‘ಹಳ್ಳ ಬಂತು ಹಳ್ಳ’ ಫಿವರ್

srinivasvaidhya1ಅಕ್ಷರ ದಿಢೀರನೆ ಒಂದು ಮೇಲ್ ಕಳಿಸಿದರು. ಮನೋಹರ ಗ್ರಂಥಮಾಲೆ ಒಂದು ಹೊಸ ಕಾದಂಬರಿ ಪ್ರಕಟ ಮಾಡಿದೆ. ನೀವು ಓದಲೇಬೇಕು ಅಂತ. ಯಾಕೆ ಓದಬೇಕೂ ಎಂಬುದನ್ನೂ ವಿವರವಾಗಿ ಬರೆದಿದ್ದರು. ಅವರು ಮಾತನಾಡುತ್ತಿದ್ದುದು ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ದ ಬಗ್ಗೆ.

ರಾಮೋಜಿ ಫಿಲಂ ಸಿಟಿ ಎಂಬ ಜಗತ್ತಿನಲ್ಲಿದ್ದ ನನಗೆ ಆಗ ಅಂಕಿತ ಪುಸ್ತಕ ಮಾತ್ರವೇ ಒಂದು ಬೆಳಕಿಂಡಿ. ಬೆಂಗಳೂರಿಗೆ ಬಂದಾಗ ‘ಹಳ್ಳ’ ಕೊಂಡೆ. ವಾಪಸ್ ಹೋಗುವ ವೇಳೆಗೆ ಗೋಪಾಲ ವಾಜಪೇಯಿ ಅವರ ಫೋನ್ ಕಾಲ್. ಬೆಂಗಳೂರಿಗೆ ಹೋಗಿದ್ರಲ್ಲಾ ಯಾವುದಾದ್ರೂ ಪುಸ್ತಕ ತಂದ್ರೆನು? ‘ಹಳ್ಳ ಬಂತು ಹಳ್ಳ’ ಕಂಡಿತೇನು? ಅಂತ.

‘ಸರಾ, ತಂದೀನ್ರಿ’ ಅಂದೇ. ಅವರು ನಾಲ್ಕನೇ ಮಹಡಿಯಿಂದ ದುಡುಮ್ಮನೆ ಹಾರಿಯೇಬಿಟ್ತರೆನೋ ಎನ್ನುವ ಸ್ಪೀಡ್ ನಲ್ಲಿ ನನ್ನೆದುರು ನಿಂತಿದ್ದರು- ಪುಸ್ತಕಕ್ಕಾಗಿ.

ಓದಿದವರೇ ಯಾರ್ಯಾರಿಗೆ ಸುದ್ದಿ ಮುಟ್ಟಿಸಿದರೋ. ಅದೇ ನಾಲ್ಕನೇ ಮಹಡಿಯಿಂದ ನಮ್ಮೆಲ್ಲರ ಹಿರಿಯ ಬಾಲಕೃಷ್ಣ ಅವರು ಫೋನ್ ಮಾಡಿದರು. ಆ ಪುಸ್ತಕ ಬೇಕಲ್ಲ ಅಂತ.

ಅವರು ಓದಿ ಮುಗಿಸಿದರೋ ಇಲ್ಲವೋ ಕ್ಯಾಮೆರಾ ಕಲೆಯನ್ನೂ ವಚನಗಳ ಮೂಲಕವೇ ಪಾಠ ಮಾಡುವಷ್ಟು ಓದು ಗೊತ್ತಿರುವ ಸತ್ಯಬೋಧ ಜೋಷಿ ಆ ಪುಸ್ತಕದ ಬೆನ್ನು ಬಿದ್ದರು.

ವೈದ್ಯರದ್ದು ಜ್ವರ ವಾಸಿ ಮಾಡುವ ಕೆಲಸ ತಾನೆ?. ಆದರೆ ಈ ವೈದ್ಯರೋ ಜ್ವರ ಹರಡಿದ್ದರು. ‘ಹಳ್ಳ ಬಂತು ಹಳ್ಳ’ ಫಿವರ್ ಹೈದರಾಬಾದ್ ನ ಆ ಮೂಲೆಯಲ್ಲಿ ಅಂಟು ಜಾಡ್ಯದಂತೆ ಹರಡಿತ್ತು.

ಶ್ರೀಕಾಂತ ಮಿಶ್ರಿಕೋಟಿ ಅವರು ‘ಹಳ್ಳ ಬಂತು ಹಳ್ಳ’ದ ಬಗ್ಗೆ ಎರಡು ವರ್ಷದ ಹಿಂದೆ ‘ಒಳ್ಳೆಯ ಓದು’ ಅಡಿ ‘ಸಂಪದ’ ದಲ್ಲಿ ಪ್ರಕಟಿಸಿದ್ದ ಲೇಖನ ಇಲ್ಲಿದೆ. ವೈದ್ಯರ ‘ಮನಸುಖರಾಯನ ಮನಸು ‘ ಕೃತಿಯ ಬಗ್ಗೆ ‘ಓದುವ ಹವ್ಯಾಸ’ ದಲ್ಲಿ ನರೇಂದ್ರ ಪೈ ಬರೆದಿದ್ದಾರೆ. ಅದನ್ನೂ ಓದಿ 

 


vaidya-1preview2

ಶ್ರೀನಿವಾಸ ವೈದ್ಯ ಅವರ ‘ ಹಳ್ಳ ಬಂತು ಹಳ್ಳ’ ಮತ್ತು ಎನ್ಕೆ ಅವರ ‘ಅಶ್ವತ್ಥಮರ’

-ಶ್ರೀಕಾಂತ ಮಿಶ್ರಿಕೋಟಿ

ಶ್ರೀಯುತ ಶ್ರೀನಿವಾಸ ವೈದ್ಯ ಅವರ ಬರವಣಿಗೆ ಮೊದಲು ಕಸ್ತೂರಿಯಲ್ಲಿ ಪ್ರಕಟವಾದ ಎರಡು ಮೂರು ಸರಸಮಯ ಹೃದಯಸ್ಪರ್ಶಿ ಪ್ರಬಂಧಗಳಿಂದ ಗಮನಕ್ಕೆ ಬಂದಿತು. ಅಲ್ಲಿ ‘ಮನಸುಖರಾಯನ ಮನಸು’ ಪುಸ್ತಕದಿಂದ ಎಂದು ಹೇಳಿದ್ದರಿಂದ ಧಾರವಾಡದ ಪುಸ್ತಕದ ಅಂಗಡಿಗಳಿಗೆ ಹೋದಾಗಲೆಲ್ಲ ಆ ಪುಸ್ತಕವನ್ನು ಕೇಳುತ್ತಿದ್ದೆ. ಅದು ಇರುತ್ತಿರಲಿಲ್ಲ ; ಅವರ ಬೇರೆ ಪುಸ್ತಕಗಳನ್ನು ತೋರಿಸುತ್ತಿದ್ದರು . ಅದೂ ಒಳ್ಳೆಯದೇ ಆಯಿತು . ಹೀಗಾಗಿ ನನಗೆ ‘ತಲೆಗೊಂದು ತರತರ’ , ‘ ರುಚಿಹುಳಿಯೊಗರು’ ಮತ್ತು ‘ಹಳ್ಳ ಬಂತು ಹಳ್ಳ’ ಸಿಕ್ಕವು . ಮನಸುಖರಾಯನ ಮನಸು ಕೂಡ ಇತ್ತೀಚೆ ಬೆಂಗಳೂರಿಗೆ ಹೋದಾಗ ಅನಿರಿಕ್ಷಿತವಾಗಿ ಸಪ್ನಾ ಮಳಿಗೆಯಲ್ಲಿ ಸಿಕ್ಕಿತು ( ಬಹುಶ: ಎರಡೇ ಪ್ರತಿ ಉಳಿದಿದ್ದವು) .

‘ತಲೆಗೊಂದು ತರತರ’ , ‘ ರುಚಿಹುಳಿಯೊಗರು’ ಮತ್ತು ‘ಮನಸುಖರಾಯನ ಮನಸು’ ಇವು ಶ್ರೇಷ್ಠ ತರಗತಿಯ ಹಾಸ್ಯ ಲೇಖನಗಳ ಪುಸ್ತಕಗಳು . ಇವನ್ನು ನಾನು ಎಲ್ಲರಿಗೂ ಶಿಫಾರಸು ಮಾಡುತ್ತೇನೆ . ಮತ್ತೆ ಮತ್ತೆ ಓದಬೇಕೆನಿಸುವ ಹಾಗೆ ಇದೆ. ಚೆನ್ನಾಗಿವೆ ಮತ್ತು ನನಗೆ ಬಹಳ ಸೇರಿದವು , ನೀವೂ ಓದಿರಿ ಎಂಬುದಕ್ಕಿಂತ ಹೆಚ್ಚೇನು ಹೇಳಲಿ?

‘ಹಳ್ಳ ಬಂತು ಹಳ್ಳ’ ಮಾತ್ರ ಈ ವರ್ಗಕ್ಕೆ ಸೇರದ ಪುಸ್ತಕ . ಗಂಭೀರ ವಿಷಯದ ಕಾದಂಬರಿ. ಸುಮಾರು ೧೫೦ ವರ್ಷದ ಹರಹುಳ್ಳ ಒಂದು ಮನೆತನದ ಕಥೆ. ೧೮೫೭ರ ಸುಮಾರಿನ ಬ್ರಿಟಿಷರ ವಿರುದ್ಧದ ಬಂಡಾಯದ ಸಮಯದಲ್ಲಿ ಉತ್ತರದಿಂದ ನರಗುಂದದ ಬಾಬಾಸಾಹೇಬನಿಗೊಂದು ರಾಜಕೀಯ ಸಂದೇಶ ತಂದ ತರುಣ ನವಲಗುಂದದಲ್ಲಿಯೇ ನೆಲೆಯಾಗಬೇಕಾಗುತ್ತಾನೆ. ಅಲ್ಲಿಂದ ಆ ಮನೆಯ ಜನರ ಜೀವನದ ಏರಿಳಿತಗಳು ಸುತ್ತಲಿನ ಬದಲಾವಣೆಗಳ ಹಿನ್ನೆಲೆಯಲ್ಲಿ ತೊರೆಯ ನೀರಿನ ಹರಿವಿನ ಹಾಗೆ ಚಿತ್ರಿತವಾಗಿವೆ. ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಕಾದಂಬರಿಯ ಇನ್ನೊಂದು ವಿಶೇಷವೇನೆಂದರೆ ಧಾರವಾಡ ಜಿಲ್ಲೆಯ ನರಗುಂದ , ನವಲಗುಂದ ಪ್ರದೇಶದ ಆಡುಮಾತು ಹಾಗೂ ಸಂಸ್ಕೃತಿಯನ್ನು ಬಳಸಿಕೊಂಡಿದೆ. ಈ ಕಾದಂಬರಿಯನ್ನು ನಾನು ಓದಿದ್ದು ಹೋದವರುಷ.

ಇತ್ತೀಚೆಗೆ ಎನ್ಕೆ ಅವರ ಒಂದು ಕಾದಂಬರಿ ‘ಅಶ್ವತ್ಥಮರ’ ಕಣ್ಣಿಗೆ ಬಿದ್ದು , ಧಾರವಾಡದ ಆಡುಮಾತಿಗಾಗಿ ಮತ್ತು ಹಿಂದಿನ ದಿನಗಳ ಕುರಿತಾದ ಕುತೂಹಲಕ್ಕಾಗಿ ತೆಗೆದುಕೊಂಡೆ. ಆಶ್ಚರ್ಯವೆಂದರೆ ಇದಕ್ಕೂ , ‘ಹಳ್ಳ ಬಂತು ಹಳ್ಳ’ಕ್ಕೂ ಅನೇಕ ಸಾಮ್ಯತೆಗಳು! ಅಲ್ಲಿ ನೀರಿನ ಹಳ್ಳ ಅದರ ಹರಿವು , ಇಲ್ಲಿ ಅಶ್ವತ್ಥಮರ ಮತ್ತು ಅದರ ಟಿಸಿಲುಗಳು ! . ಅಲ್ಲಿ ನವಲಗುಂದದಿಂದ ಕಥೆ ಆರಂಭವಾದರೆ , ಇಲ್ಲಿ ಗದಗಿನಲ್ಲಿ , ಎರಡೂ ಬ್ರ್‍ಆಹ್ಮಣ ಮನೆತನದ ಕಥೆಗಳೇ , ಎರಡಕ್ಕೂ ಹಿನ್ನೆಲೆಯಾಗಿ ೧೮೫೭ ರಿಂದ ಸ್ವಾತಂತ್ರೋತ್ತರ ಭಾರತದ ಸಾಮಾಜಿಕ ಘಟನೆಗಳ ಹಿನ್ನೆಲೆಯಿದೆ . ಎರಡೂ ಸ್ಥಳೀಯ ಆಡುಭಾಷೆಯನ್ನು ಬಳಸಿಕೊಂಡಿವೆ . ‘ಹಳ್ಳ…’ ಗಾತ್ರದಲ್ಲಿ ‘..ಮರ’ಕ್ಕಿಂತ ದೊಡ್ಡದು ಮತ್ತು ವಿವರಗಳಲ್ಲಿ ವಿಸ್ತ್ರತವಾದದ್ದು. ‘…ಮರ’ ೧೯೯೫ರಲ್ಲಿ ಮುದ್ರಿತವಾದದ್ದು , ‘ಹಳ್ಳ …’ ಇತ್ತೀಚೆಗೆ .

ನಾನು ಈಗ ‘ಹಳ್ಳ ಬಂತು ಹಳ್ಳ’ವನ್ನು ಮತ್ತೊಮ್ಮೆ ಓದಬೇಕಿದೆ.

1 ಟಿಪ್ಪಣಿ (+add yours?)

 1. guru
  ಡಿಸೆ 24, 2008 @ 19:27:41

  There was an article by vasudhendra on the toipc in vijaya karanataka sunday issue some time back. I feel it would be worth reading along with the stuff here. Can somebody get the soft copy of it ?

  Regards,
  Guru

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: