ಚೀನೀ ಸಿಂಪಿಗ

ಡಾ ಎಚ್ ಕೆ ರಂಗನಾಥ್ ರಂಗ ಕಲೆಗೆ ಕೊಟ್ಟ ಆಯಾಮ ಹಿರಿದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಇವರು ವಿಧ್ಯಾರ್ಥಿಗಳ ಮನ ಗೆದ್ದಿದ್ದರು.

ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಒಳಗೊಂಡ ‘ಪರದೇಸಿಯಾದಾಗ…’ಕೃತಿ ಈಗ ಮರುಮುದ್ರಣಗೊಂಡಿದೆ. ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಂದು ಸ್ವಾರಸ್ಯಕರ ಭಾಗ ನಿಮಗಾಗಿ ಇಲ್ಲಿದೆ-

paradesiyadga-rangnath2
ಅಥೆನ್ಸ್ ನಿಂದ ಮ್ಯಾನಿಲಾಕ್ಕೆ, ದುಬಾಯಿ, ಬೊಂಬಾಯಿ, ಬ್ಯಾಂಕಾಂಗ್ ಗಳಲ್ಲಿ ನೆಲ ಮುಟ್ಟಿದರೂ ಒಟ್ಟು ಹಾರಿದ ಸಮಯ ಸುಮಾರು ಹದಿನಾಲ್ಕು ಗಂಟೆ. ಹಾರಾಟದಲ್ಲಿ ‘ಕಾಲ ವ್ಯತ್ಯಾಸದ’ ಕಾರಣ, ಹೆಚ್ಚು ಕಡಿಮೆ ಮೂವತ್ತು ಗಂಟೆಗಳಷ್ಟು ಅಂತರ. ನಾಲ್ಕು ತಾಸಿನಲ್ಲಿಯೇ ರಾತ್ರಿ ಕಳೆದು ಮುಂದಿನ ಐದು ತಾಸುಗಳಲ್ಲಿಯೇ ದಿನ ಉರುಳಿದ ಕಾರಣ, ಊಟ ನಿದ್ರೆಗಳ ಪರಿಪಾಠ ಅಡ್ಡಾದಿಡ್ಡಿಯಾಗಿ, ಮ್ಯಾನಿಲಾದಲ್ಲಿ ಇಳಿದು, ಹೋಟೆಲು ಮುಟ್ಟಿದಾಗ ಅಲ್ಲಿನ ಮಧ್ಯಾಹ್ನದಲ್ಲಿ ನಾಲ್ಕು ಗಂಟೆ. ಒತ್ತಿ ಅಡರಿದ ನಿದ್ರೆಯಿಂದಾಗಿ ಎಚ್ಚರಗೊಂಡಾಗ ಮುಂಜಾನೆ ಮೂರು ಗಂಟೆ: ವಿಪರೀತ ಹಸಿವು.

ಮುಂದೆ ನಿದ್ರೆಬಾರದೆ ಬೆಳಕುಮೂಡುವ ತನಕ ಕುಳಿತಿದ್ದು ಸಮುದ್ರದ ಗುಂಟ ಎರಡು ಮೈಲು ದೂರ ನಡೆದು ಮತ್ತೆ ಹಿಂದಿರುಗಿ ಬರುವಲ್ಲಿ ಮುಂಜಾನೆ ಹತ್ತು ಗಂಟೆ: ತಡೆಯಲು ಅಸಾಧ್ಯವಾದ ನಿದ್ರೆ !

ಮ್ಯಾನಿಲದಲ್ಲಿ ಮಾರ್ಷಲ್-ಲಾ ಮಾರ್ಕೊಸ್ ಆಡಳಿತ. ಆತನ ಹೆಂಡತಿ ಅಮಿಲ್ಡಾ ನಿಜಕ್ಕೂ ಸಾಮ್ರಾಜ್ಞಿ ಆಕೆಯ ನಿರ್ದೇಶನದಲ್ಲಿ ರಚನೆಗೊಂಡಿರುವ ಫಿಲಿಪಿನೋ ಆರ್ಟ್ ಸೆಂಟರ್, ಆ ರಾಷ್ಟ್ರದ ಒಂದು ಅದ್ಭುತ. ಅತ್ಯಾಧುನಿಕ ರಂಗ ಶಾಲೆಗಳ ಕೇಂದ್ರ ಅದು. ಸುಮಾರು ಹದಿನಾಲ್ಕು ನೂರು ಮಂದಿ ಸುಖಾಸೀನರಾಗಬಲ್ಲ ರಂಗಮಂದಿರದಲ್ಲಿ, ಇಟಲಿಯ ಸುಪ್ರಸಿದ್ಧ ಕಲಾವಿದರು ಪ್ರದರ್ಶಿಸಿದ  ‘ಮದಾಮ್-ಬಟರ್ ಪ್ಲೈ’ ಗೀತ ನಾಟಕ ನೋಡಿದೆ. ಆ ಮಂದಿರಕ್ಕೆ ಹತ್ತಿದ ಮತ್ತೊಂದು ಅಂತಸ್ತಿನ ರಂಗ ಮಂದಿರ ಚೊಕ್ಕವಾದರೂ ಚಿಕ್ಕದು. ‘ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸ್ವೀಕರಿಸಲು ಅಲ್ಲಿಗೆ ಆಗಮಿಸಿದ್ದ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಸಂಗೀತ ಸಮಾರಂಭ ಅಲ್ಲಿ ವನದೆಯಿತು. ಆರುನೂರು ಮಂದಿ ಅತಿಥಿಗಳ ಸಮ್ಮುಖದಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಅಮಿಲ್ಡಾ ಮಾರ್ಕೊಸ್ ಕಡೆಯವರೆಗೂ ಕುಳಿತಿದ್ದು ಎಂ.ಎಸ್.ಸುಬ್ಬುಲಕ್ಷ್ಮಿ ಅವರನ್ನು ಅಭಿನಂದಿಸಿದರು.

ಹಿಂದಿ,ತಮಿಳು,ತೆಲುಗು,ಬಂಗಾಳಿ ಗೀತೆಗಳನ್ನು ಹಾಡಿದ ನಂತರ ಎಂ.ಎಸ್. ಅವರು ಹಾಡಿದ ಪುರಂದರದಾಸರ ಗೀತೆಗಳನ್ನು ಕೇಳಿದಾಗ ನನಗೂ, ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದ ಡಾ. ಷಣ್ಮುಗಂ ಅವರಿಗೂ ಆದ ಹಿಗ್ಗು ಅಷ್ಟಿಷ್ಟಲ್ಲ. ಕಲಾಕೇಂದ್ರದ ಮತ್ತೊಂದು ಪ್ರದರ್ಶನ ಮಂದಿರವೆಂದರೆ, ಜಾನಪದರಂಗ, ಸುಮಾರು ಹದಿನಾಲ್ಕು ಸಾವಿರ ಮಂದಿ ಸುಖಾಸೀನರಾಗಬಹುದಾದ ಅತ್ಯಂತ ಸುಸಜ್ಜಿತ ಮುಚ್ಚಮಂದಿರ ಅದು. ಹೆಸರಾಂತ ನಿರ್ದೇಶಕ ಲ್ಯಾಂಬರ್ಟೋ ಅವಲ್ಯಾನ ಅವರು, ಫೆಲಿಪಿನೋ ವಿಶ್ವವಿದ್ಯಾನಿಲಯಗಳಿಂದ ಆರಿಸಿದ ಸುಮಾರು ನಾಲ್ಕು ನೂರು ಮಂದಿ vidyaarti -vidyaarthini ಕಲಾವಿದರಿಂದ ಜಾನಪದ ನೃತ್ಯಗೀತೆ ಕಾರ್ಯಕ್ರಮವೊಂದನ್ನು ರೂಪಿಸುತ್ತಿದ್ದರು. ತುಂಬ ಆತ್ಮೀಯತೆಯಿಂದ ನನ್ನನ್ನು ಬರಮಾಡಿಕೊಂಡರು. ಅವರೊಡನೆ ಕಳೆದ ಮೂರು ಸಂಜೆಗಳ ಆನುಭವ ಮರೆಯುವಂಥದು.

tailors_shears2waskey

ಸಿಂಪಿಗನ ಮಾತು ಎಲ್ಲೋ ಬಿಟ್ಟು, ಸಂಗೀತಕ್ಕೆ ತೆಕ್ಕೆಗೆ ಬಿದ್ದಂತಾಯಿತು. ಕ್ಷಮಿಸಬೇಕು.

ಲಾಗೋಸ್ ನಲ್ಲಿ ಅತಿಕಡಿಮೆಯೆನಿಸಿದ ಬೆಲೆಯಲ್ಲಿ ಸೊಗಸಾದ ಬಟ್ಟೆಯನ್ನು ಕೊಂಡುಕೊಂಡಿದ್ದೆ. ಬೇರೆ ಬಗೆಯ ಈ ಬಟ್ಟೆಗಳಿಂದ ಎರಡು ಸೂಟು ಹೊಲಿಸಬಹುದಾಗಿತ್ತು. ನಾನು ದುಬಾರಿಯೆಂದರೂ ನಮ್ಮಲ್ಲಿ ಹೊಲಿಗೆಯ ಬೆಳೆ ಕಡಿಮೆ. ಅದರಿಂದ ಅಲ್ಲಿ ನಾನು ಕೊಂಡ ಬಟ್ಟೆಯನ್ನು ನಮ್ಮ ಊರಿಗೇ ತಂದು, ಎಂಥ ಒಳ್ಳೇ ಬಟ್ಟೆ ಕೊಟ್ಟರೂ ತನ್ನದೇ ವಿಶಿಷ್ಟ ರೀತಿಯಲ್ಲಿ ಕೆಡಿಸುವ ನಮ್ಮ ಪುಟ್ಟಸ್ವಾಮಿಗೇ ಕೊಡುವುದು ಎಂದುಕೊಂಡೆ. ಆದರೆ, ಆಕ್ರಾದಲ್ಲಿ ಈ ಬಟ್ಟೆಗಳನ್ನು ನೋಡಿ ಮೆಚ್ಚಿಕೊಂಡ ನಮ್ಮ ಶಾಸ್ತ್ರಿ, ಹೊಲಿಯದ ಬಟ್ಟೆಯನ್ನು ಕಂಡರೆ ಕಸ್ಟಮ್ಸ್ ನವರು ಹಿಡಿಯುತ್ತಾರೆ ಎಂದು ಹೆದರಿಸಿದರು: ಹೊಲಿಸಿಕೊಂಡು ಹೋದರೆ ಮಾತ್ರ ಭಯವಿಲ್ಲ ಎಂದರು. ಬುಖಾರೆಸ್ಟ್, ಆಥೆನ್ಸ್ ಗಳಲ್ಲಿ ಸರಿಯಾದ ಸಿಂಪಿಗ ಸಿಕ್ಕಲಿಲ್ಲ: ಸಿಕ್ಕಿದರೂ ಹೊಲಿಗೆಯ ಬೆಲೆ ನನಗೆ ಹೊಂದಲಿಲ್ಲ. ಅದರಿಂದಾಗಿ ಮ್ಯಾನಿಲಾದಲ್ಲಿ ಇಳಿದ ಮೂರನೆಯ ದಿನದಿಂದ ನನ್ನ ಬಿಡುವಿನ ವೇಳೆಯನ್ನು ಸಿಂಪಿಗನ ಬೇಟೆಯ ಸಲುವಾಗಿ ಕಳೆಯಬೇಕಾಯಿತು.

ನಾನು ಉಳಿದಿದ್ದ ಹೆಸರಾಂತ ಬೇ-ವ್ಯೂ ಹೋಟೆಲಿನ ಅಕ್ಕಪಕ್ಕ ಆಸು ಪಾಸುಗಳಲ್ಲಿ ತಲಾಷ್ ಮಾಡಿ, ನಮ್ಮ ಅಂತಸ್ತಿಗೆ ಬೆಲೆಯಲ್ಲಿ ಒಗ್ಗಬಹುದೆನಿಸದ ನಾಲ್ಕಾರು ಅಂಗಡಿಗಳಲ್ಲಿ ಉಪಾಯವಾಗಿ ವಿಚಾರಿಸಿದೆ: ಪೂಸಿಮಾಡಿ ಹೊಲಿಗೆಯ ಬಾಲೆ ಇಳಿಸಲು ಪ್ರಯತ್ನಿಸಿದೆ. ಏನೆಂದರೂ ಒಂದು ಸೂಟು ಹೊಲಿಯಲು ನಲವತ್ತು ಯು.ಎಸ್. ಡಾಲರುಗಳಿಂದ ಕೆಳಕ್ಕೆ ಯಾರೂ ಇಳಿಯಲಿಲ್ಲ. ನಾನು ಕೊಂಡಿದ್ದ ಎರಡೂ ಬಟ್ಟೆಗಳ ಒಟ್ಟು ಬೆಲೆ ಇಪ್ಪತ್ತೆರಡು ಡಾಲರು ! ಏನು ಮಾಡುವುದು? ಕಸ್ಟಮ್ಸ್ನಲ್ಲಿ ಬಟ್ಟೆ ಕಳೆದುಕೊಳ್ಳುವುದಕ್ಕಿಂತ ಹೊಲಿಸಿ ಉಳಿಸಿಕೊಳ್ಳುವುದೇ? ಎಂದು ಯೋಚಿಸುತ್ತ ಬರುತ್ತಿರುವಾಗಲೇ ಸುಂಗ್ಲೀಯ ಹೊಲಿಗೆ ಅಂಗಡಿ ಕಣ್ಣಿಗೆ ಬಿದ್ದಿತು.

More

%d bloggers like this: