ಅನಂತಮೂರ್ತಿ: ಸದ್ಯ ಮತ್ತು ಶಾಶ್ವತ

ankitha

ಜೋಗಿ ಹೊಸ ಕಾದಂಬರಿ

 

ಕಾದಂಬರಿ- ಭಾಗ ೨

jogijpg1

ಲಾರ್ಡ್ ಕೃಷ್ಣಪ್ಪನ ರಾಜಕೀಯ

ಮಲಯಾಳಿ ಹೊಟೆಲಲ್ಲಿ ಪುಂಡಿ ಗಸಿ ತಿಂದು ಮುಗಿಸುವ ಹೊತ್ತಿಗೆ ಸುಸ್ತಾಗಿತ್ತು. ಸ್ನಾನ ಮುಗಿಸಿ ಕಾರಲ್ಲಿ ಒಂದೆರಡು ಗಂಟೆಯಾದರೂ ನಿದ್ದೆ ಮಾಡಬೇಕು ಅಂದೆ. ಶಿವನಿಗೂ ಹಾಗೇ ಅನ್ನಿಸಿರಬೇಕು. ನನಗೆ ಗೊತ್ತಿರುವವರ ಮನೆಯೊಂದಿಗೆ ಬಾ. ಅಲ್ಲೇ ಹೋಗಿ ಸ್ನಾನ ಮುಗಿಸೋಣ ಎಂದ ಶಿವ.

ಅವನ ನಿದ್ದೆಯ ಸೊಬಗು ನನಗೆ ಗೊತ್ತಿತ್ತು. ಮಲಗಿದರೆ ಆರೇಳು ಗಂಟೆ ಏಳುವವನಲ್ಲ ಅವನು. ಅಲ್ಲಿಗೆ ಅರ್ಧ ದಿನ ಸುಮ್ಮನೆ ಕಳೆದಂತಾಗುತ್ತದೆ ಅಂದುಕೊಂಡು ಯಾರ ಮನೆಗೂ ಹೋಗುವುದು ಬೇಡ. ಇಲ್ಲೇ ಹೊಳೆಯಲ್ಲಿ ಸ್ನಾನ ಮುಗಿಸಿ ಕಾರಲ್ಲೇ ಅಡ್ಡಾಗೋಣ’ ಅಂದೆ. ಅದಕ್ಕೂ ಮುಂಚೆ ನಾನು ಗಾರ್ಡ್ ಕೃಷ್ಣಪ್ಪನನ್ನು ಕಾಣಬೇಕಾಗಿತ್ತು. ಅವನ ಹತ್ತಿರ ಅಪರೂಪದ ಮಾಹಿತಿಗಳಿಗೆ ಎಂದು ನನಗೆ ಅನ್ನಿಸತೊಡಗಿತ್ತು.

ಈ ಫಾರೆಸ್ಟ್ ಗಾರ್ಡ್‌ಗಳಿಗೆಲ್ಲ ಕೃಷ್ಣಪ್ಪ ಅಂತಾನೇ ಹೆಸರಿರುತ್ತಲ್ಲ, ಬೇರೆ ಹೆಸರೇ ಸಿಗಲ್ವ ಅವರ ಅಪ್ಪಅಮ್ಮಂದಿರಿಗೆ ಎಂದು ಶಿವ ಕೇಳಿದ. ನಾವು ಮುತ್ತೋಡಿಯ ಕಾಡಿಗೆ ಹೋದಾಗಲೂ ಅಲ್ಲೊಬ್ಬ ಕೃಷ್ಣ ಸಿಕ್ಕಿದ್ದ. ಅವನನ್ನು ಆನೆ ಕೃಷ್ಣ ಎನ್ನುತ್ತಿದ್ದರು. ಆನೆಗಳನ್ನು ಪಳಗಿಸುವುದರಲ್ಲಿ ಅವನು ಮಹಾ ಗಟ್ಟಿಗನಂತೆ. ಎಂಥಾ ತುಂಟ ಆನೆಯನ್ನೂ ಒಂದೆರಡು ದಿನದಲ್ಲೇ ವಶಕ್ಕೆ ತೆಗೆದುಕೊಳ್ಳುತ್ತಿದ್ದನಂತೆ. ಅವನ ಹತ್ತಿರ ಅದರ ಗುಟ್ಟೇನು ಅಂತ ಕೇಳಿದಾಗ ಅವನು ನಗುತ್ತಾ ಹೇಳಿದ್ದ:

10

ಆನೆಗಳಿಗೆ ಎಲ್ಲಾ ಅರ್ಥವಾಗುತ್ತೆ. ಅವು ಸುಮ್ನೆ ಕೀಟಲೆ ಮಾಡುತ್ತವೆ, ತುಂಟ ಮಕ್ಕಳ ಹಾಗೆ. ನಾವೂ ಹಾಗೇ ಕೀಟಲೆ ಮಾಡುತ್ತಿದ್ದರೆ ದಾರಿಗೆ ಬರುತ್ತವೆ. ಅದು ಬಿಟ್ಟು ಹೊಡೆದು ಬಡಿದೂ ಮಾಡಿದರೆ ಹಟಮಾರಿಗಳಾಗುತ್ತವೆ’. ನಾನಿದನ್ನೂ ಎಲ್ಲೂ ಓದಿರಲಿಲ್ಲ.  ಅದಾಗಿ ಆರೇಳು ತಿಂಗಳ ನಂತರ ಸಕ್ರೆಬೈಲಿಗೆ ಹೋದಾಗ ಅಲ್ಲಿ ಆನೆಮರಿಯೊಂದು ತುಂಟಗಣ್ಣಲ್ಲಿ ಎಲ್ಲವನ್ನೂ ಗಮನಿಸುತ್ತಾ ಹತ್ತಿರ ಹೋದ ಹುಡುಗರ ಮೇಲೆ ಸುಳ್ಳು ಸುಳ್ಳೇ ಬುಸುಗುಟ್ಟುತ್ತಿದ್ದದ್ದನ್ನು ನೋಡಿದ ಮೇಲೆ ಅದು ನಿಜವಿರಬಹುದೇನೋ ಅನ್ನಿಸಿತ್ತು.

ಆಯಾ ಪ್ರದೇಶಗಳಿಗೆ ಒಂದೊಂದು ವೈಶಿಷ್ಟವಿರುತ್ತದೆ. ಹಾವುಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಸುಬ್ಬ, ಸುಬ್ರಹ್ಮಣ್ಯ, ನಾಗರಾಜ, ವಾಸುಕಿ ಅಂತೆಲ್ಲ ಹೆಸರಿಡುತ್ತಾರೆ. ಈ ಫಾರೆಸ್ಟ್ ಗಾರ್ಡ್‌ಗಳಾಗಿ ಬರುವವರ ಪೈಕಿ ಹೆಚ್ಚಿನವರು ಮಲೆನಾಡಿನವರೇ. ಅವರ ವೃತ್ತಿ ಹೈನುಗಾರಿಕೆ. ಗೊಲ್ಲತನ ಮಾಡುವವರಾದ್ದರಿಂದ ಅವರೆಲ್ಲ ಕೃಷ್ಣನ ಭಕ್ತರು. ಕೃಷ್ಣ, ಬಲರಾಮ, ಮುರಾರಿ, ಗೋಪಾಲ ಅಂತೆಲ್ಲ ಹೆಸರಿಟ್ಟುಕೊಳ್ಳೋದು ಸಹಜ ಎಂದು ಯಕ್ಷಗಾನದ ಅರ್ಥಧಾರಿ ಜೋಶಿಯವರೊಮ್ಮೆ ವಿವರಿಸಿದ್ದರು. ಅದನ್ನೇ ಶಿವನಿಗೆ ಹೇಳಿದೆ. ಅವನು ಅದೆಲ್ಲ ಇವರ ಕಲ್ಪನೆ ಅಷ್ಟೇ’ ಎಂದು ತಳ್ಳಿಹಾಕಿದ.

ಗಾರ್ಡ್ ಕೃಷ್ಣಪ್ಪನನ್ನು ಹುಡುಕಿಕೊಂಡು ನಾವು ಗುಂಡ್ಯ ರೇಂಜ್ ಫಾರೆಸ್ಟ್ ಆಫೀಸಿಗೆ ಹೋದಾಗ ಅಲ್ಲಿ ಗಾರ್ಡ್ ಕೃಷ್ಣಪ್ಪ ಇರಲಿಲ್ಲ. ಹಳೆಯ ಕುರ್ಚಿಯ ಮೇಲೆ ತೂಕಡಿಸುತ್ತಾ ಒಬ್ಬ ತೆಳ್ಳಗಿನ ಮನುಷ್ಯ ಕೂತಿದ್ದ. ಅವನು ಎಷ್ಟು ಸಣಕಲನಾಗಿದ್ದ ಎಂದರೆ ಅವನನ್ನು ಫಾರೆಸ್ಟು ಡಿಪಾರ್ಟ್‌ಮೆಂಟಿನ ಸಿಬ್ಬಂದಿ ಎಂದು ನಂಬುವುದಕ್ಕೇ ನನಗೆ ಸಾಧ್ಯವಾಗಲಿಲ್ಲ. ತಾಳೆಮರದಿಂದ ಹೆಂಡ ಇಳಿಸುವವನಂತೆ ಕಾಣಿಸುತ್ತಿದ್ದ.

ತಾಳೆಮರದ ತುದಿಗೆ ಹತ್ತಿ ಹೆಂಡ ಇಳಿಸುವವರು ಸಾಮಾನ್ಯವಾಗಿ ತೆಳ್ಳಗಿರುತ್ತಾರೆ. ಅವರು ತೆಳ್ಳಗಿರೋದರಿಂದ ತಾಳೆ ಮರ ಹತ್ತುತ್ತಾರೋ ತಾಳೆ ಮರ ಹತ್ತಿ ಹತ್ತಿ ತೆಳ್ಳಗಾಗಿರುತ್ತಾರೋ ಗೊತ್ತಿಲ್ಲ. ಸೊಂಟಕ್ಕೊಂದು ಕತ್ತಿ ಕಟ್ಟಿಕೊಂಡು, ಇನ್ನೊಂದು ಬದಿಯಲ್ಲಿ ಒಂದು ಮಡಿಕೆ ಸಿಕ್ಕಿಸಿಕೊಂಡು ತಾಳೆಮರಕ್ಕೆ ಕಟ್ಟಿದ ಒಂಟಿ ಬಿದಿರಿನ ಏಣಿಯನ್ನು ಸರಸರನೆ ಹತ್ತಿ ತಾಳೆ ಗರಿಗಳ ನಡುವೆ ಕುಳಿತು ಹಿಂದಿನ ದಿನ ಅಲ್ಲಿಟ್ಟ ಮಡಿಕೆಯಲ್ಲಿರುವ ಹೆಂಡವನ್ನು ಎತ್ತಿಕೊಂಡು ಹೊಸ ಮಡಿಕೆ ಕಟ್ಟಿ ಕೆಳಗಿಳಿದು ಬರುವವರನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ. ನಮ್ಮೂರಲ್ಲಿ ಐತಪ್ಪ ಆ ಕೆಲಸ ಮಾಡುತ್ತಿದ್ದ. ಅವನಂತೆಯೇ ಈತನೂ ಕಾಣಿಸುತ್ತಿದ್ದ.

ಗಾರ್ಡ್ ಕೃಷ್ಣಪ್ಪ ಬೇಕಿತ್ತು’ ಅಂದೆ. ಅವನು ನಿದ್ದೆ ಮಾಡುತ್ತಿದ್ದಾನೆ ಅಂತ ಆಗಲೇ ನನಗೆ ಗೊತ್ತಾಗಿದ್ದು. ನನ್ನ ಮಾತು ಅವನಿಗೆ ಕೇಳಿಸಿಯೇ ಇಲ್ಲ ಎನ್ನುವುದು. ನಾನು ಮತ್ತೊಮ್ಮೆ ದೊಡ್ಡ ದನಿಯಲ್ಲಿ ಕೇಳಿದಾಗ ಅವನು ಮೆತ್ತಗೆ ಕಣ್ತೆರೆದ. ಮಾತಾಡುವ ಯಾವ ಉತ್ಸಾಹವೂ ಅವನಲ್ಲಿ ಇದ್ದಂತಿರಲಿಲ್ಲ.

ಗಾರ್ಡ್ ಕೃಷ್ಣಪ್ಪ ..’ ನಾನು ಮೂರನೇ ಸಲ ಜಪಿಸಿದೆ. ಕೃಷ್ಣಪ್ಪನೂ ಇಲ್ಲ, ರಾಮಪ್ಪನೂ ಇಲ್ಲ’ ಎಂದು ತೀವ್ರ ಅನಾಸಕ್ತಿಯಿಂದಲೇ ಅವನು ಉತ್ತರಿಸಿದ. ವಾಗ್ಲೆ ಇದ್ದಾರಾ’ ಕೇಳಿದೆ. ಈ ಹೆಸರು ಅವನ ನಿದ್ದೆಯನ್ನು ಒದ್ದೋಡಿಸಿರಬೇಕು. ಸಾಹೇಬ್ರಿನ್ನೂ ಬಂದಿಲ್ಲ. ನೀವ್ಯಾರು’ ಎಂದು ಆತ ಕೊಂಚ ಕುತೂಹಲದಿಂದ ನನ್ನನ್ನೇ ನೋಡುತ್ತಾ ಇಹಲೋಕಕ್ಕೆ ಬಂದ.

ನಾನು ವಾಗ್ಲೆಯವರ ಫ್ರೆಂಡು. ನಿನ್ನೆ ಫೋನಲ್ಲಿ ಮಾತಾಡಿದ್ದೆ. ಬರೋದಕ್ಕೆ ಹೇಳಿದ್ರು. ಗಾರ್ಡ್ ಕೃಷ್ಣಪ್ಪನನ್ನು ಜೊತೆಗೆ ಕಳಿಸಿದ್ರು. ಇಲ್ಲಿಗೆ ಬರೋಕೆ ಹೇಳಿದ್ದಾನೆ ಕೃಷ್ಣಪ್ಪ’

ಮೊದಲೇ ಹೇಳೋದಲ್ವಾ ಸಾರ್.. ಕೂತ್ಕೊಳ್ಳಿ..’ ಇದ್ದಕ್ಕಿದ್ದಂತೆ ಚುರುಕಾಗಿ ಆತ ಪಕ್ಕದಲ್ಲಿದ್ದ ಕುರ್ಚಿ ಕದಲಿಸಿದ. ಆ ಹಳೆಯ ಮರದ ಕುರ್ಚಿಯನ್ನು ಎತ್ತಿಡುವ ಶಕ್ತಿ ಅವನಿಗಿಲ್ಲ ಎಂದು ಗೊತ್ತಾಗಿ ನಾನು ಅಲ್ಲೇ ಹೋಗಿ ಕುಳಿತುಕೊಂಡೆ. ಎಷ್ಟು ಹೊತ್ತಿಗೆ ಬರ್ತಾನೆ. ಈಗ್ತಾನೇ ಹೊಟೆಲ್ ಹತ್ರ ಸಿಕ್ಕಿದ್ದ. ಇಲ್ಲಿಗೆ ಬರೋಕೆ ಹೇಳಿದ್ದ’ ಅಂದೆ.

ಲಾರ್ಡ್ ಕೃಷ್ಣಪ್ಪ ನಿಮಗಿವತ್ತು ಸಿಗೋಲ್ಲ. ನಾಳೆನೋ ನಾಡಿದ್ದೋ ಬರ್ತಾನೆ. ಬೆಂಗಳೂರಿಗೆ ಹೋಗಿದ್ದಾನೆ’ ಅವನು ಮಾತು ಮುಗಿಯಿತೆಂಬಂತೆ ಸುಮ್ಮನೆ ಕೂತ. ಅವನು ಲಾರ್ಡ್ ಕೃಷ್ಣಪ್ಪ ಅಂದಿದ್ದರಲ್ಲಿ ಏನೋ ವ್ಯಂಗ್ಯವಿದೆ ಅನ್ನಿಸಿತು. ಅವನನ್ನು ಮಾತಿಗೆಳೆದರೆ ಒಂದಷ್ಟು ಮಾಹಿತಿ ಸಿಗಬಹುದು ಅಂದುಕೊಂಡು ಬನ್ನಿ, ಟೀ ಕುಡಿಯೋಣ’ ಅಂತ ಕರೆದ. ಸಾಹೇಬ್ರು ಬರ್ತಾರೆ, ಹೊರಗಡೆ ಹೋಗೋ ಹಾಗಿಲ್ಲ’ ಅಂದ. ಪರವಾಗಿಲ್ಲ ಬನ್ನಿ, ನಾನೇ ಕರಕೊಂಡು ಹೋದೆ ಅಂತ ಸಾಹೇಬ್ರಿಗೆ ಹೇಳ್ತೀನಿ’ ಅಂತ ಒತ್ತಾಯ ಮಾಡಿದ ಮೇಲೆ ಒಲ್ಲದ ಮನಸ್ಸಿನಿಂದ ಎದ್ದು ಬಂದ.

ಟೀ ಹೀರುತ್ತಾ ಸಾಂತು ಹೇಳಿದ ಕತೆ ಕೇಳಿದ ನಂತರ ನನಗೆ ಆಶ್ಚರ್ಯವಾಯಿತು. ಹದಿನಾರು ವರ್ಷಗಳಿಂದ ಸಾಂತು ಫಾರೆಸ್ಟ್ ಡಿಪಾರ್ಟ್‌ಮೆಂಟಿನಲ್ಲಿ ದಿನಗೂಲಿ ನೌಕರವಾಗಿ ಕೆಲಸ ಮಾಡುತ್ತಿದ್ದ. ಕಾಡ್ಗಿಚ್ಚು ಬೀಳದಂತೆ ನೋಡಿಕೊಳ್ಳುವ, ಆಕಸ್ಮಾತ್ತಾಗಿ ಬೆಂಕಿ ಬಿದ್ದರೆ ಆರಿಸುವ ತಂಡದ ಹಿರಿಯ ಸದಸ್ಯ ಅವನು. ಅವನಿಗೆ ಗಾರ್ಡ್ ಕೃಷ್ಣಪ್ಪನ ಮೇಲೆ ಅಪಾರ ಸಿಟ್ಟಿತ್ತು. ಅವನ ಜೊತೆ ಅರ್ಧಗಂಟೆ ಮಾತಾಡಿದ ನಂತರ ನನಗೆ ಗೊತ್ತಾದದ್ದು ಇಷ್ಟು.

ಗಾರ್ಡ್ ಕೃಷ್ಣಪ್ಪ ಮೊದಲೆಲ್ಲ ಚೆನ್ನಾಗಿಯೇ ಇದ್ದ. ಅವನ ಜಾತಿಯವವೂ ಕ್ಲಾಸ್‌ಮೇಟೂ ಆಗಿದ್ದ ಮಹಾದೇವ, ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕನಾದ ಮೇಲೆ ಕೃಷ್ಣಪ್ಪ ಪೂರ್ತಿ ಬದಲಾದ. ಆಮೇಲೆ ಲಾರ್ಡ್ ಥರ ವರ್ತಿಸುತ್ತಿದ್ದುದರಿಂದ ಎಲ್ಲರೂ ಅವನನ್ನು ಲಾರ್ಡ್ ಕೃಷ್ಣಪ್ಪ ಎಂದೇ ಕರೆಯುತ್ತಿದ್ದರು. ಮಹಾದೇವನ ಬಲಗೈ ಬಂಟನಾಗಿದ್ದುಕೊಂಡು, ರಾಜಕೀಯ ಮಾಡುತ್ತಾ, ಮಹಾದೇವನ ಮತಕ್ಷೇತ್ರದಲ್ಲಿ ನಡೆಯುವ ಸಂಗತಿಗಳನ್ನು ಒಂದಕ್ಕೆರಡು ಸೇರಿಸಿ ವರದಿ ಮಾಡುತ್ತಿರುವವನೇ ಈ ಕೃಷ್ಣಪ್ಪ. ಎಂಎಲ್‌ಎ ಹತ್ತಿರ ಹೇಳಿ ತನಗೆ ಬೇಕಾದವರ ಕೆಲಸ ಮಾಡಿಸಿಕೊಡುತ್ತಿದ್ದುದರಿಂದ ಅವನಿಗೆ ಅಲ್ಲಿ ವಿಪರೀತ ಮರ್ಯಾದೆ ಸಿಕ್ಕತೊಡಗಿತು.

ಮಹಾದೇವ ಒಳ್ಳೆಯವರು ಸಾರ್. ಇವನೇ ಅವರ ತಲೆಕೆಡಿಸಿ ಅವರನ್ನು ಹಾಳು ಮಾಡಿರೋದು. ಏನು ಕೆಲಸ ಮಾಡೋದಕ್ಕೂ ಅಡ್ಡಗಾಲು ಹಾಕ್ತಾನೆ. ಮುಂದಿನ ಸಲ ಅವರು ಗೆಲ್ಲೋದಿಲ್ಲ ಬಿಡಿ’ ಎಂದು ಸಾಂತು ಬೇಸರದ ದನಿಯಲ್ಲಿ ಹೇಳಿದ. ತನ್ನ ಜಾತಿಯವರ ಮೇಲೂ ಅವನಿಗೆ ಪ್ರೀತಿ ಇಲ್ಲ. ನಾನೂ ಅವನೂ ಒಟ್ಟಿಗೆ ಕೆಲಸಕ್ಕೆ ಸೇರಿದ್ದು. ನನ್ನನ್ನು ಪರ್ಮನೆಂಟ್ ಮಾಡೋದು ಅವನಿಗೇನೂ ಕಷ್ಟ ಅಲ್ಲ. ಒಂದು ಮಾತು ಹೇಳು ಅಂದ್ರೆ ಲಾರ್ಡ್ ಥರ ಆಡ್ತಾನೆ ಸಾರ್

ಎಂದು ಸಾಂತು ಕಣ್ಣೀರು ಹಾಕಿದ.

ಸಾಂತುವಿಗೆ ಮದುವೆ ಆಗಿರಲಿಲ್ಲ. ಅಕ್ಕನ ಮಗಳು ಕಾವೇರಿಯನ್ನು ಮದುವೆ ಆಗುವುದೆಂದು ನಿರ್ಧಾರವೂ ಆಗಿತ್ತು. ಮದುವೆ ಇನ್ನೇನು ನಡೆಯಬೇಕು ಅನ್ನುವಷ್ಟರಲ್ಲಿ ಹದಿನಾರು ದಿನಗೂಲಿ ನೌಕರರನ್ನು ಕೆಲಸದಿಂದ ಕಿತ್ತು ಹಾಕಿದ್ದರಿಂದ ಸಾಂತುವಿನ ಮದುವೆ ನಿಂತು ಹೋಗಿತ್ತು. ಅವನು ಕೆಲಸ ಕಳೆದುಕೊಂಡಿರಲಿಲ್ಲ. ಆದರೆ ಅವನ ಕೆಲಸವೂ ಶಾಶ್ವತ ಅಲ್ಲ ಅನ್ನುವ ಕಾರಣಕ್ಕೆ ಕಾವೇರಿ ಅವನನ್ನು ನಿರಾಕರಿಸಿದ್ದಳು. ಕೆಲಸ ಖಾಯಂ ಮಾಡ್ಕೋ, ಆಮೇಲೆ ಮದುವೆ ಅಂತ ಮಾವ ಹೇಳಿದ್ದರು. ಅದಾದ ನಾಲ್ಕೇ ತಿಂಗಳಿಗೆ ಅವಳು ಬೇರೆ ಮದುವೆ ಮಾಡಿಕೊಂಡು ಹೋಗಿದ್ದಳು. ಕೃಷ್ಣಪ್ಪ ಮನಸ್ಸು ಮಾಡಿದ್ದರೆ ತನ್ನ ಕೆಲಸ ಪರ್ಮನೆಂಟ್ ಮಾಡಬಹುದಾಗಿತ್ತು. ಹೀಗಾಗಿ ಅವನೇ ತನ್ನ ಮದುವೆ ತಪ್ಪಿಸಿದ ವಿಲನ್ ಎಂದು ಸಾಂತು ನಂಬಿಕೊಂಡಿದ್ದ.

ಕಳೆದ ತಿಂಗಳು ಬಂದಿದ್ದಳು ಸಾರ್. ಗರ್ಭಿಣಿಯಾಗಿದ್ದಾಳೆ. ನಾನು ಎದುರಾ ಎದುರಾ ಸಿಕ್ಕಿದ್ರೂ ಕಣ್ಣೆತ್ತಿ ಕೂಡ ನೋಡ್ಲಿಲ್ಲ ಸಾರ್. ಅವಳಿಗೆ ನಾನು ಎಷ್ಟೆಲ್ಲ ಒದ್ದಾಡಿದ್ದೀನಿ’ ಎಂದು ಸಾಂತು ಮತ್ತೆ ಕಣ್ತುಂಬಿಕೊಂಡ. ಆ ಕಾಡಿನ ನಡುವೆಯೂ ಪ್ರೇಮ, ವಿರಹ, ವಿರಸಗಳು ಮನುಷ್ಯನನ್ನು ಕಂಗೆಡಿಸುವುದನ್ನು ನೋಡಿ ನನಗೆ ಯಾಕೋ ಬೇಜಾರಾಯಿತು. ಕೃಷ್ಣಪ್ಪ ಮನಸ್ಸು ಮಾಡಿ ಸಾಂತುವಿನ ಪ್ರೇಮ ಫಲಿಸುವಂತೆ ಮಾಡಬಹುದಿತ್ತಲ್ಲ ಅಂದುಕೊಂಡೆ.

ಅದ್ಸರಿ ಸಾರ್, ನೀವು ಏನು ಮಾಡ್ತಿದ್ದೀರಿ ಇಲ್ಲಿ’ ಸಾಂತು ಕೇಳಿದ. ನನ್ನ ಸ್ನೇಹಿತನೊಬ್ಬ ಕಾಡು ಸುತ್ತುವುದಕ್ಕೆ ಇಬ್ಬರು ಸ್ನೇಹಿತರ ಜೊತೆ ಬಂದಿದ್ದ. ಮೂವರೂ ಕಾಡಿನಲ್ಲಿ ನಾಪತ್ತೆ ಆಗಿದ್ದಾರೆ. ಪೇಪರಲ್ಲೂ ಬಂದಿತ್ತು. ನೀನೂ ಓದಿರಬೇಕು. ವಾಗ್ಲೆಯವರು ಹುಡುಕೋದಕ್ಕೆ ಸಹಾಯ ಮಾಡ್ತೀನಿ ಅಂದಿದ್ದಾರೆ. ಗಾರ್ಡ್ ಕೃಷ್ಣಪ್ಪನನ್ನು ಜೊತೆಗೆ ಕಳಿಸ್ತೀನಿ ಅಂದಿದ್ರು’ ಎಂದೆ.

ಆ ಲೌಡಿಮಗನಿಗೆ ಕಾಡಿನ ಬಗ್ಗೆ ಏನ್ಸಾರ್ ಗೊತ್ತು. ಅವನು ಕಾಡಿಗೆ ಕಾಲಿಡದೇ ಎಂಟು ವರ್ಷ ಆಯ್ತು. ವಿಧಾನಸೌಧದಲ್ಲಿ ಮಹಾದೇವನಿಗೆ ಬಕೆಟ್ ಹಿಡೀತಾ ಬಿದ್ದಿರ್ತಾನೆ. ಹೋಗಿ ಹೋಗಿ ಅವನನ್ನು ನಂಬ್ಕೋಡಿದ್ದೀರಲ್ಲ ನೀವು. ಸಾಹೇಬ್ರ ಹತ್ರ ಮಾತಾಡಿ, ನನ್ನನ್ನು ಕಳಿಸೋದಕ್ಕೆ ಹೇಳಿ.. ನಾನು ಬರ್ತೀನಿ ನಿಮ್ಮ ಜೊತೆಗೆ’ ಅಂದ.

ಸರಿಯಪ್ಪಾ, ನಾನು ನಿಮ್ಮ ಸಾಹೇಬರ ಜೊತೆ ಮಾತಾಡ್ತೀನಿ’ ಅಂದೆ..ಆದರೆ ಈ ಸಣಕಲು ಸಾಂತುವಿನಿಂದ ನಮಗೆ ಸಹಾಯ ಆಗುತ್ತದೆ ಎಂಬ ಯಾವ ನಂಬಿಕೆಯೂ ನನ್ನಲ್ಲಿರಲಿಲ್ಲ.

%d bloggers like this: