ಕರುಣಾಳುವೇ- ಬಿರಿಯಾನಿ ಬೇಡ, ಮೀನು ನೀಡು

ಮತ್ಸ್ಯಗಂಧಿಯರ ನಾಡಲ್ಲಿ…

ಜಿ ಎನ್ ಮೋಹನ್ 

img_7377-111

ಫ್ರೇಮ್ -೩   

 

ಓ ಎನ್ ವಿ

ಚಿತ್ರರಂಗದ ಜಗಮಗಿಸುವ ಎಲ್ಲಾ ತಾರೆಗಳ ಮಧ್ಯೆ ತನ್ನದೇ ಆದ ಚಮಕ್ ತೋರಿಸಿದ ಒಬ್ಬರಿದ್ದರೆ ಅದು ಓ ಎನ್ ವಿ. ಅಥವಾ ಓ ಎನ್ ವಿ ಕುರುಪ್. ಮಲಯಾಳಂ ನ ಸಂತಸ ಹಾಗೂ ನಿಟ್ಟುಸಿರು ಎರಡನ್ನೂ ಹಿಡಿದಿಟ್ಟ ವೈಕಂ ಪೀಳಿಗೆಯ ನಂತರದ ಕಾಲ ಅದು ನಿಸ್ಸಂದೇಹವಾಗಿ ಓ ಎನ್ ವಿ ಹಾಗೂ ಅವರ ಸಮಕಾಲೀನರದ್ದು. ಓ ಎನ್ ವಿ ಮಲಯಾಳ ಸಾಹಿತ್ಯ ಪ್ರೇಮಿಗಳಿಗೆ ಬರೀ ಓ ಎನ್ ವಿ ಅಲ್ಲ ‘ನಮ್ಮುಡೆ ಓ ಎನ್ ವಿ’ ( ನಮ್ಮ ಓ ಎನ್ ವಿ). ಅಂದಿನ ತಾರೆಗಳ ತೋಟದಲ್ಲಿ ಓ ಎನ್ ವಿ ನಿಧಾನವಾಗಿ ನಡೆದು ವೇದಿಕೆಗೆ ಬರುತ್ತಿದ್ದರೆ ಜನ ದೀರ್ಘ ಚಪ್ಪಾಳೆಯ ಮಳೆ ಸುರಿಸುತ್ತಿದ್ದರು.

995

ಒಂದು ದಿನ ದೋಣಿಯನ್ನೇರಿ ಅರಬ್ಬೀ ಸಮುದ್ರದ ಅಲೆಗಳೊಡನೆ ಆಟವಾಡುತ್ತ, ಹೊನ್ನಾವರಕ್ಕೆ ಬಂದೆ. ಅಲ್ಲಿ ‘ಯಕ್ಷಗಾನದ ದೇವರು’ ಎಂದೇ ಕರೆಯಲ್ಪಡುವ ಶಂಭು ಹೆಗಡೆ ಇದ್ದರು. ‘ಕೃಷ್ಣ ನಾನೋ, ಇಲ್ಲಾ ಶಂಭು ಹೆಗಡೆಯೋ’ ಎಂದು ಆ ಕೃಷ್ಣನಂತ ಕೃಷ್ಣ ಪರಮಾತ್ಮನಿಗೇ ಸಂದೇಹ ಬರುವಷ್ಟು ಕೃಷ್ಣ ಪಾತ್ರದಲ್ಲಿ ಜನಪ್ರಿಯರಾಗಿರುವ ಶಂಭು ಹೆಗಡೆ ಅವರೊಡನೆ ಒಂದು ಇಡೀ ದಿನ ಯಕ್ಷಗಾನದ ಬಗ್ಗೆ ಮಾತನಾಡುವುದಿತ್ತು. ‘ಮಾತಾಡಿ ಬನ್ನಿ’ ಅಂತ ಆಗ ‘ಸಂಕುಲ’ ನಡೆಸುತ್ತಿದ್ದ ವಿಜಯಮ್ಮ ಅಣತಿ ನೀಡಿದ್ದರು.

ಮಾತನಾಡುತ್ತಾ ಆಡುತ್ತಾ ಶಂಭು ಹೆಗಡೆ ಯಾಕೋ ವಿಷಣ್ಣರಾದರು. ನೋಡಿ ಯಕ್ಷಗಾನಕ್ಕೆ ಈಗ ರೇಪ್ ಬಂದಿದೆ, ಅಶ್ಲೀಲ ಹಾಡುಗಳು ಕಾಲಿಟ್ಟಿವೆ. ಯಕ್ಷಗಾನ ಏನಾಗಿ ಹೋಯಿತು ಅಂತ ನಿಟ್ಟುಸಿರಿಟ್ಟರು. ಈಗ ಯಾವುದೇ ಬಸ್ ಟೆಂಪೋ ಏರಿದರೂ ದ್ವಂದ್ವಾರ್ಥದ ಹಾಡುಗಳನ್ನೇ ಹಾಕುತ್ತಾರೆ. ಸಾರ್ವಜನಿಕವಾಗಿಯೇ ಮನಸ್ಸನ್ನು ಅಶ್ಲೀಲವಾಗಿಸುವಾಗ ಯಕ್ಷಗಾನ ಶುದ್ಧವಾಗಿರಬೇಕು ಎಂದರೆ ಹೇಗೆ ಅಂತ ಕೇಳಿದರು.

ಮಾತೆಲ್ಲಾ ಮುಗಿದು ನಾನು ಭಟ್ಕಳಕ್ಕೆ, ಅವರು ಇಡಗುಂಜಿಯ ಬಳಿ ನೆಂಟರ ಮನೆ ತಲುಪಿಕೊಳ್ಳಲು ಯಾವುದೋ ಟೆಂಪೋ ಅಡ್ಡ ಹಾಕಿದೆವು. ಏರಿದ್ದೇ ತಡ ಕಿವಿಗಳು ಯಾಕಿವೆಯೋ ಎನ್ನಿಸುವಂತ ಹಾಡುಗಳು ಹರಿಯಲಾರಂಭಿಸಿತು. ಶಂಭು ಹೆಗಡೆ ನನ್ನ ಮುಖ ನೋಡಿದರು. ನನಗಾದರೂ ಅವರ ಮುಖ ನೋಡದೆ ಇನ್ನೇನು ಮಾಡಲು ಸಾಧ್ಯವಿತ್ತು.

ಇದಾದ ಸ್ವಲ್ಪ ದಿನಕ್ಕೆ ಮಂಗಳೂರಿನಿಂದ ಕಾಸರಗೋಡಿಗೆ ಅಂತ ಕೇರಳದ ಬಸ್ ಏರಿದೆ. ಡ್ರೈವರ್ ಟೇಪ್ ಆನ್ ಮಾಡಿದ. ಓ! ಇನ್ನು ಕಿವಿ ಮುಚ್ಚಿಕೊಳ್ಳದೆ ಬೇರೆ ದಾರಿ ಇಲ್ಲ ಅಂದುಕೊಂಡೆ. ಆದರೆ ಟೇಪ್ ಎತ್ತರದ ದನಿಯಲ್ಲಿ -ಹಾಡುತ್ತಿದ್ದಾರೋ ಇಲ್ಲಾ ವಾಚಿಸುತ್ತಿದ್ದಾರೋ ಎನ್ನುವಂತೆ – ತೇಲಿಸುತ್ತಿತ್ತು. ಆ ಹಾಡಿಗೆ ಹಿನ್ನೆಲೆಯಾಗಿ ಒಂದು ಕೊಳಲ ನಾದ.

ಶಂಭು ಹೆಗಡೆಯವರ ಜೊತೆಗೆ ಕೇಳಿದ್ದ ಹಾಡುಗಳು ನೆನಪಿಗೆ ಬಂದ ನಾನು ಪಕ್ಕದಲ್ಲಿದ್ದವರನ್ನು ಇದು ಯಾವ ಟೇಪ್ ಎಂದು ಕೇಳಿದೆ. ಓ ಎನ್ ವಿ ಎಂದ. ನಾನು ಎಚ್ ಎಂ ವಿ ತರಾ ಇದೂ ಯಾವುದೋ ಆಡಿಯೋ ಕಂಪನಿ ಎಂದುಕೊಂಡು ಸುಮ್ಮನಾದೆ.

ಆಮೇಲೆ ಒಂದು ದಿನ ನನ್ನ ಗೆಳತಿಗೆ ನೀನು ಕಾಸರಗೋಡಿನಿಂದ ಬರುವಾಗ ಯಾವುದಾದರೋ ಓ ಎನ್ ವಿ ಕ್ಯಾಸೆಟ್ ತಂದು ಬಿಡು ಅಂದೆ. ನಿನಗೆ ಓ ಎನ್ ವಿ ಗೊತ್ತಾ ಅಂದಳು ಹ್ಞೂ ಅಂದೆ. ಕೇರಳದಲ್ಲಿ ಅದೇ ಕಂಪನಿ ಫೇಮಸ್ಸಾ ಅಂದೆ. ಇದೇನಪ್ಪಾ ಎನ್ನುವಂತೆ ಮುಖ ನೋಡಿದಳು. ಓ ಎನ್ ವಿ ಕಂಪನಿಯ ಒಂದು ಕ್ಯಾಸೆಟ್ ಮಾತ್ರ ಸಾಕು ಎಂದೆ. ಅವಳು ಬಿದ್ದೂ ಬಿದ್ದೂ ನಕ್ಕಳು. ಓ ಎನ್ ವಿ ಅಂದರೆ ಕಂಪನಿ ಅಲ್ಲ. ಓ ಎನ್ ವಿ ಕುರುಪ್ ಅಂದಳು. ‘ಯಾ, ಅಲ್ಲಾ’ ಅಂದುಕೊಂಡೆ.

ನಂತರ ಭೇಟಿಯಾದಾಗ ಅವಳ ಕೈನಲ್ಲಿ ಒಂದು ಕ್ಯಾಸೆಟ್ ಇತ್ತು. ಮಲಯಾಳಂನಲ್ಲಿ ಕವಿಗಳೇ ವಾಚಿಸಿದ ಕವಿತೆಗಳ ಕ್ಯಾಸೆಟ್ ಸಿಕ್ಕಾಪಟ್ಟೆ ಫೇಮಸ್. ಬಹುತೇಕ ಎಲ್ಲಾ ಕವಿಗಳೂ ಕ್ಯಾಸೆಟ್ನಲ್ಲಿದ್ದಾರೆ. ಅವರು ಎಷ್ಟು ಫೇಮಸ್ ಎಂದರೆ ಬಸ್ ಆಟೋ ಟೆಂಪೋ ಎಲ್ಲದರಲ್ಲೂ ನಮ್ಮ ‘ಎಫ್ ಎಂ’ ತರಾ ಈ ಕವಿತೆಗಳು ಹರಿಯುತ್ತಲೇ ಇರುತ್ತದೆ. ಅದರಲ್ಲೂ ಅವರು ಕವಿತೆ ವಾಚಿಸುವ ಶೈಲಿಯೂ ಅವರನ್ನು ಇನ್ನಷ್ಟು ಕ್ಯಾಸೆಟ್ ಹತ್ತಿರಕ್ಕೆ ತಂದಿದೆ. ಅದು ವಾಚನ ಹಾಗೂ ಗಾಯನ ಎರಡರ ಮಿಕ್ಸ್.

ಕನ್ನಡದಲ್ಲಿ ಲಕ್ಷ್ಮೀನಾರಾಯಣ ಭಟ್ಟರು ಎಲ್ಲಾ ಕವಿಗಳನ್ನೂ ಸೇರಿಸಿ ಅವರಿಂದ ಕವನ ವಾಚಿಸಿ ತಂದ ‘ಸಮ್ಮಿಲನ’ವೇ ಮೊದಲನೆಯದ್ದು. ಆಮೇಲೆ ಒಂದೋ ಎರಡೋ ಪ್ರಯೋಗ ಆಗಿರಬಹುದು ಅಷ್ಟೆ.

ಆಮೇಲಾಮೇಲೆ ನಾನು ಕಾಸರಗೋಡು, ಕಣ್ಣೂರು, ಕುಂಬ್ಳೆ ಅಂತೆಲ್ಲಾ ಹೋಗುವಾಗ ಅಲ್ಲಿನ ಕ್ಯಾಸೆಟ್ ಅಂಗಡಿಗೂ ಹೆಜ್ಜೆ ಹಾಕುತ್ತಿದ್ದೆ. ಅರ್ಥವಾಗದಿದ್ದರೂ ಮಲಯಾಳ ಕವಿತೆಗಳ ಕ್ಯಾಸೆಟ್ ತಂದು ಕೇಳುವುದು ಅಭ್ಯಾಸವಾಗಿ ಹೋಗಿತ್ತು.

ಈಗ ನೋಡೀದರೆ ಓ ಎನ್ ವಿ ಎದುರೇ ಕುಳಿತಿದ್ದೇನೆ. ‘ಓ ಎನ್ ವಿ ಕಂಪನಿ’ ಎಂದು ನನ್ನೊಳಗೇ ನಕ್ಕೆ. ಓ ಎನ್ ವಿ ಪೋಡಿಯಮ್ ಬಳಿಗೆ ಹೆಜ್ಜೆ ಹಾಕುವಾಗ ತಾರೆಗಳು ನಿಮಗೆ ಮಣಿವೆ ಎಂಬಂತೆ ಕಾಲಿಗೆ ನಮಸ್ಕರಿಸುತ್ತಿದ್ದರು. ಚಿತ್ರೋತ್ಸವದ ಆರಂಭವೇ ಓ ಎನ್ ವಿ ಕವಿತೆ ವಾಚನದಿಂದ.

mzya045ಓ ಎನ್ ವಿ ತಮ್ಮ ಇಳಿವಯಸ್ಸಿನಲ್ಲಿಯೂ ದನಿ ಎತ್ತಿ-

ಇಲ್ಲಿ ತೆಂಗಿನ ಮರಗಳು ತಮ್ಮ ಗರಿ ಬೀಸಿ

ಪ್ರತಿಯೊಬ್ಬರನ್ನೂ ಬರಮಾಡಿಕೊಳ್ಳುತ್ತದೆ.

ಇಲ್ಲೇ ಒಂದಿಷ್ಟು ಕ್ಷಣ ಕುಳಿತು

ನಾವು ನೀವೆಲ್ಲಾ ಬದುಕಿನ ಕಷ್ಟ ಸುಖಗಳನ್ನು

ಹಂಚಿಕೊಳ್ಳೋಣ

-ಎಂದು ಹಾಡಿದರು.

ಅದು ಮಲಯಾಳಂ ಇರಲಿ, ಇಂಗ್ಲಿಶ್ ನಲ್ಲಿರಲಿ ಅದೇ ಸ್ಟೈಲ್. ಓ ಎನ್ ವಿ ಹಾಡುತ್ತಿದ್ದರೆ ನೆರೆದವರೆಲ್ಲ ಮುಂಬೈನ ಸಾಂತ್ವನಕ್ಕಾಗಿ ಸಾವಿರಾರು ದೀಪಗಳನ್ನು ಎತ್ತಿ ಹಿಡಿದಿದ್ದರು. ಅಲ್ಲಿ ಭರವಸೆಯ ಬೆಳಕಿನ ಸಮುದ್ರವೊಂದು ಸೃಷ್ಟಿಯಾಗಿತ್ತು.

ಬಿರಿಯಾನಿ ತಿನ್ನಲೋ ಇಲ್ಲಾ ಕ್ಯಾಸೆಟ್ ಕೊಳ್ಳಲೋ ಎಂದು ತಲೆ ಬಿಸಿಮಾಡಿಕೊಂಡು ಬೀದಿಯಲ್ಲಿ ನಿಂತಿದ್ದ ನಾನು ಕೊನೆಗೆ ಕ್ಯಾಸೆಟ್ ಅಂಗಡಿಯನ್ನೇ ಹೊಕ್ಕೆ. ಅಲ್ಲಿ ಮತ್ತೆ ಕುರುಪ್ ತಮ್ಮ ಅಳಿದುಳಿದ ಎಲ್ಲಾ ಹಲ್ಲುಗಳನ್ನ್ನೂ ಬಿಟ್ಟುಕೊಂಡು ನಿಂತಿದ್ದರು- ಕ್ಯಾಸೆಟ್ ನ ಕವರ್ ಮೇಲೆ. ಕೊಂಡು ಹೊರಗೆ ಬಂದಾಗ ಅದು ಹಾಡಿನ ಕ್ಯಾಸೆಟ್ ಅಲ್ಲ ಎಂದು ಗೊತ್ತಾಯಿತು. ಇನ್ನೇನು? ಎಂದು ಮಲಯಾಳಿಗಳ ಮೊರೆ ಹೊಕ್ಕೆ. ಅವರೋ ತಮ್ಮ ಮಲಯಾಳಿ ನಾಲಿಗೆಯನ್ನೇ ತಿರುಗಿಸುತ್ತಾ ಇದು ಓ ಎನ್ ವಿ ಕವಿತೆಯ ದೃಶ್ಯ ರೂಪ ಎಂದರು.

ಅದು ಕೇವಲ ಕವಿತೆ ಮಾತ್ರವಾಗಿರಲಿಲ್ಲ. ಅದು ಒಂದು ಅರ್ಥದಲ್ಲಿ ಕೇರಳದ ನಾಡ ಗೀತೆ. ಕಾರಣ ಇಷ್ಟೇ, ಬಹುತೇಕ ಎಲ್ಲಾ ತಲೆಮಾರುಗಳೂ ಓ ಎನ್ ವಿ ಕವಿತೆಯನ್ನು ಶಾಲೆಯ ಪಠ್ಯದಲ್ಲಿ ಓದಿ ಬೆಳೆದಿದ್ದಾರೆ. ಈಗ ಅದು ಶಾರ್ಟ್ ಫಿಲಂ ಆಗಿ ಕ್ಯಾಸೆಟ್ ಒಳಗೆ.

ನನಗೂ ‘ಭಾರತ ಜನನಿಯ ತನುಜಾತೆ’ಯನ್ನೋ ಅಥವಾ ‘ಜೋಗದ ಸಿರಿ ಬೆಳಕಿನಲ್ಲಿ’ಯನ್ನೋ ಯಾಕೆ ಕ್ಯಾಸೆಟ್ ನೊಳಗೆ ಕೂರಿಸುವ ಐಡಿಯಾ ಹೊಳೆಯಲಿಲ್ಲ ಅನಿಸಿತು. ‘ಓ ನೊಂದವರನ್ನು ಕಾಪಾಡುವ ಕರುಣಾಳುವೇ…! ನಾನು ಹುಟ್ಟಿದಾಗಿನಿಂದಲೇ ಮೀನು ತಿನ್ನುವುದನ್ನು ಕಲಿಸಬಾರದಿತ್ತೆ’ ಎಂದು ನಿಟ್ಟುಸಿರಿಟ್ಟೆ. ಕಾಲು ಬಿರಿಯಾನಿ ಅಂಗಡಿಯನ್ನು ತಿರಸ್ಕರಿಸಿ ಮೀನಿನ ಹೋಟೆಲ್ ಹುಡುಕುತ್ತಾ ಹೊರಟಿತು.

‘ಕೊಪ್ಪ’ನ ಉಮರ

ಜಗದೀಶ್ ಕೊಪ್ಪ ಹಿರಿಯ ಪತ್ರಕರ್ತರು. ಪ್ರಸ್ತುತ ಉದಯ ಟಿ ವಿ ಚಾನಲ್ ನ ಹುಬ್ಬಳ್ಳಿ ವಿಭಾಗದ ಮುಖ್ಯಸ್ಥರು. ಮಂಡ್ಯದಲ್ಲಿ ಹಲಕಾಲ ಪತ್ರಿಕೋದ್ಯಮದಲ್ಲಿ ನುರಿತ ಕೊಪ್ಪ ಮಂಡ್ಯದ ಬಂಡಾಯ ಗುಣವನ್ನು ಮಡಿಲಿಗೆ ಕಟ್ಟಿಕೊಂಡವರು.

ಹಲವು ಜನಪರಚಳವಳಿಗಲ್ಲಿ ತೊಡಗಿಸಿಕೊಂಡಿರುವ ಜಗದೀಶ್ ಕೊಪ್ಪ ಈಗ ಎಲ್ಲರ ಗೆಳೆಯ ಉಮರ ಖಯಾಮನ ಕವಿತೆಯ ಬೆನ್ನುಬಿದ್ದಿದ್ದಾರೆ. ಇಂದು ಧಾರವಾಡದಲ್ಲಿ ಬಿಡುಗಡೆಯಾದ ಈ ಪುಸ್ತಕದ ಆಯ್ದ ಕವಿತೆ ನಿಮಗೆ-  

umar-khayamana-padyagalu-cover21

 

ಸಖಿ

ಅಲ್ಲೊಂದು ಮರವಿರಲ್ಲಿ 

ಆ  ಮರದಡಿಯಲ್ಲಿ

ಒಂದಿನಿತು ರೊಟ್ಟಿ,

ಬಟ್ಟಲು ತುಂಬ ಮದ್ಯ

ಜೊತೆಗೆ ನೀನು,

ನಿನ್ನ ಹಾಡುಗಳ

ಅನುವರಣಗಳಿರಲಿ.

ಇವಿಷ್ಟು ಸಾಕು

ಸ್ವರ್ಗವಾದರೂ ಏಕೆ ಬೇಕು?

 

ಮಧು ಶಾಲೆಯಲ್ಲಿ

ಎದುರಾದ ವೃದ್ಧನನ್ನು

ನಿಲ್ಲಿಸಿ ಕೇಳಿದೆ,

“ಇಲ್ಲಿಂದ ಹೋದವರ

ಸುದ್ದಿ ಏನಾದರೂ

ತಿಳಿಯಿತೇ?”

ಮಧು ಬಟ್ಟಲ ಕೈಗಿತ್ತು,

ಇಲ್ಲಿಂದ ಹೋದವರು

ಹಿಂತಿರುಗಿ ಬರುವುದಿಲ್ಲ

ಸುದ್ದಿಯನ್ನೂ ತರುವುದಿಲ್ಲ

ಸಧ್ಯಕ್ಕೆ ಇದ ನೀ ಕುಡಿ ಎಂದ.

 

ಕುಡಿದ ಮತ್ತಿನಲಿ

ಮಧು ಬಟ್ಟಲನು

ಕಲ್ಲಿನ ಮೇಲೊಗೆದೆ.

ಒಡೆದ ಬಟ್ಟಲ ಚೂರು

ನೊಂದು ನುಡಿಯಿತು

ಖಯ್ಯಾಮ್

ನಿನ್ನೆ ‘ನಾನು ಕೂಡಾ ನಿನ್ನಂತಿದ್ದೆ’

ನಾಳೆ ‘ನೀನೂ ಕೂಡಾ ನನ್ನಂತಾಗುವೆ.’

 

ವಂಚಕರ ಮಾತುಗಳನ್ನೆಲ್ಲಾ 

ನಂಬಿ ಬದುಕಿದ್ದು ಸಾಕು.

ಗೆಳೆಯರು ಮಾತ್ರ

ಒಳ್ಳೆಯ ಮದ್ಯ ಕೊಡುತ್ತಾರೆ

ಅಷ್ಟೇ ಅಲ್ಲ ಅವರೆಲ್ಲರೂ

ಒಬ್ಬೊಬ್ಬರಾಗಿ ಇಲ್ಲಿಂದ

ಹೊರಟು ಹೋಗುತ್ತಾರೆ

ಹಿಂತಿರುಗುವ ಸುಳಿವು

ಕೂಡ ನೀಡುವುದಿಲ್ಲ.

 

ಕಾಲ ಕೆಟ್ಟಿತು ಎಂದು

ಕೊರಗಿದವರ ಬಗ್ಗೆ

ಜಗತ್ತು ಹೇಸಿದೆ ಖಯ್ಯಮ್,

ತೆಗೆದುಕೊ ಮಧು ಬಟ್ಟಲ

ಕೇಳು ಸಂಗೀತವ

ನಿನ್ನ ಬದುಕಿನ ಮಧು ಪಾತ್ರೆ

ಒಡೆದು ಹೋಗುವ ಮುನ್ನ.


ಕಾಗದ ಬಂದಿದೆ…

ಬಿ ಸುರೇಶ ಅವರ ‘ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಗೆ ಬಂದ ಪ್ರತಿಕ್ರಿಯೆ- 

untitled

ನಿಮ್ಮ ಲೇಖನದಲ್ಲಿ  ಪ್ರಸ್ತಾಪಿತವಾಗಿರುವ  ಮಲ್ಟಿಪ್ಲೆಕ್ಸ್ ಸಂಸ್ಕೃತಿಯನ್ನು ಮತ್ತಷ್ಟು ಆಳವಾಗಿ ವಿವರಿಸಿದ್ದರೆ ಚೆನ್ನಾಗಿತ್ತು. ನಮ್ಮ ಜನಪ್ರಿಯ ಶೈಲಿಯ ಚಲನ ಚಿತ್ರಗಳು ಯಾವಾಗ ವಾಸ್ತವವನ್ನು ಬಿಂಬಿಸುವ, ವಾಸ್ತವವಕ್ಕೆ ಉತ್ತರಿಸುವ ಕೆಲಸ ಮಾಡುತ್ತಿದ್ದವು?

ಮಲ್ಟಿಪ್ಲೆಕ್ಸುಗಳಲ್ಲೂ ಸಮಾನಾಂತರ ಸಿನೆಮಾ ಚಳುವಳಿ ಚಾಲ್ತಿಯಲ್ಲಿರಬೇಕು ಎಂದಿರುವಿರಿ, ಮಲ್ಟಿಪ್ಲೆಕ್ಸುಗಳಿಗೆ ಬರುವವರು ಇಂಥವರೇ ಎಂದು ನೀವು ಗೆರೆ ಎಳೆದು ತೋರಿಸಿರುವಾಗ ಅವರು ಸಮಾನಾಂತರ ಸಿನೆಮಾಗಳನ್ನು ನೋಡುತ್ತಾರೆಯೇ? ಏಲ್ಲೋ ಬ್ಯಾಲೆನ್ಸ್ ತಪ್ಪಿದಂತಿದೆ ನಿಮ್ಮ ಲೇಖನ.

 -ಸುಪ್ರೀತ್

supreeth.student@gmail.com

+++

 

untitled4

 

ಇಲ್ಲ್ಲಿ “ರಾಷ್ಟ್ರಭಾಷೆಯಲ್ಲಿ ತಯಾರಿಸಲು ಹೊರಟಿದ್ದೇನೆ” ಎಂಬ ವಾಕ್ಯವಿದೆ.

ತಿಳಿಯದವರಿಗೆ ತಪ್ಪುಕಲ್ಪನೆಯಿರುತ್ತದೆ. ಆದರೆ ತಿಳಿದವರೂ ತಪ್ಪು ಕಲ್ಪನೆಗೆ ಜೋತು ಬಿದ್ದಿದ್ದಾರೆ!.

“ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ”.

ಈ ತಪ್ಪು ಕಲ್ಪನೆಯನ್ನು ತೊಲಗಿಸಿಕೊಳ್ಳಿ.

 

-ಶುಭದಾ
shubadha@gmail.com

+++

 

untitled1

ತುಂಬಾ ಒಳ್ಳೆಯ ಲೇಖನ.
ಆದ್ರೆ ಮಲ್ಟಿಪ್ಲೆಕ್ಸ್ ಸಿನೆಮಾಗಳ ಬಗ್ಗೆ ನಾವು ಪೂರ್ವಾಗ್ರಹ ಪೀಡಿತರಾಗಿದ್ದೇವೆ ಅನ್ನಿಸುತ್ತೆ. ಮಲ್ಟಿಪ್ಲೆಕ್ಸ್ಗಳಲ್ಲಿ ಎಲ್ಲಾ ಬಗೆಯ ಸಿನೆಮಾಗಳನ್ನೂ ತೋರಿಸ್ತಾರೆ.ಆದ್ರೆ ಅಲ್ಲಿ ಬಹಳಷ್ಟು ಆಯ್ಕೆ ಇರೊದ್ರಿಂದ ಕೆಲವರಿಗೆ ಕಷ್ಟವಾಗೋದೂ ಇದೆ. ಒಂದು ಸಿನೆಮಾವನ್ನು ನೋಡಲು ಬಂದವರು ’ಕೊನೆ’ ಘಳಿಗೆಯಲ್ಲಿ ಮನಸ್ಸು ಬದಲಾಯಿಸಿ ’ಇನ್ನೊಂದು ’ ಸಿನೆಮಾಗೆ ಹೋಗಿದ್ರಿಂದ ’ಒಂದು’ ಸಿನೆಮಾದವನಿಗೆ ಸ್ವಲ್ಪ ನಷ್ಟವಾಗಬಹುದು ಅಷ್ಟೆ.

ಮೆಜೆಸ್ಟಿಕ್ ಚಿತ್ರಮಂದಿರಕ್ಕೆ ಸಿನೆಮಾ ನೋಡೋದಕ್ಕೆ ಅಂತ ಹೋದ್ರೆ ಒಳ್ಳೆಯ ಸಿನೆಮಾಗಳಿಗೆ ಯಾವಾಗ ನೋಡಿದ್ರೂ ಟಿಕೆಟ್ ಸಿಗೋದೆ ಇಲ್ಲ! ಜನ ಬರೋದಕ್ಕಿಂತ ಮುಂಚೇನೇ ಟಿಕೆಟ್ ಖಾಲಿ.ಆದ್ರೆ ಬ್ಲ್ಯಾಕ್ ನಲ್ಲಿ ಮಾತ್ರ ಎಷ್ಟು ಬೇಕಾದ್ರೂ ಸಿಗುತ್ತೆ.

ಇನ್ನೊಂದು ವಿಶ್ಯ ಅಂದ್ರೆ ಮಲ್ಟಿಪ್ಲೆಕ್ಸ್ ಗೆ ಹೋಗೋರು ಅಲ್ಲಿನ ಸವಲತ್ತುಗಳನ್ನು ಇಷ್ಟಪಟ್ಟು ಹೋಗಿರ್ತಾರೆ.ಮೆಜೆಸ್ಟಿಕ್ ಚಿತ್ರಮಂದಿರಗಳಿಗೆ ಹೋಗಿ ಘಂಟೆ ಗಟ್ಟಲೆ ಕಾದು ಟಿಕೆಟ್ ತಗೊಂಡು ಒಳಗೆ ಹೋಗಿ ಕೂತಾಗ ಬರುವ ಪಾನ್ ಪರಾಗ್ ಘಾಟು .ಇತ್ಯಾದಿಗಳ ರಗಳೆಯೇ ಬೇಡ ಅಂದುಕೊಂಡು ಮಲ್ಟಿಪ್ಲೆಕ್ಸ್ ಗಳಿಗೆ ಹೋಗುವ ಜನರ ಸಂಖ್ಯೆ ಜಾಸ್ತಿ ಇದೆ.

ಕಾಸು ಗಿಟ್ಟುತ್ತೆ ಅಂತಿದ್ರೆ ಆರ್ಟ್ ಫಿಲಂ ಏನು ಸಾಕ್ಶ್ಯಚಿತ್ರ ಕೂಡಾ ಹಾಕೋದಿಕ್ಕೆ ಮಲ್ಟಿಪ್ಲೆಕ್ಸ್ ಜನ ಸಿದ್ಧರಿದ್ದಾರೆ.ನಾವು ಅವರನ್ನು ತಪ್ಪು ತಿಳೊಂಡಿದ್ದೀವಿ ಅಂತ ಅನ್ನಿಸುತ್ತೆ ನನಗೆ.

ಸಂದೀಪ್ ಕಾಮತ್
kadalateera.blogspot.com
sandeepkamath82@yahoo.com

+++

 

untitled3

ತು೦ಬಾ ವಿಚಾರ ಹೊತ್ತ ಲೇಖನ, ನೀವು ಹೇಳಿದ್ದು ನೂರಕ್ಕೆ ನೂರು ನಿಜ..ಒಳ್ಳೆದ್ದಕ್ಕಿ೦ತ ಕೆಟ್ಟದ್ದೇ ಜಾಸ್ತಿ.

-Pramod
pramodc84@gmail.com

ಅವಳು ಫೋನ್ ಮಾಡಿದ ನಂತರ..

 

-ಋಷ್ಯಶೃಂಗ

swjpg
ನಮ್ಮೂರಿನಿಂದ ಬೆಟ್ಟವೇರಿ ಬೆಟ್ಟ ಇಳಿದರೆ ಬಾಳೆಹೊಳೆ. ಅಲ್ಲಿಂದ ಎಡಕ್ಕೆ ತಿರುಗಿ ಸಾಗಿದರೆ ಬಜಗೋಳಿ ಕಡೆಗೆ ಹೋಗುವ ರಸ್ತೆ. ಅದು ಕುದುರೆಮುಖವನ್ನು ಬಳಸಿಕೊಂಡು ಹೋಗುತ್ತದೆ. ಇವತ್ತು ಕುದುರೆಮುಖ ಮೌನನಗರಿ.
ಅದೇ ಹಾದಿಯಲ್ಲಿ ಹೋದರೆ ಹನುಮಾನ್ ಗುಂಡಿ, ಗಂಗಾಮೂಲ ಸಿಗುತ್ತದೆ.
ಹನುಮಾನ್ ಗುಂಡಿಗೆ ಇಳಿದರೆ ಅಲ್ಲೊಂದು ಪುಟ್ಟ ಜಲಪಾತ. ಅಲ್ಲಿಗೆ ಕರೆದೊಯ್ದ ಅವಳು ನನಗೆ ಗೊತ್ತೇ ಆಗದ ಹಾಗೆ ಮುತ್ತಿಟ್ಟಾಗ ನನಗಿನ್ನೂ ಹದಿನೆಂಟು. ಅವಳಿಗೆ ಇಪ್ಪತ್ತು.
ಇವತ್ತು ಅವಳ ಸುದ್ದಿ ಬಂತು. ಶ್ರೀಲಂಕಾದಲ್ಲಿದ್ದಾಳೆ. ಸಮುದ್ರದ ಪಕ್ಕ ಅವನೊಂದಿಗೆ ಸಾಗುತ್ತಿದ್ದೇನೆ. ಸಮುದ್ರ ಸಣ್ಣದು ಅನ್ನಿಸುತ್ತದೆ ಅವನ ಪ್ರೀತಿಯ ಮುಂದೆ ಅಂದಳು.
ಮನಸ್ಸಿಗೆ ಯಾಕೋ ಕಿರಿಕಿರಿ.
ಅವಳನ್ನು ಮರೆಯಬೇಕು ಅಂದುಕೊಂಡು ಒಂದೂವರೆ ಗಂಟೆ ಈಜುಹೊಡೆದೆ.
ಹಳೆಯ ಪ್ರೇಮ ಕೊಬ್ಬಿನ ಹಾಗೆ ಹೊಟ್ಟೆಯ ಸುತ್ತ ಬೆಳೆಯುವ ಬೊಜ್ಜಿನ ಹಾಗೆ ಮನಸ್ಸಿನ ಸುತ್ತ ಬೆಳೆಯುತ್ತವಂತೆ. ಅದನ್ನು ಆಗಾಗ ಕರಗಿಸದೇ ಹೋದರೆ ಅಪಾಯ.
ಮನಸು ಮೀನಿನಂತೆ. ನೀರು ಪ್ರೀತಿಯಂತೆ.
ಅವಳ ಕಣ್ಣು ಗಾಳವಲ್ಲ, ಬಲೆಯಲ್ಲ. ಮತ್ತೇನು ಅಂತ ಹೇಳಲಾರೆ.

ಖಾಲಿ ಕೈಗಳಿಗೆ ಮೆಹಂದಿ ಯಾವಾಗ ?

 

‘ಬಾನಾಡಿ’ ಬ್ಲಾಗ್ ನಿಂದ 

rijpg

ಇಸ್ಸಾರ್ ಮತ್ತು ಅವನ ಕುಟುಂಬದವರು ನಮಗೆ ಪರಿಚಿತರಷ್ಟೇ. ಸ್ನೇಹಿತರೆನ್ನುವಷ್ಟು ಆತ್ಮೀಯರಲ್ಲ. ಸ್ನೇಹಿತರಲ್ಲ ಎನ್ನುವಷ್ಟೂ ದೂರದವರಲ್ಲ. ಹತ್ತಿರದಿಂದ ಕಂಡಾಗ ಮಾತಾಡುವ, ದೂರದಿಂದ ನೋಡಿದಾಗ ಕೈಬೀಸುವಷ್ಟು ನಮ್ಮೊಳಗಿನ ಸಂಬಂಧ. ಈದ್ ಮಿಲಾದ್ ದಿನ ಎಸ್‌ಎಂಎಸ್ ಕಳಿಸುವುದೋ, ಅಥವಾ ಕುರಾನ್‌ನ ಕೆಲವು ವೈಚಾರಿಕ ಸಂಗತಿಗಳನ್ನು ಸ್ಪಷ್ಟಪಡಿಸಲು ನಾನವನಿಗೆ ಫೋನ್ ಮಾಡುವುದೋ ಬಿಟ್ಟರೆ ನಮ್ಮೊಳಗೆ ಅಷ್ಟೇನು ನಂಟಿಲ್ಲ. ಆತನನ್ನು ದೂರದಿಂದ ಕಂಡ ನನಗೆ ಆತನೊಬ್ಬ ನಿರುಪದ್ರವಿ ಆದರೆ ನಿಷ್ಟ ಮುಸ್ಲಿಮನಾಗಿದ್ದ. ಸಮಯಕ್ಕೆ ಸರಿಯಾದ ಪ್ರಾರ್ಥನೆ, ರಂಜಾನ್ ಉಪವಾಸ, ಕುರಾನ್ ಪಠನ, ಅಸ್ಸಲಾಮ್ ಅಲೈಕುಂ ಎಂದು ಹತ್ತಿರದವರನ್ನು ವಂದಿಸುವುದು ಇತ್ಯಾದಿ ಮಾಡುತ್ತಿದ್ದ. ಕಳೆದ ವರ್ಷ ಈದ್ ಮಿಲಾದ್ ದಿನ ಸಿಕ್ಕವನೆ ನನ್ನನ್ನು ಎದೆಗಪ್ಪಿ ಈದ್ ಮುಬಾರಕ್ ಹೇಳಿದ್ದ. ನಾನು ಅವನಿಗೆ ಹಬ್ಬದ ಶುಭಾಶಯ ಹೇಳಿದ್ದೆ. ಮುಂದಿನ ಈದ್‌ಗೆ ನೀನು ನಮಗೆಲ್ಲ ಬಿರಿಯಾನಿ ತಿನಿಸಬೇಕೆಂದು ಹೇಳಿದ್ದೆ. ಒಪ್ಪಿದ್ದ.

ಇಸ್ಸಾರ್ ನಿನ್ನೆ ಮತ್ತೆ ಸಿಕ್ಕಿದ. ಜತೆಗೆ ಅವನ ಹೆಂಡತಿ ಮತ್ತು ಮಗಳು ಇದ್ದರು. ಕಿರಾಣಿ ಅಂಗಡಿಯ ಹತ್ತಿರ ಆತ ರಸ್ತೆ ದಾಟಿ ನನ್ನ ಕಡೆ ಬರುತ್ತಿದ್ದ. ನಾನು ಆತನ ಕಡೆ ಹೋಗುವವನಾಗಿದ್ದೆ. ನಾನು ದಾಟದೆ ಅಲ್ಲೇ ನಿಂತೆ. ಆತನನ್ನು ಮಾತಾಡಿಸೋಣ. ಬಕರಿ ಈದ್ ನಲ್ಲಿ ಎಷ್ಟು ಬಕರಿಗಳನ್ನು ತಿಂದ ಎಂದು ಕೇಳಲು. ಆಗ ನನಗೆ ಕಳೆದ ಈದ್ ನಲ್ಲಿ ಕೇಳಿದ ಬಿರಿಯಾನಿಯ ನೆನಪಾಗಿರಲಿಲ್ಲ. ಹೇಗಿದ್ದೀರಿ? ಅಂದ ಹಾಗೆ ಈದ್ ಮುಬಾರಕ್ ಹೊ ಎಂದು ಆತನ ಎದೆಗಪ್ಪಲು ಬಂದೆ. ಹೌದು ಎಂದಷ್ಟೆ ನುಡಿದ ಆತನ ಕೈ ನನ್ನ ಕೈಯ ಬೆರಳುಗಳನ್ನು ಅಮುಕುತ್ತಿದ್ದವು. ಆತನ ದೃಷ್ಟಿ ಎಲ್ಲೋ ಇತ್ತು. ಮನಸ್ಸಿಗೆ ತುಂಬಾ ನೋವಾದಂತೆ ಮುಖ ಹೇಳುತ್ತಿತ್ತು. ಇಸ್ಸಾರ್ ಎಲ್ಲಾ ಆರಾಮ ತಾನೆ ಎಂದೆ. ಹೌದು ಎಂದಷ್ಟೆ ಹೇಳಿದ. ಆತನ ಕೈ ನನ್ನ ಕೈಯನ್ನು ಬಿಟ್ಟಿರಲಿಲ್ಲ. ಆತನ ಹೆಂಡತಿ ಮತ್ತು ಮಗಳು ಹತ್ತಿರ ಬಂದು ನಿಂತರು. ಮತ್ತೇನು ವಿಶೇಷ? ಎಂದೆ. ಆತ ಈ ಜಗತ್ತಿನಲ್ಲಿ ಏನೆಲ್ಲಾ ಆಗುತ್ತದೆ ನೋಡಿ ಎಂದು ನಿಟ್ಟುಸಿರು ಬಿಟ್ಟ. ಏನಾಯಿತು ಎಂದೆ.

ಮುಂಬಯಿ ದುರಂತದ ಬಗ್ಗೆ ಇಸ್ಸಾರ್ ದುಃಖಿತನಾಗಿದ್ದ. ಬಹಳಷ್ಟು ಬೇಸರ ಹೊಂದಿದ್ದ. ವಿಟಿ ಯಲ್ಲಾಗಲಿ ತಾಜ್ ನಲ್ಲಾಗಲಿ ಭಯೋತ್ಪಾದಕರು ದಾಳಿ ಮಾಡಿದಾಗ ಅಲ್ಲಿ ಎಷ್ಟು ಮುಸ್ಲಿಮರಿದ್ದಾರೆ, ಎಷ್ಟು ಕ್ರಿಶ್ಚಿಯನರಿದ್ದಾರೆ, ಎಷ್ಟು ಹಿಂದೂಗಳಿದ್ದಾರೆ ಅಥವಾ ಎಷ್ಟು ಯಹೂದಿಯರಿದ್ದಾರೆ ಎಂದು ಯಾರು ಲೆಕ್ಕ ಹಿಡಿದಿಲ್ಲ. ಅಥವಾ ಭಯೋತ್ಪಾದಕರ ಸೆರೆಯಲ್ಲಿ ಸಿಕ್ಕವರನ್ನು ಬಿಡಿಸುವಾಗ ಯಾರು ಯಾವ ಧರ್ಮದವರು ಎಷ್ಟಿದ್ದಾರೆ ಎಂದು ಲೆಕ್ಕ ನೋಡಿಲ್ಲ.

ದೇವರ ಆದೇಶದಂತೆ ಪ್ರವಾದಿ ಅಬ್ರಹಾಮನು ತನ್ನ ಮಗ ಇಸ್ಮಾಯಿಲ್ ನನ್ನು ಬಲಿಕೊಟ್ಟ ದಿನವನ್ನು ಮಸ್ಲಿಮರು ಆಡು, ಕುರಿ ಯಾ ಹೋರಿಯನ್ನು ಬಲಿಕೊಟ್ಟು ಆಚರಿಸುವ ಹಬ್ಬವೇ ಬಕರಿ ಈದ್. ಈ ಬಾರಿ ಮುಸ್ಲಿಮರು ಬಕರಿ ಈದ್ ದಿನ ಹೋರಿಯನ್ನು ಬಲಿಕೊಡಬಾರದೆಂದು ಭಾರತದ ಮುಸ್ಲಿಮ್ ನಾಯಕರು ಎಲ್ಲರಿಗೂ ಕರೆ ನೀಡಿದ್ದರು. ಅಲ್ಲದೆ ಮುಂಬಯಿಯಲ್ಲಿ ಬಲಿಯಾದ ಭಯೋತ್ಪಾದಕರ ದಫನಕ್ಕೆ ಅಲ್ಲಿನ ಯಾವುದೇ ಮುಸ್ಲಿಮ್ ಸ್ಮಶಾನಗಳು ಅವಕಾಶ ಮಾಡಿಲ್ಲ. ಇವೆಲ್ಲ ಭಾರತದಂತಹ ದೇಶದಲ್ಲಿ ವಿಶೇಷ ಮಹತ್ವ ಪಡೆಯಬೇಕಾದ ವಿಷಯಗಳಲ್ಲ. ಆದರೆ ಮುಸಲ್ಮಾನರ ಬಗ್ಗೆ ಅತಿ ಸಂದೇಹ ಪಡುವಾಗ ಇವೆಲ್ಲ ಸಣ್ಣ ವಿಷಯಗಳಾಗುವುದಿಲ್ಲ. ಮುಸ್ಲಿಮ್ ವರ್ಗದ ಕೆಲವೊಂದು ಗುಂಪು ದಾರಿ ತಪ್ಪಿ ಹೋಗಿದೆ. ಅದರಲ್ಲಿ ಸಂದೇಹವಿಲ್ಲ. ಅವರನ್ನು ಸರಿದಾರಿಗೆ ತರಲು ಮುಸ್ಲಿಂ ಸಮಾಜ ಅಥವಾ ಭಾರತದ ಸಾಮಾಜಿಕ ವ್ಯವಸ್ಥೆಯಾಗಲಿ, ರಾಜಕೀಯ ವ್ಯವಸ್ಥೆಯಾಗಲಿ ಯಾವುದೇ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ಸಮಗ್ರ ಮುಸ್ಲಿಂ ಸಮಾಜವೇ ಉಳಿದವರ ಸಿಟ್ಟಿಗೆ ಕಾರಣವಾಗಿದೆ. ಅವರನ್ನು ಪಾಕಿಸ್ಥಾನಿಗಳೆಂದು ಕರೆಯಲಾಗುತ್ತದೆ. ಭಾರತದ ಮುಖ್ಯವಾಹಿನಿಯಿಂದ ಹೊರಹೋಗುತ್ತಿದ್ದ ಮುಸ್ಲಿಂ ಸಮಾಜ ಮುಂಬಯಿ ದುರಂತದ ನಂತರ ಒಂದಾಗುವುದೇ? ಚಿಕ್ಕ ಪುಟ್ಟ ವೈಯಕ್ತಿಕ ಗಲಭೆಗಳಿಗೆ ಕೋಮು ಗಲಭೆಯ ಬಣ್ಣ ಲೇಪಿಸಲಾಗುವುದೇ? ಕಾದು ನೋಡಬೇಕು.

ನಾವು ಬೀಳ್ಕೊಡುವಾಗ ಇಸ್ಸಾರ್ ನ ಮಗಳು ಟಾಟಾ ಮಾಡಿದಳು. ಅವಳೇನು ಹೊಸ ಬಟ್ಟೆ ಹಾಕಿರಲಿಲ್ಲ. ಬಕ್ರೀದ್‌ಗೆ ಅವಳ ಕೈಯಲ್ಲಿ ಮದುರಂಗಿಯ ಬಣ್ಣವಿರಲಿಲ್ಲ. ಹುಡುಗಿಯ ಖಾಲಿ ಖಾಲಿ ಕೈ ನನ್ನನ್ನು ಬಹಳ ದೂರ ಕೊಂಡೊಯ್ದಿತು

ಕನ್ನಡಿಯಲ್ಲಿ ಕಂಡ ಮುಖ

ಬಿಂಬ

mirror-mirror
ದಿನವೊಂದರಲ್ಲಿ ಕನಿಷ್ಟ ಹದಿನೈದು ಬಾರಿ ಮನುಷ್ಯ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳುತ್ತಾನೆ ಎಂದು ಒಂದು ಅಧ್ಯಯನ ಹೇಳುತ್ತದೆ. ಪ್ರತಿ ನೋಟದಲ್ಲೂ ತನ್ನ ಕೆದರಿರುವ ತಲೆಕೂದಲನ್ನು ಸರಿಪಡಿಸಿಕೊಳ್ಳುತ್ತಾನೆ. ಅಥವಾ ಇಣುಕುತ್ತಿರುವ ಬೆಳ್ಳಿಕೂದಲನ್ನು ಕಂಡು ಕಳವಳಗೊಳ್ಳುತ್ತಾನೆ. ಇಲ್ಲವೇ ಕಣ್ಣಂಚ ತುದಿಗಂಟಿದ ಪಿಸುರನ್ನೋ, ತುಟಿತುದಿಯಲ್ಲಿ ಕೂತ ಅನ್ನದಗಳನ್ನೋ ಒರೆಸಿಕೊಳ್ಳುತ್ತಾನೆ. ಕೊಳೆಯಾಗಿರುವ ಬಟ್ಟೆಯನ್ನು ಕಂಡು ಅಸಹ್ಯ ಪಟ್ಟುಕೊಳ್ಳುತ್ತಾನೆ.   

ಕನ್ನಡಿ ಎಂದೇ ನಾವೆಲ್ಲ ಸಾಮಾನ್ಯವಾಗಿ ಕರೆಯುವ ಈ ದರ್ಪಣ ಹೀಗೆ ನಮ್ಮ ಮುಖದ ಮೇಲಣ ಬಾಹ್ಯದ ಶುಚಿಗೆ ಕಾರಣವಾಗುವಂತೆಯೇ ಅಶುಚಿಯನ್ನು ಎತ್ತಿ ತೋರುತ್ತದೆ. ಸರಿಯಿಲ್ಲದುದನ್ನು ಸರಿಪಡಿಸಿಕೊಳ್ಳಬೇಕೆಂಬ ಅರಿವನ್ನು ಒಳಗಿನಿಂದ ಮೂಡಿಸುತ್ತದೆ.

ಸಂಪೂರ್ಣ ಓದಿಗೆ ಭೇಟಿ ಕೊಡಿ: ಬೆಂಕಿ ಕಡ್ಡಿ  

+++
ರಂಜನೆಯಾಗುತ್ತಿದೆ ಸಾಹಿತ್ಯ

literature

ಕನ್ನಡದ ಇವತ್ತಿನ ಸಾಹಿತ್ಯದ ಕುರಿತು ಯೋಚಿಸುತ್ತಿರುವಾಗ ಯಾಕೋ ಮತ್ತೆ- ಮತ್ತೆ ಎಫ್.ಆರ್. ಲೆವಿಸ್ ಮಾತುಗಳು ನೆನಪಾಗುತ್ತವೆ. ಜನಪ್ರಿಯ ಸಾಹಿತ್ಯ ಯಾವಾಗಲೂ ಬಂಡವಾಳಶಾಹಿ ಶಕ್ತಿಗಳಿಂದಲೇ ಪ್ರೇರಿತವಾಗಿರುವುದರಿಂದ ಅದರ ಏಕೈಕ ಉದ್ದೇಶ ಸದಾ ಹಣವಷ್ಟೇ ಆಗಿರುತ್ತದೆ ಎಂಬ ಆತನ ಮಾತನ್ನು ಈಗಿನ ಸಂದರ್ಭದಲ್ಲಿ ತುಸು ಮಾರ್ಪಾಡು ಮಾಡಿ ಹೀಗೆ ಹೇಳಬಹುದೇನೋ.. ‘ಜನಪ್ರಿಯ ಸಾಹಿತ್ಯ ಈಗ ಸದಾ ದುಡ್ಡು ಮಾಡುವುದರ ಮೇಲೇ ಕಣ್ಣಿಟ್ಟು ತಾನೇ ಸ್ವತಃ ಬಂಡವಾಳಶಾಹಿಯಾಗಿ ವರ್ತಿಸುತ್ತಿರುವುದರಿಂದ ಅದರ ಕಣ್ಣಿಗೆ ಹಣವಲ್ಲದ ಬೇರೆ ಜಗತ್ತು ಕಾಣುತ್ತಿಲ್ಲ’!?

ಈ ಮಾತನ್ನು ಹೀಗೆ ಅಚಾನಕ್ಕಾಗಿ ಹೇಳುತ್ತಿಲ್ಲ, ಕಳೆದ ಏಳೆಂಟು ವರ್ಷಗಳಿಂದ ಕನ್ನಡದ ಬಹುತೇಕ ಲೇಖಕರನ್ನು ಗಮನಿಸಿದಾಗೆಲ್ಲಾ ಯೋಚನೆಗೆ ಹಚ್ಚಿದ್ದು ಎಫ್.ಆರ್. ಲೆವಿಸ್. ಆತನ ನಂತರ ಬಹಳಷ್ಟು ಸಾಹಿತ್ಯ ಥಿಯರಿಗಳು ಬಂದಿವೆ, ಪೋಸ್ಟ್ ಮಾರ್ಡನಿಸಂನಂತಹ ಆತನಿಗೆ ಬಹುತೇಕ ವಿರುದ್ಧವಾದ ಚಳವಳಿ ಕೂಡ ಬಂದಾಯಿತು. ಗಂಭೀರ ಮತ್ತು ಜನಪ್ರಿಯ ಎಂಬ ಪ್ರತ್ಯೇಕತೆಗಳನ್ನು ಅಳಿಸಿ ಹಾಕಿ ‘ಸೆಲೆಬ್ರೇಷನ್ ಆಫ್ ಫ್ರಾಗ್ಮಾಟಿಸಂ’ ಎಂದು ಹುಯಿಲೆದ್ದಿದ್ದೂ ಆಯಿತು. ಆದರೆ, ಈಗಿನ ಪ್ರಶ್ನೆಯೆಂದರೆ, ಸಾಹಿತ್ಯ ಎಲ್ಲರಿಗೂ ತಲುಪಬೇಕು, ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂಬುದು ಯಾವ ಬೆಲೆ ತೆತ್ತು ಸಾಧಿಸಬೇಕಾಗಿರುವ ಉದ್ದೇಶ? ನಾನು ಬರೆದದ್ದನ್ನು ಸಾವಿರಾರು ಜನ ಓದಬೇಕು, ಟಾಪ್ಟೆನ್ ಎಂಬ ಪ್ರಹಸನಪಟ್ಟಿಯಲ್ಲಿ ಹೆಸರು ಕಾಣಿಸಿಕೊಳ್ಳಬೇಕು, ಪ್ರಕಾಶಕನ ಜೇಬು ತುಂಬಬೇಕು, ತಾನೂ ಬೇಡಿಕೆಯ ಬರಹಗಾರನಾಗಿ ಹಣ ಮಾಡಿಕೊಂಡು ಇರಬೇಕು,… ಎಲ್ಲದರ ಒಟ್ಟರ್ಥ ಬರವಣಿಗೆಯೆನ್ನುವುದೇ ಒಂದು ದಂಧೆ!

 

ಸಂಪೂರ್ಣ ಓದಿಗೆ ಭೇಟಿ ಕೊಡಿ: ಮಲೆಯ ಮಾತು  

ಗುಡಿಯ ನೋಡಿರಣ್ಣಾ…

3-1

ಮಂಜುನಾಥ ಸ್ವಾಮಿ ಅವರ ಇನ್ನಷ್ಟು ಫೋಟೋಗಳಿಗಾಗಿ- ಹಳ್ಳಿಕನ್ನಡ 

%d bloggers like this: