯಶ್ರೀ ಅವರಿಗೆ ಮಾತ್ರವೇ ಅಲ್ಲ ರಂಗಭೂಮಿಗೆ ಗೌರವ ತಂದುಕೊಟ್ಟಿದೆ.

ಈ ಸಂದರ್ಭದಲ್ಲಿ ಕವಯತ್ರಿ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ ಮಮತಾ ಜಿ ಸಾಗರ ಅಪರೂಪದ ಫೋಟೋಗಳನ್ನು ‘ಅವಧಿ’ಗೆ ಕಳಿಸಿಕೊಟ್ಟಿದ್ದಾರೆ.

ಗುಬ್ಬಿ ಗೊತ್ತು, ಗುಬ್ಬಿ ಕಂಪನಿ ಗೊತ್ತು, ಗುಬ್ಬಿ ವೀರಣ್ಣ ಗೊತ್ತು. ಆದರೆ ಗುಬ್ಬಿಯಲ್ಲಿರುವ ಗುಬ್ಬಿ ಕಂಪನಿಯ ಗುಬ್ಬಿ ವೀರಣ್ಣನವರ ಮನೆ ಎಲ್ಲಿದೆ ಹೇಗಿದೆ ಗೊತ್ತಿದೆಯಾ? ಹಾಗಾದರೆ ಬನ್ನಿ ಜಯಶ್ರೀ ಅವರ ಜೊತೆ ಗುಬ್ಬಿಯ ಆ ಪುಟ್ಟ ಗೂಡಿಗೆ ಒಂದು ವಿಸಿಟ್-

ಇನ್ನಷ್ಟು ಓದು- ಜಯಶ್ರೀ ಈಗ ಡಾಕ್ಟರ್
dsc00227
dsc00231 dsc00232
dsc00223
dsc00221 dsc00224
dsc00228

ಬಿಳಿಮಲೆ ಕವನಗಳು

-ಡಾ. ಪುರುಷೋತ್ತಮ ಬಿಳಿಮಲೆ

ರಂಗೋಲಿ

hexplaque

ಅಜ್ಜಿ

ಸೂರ್ಯ ಹುಟ್ಟುವ ಮೊದಲೇ

ಅಂಗಳಕೆ ನೀರು ಚೆಲ್ಲಿ ರಂಗೋಲಿ ಬರೆಯುತ್ತಿದ್ದಳು

ಸರಳ ರೇಖೆಗಳ ನೇರ ನಡೆ

ಎಲ್ಲವೂ ಕ್ರಮಬದ್ಧಚಿತ್ರ ಚಿತ್ತಾರಗಳು

ಬಳ್ಳಿ ಹೂವುಗಳುಸದಾ ಚಿಗುರಿ ಆಕಾಶಕ್ಕೆ

 

rangoli_closeup

ಅಮ್ಮ

ಸೂರ್ಯ ಹುಟ್ಟುವಾಗ

ಅಂಗಳ ಗುಡಿಸಿ ಧೂಳು ಸಾರಿಸಿ

ರಂಗೋಲಿ ಬರೆಯುತ್ತಿದ್ದಳು

ಅಮ್ಮನ ರಂಗೋಲಿಯಲ್ಲಿ ಬಣ್ಣ ಬಹಳ

ಅಡ್ಡ ದಿಡ್ಡಿ ರೇಖೆಗಳಿಗೆ ಜೋಡಣೆ

ಹಣ್ಣು ಕಾಯಿಗಳ ಮೊಳಕೆ ಬೇರುಗಳು

ಸದಾ ನೀರಿನಾಳಕ್ಕೆ

 

longplaques

ಹುಡುಗಿ

ಸೂರ್ಯ ಹುಟ್ಟಿದ ಮೇಲೆ

ಕೈಕಾಲುಗಳು ಸವರಿ ನೆಲ ತೆವರುಗಳ ತೀಡಿ

ರಂಗೋಲಿ ಬರೆಯುತ್ತಾಳೆ

ಅಲ್ಲೊಂದು ಇಲ್ಲೊಂದು ಅಡ್ಡ ದಿಡ್ಡಿ ಚುಕ್ಕೆಗಳ ಇಟ್ಟು

ಹೇಗೆ ಹೇಗೋ ಒಂದರೊಡನೊಂದು ಸೇರಿಸಿ

ಬರೆಯುತ್ತಲೇ

ಎಲ್ಲಿಂದೆಲ್ಲಿಗೋ ಬಂಧ ನಿಗೂಢ

ಸದಾ ಸಂಕೇತದಾಳಕ್ಕೆ.

ಚಿತ್ರ: shakuntaladesign

 

ನಾಲಗೆಯ ಮೇಲೆ ಕುರುಕ್ಷೇತ್ರ

 

-ಹರೀಶ್ ಕೇರ

ಬೆಟ್ಟದಡಿ

mahabharata
ಮಹಾಭಾರತದ ಹರಿಕತೆ ನಡೆದಿರುವಾಗ
ದಾಸರು ನಾಲಗೆ ತಪ್ಪಿ
ನಾಗರಿಕತೆ ಎಂದರೆ ಹಿಂಸೆಯ ಕತೆ
ಎಂದುಬಿಟ್ಟರು 

ಆಮೇಲೆ ಚಡಪಡಿಸಿದರು
ತಮ್ಮ ಮಾತನ್ನು ಅಲ್ಲೇ ಬಿಡುವುದೋ
ವ್ಯಾಖ್ಯಾನಿಸುವುದೋ ಅರಿಯದ ಸಂದಿಗ್ದದಲ್ಲಿ
ಮುಂದೆ ಕುಳಿತ ಮಂದಿಯ ಮುಖ ನೋಡಿದರು

ಉದ್ದ ಅಡ್ಡ ನಾಮಗಳು ಮುದ್ರೆಗಳು
ಮುಗಿದ ಕೈಗಳು ಬೋಳಿಸಿದ ತಲೆಗಳು
ಬಿಟ್ಟ ಮೈ ಹೊದ್ದ ಶಲ್ಯ ಇಣುಕುವ ಜನಿವಾರ
ಬೊಜ್ಜು ಮೈ ಹುಳಿ ತೇಗು
ತರಹೇವಾರಿ ಶಿಖೆಗಳು
ಕಾಸಿನಗಲದ ಕುಂಕುಮ ತಲೆಗೆ ಸೆರಗು
ಮುತ್ತೈದೆಯರ ಸಕಲ ಭೂಷಿತಗಳು

ಮಾತುಗಳು ಗಂಟಲಲ್ಲೇ ಉಳಿದವು
ಕುರುಕ್ಷೇತ್ರದ ನೆತ್ತರ ನದಿ ಹಾಗೇ ಮುಂದುವರಿಯಿತು

ಬಾಯಿ ಬಿಡುವ ಭೂಮಿ ಎದೆ ಸೀಳಿದ ಗದೆ
ನೀರ ತಡಿಯಲ್ಲಿ ಅನಾಥ ಹೆಣ ಕತ್ತಲಲ್ಲಿ ಕುಣಿವ ಕತ್ತಿ
ಧರ್ಮದ ವಿಜಯಕ್ಕೆ ನಾರಿಯರ ಆರ್ತನಾದದ ಬೆಂಬಲ
ಭಗ್ನ ಬ್ರಹ್ಮಾಸ್ತ್ರಕ್ಕೆ ಅರ್ಧ ಭ್ರೂಣ

ಇತ್ತೀಚೆಗೆ ದಾಸರು
ವಿಪರೀತ ತಡವರಿಸುತ್ತಾರೆ
ಅನ್ನುತ್ತಾರೆ ಎಲ್ಲರೂ

ಓಹೋ…ಗೂಗಲ್ ಸೀರೆ….!

google-saree-by-satya-paul

Anti Terrorist

ಏಕೋ ಮತ್ತೆ ನೆನಪಾಯಿತು…ಎಂದು ಮುಂಬೈ ದುರಂತವನ್ನು ನೆನಪಿಸಿಕೊಳ್ಳುತ್ತಾ ‘ನೀಲಾಂಜಲ’ರೂ ನೆನಪಾದರು ಎಂದು ಬರೆದಿದ್ದೆವು. ಈಗ ನೀಲಾಂಜಲರ ಉತ್ಸಾಹದಿಂದಲ್ಲೇ ಕಣ್ಣು ಬಿಟ್ಟಿರುವ ಕ್ರಿಯಾಶೀಲ ಬ್ಲಾಗ್ Anti Terrorist ಇಲ್ಲಿದೆ. ಭೇಟಿ ಕೊಡಿ. ಅವರ ಹೃದಯಸ್ಪರ್ಶಿ ಕಾಳಜಿಗೆ ನಿಮ್ಮ ಬೆಂಬಲವಿರಲಿ  

header_03

ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ

ಮಠಾಧೀಶರು ಸಮಾಜದ ಶತ್ರುಗಳೇ?

-ದಿನೇಶ್ ಕುಮಾರ್ ಎಸ್.ಸಿ

ದೇಸೀಮಾತು

dsc_3968-1

ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!

ಚಿತ್ರದುರ್ಗದ ಸಮ್ಮೇಳನ ಮುಗಿದರೂ, ಸಮ್ಮೇಳನದಲ್ಲಿ ಹುಟ್ಟಿಕೊಂಡ ಕಿಚ್ಚು-ರೊಚ್ಚು ಇನ್ನೂ ಮುಂದುವರೆದಿದೆ. ಸಮ್ಮೇಳನ ಆರಂಭವಾಗುವುದಕ್ಕೆ ಮುನ್ನವೇ `ಮಠಾಧೀಶರು ನಮ್ಮ ಶತ್ರುಗಳು’ ಎಂದು ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಹೇಳಿದ್ದರು. ವಿಶೇಷವೆಂದರೆ ಈ ನಾಡಿನ ಸಾವಿರ ಸಾವಿರ ಮಠಾಧೀಶರ ಪೈಕಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತ್ರ ಈ ಹೇಳಿಕೆಯಿಂದ ರೊಚ್ಚಿಗೆದ್ದರು. ಎಲ್.ಬಿಯವರು ಹೇಳಿದ ಮಾತು ತಮ್ಮನ್ನು ಕುರಿತೇ ಆಡಿದ್ದಿರಬೇಕು ಎಂದು ಶಿವಾಚಾರ್ಯರು ಭಾವಿಸಿದರೇನೋ? ಹೀಗಾಗಿ ಅವರು ಎಲ್.ಬಿಯವರ ವಿರುದ್ಧ ಹರಿಹಾಯ್ದರು. ಸಮ್ಮೇಳನ ನಿರ್ವಹಣೆಯಲ್ಲಿ ಮಠಾಧೀಶರ ಪಾತ್ರವೂ ಇದ್ದಿದ್ದರಿಂದಾಗಿ ಎಲ್.ಬಿಯವರು ಸಮ್ಮೇಳನಾಧ್ಯಕ್ಷ ಪದವಿ ತಿರಸ್ಕರಿಸಿ ಈ ಮಾತುಗಳನ್ನು ಆಡಬೇಕಿತ್ತು ಎಂದು ಅಪ್ಪಣೆ ಕೊಡಿಸಿದರು. ಇದಕ್ಕೆ ಪ್ರತಿಯಾಗಿ ಶಿವಾಚಾರ್ಯರ ಮಾತುಗಳನ್ನು ಸಮ್ಮೇಳನದ ವೇದಿಕೆಗಳಲ್ಲೇ ಕಿ.ರಂ.ನಾಗರಾಜ್ ಮತ್ತಿತರರು ಖಂಡಿಸಿದರು.

ಅಲ್ಲಿಗೆ ಎಲ್ಲವೂ ಮುಗಿಯಲಿಲ್ಲ. ಪ್ರಜಾವಾಣಿಗೆ ಬರೆದ ವಾಚಕರ ವಾಣಿಯಲ್ಲಿ ಪ್ರೊ. ಚಂದ್ರಶೇಖರ ಪಾಟೀಲರು ತಮ್ಮ ಎಂದಿನ ಶೈಲಿಯಲ್ಲಿ ಶಿವಾಚಾರ್ಯರನ್ನು ಕುಟುಕಿದರು. `ಶಿವಮೊಗ್ಗದಲ್ಲೂ ಧಮಕಿ ಇತ್ತು. ನಂತರದ ಸಮ್ಮೇಳನಗಳಲ್ಲಿ ಈ ಬಗೆಯ ನೇರ ಹಸ್ತಕ್ಷೇಪವನ್ನು ನಮ್ಮ ರಾಜಕೀಯ ವಲಯದ ಪ್ರಭುಗಳು ಕಡಿಮೆ ಮಾಡಿದ್ದಾರೆ. ಆದರೆ `ಸಿರಿಗರ’ ಹೊಡೆಸಿಕೊಂಡ ಸ್ವಾಮಿಗಳ ಕಿತಾಪತಿ ಮಾತ್ರ ಮೊನ್ನೆಯ ಸಮ್ಮೇಳನದಲ್ಲಿ ಎದ್ದು ಕಾಣುವಂತಿತ್ತು. ಇಂಥವರನ್ನು ಕೂಡ ನಮ್ಮ ಪ್ರಜ್ಞಾವಂತ ಜನತೆ ರಿಪೇರಿ ಮಾಡುತ್ತಾರೆ’ ಎಂದು ಚಂಪಾ ಬರೆದಿದ್ದರು.

ನಂತರ ಶಿವಾಚಾರ್ಯರ ಸರದಿ. ವಿಜಯಕರ್ನಾಟಕದ ತಮ್ಮ ಬಿಸಿಲು ಬೆಳದಿಂಗಳು ಅಂಕಣದಲ್ಲಿ (ಫೆ.೧೮) ಶಿವಾಚಾರ್ಯರು ಸಮ್ಮೇಳನ ಮತ್ತು ವೈಚಾರಿಕತೆಯ ಪ್ರಹಸನ ಎಂಬ ಲೇಖನವೊಂದನ್ನು ಬರೆದು, ಚಂಪಾ ಅವರನ್ನು ಹಂಗಿಸಿದ್ದಾರೆ. `ಪ್ರಗತಿಪರರು, ಚಿಂತಕರು ಎನಿಸಿಕೊಂಡ ಕೆಲವರು ಬಹಿರಂಗವಾಗಿ ಮಠಗಳೊಂದಿಗೆ ಗುರ್ತಿಸಿಕೊಳ್ಳಲು ಸಿದ್ಧರಿಲ್ಲ. ಆದರೆ ಅಂತರಂಗದಲ್ಲಿ ಮಾತ್ರ ಮಠಗಳ ಸಹಾಯ ಇವರಿಗೆ ಬೇಕೇ ಬೇಕು. ಎಂದು ಹೇಳುತ್ತ ಅದಕ್ಕೆ ಉದಾಹರಣೆಯೊಂದನ್ನು ಪೋಣಿಸಿದ್ದಾರೆ.

ಚಂಪಾ ಮತ್ತೆ ಉತ್ತರಿಸಿದ್ದಾರೆ; ಪ್ರಜಾವಾಣಿಯಲ್ಲಿ. `ತಮ್ಮ ವಿದ್ಯೆಯ ಬಗ್ಗೆ ನನಗೆ ಗೌರವ ಇದೆ. ಆದರೆ ನಿಮ್ಮಲ್ಲಿ ವಿದ್ಯೆಗೆ ತಕ್ಕ ವಿನಯ ಇಲ್ಲ. ನೀವು ಜರ್ಮನಿಯ ಬದಲಾಗಿ ಇಂಗ್ಲೆಂಡಿಗೆ ಹೋಗಿದ್ದರೆ ಚೆನ್ನಾಗಿತ್ತು. ಜರ್ಮನಿಯ ಜ್ಞಾನದೊಂದಿಗೆ ಅಲ್ಲಿಯ ಹಿಟ್ಲರ್ ಪ್ರಜ್ಞೆಯನ್ನೂ ತಂದ ಹಾಗಿದೆ.’ ಎಂದು ಚಂಪಾ ನೇರವಾಗಿ ದಾಳಿ ನಡೆಸಿದ್ದಾರೆ.

ಈ ಚರ್ಚೆ ಇನ್ನಷ್ಟು ಮುಂದುವರೆಯುವ ಸಾಧ್ಯತೆಗಳೂ ಇವೆ, ಆಗಲಿ. ಎಲ್ಲ ವಿವಾದಗಳಿಗೆ ಮೂಲಧಾತುವಾಗಿರುವ ಎಲ್.ಬಿಯವರ ಮಾತಿನ ಬಗ್ಗೆ ನನಗನ್ನಿಸಿದ್ದನ್ನು ಇಲ್ಲಿ ಹೇಳಲು ಹೊರಟಿದ್ದೇನೆ.

****

ಚಂಪಾ ಬಳಸಿದ `ಸಿರಿಗರ’ ಪದ ಇಂಟರೆಸ್ಟಿಂಗ್ ಅನಿಸಿತು. ಶಿವಾಚಾರ್ಯರು ಪ್ರತಿನಿಧಿಸುವ `ಸಿರಿಗೆರೆ ಪದದ ಹಾಗೆಯೇ ಧ್ವನಿಸುವ `ಸಿರಿಗರ’ ಪದವನ್ನು ಚಂಪಾ ಬೇಕೆಂತಲೇ ಬಳಸಿದ್ದರು. ಬಸವಣ್ಣನವರ ವಚನವೊಂದರಲ್ಲೂ ಸಿರಿಗರ ಎಂಬ ಪದದ ಉಲ್ಲೇಖವಿದೆ; ಆ ವಚನ ಇಲ್ಲಿದೆ:

ಹಾವು ತಿಂದವರ ನುಡಿಸಬಹುದು!
ಗರ ಹೊಡೆದವರ ನುಡಿಸಬಹುದು!
ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.

ಶಿವಾಚಾರ್ಯರ ಮಾತು ಹಾಗಿರಲಿ, ಸಾವಿರಾರು ಧರ್ಮಗುರುಗಳಿಗೆ ಇಂದು ಹೊಡೆದಿರುವುದು `ಸಿರಿಗರ’ವೇ ಹೌದು. ಮಠಾಧೀಶರು ಇಂದು ಶ್ರೀಮಂತರಲ್ಲಿ ಶ್ರೀಮಂತರು. ಈ ಶ್ರೀಮಂತಿಕೆಯ ಗುಟ್ಟು ರಟ್ಟಾಗುವುದೇ ಇಲ್ಲ. ಯಾವ ಮಠದ ಮೇಲೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುವುದಿಲ್ಲ. ವರ್ಷಕ್ಕೊಮ್ಮೆ ಲಾಭ-ನಷ್ಟದ ಲೆಕ್ಕಾಚಾರ ಕೊಡಿ ಎಂದು ನಮ್ಮ ಸರ್ಕಾರಗಳೂ ಕೇಳುವುದಿಲ್ಲ. ಯಾವ ಲೋಕಾಯುಕ್ತಕ್ಕೂ ಮಠದ ಆಸ್ತಿಪಾಸ್ತಿಯ ತನಿಖೆ ನಡೆಸುವ ಅಧಿಕಾರ ಇಲ್ಲ!

ಪ್ರಬಲ ಮಠಾಧೀಶರಂತೂ ತಮ್ಮ ಶಿಕ್ಷಣ ಸಂಸ್ಥೆಗಳದ್ದೂ ಸೇರಿದಂತೆ ಇತರ ಕೆಲಸಗಳಿಗಾಗಿ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ಬಾಗಿಲು ತುಳಿಯುವುದಿಲ್ಲ. ಕಾರ್‍ಯದರ್ಶಿ ಮಟ್ಟದ ಅಧಿಕಾರಿಗಳೇ ಮಠಕ್ಕೆ ಫೈಲುಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಅರ್ಥಾತ್ ಸರ್ಕಾರವೇ ಮಠಗಳಿಗೆ ತೆರಳುತ್ತದೆ. ಮಠಗಳಲ್ಲೇ ಸರ್ಕಾರದ ಕೆಲಸಗಳು ನಡೆಯುತ್ತವೆ. ಹಿಂದೊಮ್ಮೆ ಮೈಸೂರಿನ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ಮಠಗಳ ವಿರುದ್ಧ ಹರಿಹಾಯ್ದಿದ್ದರು. ಆಗಲೂ ಮಠಾಧೀಶರ ಪರವಾಗಿ ರಣಕೇಕೆ ಹಾಕಿದವರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳೇ! ಶಿವಾಚಾರ್ಯರು ತಮ್ಮ ಪ್ರಭಾವವನ್ನು ಎಷ್ಟು ನಿಖರವಾಗಿ ಬಳಸಿದರೆಂದರೆ ಮತ್ತೆ ವಿಶ್ವನಾಥ್ ಆ ಸ್ವಾಮಿಗಳ ವಿರುದ್ಧ ಬಾಯಿ ತೆರೆಯಲೇ ಇಲ್ಲ!

More

ನಮ್ಮ ಮಲ್ಲಿಗೆ ಪ್ರಶಸ್ತಿ

vishnu-with-malli-1 mottled_emigrant_butterfly1

`ಗವರ್ನ್‌ಮೆಂಟ್‌ ಈಸ್‌ ಸ್ಪೀಕಿಂಗ್‌ ಹಿಯರ್‌. ಪುಲ್‌ ದೆಮ್‌ ಔಟ್‌ ಐ ಸೇ’

ಹದಿನಾಲ್ಕನೇ ಲೂಯಿಯೂ ರಾಮಚಂದ್ರೇಗೌಡರೂ

-ಎನ್ ಎ ಎಂ ಇಸ್ಮಾಯಿಲ್

ಬರೆವ ಬದುಕಿನ ತಲ್ಲಣ

23feb_poster

ಫೆಬ್ರವರಿ 18ರಂದು ಬೆಂಗಳೂರಿನ ಮಾಣಿಕ್ಯವೇಲು ಮ್ಯಾನ್ಷನ್‌ನಲ್ಲಿ ನಡೆದ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಸಚಿವರೊಬ್ಬರು ನೀಡಿದ ಆದೇಶ ಹೀಗಿತ್ತು. `ಗವರ್ನ್‌ಮೆಂಟ್‌ ಈಸ್‌ ಸ್ಪೀಕಿಂಗ್‌ ಹಿಯರ್‌. ಪುಲ್‌ ದೆಮ್‌ ಔಟ್‌ ಐ ಸೇ’. (ಇಲ್ಲಿ ಸರ್ಕಾರ ಮಾತನಾಡುತ್ತಿದೆ. ನಾನು ಹೇಳುತ್ತಿದ್ದೇನೆ ಅವರನ್ನು ಹೊರಗೆ ಹಾಕಿ). ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು `ನನ್ನ ಸರ್ಕಾರ’ ಎಂದು ಮಾತನಾಡುವುದನ್ನು ನಾವು ಕೇಳಿದ್ದೇವೆ. ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಓದುವ ಆಡಳಿತಾರೂಢ ರಾಜಕೀಯ ಪಕ್ಷಗಳು ಸಿದ್ಧಪಡಿಸಿದ ಭಾಷಣದಲ್ಲಿ `ನನ್ನ ಸರ್ಕಾರ’ ಎಂಬ ಪ್ರಯೋಗವಿರುತ್ತದೆ. ಆದರೆ ಮಂತ್ರಿಗಳು, ಶಾಸಕರು, ಸಂಸದರು ಈ ಬಗೆಯ ಪ್ರಯೋಗ ಮಾಡಿದ್ದು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲೆಲ್ಲೂ ದಾಖಲಾಗಿಲ್ಲ.

ರಾಜ್ಯಪಾಲ, ರಾಷ್ಟ್ರಪತಿಗಳಂಥವರು `ನನ್ನ ಸರ್ಕಾರ’ ಎಂಬ ಪ್ರಯೋಗವನ್ನು ಬಳಸುತ್ತಾರೆಯೇ ಹೊರತು ಇವರ್ಯಾರೂ `ನಾನೇ ಸರ್ಕಾರ’ ಎಂದು ಹೇಳಿದ್ದಂತೂ ಇಲ್ಲವೇ ಇಲ್ಲ. ಹೀಗೆ `ನಾನೇ ಸರ್ಕಾರ’ ಎಂದು ಹೇಳಿದವನಿದ್ದರೆ ಅವನು 17ನೇ ಶತಮಾನದ ಫ್ರೆಂಚ್‌ ದೊರೆ ಹದಿನಾಲ್ಕನೇ ಲೂಯಿ. ಅವನು ಸಂಸತ್‌ ಸ್ವಯಂಪ್ರೇರಣೆಯಿಂದ ಸಭೆ ಸೇರುವುದರಿಂದ ವಿಚಲಿತನಾಗಿ `l’etat C’est moi'(ನಾನೇ ಪ್ರಭುತ್ವ ಅಥವಾ ನಾನೇ ಸರ್ಕಾರ) ಎಂದು ಕಿರುಚಿದ್ದನಂತೆ.

face

`ಸರ್ಕಾರ ಮಾತನಾಡುತ್ತಿದೆ’ ಎಂದು ಹೇಳಿದ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡರು ಖಂಡಿತವಾಗಿಯೂ ಹದಿನಾಲ್ಕನೇ ಲೂಯಿಯಂಥ ಚಕ್ರವರ್ತಿಯಂತೂ ಅಲ್ಲ. ಅವರು ಜನರಿಂದ ಅದೂ ಪದವೀಧರರಿಂದ ಆಯ್ಕೆಯಾಗಿರುವ ಶಾಸಕ. ಸರಳವಾಗಿ ಹೇಳುವುದಾದರೆ ಜನಪ್ರತಿನಿಧಿ ಮತ್ತು ಮುಖ್ಯಮಂತ್ರಿಗಳಿಂದ ನೇಮಕಗೊಂಡ ಸಚಿವ. ಹಾಗಾಗಿ ಅವರೇ ಸರ್ಕಾರವಾಗಿರುವ ಯಾವ ಸಾಧ್ಯತೆಯೂ ಇಲ್ಲ. ಆಧುನಿಕ ಕಲಾ ಗ್ಯಾಲರಿ ಕೇಂದ್ರ ಸರ್ಕಾರದ ಆಡಳಿತದ ಪರಿಧಿಯಲ್ಲಿರುವಂಥದ್ದು. ಇದರ ಉದ್ಘಾಟನೆಯಲ್ಲಿ ಸಚಿವ ರಾಮಚಂದ್ರೇಗೌಡರು ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿದ್ದರು. ಈ ಅಂಶವನ್ನು ಒಪ್ಪಿಕೊಂಡರೂ ರಾಮಚಂದ್ರೇಗೌಡರು ಸರ್ಕಾರವಾಗಲು ಸಾಧ್ಯವಿಲ್ಲ. ಭಾರತದ ಪ್ರತಿನಿಧಿಯಾಗಿ ಹೊರ ದೇಶಗಳಲ್ಲಿರುವ ರಾಯಭಾರಿಗಳು ಭಾರತ ಸರ್ಕಾರದ ಪ್ರತಿನಿಧಿಗಳೇ ಹೊರತು ಅವರೇ ಭಾರತ ಸರ್ಕಾರವಲ್ಲ ಎಂಬ ತರ್ಕವನ್ನು ಇಲ್ಲಿಗೂ ಅನ್ವಯಿಸಬಹುದು.

***

ಒಟ್ಟಿನಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾವ ವ್ಯಕ್ತಿಯೂ `ನಾನೇ ಸರ್ಕಾರ’ ಎಂದು ಹೇಳುವ ಯಾವ ಅವಕಾಶವೂ ಇಲ್ಲ ಎಂಬ ತೀರ್ಮಾನಕ್ಕೆ ಬರಬಹುದು. ಅಂದರೆ ಮಂತ್ರಿಯೊಬ್ಬರು `ನಾನೇ ಸರ್ಕಾರ’ ಎಂದಿದ್ದರೆ ಅದು ಅಪ್ರಜಾಸತ್ತಾತ್ಮಕ ಹೇಳಿಕೆ ಎಂಬುದು ಸಂಶಯಾತೀತವಾಗಿ ಸ್ಪಷ್ಟ. ಆದರೆ ರಾಮಚಂದ್ರೇಗೌಡರ ಪ್ರಕರಣದಲ್ಲಿ ಸಂಭವಿಸಿದ್ದು ಬೇರೆಯೇ.

`ಸರ್ಕಾರ ಮಾತನಾಡುತ್ತಿದೆ. ಅವರನ್ನು ಹೊರಗೆ ಹಾಕಿ’ ಎಂಬ ಹೇಳಿಕೆಯ ಕೊನೆಯ ಭಾಗ ಮತ್ತು ಅದರ ಪರಿಣಾಮ ಮಾತ್ರ ಎಲ್ಲರಿಗೂ ಮುಖ್ಯವಾಗಿಬಿಟ್ಟಿದೆ. ರಾಮಚಂದ್ರೇಗೌಡರು ನೀಡಿದ ಆದೇಶ ಪೊಲೀಸರಿಗಲ್ಲದೇ ಇದ್ದರೂ ಪೊಲೀಸರು ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದ ಕಲಾವಿದನನ್ನು ಸಮ್ಮೇಳನ ಸಭಾಂಗಣದಿಂದ ಹೊರಗೆ ಹಾಕಿದರು. ಹೀಗೆ ಹೊರಗೆ ಹಾಕಿದ್ದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಕುರಿತಂತೆ ಕಾಳಜಿಯುಳ್ಳವರು ಒಟ್ಟು ಸೇರಿ ಪ್ರತಿಭಟಿಸಿದರು. ಆದರೆ ಮಂತ್ರಿಯೊಬ್ಬ `ನಾನೇ ಸರ್ಕಾರ’ ಎಂಬ ದಾರ್ಷ್ಟ್ಯ ತೋರಿದ್ದು ಎಲ್ಲಿಯೂ ಯಾರನ್ನೂ ಕಾಡಲಿಲ್ಲ.

ಹೀಗೆ ಮಂತ್ರಿಗಳು ಮತ್ತು ಅಧಿಕಾರಿಗಳು ಅವರೇ ಸರ್ಕಾರವಾಗುವುದು ಇದೇ ಮೊದಲೇನೂ ಅಲ್ಲ. ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗಲೂ ಇಂಥದ್ದೇ ಒಂದು ಘಟನೆ ಸಂಭವಿಸಿತ್ತು. ನಿಯಮೋಲ್ಲಂಘನೆಯ ಮೂಲಕ ನೇಮಕಗೊಂಡಿದ್ದ ನೌಕರರನ್ನು ಕುಲಪತಿ ಕೆಲಸದಿಂದ ತೆಗೆದು ಹಾಕಿದ್ದರು. ಕಾನೂನು ಬದ್ಧವಾಗಿ ಅವರ ಮರು ನೇಮಕ ಸಾಧ್ಯವಿರಲಿಲ್ಲ. ಎಚ್‌.ಡಿ.ಕುಮಾರಸ್ವಾಮಿಯವರು ರಜೆಯಲ್ಲಿದ್ದ ಕುಲಪತಿಯನ್ನು ಕರೆಯಿಸಿಕೊಂಡು `ಎಲ್ಲರನ್ನೂ ಮರು ನೇಮಕ ಮಾಡಿ’ ಎಂದು ಆದೇಶಿಸಿದರು.

ಕುಲಪತಿ ಅದು ನಿಯಮೋಲ್ಲಂಘನೆಯಾಗುತ್ತದೆ ಎಂದಾಗ ಮರುನೇಮಕಕ್ಕಾಗಿ ಆಗ್ರಹಿಸುತ್ತಿದ್ದವರನ್ನು ಉದ್ದೇಶಿಸಿ `ನಾನು ಹೇಳುತ್ತಿದ್ದೇನೆ. ನಿಮ್ಮ ಮರು ನೇಮಕ ಸಾಧ್ಯವಾಗದಿದ್ದರೆ ಉಳಿದವರೂ ವಿಶ್ವವಿದ್ಯಾಲಯಕ್ಕೆ ಬರದಂತೆ ಬೀಗ ಹಾಕಿ’ ಎಂದು ಆದೇಶಿಸಿದ್ದರು. ಎನ್‌.ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗ ಸಾರಿಗೆ ಕಚೇರಿಯೊಂದಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ನಾಗರಿಕರೊಬ್ಬರು ಅಧಿಕಾರಿಗಳ ಪರವಾಗಿ ಮಾತನಾಡಿದಾಗ ಅವರನ್ನು ಜಿ.ರಮೇಶ್‌ ಎಂಬ ಲೋಕಾಯುಕ್ತ ಎಸ್‌.ಪಿ. ಮನಬಂದಂತೆ ಥಳಿಸಿದ್ದರು.

ಇತ್ತೀಚೆಗೆ ಮಗನ ಕೊಲೆಯಿಂದ ದುಃಖ ಅನುಭವಿಸುತ್ತಿದ್ದ ಎಎಸ್‌ಐ ಒಬ್ಬರಿಗೆ ಡಿಸಿಪಿ ರವಿ ಥಳಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈಗ ಮಾನವ ಹಕ್ಕು ಆಯೋಗವೂ ಡಿಸಿಪಿ ರವಿಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಸೋನಿಯಾ ನಾರಂಗ್‌ ಎಂಬ ಪೊಲೀಸ್‌ ಅಧಿಕಾರಿ ತಮ್ಮ ಕೈಕೆಳಗಿನ ಅಧಿಕಾರಿಯೊಬ್ಬರಿಗೆ ಥಳಿಸಿದ್ದನ್ನೂ ನಾವೆಲ್ಲರೂ ಪತ್ರಿಕೆಗಳಲ್ಲಿ ಓದಿ ಮರೆತಿದ್ದೇವೆ.

ಈ ಎಲ್ಲಾ ಪ್ರಕರಣಗಳೂ ರಾಜಕಾರಣಿಗಳು ಮತ್ತು ಅಧಿಕಾರಿಗಳ `ತುಘಲಕ್‌ ಮನಸ್ಥಿತಿ’ಯ ಸ್ಯಾಂಪಲ್‌ಗಳು ಮಾತ್ರ.

***

20050520039302011

ರಾಮಚಂದ್ರೇಗೌಡರ ಪ್ರಕರಣವನ್ನು ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯವಿರುವುದು ಬೇರೆಯೇ ಬಗೆಯಲ್ಲಿ. ಆಧುನಿಕ ಕಲೆ ಮತ್ತು ಕಲಾವಿದರ ಬಗ್ಗೆ ಸಚಿವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಕಲಾವಿದರೊಬ್ಬರು ಸಭೆಯಲ್ಲೇ ವಿರೋಧಿಸಿದರು. ರಾಮಚಂದ್ರೇಗೌಡರಿಗೆ ಆಧುನಿಕ ಕಲೆಯ ಬಗ್ಗೆ ತಮ್ಮ ಸ್ವಂತ ಅಭಿಪ್ರಾಯವನ್ನು ಅದು ಯಾರಿಗೆ ಇಷ್ಟವಾಗದಿದ್ದರೂ ಹೇಳುವ ಹಕ್ಕಿದೆ. ಭಾಷಣಕ್ಕೆ ಅಡ್ಡಿಪಡಿಸಿದವರು ಸಚಿವರ ಈ ಮೂಲಭೂತ ಹಕ್ಕನ್ನು ಉಲ್ಲಂಘಿಸಿದರೆಂದೇ ಭಾವಿಸೋಣ. ಆದರೆ ಇದಕ್ಕೆ ಸಚಿವರು ನೀಡಿದ ಪ್ರತಿಕ್ರಿಯೆ ಕೆಲವು ಹೊಸ ಪ್ರಶ್ನೆಗಳಿಗೆ ಕಾರಣವಾಗುತ್ತದೆ. `ಇಲ್ಲಿ ಸರ್ಕಾರ ಮಾತನಾಡುತ್ತಿದೆ’ ಎಂದು ಸಚಿವರು ಹೇಳಿದರು. ಅಂದರೆ ಸಚಿವರು ಆಧುನಿಕ ಕಲೆ ಮತ್ತು ಕಲಾವಿದರ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಸಚಿವ ಸಂಪುಟದ ಅರ್ಥಾತ್‌ ಸರ್ಕಾರದ ಅಭಿಪ್ರಾಯವೇ? ಅಂದರೆ ಇದನ್ನು ಆಧುನಿಕ ಕಲೆ ಮತ್ತು ಕಲಾವಿದರ ಬಗೆಗಿನ ಸರ್ಕಾರದ ನೀತಿ ಎಂದು ಪರಿಗಣಿಸಬಹುದೇ? ತಮ್ಮ ಮಾತಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರನ್ನು `ಹೊರಗೆ ದಬ್ಬುವುದೂ’ ಈ ನೀತಿಯ ಭಾಗವೇ?

***

ಎಚ್‌.ಡಿ.ಕುಮಾರಸ್ವಾಮಿಯವರಿಂದ ಆರಂಭಿಸಿ ರಾಮಚಂದ್ರೇಗೌಡರ ತನಕದ ರಾಜಕಾರಣಿಗಳು ಮತ್ತು ಎಸ್‌ಪಿ ರಮೇಶ್‌ರಿಂದ ಆರಂಭಿಸಿ ಸೋನಿಯಾ ನಾರಂಗ್‌ ಅವರ ತನಕದ ಪೊಲೀಸ್‌ ಅಧಿಕಾರಿಗಳು ಒಂದು ಅಂಶವನ್ನಂತೂ ಸ್ಪಷ್ಟಪಡಿಸುತ್ತಿದ್ದಾರೆ. ಇವರಾರಿಗೂ ಪ್ರಜಾಸತ್ತೆಯ ಮುಖ್ಯ ಉಪಕರಣವಾಗಿರುವ ಭಿನ್ನಾಭಿಪ್ರಾಯಕ್ಕೆ ಬೆಲೆ ಕೊಡುವ ಮನಸ್ಸಿಲ್ಲ. ನಿಯಮದ ಬಲದ ಮೇಲೆ ನಂಬಿಕೆ ಇಲ್ಲ. ದಬ್ಬುವುದು, ಥಳಿಸುವುದರ ಮೂಲಕ ಆಳುವುದು ಇವರ ಆಡಳಿತ ವೈಖರಿ. ಇಲ್ಲಿಯ ತನಕ ಕರ್ನಾಟಕ ಬಿಹಾರವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿತ್ತು. ಈಗಿನ ಸ್ಥಿತಿ ನೋಡಿದರೆ ಕರ್ನಾಟಕ 17ನೇ ಶತಮಾನದ ಫ್ರಾನ್ಸ್‌ನಂತಾಗುತ್ತಿದೆ ಎನಿಸುತ್ತದೆ. ಹದಿನಾಲ್ಕನೇ ಲೂಯಿಯ `ನಾನೇ ಸರ್ಕಾರ’ ಎಂಬ ಉದ್ಧಟತನದ ಪರಿಣಾಮ 1789ರಲ್ಲಿ ಫ್ರಾನ್ಸ್‌ ಹೊತ್ತಿ ಉರಿಯುವುದರಲ್ಲಿ ಕೊನೆಗೊಂಡಿತೆಂಬುದು ನಮಗೆ ನೆನಪಿರಬೇಕು.

Previous Older Entries

%d bloggers like this: