‘ಛಂದ’ ಪ್ರಕಾಶಿಸುತ್ತಿದೆ

chanda-inv1

ಚಿತ್ರರಂಗ : ೭೫

vichara-sankirana-1 vichara-sankirana-midle-p-1

ಜೋಗಿ ಕಾದಂಬರಿ ಹೊಸ ಭಾಗ

 

ಭಾಗ-3

jogijpg11

ಗಡಿಚಾಮುಂಡಿಯ ಸಾನ್ನಿಧ್ಯದಲ್ಲಿ….

 

ಶಿವ ಕಾರಿನಲ್ಲಿ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದ. ವಾಗ್ಲೆಯವರು ಬರದೇ ನಾನೇನೂ ಮಾಡುವಂತಿರಲಿಲ್ಲ. ಆ ಪ್ರದೇಶದ ಬಗ್ಗೆ ವಾಗ್ಲೆಯವರಿಗೆ ಸಾಕಷ್ಟು ವಿವರಗಳು ಗೊತ್ತಿದ್ದವು. ಅವರಿಗೋಸ್ಕರ ಕಾಯುತ್ತಾ ನಾನೂ ನಿದ್ದೆ ಹೋದೆ. ಎದ್ದಾಗ ಮಧ್ಯಾಹ್ನವಾಗಿತ್ತು. ಮತ್ತೆ ಹಸಿವು ಶುರುವಾಗಿತ್ತು.

ವಾಗ್ಲೆಯವರನ್ನು ಭೇಟಿಯಾಗದೇ ಮುಂದುವರಿಯುವ ಹಾಗೇ ಇರಲಿಲ್ಲ. ಅವರು ಕಳುಹಿಸಿಕೊಟ್ಟ ಲಾರ್ಡ್ ಕೃಷ್ಣಪ್ಪ ಕೈ ಕೊಟ್ಟಿದ್ದರಿಂದ, ಅವರೇ ಬಂದು ಬೇರೆಯವರನ್ನು ಜೊತೆಗೆ ಕಳುಹಿಸಬೇಕಿತ್ತು. ಸಾಂತು ನಮ್ಮ ಜೊತೆ ಬರುವುದಕ್ಕೆ ತುದಿಗಾಲಲ್ಲಿ ನಿಂತಿದ್ದ.

ನಾನು ವಾಗ್ಲೆಗೆ ಫೋನ್ ಮಾಡಿದೆ. ಅವರ ಮೊಬೈಲು ಫೋನು ವ್ಯಾಪ್ತಿಪ್ರದೇಶದ ಹೊರಗಿತ್ತು. ಸಕಲೇಶಪುರದಿಂದ ಹೊರಟು ಮಂಜರಾಬಾದ್ ಕೋಟೆ ದಾಟಿದೆವೆಂದರೆ ಅಲ್ಲಿಂದ ಗಡಿಚಾಮುಂಡಿ ಕ್ಷೇತ್ರದ ತನಕ ಮೊಬೈಲು ರೇಂಜ್ ಸಿಗುವುದಿಲ್ಲ. ಕಾಯುವ ಬದಲು ಗಡಿಗೆ ಹೋಗಿ ಅಲ್ಲೇನಾದರೂ ತಿಂದು ಬರೋಣ ಎಂದುಕೊಂಡೆವು. ಶಿವನೂ ಹಸಿದಿದ್ದ. ಅವನಿಗೆ ಡಯಾಬಿಟೀಸ್ ಇದ್ದದ್ದರಿಂದ ಹೊತ್ತು ಹೊತ್ತಿಗೆ ಏನಾದರೂ ತಿನ್ನಲೇಬೇಕಿತ್ತು.

7

ನಿಮ್ಮ ಸಾಹೇಬ್ರು ಬಂದ್ರೆ ಹೇಳಿ. ಇಲ್ಲೇ ಹೋಗಿ ಬರ್ತೀವಿ ಅಂತ ಸಾಂತುವಿಗೆ ಹೇಳಿ ಬರಲು ನಾನು ಮತ್ತೆ ಫಾರೆಸ್ಟ್ ಆಫೀಸಿನತ್ತ ಕಾಲು ಹಾಕುತ್ತಿದ್ದಂತೆ ಸಾಂತು ನಮ್ಮ ಕಡೆಗೇ ಓಡಿ ಬರುವುದು ಕಾಣಿಸಿತು. ವಾಗ್ಲೆಯವರ ಫೋನ್ ಬಂದಿರಬಹುದು ಎಂದುಕೊಂಡು ಅವನಿಗಾಗಿ ಕಾದೆ.

ಸಾಹೇಬ್ರು ಬರೋದು ಲೇಟಾಗ್ತಾದಂತೆ.. ಗೇಟಲ್ಲಿ ಏನೋ ಪ್ರಾಬ್ಲೆಮ್ಮಾಗಿದೆ ಎನ್ನುತ್ತಾ ಸಾಂತು ನಾವಿದ್ದಲ್ಲಿಗೆ ಬಂದ. ಮಾರನಹಳ್ಳಿಯ ಸಮೀಪ ಇರುವ ಫಾರೆಸ್ಟ್ ಗೇಟಿಗೆ ಒಂದು ಕಾರು ಡಿಕ್ಕಿ ಹೊಡೆದು ಜಖಂ ಆಗಿದೆ. ಕಾನಡ್ಕ ಟೀ ಎಸ್ಟೇಟಿನವರ ಕಾರು. ದೊಡ್ಡ ಗಲಾಟೆ ಆಗ್ತಿದೆ ಅಂತ ಸಾಂತು ಗಾಬರಿಯಲ್ಲಿ ಹೇಳಿದ. ಅದಕ್ಕೆ ಗಲಾಟೆ ಯಾಕಾಗಬೇಕು ಅನ್ನುವುದು ನನಗೆ ಅರ್ಥವಾಗಲಿಲ್ಲ.

ಗಡಿಯಲ್ಲಿರುವ ಪುಟ್ಟ ಹೊಟೆಲಿನಲ್ಲಿ ಬಿಸಿಬಿಸಿ ಗಂಜಿ, ಮೀನು ಸಾರು, ಹುರಿದ ಮೀನು ಕಾಯುತ್ತಿತ್ತು. ಹೊಟೆಲಿನ ಮಾಲಿಕ ಮಮ್ಮದೆ  ನನಗೆ ಹಳೆಯ ಪರಿಚಯ. ಕಾಣೆಮೀನಿನ ಗಸಿ ಮಾಡಿಟ್ಟಿದ್ದ. ರಾತ್ರಿಯೂ ಇಲ್ಲಿಗೇ ಊಟಕ್ಕೆ ಬನ್ನಿ. ಏಡಿ ಗಸಿ ಮಾಡ್ತೀನಿ ಅಂತ ಆಶೆ ಹುಟ್ಟಿಸಿದ. ಬೆಂಗಳೂರಲ್ಲಿ ಸಿಗುವ ಒಂದೆರಡು ಕೇಜಿ ತೂಗುವ ದೊಡ್ಡ ಏಡಿಗಳಿಗಿಂತ ಸಣ್ಣ ಕೊರಕಲುಹಳ್ಳಗಳ ಕಲ್ಲುಗಳ ನಡುವೆ ಅವಿತುಕೊಂಡಿರುವ ಏಡಿಗಳೇ ರುಚಿ. ಹೀಗಾಗಿ ರಾತ್ರಿಯೂಟ ಅಲ್ಲೇ ಎಂದು ನಿರ್ಧರಿಸಿದೆವು.

ಕಾಡಿನಲ್ಲಿ ಕಣ್ಮರೆಯಾದ ಚಾರಣಿಗರ ಬಗ್ಗೆ ಮಮ್ಮದೆಯ ಹತ್ತಿರ ವಿಚಾರಿಸಿದೆ. ಅವನಿಗೆ ಅವರ ಬಗ್ಗೆ ಗೊತ್ತಿತ್ತು. ಆದರೆ, ಕಾಣೆಯಾದವರ ಬಗ್ಗೆ ಅವನಲ್ಲಿ ಯಾವ ಅನುಕಂಪವೂ ಇರಲಿಲ್ಲ. ಹೆಣ್ಮಕ್ಕಳನ್ನು ಕರಕೊಂಡು ಮಜಾ ಮಾಡೋದಕ್ಕೆ ಬರ್ತಾರೆ. ಅಲ್ಲಿ ಕುಡಿದು ತಿಂದು ಮಜಾ ಮಾಡಿ ಹೋಗ್ತಾರೆ. ಹಾಗೇ ಆಗಬೇಕು. ಇನ್ನೊಂದು ನಾಲ್ಕು ಜನ ಕಾಣೆಯಾದ್ರೆ ಅವರ ಕಾಟವಾದ್ರೂ ತಪ್ಪುತ್ತೆ’ ಎಂದು ಕೆಟ್ಟ ಬೈಗುಳ ಸೇರಿಸಿ ಬೈದುಕೊಂಡ. ಅವರು ಮೂವರೇ ಬಂದಿದ್ದು ಮಾರಾಯ. ಎಲ್ಲರನ್ನೂ ಒಂದೇ ಥರ ನೋಡಬೇಡ ಎಂದೆ. ಮಮ್ಮದೆಗೆ ಅದೇನೂ ನಾಟಿದಂತೆ ಕಾಣಲಿಲ್ಲ.

More

ಕಾವ್ಯ ನಾದದ ವಿಕ್ರಮ ವಿಸಾಜಿ

vikram-visaji-final1

ಒಂದು ಕಾಲವಿತ್ತು. ಕನ್ನಡ ಎಂ ಎ ಓದುತ್ತಿದ್ದ ಹುಡುಗನೊಬ್ಬ ಕೃಷ್ಣ ಆಲನಹಳ್ಳಿಯನ್ನು ತೀವ್ರವಾಗಿ ಹಚ್ಚಿಕೊಂಡಿದ್ದ. ಆತ ಇಲ್ಲವಾದಾಗ ಬರೆದ ಕವಿತೆಯಲ್ಲಿ ‘ವೀರ್ಯ’ ಎಂಬ ಶಬ್ದವಿತ್ತು. ಕಲಬುರ್ಗಿಯ ವಿದ್ವಾಂಸರು ಬೆಚ್ಚಿ ಬಿದ್ದು ಕುಳಿತಿದ್ದರು. ‘ಅದೇನ್ ಬರೀತಾನ್ರಿ ಬರೀ ಹೊಲಸು’ ಎಂದು ಸ್ವತಹ ಪಾಠ ಹೇಳುತ್ತಿದ್ದ ಗುರುಗಳೇ ಹಣೆಪಟ್ಟಿಯನ್ನೂ ಕಟ್ಟಿಬಿಟ್ಟಿದ್ದರು. ಈ ಹುಡುಗ ವಿಕ್ರಮ ವಿಸಾಜಿ.

ಅಪ್ಪ ವಿ ಬಿ ವಿಸಾಜಿ ಅಧ್ಯಾಪಕರು. ಆಗಿನ ಕಾಲಕ್ಕೇ ಸಾಕಷ್ಟು ಓದಿದವರು. ಭಾಲ್ಕಿ ಶರಣರ ಚಿಂತನೆಗಳಲ್ಲಿ ಬೆಳೆದವರು. ದೂರದ ಭಾಲ್ಕಿಗೆ ಕನ್ನಡದ ಎಲ್ಲಾ ಪುಸ್ತಕಗಳನ್ನೂ ದೂರದೂರುಗಳಿಂದ ತರಿಸಿದವರು. ಮಗನಿಗೆ ಮನೆಯೇ ಮೊದಲ ಪಾಠಶಾಲೆಯಾಯಿತು. ಅಪ್ಪನ ಗರಡಿಯಲ್ಲಿ ಅರಳಿದ ಹುಡುಗ ಹಾಲುಗಲ್ಲದ ವೇಳೆಯಲ್ಲೇ ಕವನ ಸಂಕಲನದ ಮೇಲೆ ಸಂಕಲನ ಪ್ರಕಟಿಸಿದ. ಓದಲು ಕಲ್ಬುರ್ಗಿಗೆ ಬಂದದ್ದೇ ಬಂದದ್ದು. ರೆಕ್ಕೆ ಬಿಚ್ಚಿ ಆಕಾಶ ನೆಚ್ಚುವ ಕೆಲಸ ಆರಂಭವಾಯಿತು. img_62732

ವಿಕ್ರಮ ಅಪ್ಪನ ತೆಕ್ಕೆಯಿಂದ ಹೊರಬಂದು ಇನ್ನಷ್ಟು ಮತ್ತಷ್ಟು ಹೊಸತು ಕೈಗೆತ್ತಿಕೊಂಡ. ರಾಜಶೇಖರ ಹತಗುಂದಿ, ಚಿತ್ರ ಶೇಖರ ಕಂಠಿ, ಅಮರೇಶ ನುಗಡೋಣಿ ಅವರ ಸಹವಾಸ ಈತನ ಓದಿಗೆ ಇನ್ನಷ್ಟು ಕುಮ್ಮಕ್ಕು ಕೊಟ್ಟಿತು. ಆ ಸಂದರ್ಭದಲ್ಲಿಯೇ ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣನವರ ಕಣ್ಣಿಗೆ ಬಿದ್ದ ಹುಡುಗ ‘ತಮಾಷಾ’ ಮೂಲಕ ಅಕ್ಷರ ಜಗತ್ತಿಗೆ ನಡೆದೇಬಿಟ್ಟ.

ವಿಕ್ರಮನಿಗೆ ಕಾವ್ಯ ಒಂದು ಗುಂಗು. ಡಾಕ್ಟರೇಟ್ ಗಾಗಿ ಆತ ಕೈಗೆತ್ತಿಕೊಂಡದ್ದು ಕಂಬಾರರ ಕಾವ್ಯವನ್ನು. ಕಂಬಾರರ ನಾಟಕಗಳ ಬಗೆಗಿನ ಕೃತಿಯೊಂದು ಈಗಾಗಲೇ ‘ಸಂಚಯ’ ಪ್ರಕಟಿಸಿದೆ. ಈ ಪುಸ್ತಕಕ್ಕೆ ವಿಕ್ರಮ್ ಬರೆದ ಸಂಪಾದಕೀಯ ಮಾತುಗಳು ಕನ್ನಡಕ್ಕೆ ಒಬ್ಬ ಗಂಭೀರ ವಿಮರ್ಶಕನ ಆಗಮನವನ್ನು ಸಾರಿದೆ.

ವಿಕ್ರಮ್ ಸದ್ಯ ಕಲ್ಬುರ್ಗಿ ವಿವಿಯ ರಾಯಚೂರು ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ . ಸಾಲಿ, ಕಂಠಿ, ಋಗ್ವೇದಿ, ಅರುಣ, ಸತೀಶ್ ಪಾಟೀಲ, ತುರುವೀಹಾಳ ಚಂದ್ರು ಹೀಗೆ ಗೆಳೆಯರ ಸಂಗಕ್ಕೆ ಸದಾ ಹಾತೊರೆಯುವ ಈತ ಕನ್ನಡದಲ್ಲಿ ಒಳ್ಳೆಯ ಮನಸ್ಸಿನ ಒಂದು ಕೂಟಕ್ಕೆ ಕಾರಣವಾಗಲಿ.

ಹಾಡೋ ಹುಡುಗರಿಗೆ ಆಟಾನೂ ಬೇಕು

ಅಕ್ಷತಾ ಕೆ

ak1

ದಣಪೆಯಾಚೆ…

 

ಇತ್ತೀಚಿಗೆ ನಮ್ಮ ಮನೆಗೆ ಬಂದ ಹಿರಿಯರೊಬ್ಬರು ಆ ಹುಡುಗರ ಮನೆಗೆ ನನ್ನನ್ನು ಕರೆದೊಯ್ದಿದ್ದರು. ಮೊದಲನೆಯವನು ಏಳನೇ ತರಗತಿ. ಚಿಕ್ಕವನಿನ್ನೂ ಐದನೇ ತರಗತಿ. ಇಬ್ಬರೂ ಹಾಡುಗಾರರು. ಈಗಾಗಲೇ ಕನ್ನಡದ ಎಲ್ಲ ಟಿವಿ ಚಾನೆಲ್ ಗಳ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಎರಡನೇ ಸುತ್ತು, ಮೂರನೇ ಸುತ್ತು, ಸೆಮಿಫೈನಲ್ ಹೀಗೆಲ್ಲ ವಿವಿಧ ಹಂತಗಳಿಗೆ ತಲುಪಿ ಬಂದಿದ್ದಾರೆ. ಮುಂದಿನ ಕೆಲವು ಸ್ಪರ್ದೆಗಳಿಗೆ ತಯಾರಿಯನ್ನು ಮಾಡಿಕೊಳ್ಳುತಿದ್ದಾರೆ.

ಈ ವಿವರಗಳನ್ನೆಲ್ಲ ಹುಡುಗರ ತಾಯಿ ನಮಗೆ ನೀಡಿದರು. ಜೊತೆಗೆ ಆ ಚಾನೆಲ್ ನ ನಿರೂಪಕರು ತಮ್ಮ ಮಗನಿಗೆ ನಿನ್ನ ಹೆಸರಿಗೆ ತಕ್ಕಂತೆ ನಿನ್ನ ಕಂಠ ಸಿರಿಯು ಅದ್ಭುತ ಎಂದು ಹೊಗಳಿದ್ದನ್ನು, ಇನ್ನೊಂದು ಚಾನೆಲ್ನಲ್ಲಿ ತೀರ್ಪುಗಾರರು ತಮ್ಮ ಮಗನ ಪರವಿದ್ದರೂ ವೀಕ್ಷಕರ ಎಸ್ ಎಂಎಸ್ ಜಾಸ್ತಿ ಸಂಖ್ಯೆಯಲ್ಲಿ ಬೇರೆಯವನಿಗೆ ಹೋದುದರಿಂದ ತಮ್ಮ ಮಗ ಸೋಲುಣ್ಣಬೇಕಾಯಿತೆಂದು, ಮಗದೊಂದರಲ್ಲಿ ತೀರ್ಪುಗಾರರೆ ಮೋಸ ಮಾಡಿಬಿಟ್ಟರು ಎಂದೆಲ್ಲ ವಿವರಣೆ ನೀಡಿದರು.

 

ttap_music_15

ಅಲ್ಲೇ ನಿಂತು ಇದನ್ನೆಲ್ಲ ಕೇಳಿಸಿಕೊಳ್ಳುತಿದ್ದ ಆ ಇಬ್ಬರು ಹುಡುಗರು ಅಮ್ಮನ ಮಾತಿನಿಂದ ಮುಜುಗರ ಪಡುತ್ತಿರುವುದು ಸ್ಪಷ್ಟ ಗೋಚರಿಸುತ್ತಿತ್ತು. ಅವಕ್ಕೆ ಸ್ಪರ್ಧೆ ಎಂದರೆ ಸ್ಪರ್ಧೆ ಅಷ್ಟೆ, ಅದಕ್ಕಿಂತ ಹೆಚ್ಚಲ್ಲ. ಗೆದ್ದರೂ ಸೋತರೂ ಅದರ ನಡುವಿನ ಅಂತರ ತುಂಬಾ ಕಡಿಮೆ. ಆದರೆ ಹಿರಿಯರಿಗೆ ಅದರ ನಡುವೆ ಭೂಮಿ ಆಕಾಶದಷ್ಟು ಅಂತರ. ಅಷ್ಟೊತ್ತಿಗೆ ಆ ಹುಡುಗರ ಅಪ್ಪ ಬಂದರು. ನಮಗೆ ಹಲೋ ಹೇಳಿದವರೇ ಎಲ್ಲಿ ಹಾರ್ಮೋನಿಯಮ್ ತೆಗೆದುಕೊಂಡು ಬನ್ನಿ ಇವರೆದುರಿಗೆ ಎರಡು ಹಾಡು ಹೇಳಿ. ಈ ಅಂಕಲ್ ತುಂಬಾ ಚೆನ್ನಾಗಿ ಹಾಡು ಹೇಳ್ತಾರೆ ನಿಮ್ಮ ಹಾಗೆ ಅವಕಾಶ ಸಿಗ್ಲಿಲ್ಲ ಅದಕ್ಕೆ ಎಲ್ಲೂ ಹಾಡ್ಲಿಲ್ಲ. ನಿಮ್ಮ ಹಾಗೆಲ್ಲ ಅವಕಾಶ, ಪ್ರೋತ್ಸಾಹ ಎಲ್ಲ ಸಿಕ್ಕಿದ್ದರೆ ಇವತ್ತು ಏನಾಗಿಬಿಡ್ತಿದ್ದರೋ ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ನನ್ನನ್ನು ಅವರ ಮನೆಗೆ ಕರೆದೊಯ್ದಿದ್ದ ಹಿರಿಯರ ಮುಖ ನೋಡಿದರು!

ಹುಡುಗರಿಬ್ಬರು ಹಾರ್ಮೋನಿಯಮ್ ತಾರದೇ ನೀ ಕೇಳು ನೀ ಕೇಳು ಎಂದು ಪರಸ್ಪರ ಗುನುಗು ಸ್ವರದಲ್ಲಿ ಒತ್ತಾಯಿಸುತ್ತಾ ಅಲ್ಲೇ ನಿಂತಿದ್ದರು. ಅವರಿಬ್ಬರು ಹಾಡಲು ಈ ಕ್ಷಣದಲ್ಲಿ ಮನಸಿಲ್ಲ ಎಂದು ನನಗೆ ಖಾತ್ರಿಯಾಯಿತು. ಮನಸಿಲ್ಲದೆ ಏನನ್ನೂ, ಯಾವ ಕಾರಣಕ್ಕೂ, ಯಾವ ಅನಿವಾರ್ಯತೆಗೂ ಮಾಡುವ ಅವಶ್ಯಕತೆ ಇದೆ ಎಂದು ನನಗೆ ಅನ್ನಿಸುವುದಿಲ್ಲ. ಜೊತೆಗೆ ಸಂಜೆ ಸಮಯದಲ್ಲಿ ಕ್ರಿಕೆಟ್ ಫೀಲ್ಡ್ ಕರೆಯುತ್ತಿರಲು ಯಾವ ಹುಡುಗನಾದರೂ ಯಾಕೆ ಒತ್ತಾಯಪೂರ್ವಕವಾಗಿ ಹಾಡಬೇಕು? ಅಂಥ ಅನಿವಾರ್ಯವಾದರೂ ಏನಿದೆ? ಇರಲಿ ಬಿಡಿ ಇನ್ನೊಂದು ದಿನ ನಿಮ್ಮ ಹಾಡು ಕೇಳಲಿಕ್ಕೆ ಅಂತಲೇ ಬರುತ್ತೇವೆ. ಆಗಿನಿಂದ ಅಣ್ಣ ತಮ್ಮ ಎಲ್ಲಿಗೋ ಹೋಗಲು ತಯಾರಿ ಮಾಡಿಕೊಳ್ಳುತಿದ್ದೀರಿ ಹೋಗಿ ಎಂದು ಬಿಟ್ಟೆ. More

ಯಾಕೋ…. ಬರೆದ ಸಾಲುಗಳು !

 

sketch2


ನೀನು; ಕನಸು ಹುಟ್ಟಿದ ಆ ಗಳಿಗೆಗೆ ಸಾಕ್ಷಿ
ಎಲ್ಲರೆದಿರು ಬೀಗಿದ ಸ೦ಭ್ರಮದ ವಸ೦ತಋತು.
ಇಲ್ಲ
ಎಷ್ಟಾದರೂ ನೀನು ” ನೆಪ ” ಮಾತ್ರ.


ನನ್ನ ಪ್ರೀತಿಸಿದಷ್ಟೂ ಸಮಯ
ಆಕಾಶದ ನೀಲಿ …ಈ ಹೂ ನಗು…
ಹಸಿರ ಚಿಗುರು.. ಎಲ್ಲವೂ
ನಿನ್ನ ಮೇಲೆ ಆಸೂಯೆಪಟ್ಟು ಅತ್ತವು.


ನೀನು ಹಾಡದೆ..ರಾಗ ನನ್ನದೆ೦ದು ತಿಳಿಯಲಿಲ್ಲ
ನಾನು ಕಾಡದೆ..ಹಸಿರು ನೀನೇ ಇರಲಿಲ್ಲ
ಕವನದ೦ತೆ ಕಾದೆ..ನ೦ಬಿದ ಮೋಡ ಮಳೆಯಾಗಲಿಲ್ಲ.


ನೆನಪಾದಗಲೊಮ್ಮೆ ನೋಡುತ್ತೇನೆ
ನೀ ಬರೆದ ಹಾಳೆಗಳೆಲ್ಲಾ ನವಿಲುಗರಿಗಳಾಗಿವೆ
ಆ ಮಟ್ಟಿಗೆ ” ವಿಸ್ಮಯ ” ನೀನು.


ಸೋಲುಗಳ ಸಾಗರಕ್ಕೆ ವಿಜಯದ ದ೦ಡೆ ಇಲ್ಲದಿಲ್ಲ
ನಾಳೆ ನಾನು ಆಕಾಶದ ಚುಕ್ಕಿಗಳ ನಡುವೆ
ರ೦ಗೋಲಿಯಾದ ರಾತ್ರಿ
ಬೀಳುವ ಕನಸುಗಳು ನನ್ನ ಕಾಣಿಸದಿರಲಿ..

-ಸಿದ್ದು ದೇವರಮನಿ

%d bloggers like this: