ಕಟಕಟೆಯಲ್ಲಿ ಪುಸ್ತಕಗಳು

ಗಾಳಿಬೆಳಕು

mmmmನಟರಾಜ ಹುಳಿಯಾರ್

ಅನಂತಮೂರ್ತಿಯವರ ‘ಅವಸ್ಥೆ’ ಪ್ರಕಟವಾಗಿ ಸಿನಿಮಾ ಆದಾಗ ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ ಕೋರ್ಟಿಗೆ ಹೋದರು. ಈ ಕಾದಂಬರಿಯನ್ನಾಧರಿಸಿದ ಸಿನಿಮಾದಲ್ಲಿ ತಮ್ಮ ಪತಿಯನ್ನು ವಿಕೃತವಾಗಿ ಚಿತ್ರಿಸಲಾಗಿದೆ ಎಂದು ಮಾನನಷ್ಟ ಮೊಕದ್ದಮೆ ಹೂಡಿದರು. ಜೊತೆಗೆ ಗೋಪಾಲಗೌಡರ ಶಿಷ್ಯರೂ ಗಲಾಟೆ ಎಬ್ಬಿಸಿದರು. ಆದರೆ ಸೋನಕ್ಕ ಅತ್ಯಂತ ಸಭ್ಯ ಮಹಿಳೆ. ಭಾವನಾತ್ಮಕವಾಗಿ ಘಾಸಿಗೊಂಡಿರಬಹುದಾದ ಅವರು ಈ ಮಾನನಷ್ಟದ ದಾವೆಯಲ್ಲಿ ಒತ್ತಾಯಿಸಿದ್ದ ಸಾಂಕೇತಿಕ ಪರಿಹಾರ ಒಂದು ರೂಪಾಯಿ ಮಾತ್ರ.

ಇತ್ತ, ತಮ್ಮ ಕಾದಂಬರಿಯನ್ನು ಕೋರ್ಟಿಗೆ ಎಳೆದದ್ದನ್ನು ಕಂಡ ಲೇಖಕ ಅನಂತಮೂರ್ತಿಯವರಿಗೆ ಸಹಜವಾಗಿಯೇ ಷಾಕ್ ಆಯಿತು. ಜೆ.ಪಿ, ಲೋಹಿಯಾ ಮುಂತಾಗಿ ತಾವು ಕಂಡ ಆದರ್ಶವಾದಿ ರಾಜಕಾರಣಿಗಳ ದ್ವಂದ್ವ, ಸವಾಳುಗಳನ್ನೆಲ್ಲಾ ಸೇರಿಸಿ ತಾವು ಹೆಣೆದ ರಾಜಕೀಯ ನಾಯಕನೊಬ್ಬನ ಪಾತ್ರವನ್ನು ಕೇವಲ ಗೋಪಾಲಗೌಡರ ತದ್ರೂಪಿಯೆಂದು ಕರೆದ ತಕ್ಷಣ ಅನಂತಮೂರ್ತಿಯವರಿಗೆ ನೋವಾಯಿತು. ಇದೊಂದು ಸಂಕೀರ್ಣವಾದ ಪಾತ್ರ, ಇದು ನನ್ನ ಸ್ವಂತ ಸೃಷ್ಟಿ ಎಂದು ಅವರು ಕೋರ್ಟಿಗೆ ಮನದಟ್ಟು ಮಾಡಲು ಇದ್ದದ್ದು ಶುದ್ಧ ಸಾಹಿತ್ಯಿಕ ಸಂಕೇತಗಳೇ ಹೊರತು ಪೀನಲ್ ಕೋಡುಗಳಲ್ಲ. ಅತ್ಯಂತ ಮೂರ್ತವಾದ, ಕರಾರುವಕ್ಕಾಗಿ ವಿವರಿಸಲಾದ ಸೂತ್ರಗಳ ಭಾಷೆಯಲ್ಲಿ ವ್ಯವಹರಿಸುತ್ತಾ ಅಪ್ಪಟ ವಾಸ್ತವದಲ್ಲಿ ಮುಳುಗಿರುವ ಕೋರ್ಟಿಗೆ ಕಾಲ್ಪನಿಕ ಕೃತಿಯೊಂದನ್ನು ಪ್ರವೇಶಿಸಲು ಯಾವ ಬಾಗಿಲು ತಾನೇ ಇದ್ದೀತು? ಇಂಥ ಅಪರಾಧದ ಅರ್ಥ ಇಂಥದ್ದು ಎಂದು ವಿವರಿಸಿ ನ್ಯಾಯ ಕೊಡುವ ಸಂಸ್ಥೆಗೆ ಸಂಕೇತ, ಪ್ರತಿಮೆ, ರೂಪಕ, ಕಲ್ಪನೆ, ಸರ್ರಿಯಲಿಸಂ, ಮ್ಯಾಜಿಕ್ ರಿಯಲಿಸಂ – ಇವನೆಲ್ಲ ಮನವರಿಕೆ ಮಾಡಿಕೊಡಬಲ್ಲ ಭಾಷೆಯನ್ನು ಯಾವ ವಿಮರ್ಶಕ ತಾನೇ ರೂಪಿಸಬಲ್ಲ? fact (ವಾಸ್ತವವಿವರಗಳ) ಜೊತೆಗೆ ಮಾತ್ರ ವ್ಯವಹರಿಸುವ ಸಂಸ್ಥೆಗೆ fiction (ಕಲ್ಪನೆಯ) ನ್ಯಾಯಬದ್ಧತೆಯ ಬಗ್ಗೆ ಹೇಗೆ ಮನವರಿಕೆ ಮಾಡಿಕೊಡುವುದು? ಇವೆಲ್ಲ ಪ್ರಶ್ನೆಗಳೂ ಅನಂತಮೂರ್ತಿಯವರನ್ನು ಕಾಡಿರಬಹುದು.

CB068378

ಆಗ ತಮ್ಮಂಥ ಸೃಜನಶೀಲ ಲೇಖಕನ ಕೃತಿಯೊಂದನ್ನು ಕೋರ್ಟಿಗೆ ಎಳೆಯುವುದು ಅನೈತಿಕ ಎಂದು ಅನಂತಮೂರ್ತಿಯವರಿಗೆ ಅನ್ನಿಸುತ್ತದೆ. ಸಾಹಿತ್ಯದ ಸ್ವಾಯತ್ತ ಜಗತ್ತಿನ ಮೇಲೆ ಅಸಾಹಿತ್ಯಿಕ ದಾಳಿ ಮಾಡುತ್ತವೆ ಎಂಬ ರೀತಿಯ ಮಾತುಗಳು ಅವರ ಬಾಯಿಂದ ಸಲೀಸಾಗಿ ಬರುತ್ತವೆ. ಅದಕ್ಕೂ ಹಿಂದೆ ಅವರ ಐವತ್ತನೇ ಹುಟ್ಟುಹಬ್ಬದ ದಿನವೋ ಅಥವಾ ಆ ಹುಟ್ಟುಹಬ್ಬದ ಅಂಗವಾಗಿಯೋ ನಡೆಸಲಾದ ಸೆಮಿನಾರ್ ದಿನ ನಡೆದ ವಿಚಿತ್ರ ಘಟನೆಯೊಂದನ್ನು ಇಲ್ಲಿ ನೆನಪಿಸುತ್ತಿದ್ದೇನೆ. ಅವತ್ತು ಭಾನುವಾರ, ಅಂದಿನ ‘ಕನ್ನಡ ಪ್ರಭ’ದ ಸಾಪ್ತಾಹಿಕದಲ್ಲಿ ಸುಮತೀಂದ್ರ ನಾಡಿಗರು (ಬೇಕೆಂತಲೇ ಆ ಲೇಖನ ಸರಿಯಾಗಿ ಆವತ್ತೇ ಪ್ರಕಟವಾಗುವಂತೆ ಯೋಜಿಸಿ) ಅನಂತಮೂರ್ತಿಯವರು ಕೃತಿಚೌರ್ಯ ಮಾಡಿದ್ದಾರೆ ಎಂದು ಮ್ಯಾಲಮುಡ್ ನ ‘ಮೌರ್ನರ್’ ಕತೆಯ ಭಾಗಗಳನ್ನೂ ‘ಮೌನಿ’ ಕತೆಯ ಭಾಗವನ್ನೂ ಅಕ್ಕಪಕ್ಕಕ್ಕಿಟ್ಟು ತೋರಿಸಿದ್ದರು. ಆಗ ಕೂಡ ಅನಂತಮೂರ್ತಿಯವರಿಗೆ ಹಾಗೂ ನಮ್ಮಂಥ ಅನೇಕ ಸಾಹಿತ್ಯದ ವಿದ್ಯಾರ್ಥಿಗಳಿಗೆ ನಾಡಿಗರ ನಡೆ ಅನೈತಿಕ ಅನಿಸಿತು. ಅಂದು ಕೆಲವು ಹುಂಬ ಸಾಹಿತಿಗಳು ಇದನ್ನು ಕೋರ್ಟಿಗೆ ಹಾಕಬೇಕೆಂದು ಕೂಗಿದ್ದರು. ಆದರೆ ಅನಂತಮೂರ್ತಿಯವರ ವಿದ್ಯಾರ್ಥಿ ಜಿ.ಕೆ.ಗೋವಿಂದರಾವ್ ಅನಂತಮೂರ್ತಿಯವರನ್ನು ಉಗ್ರವಾಗಿ ಸಮರ್ಥಿಸಿ ಇಡೀ ಸಾಹಿತ್ಯವೇ ಒಬ್ಬರಿಂದ ಒಬ್ಬರು ಪಡೆಯುವ ಕೆಲಸ ಎಂದು ಆಧಾರಸಹಿತ ತೋರಿಸಿ ಈ ವಿವಾದ ತಣ್ಣಗಾಗುವಂತೆ ನೋಡಿಕೊಂಡರು. ಅವತ್ತು ಗೋವಿಂದರಾಯರಿಗೆ ಕೃತಜ್ಞರಾಗಿದ್ದ ಅನಂತಮೂರ್ತಿಯವರು ಇದೇ ಗೋವಿಂದರಾವ್ ಅನಂತಮೂರ್ತಿಯವರ ಡಾಲರ್ ಕಾಲನಿ ಮನೆಯ ವಿರುದ್ಧ ಪ್ರತಿಭಟಿಸಿದಾಗ ಅವರನ್ನು ಬಾಯಿಗೆ ಬಂದಂತೆ ಜರೆದರು. ತಮ್ಮ ಬಗ್ಗೆ ಗೋವಿಂದರಾವ್ ಶುದ್ಧ ನೈತಿಕ ಪ್ರಶ್ನೆಯೊಂದನ್ನು ಎತ್ತಿದ ತಕ್ಷಣ ‘ಬೇಕಿದ್ದರೆ ಕೋರ್ಟಿಗೆ ಹೋಗಿ ನೋಡೋಣ’ ಎಂದರು! ನೈತಿಕ ಪ್ರಶ್ನೆಯೊಂದು ಕೋರ್ಟಿನಲ್ಲಿ ಬಗೆಹರಿಯುವುದಿಲ್ಲ ಎಂಬುದು ಅನಂತಮೂರ್ತಿಯವರಿಗೆ ಗೊತ್ತಿರದಿರಲು ಸಾಧ್ಯವೇ? ಅಂದರೆ ತಮ್ಮ ಪತಿಗೆ ಅನ್ಯಾಯವಾಗಿದೆಯೆಂದು ಭಾವನೆಯ ಮಟ್ಟದಲ್ಲಿ ನೊಂದ ಸೋನಕ್ಕ ಕೋರ್ಟಿಗೆ ಹೋದರೆ ಅದು ಅನೈತಿಕ. ಅದೇ ತಾವು ನೈತಿಕ ಪ್ರಶ್ನೆ ಎದುರಿಸಿದಾಗ ಕೋರ್ಟು ಬೇಕು!

ಗಂಗಾಧರ ಕುಷ್ಟಗಿ ‘ತಲೆಮಾರಿನ ತಳಮಳ’ ಎಂಬ ಪುಸ್ತಕದಲ್ಲಿ ತಮ್ಮ ಸೆಮಿನಾರ್ ಭಾಷಣವೊಂದನ್ನು ಪ್ರಕಟಿಸಿದ್ದಕ್ಕೆ ತಾವು ಅನುಮತಿ ಕೊಟ್ಟಿಲ್ಲ ಎಂಬ ಬಾಲಿಶ ಪ್ರಶ್ನೆಯೊಂದಿಗೆ ಅನಂತಮೂರ್ತಿ ಕೋರ್ಟಿಗೆ ಹೋದರು. ಕನ್ನಡದಲ್ಲಿ ಒಂದು ಗಂಭೀರ ಪುಸ್ತಕ ಸಾವಿರ ಕಾಪಿ ಕೂಡ ಖರ್ಚಾಗುವುದು ಕಷ್ಟ. ಅಂಥದ್ದರಲ್ಲಿ ಲಂಕೇಶರ ಅಭಿಮಾನಿಯೊಬ್ಬ ಪ್ರಕಟಿಸಿದ ಪುಸ್ತಕಕ್ಕೆ ಕೋರ್ಟ್ ಸ್ಟೇ ತಂದು ಕಿರಿಕಿರಿ ಮಾಡಬೇಕೆಂಬ ಚಪಲ ಅನಂತಮೂರ್ತಿಯವರಿಗೆ ಹುಟ್ಟಿತು. ಆದರೆ ಆ ಮೂಲಕ ತಾವು ಕಳೆದ ಮೂವತ್ತು ವರ್ಷ ಕಾಲ ವ್ರತವೆಂಬಂತೆ ಪ್ರತಿಪಾದಿಸಿಕೊಂಡು ಬಂದ ಸಾಹಿತ್ಯಿಕ ಜಗತ್ತಿನ ಸ್ವಾಯತ್ತತೆಯ ಪ್ರಶ್ನೆಗೆ ತಾವು ಕಲ್ಲು ಹಾಕುತ್ತಿದ್ದೇವೆಂಬುದು ಅನಂತಮೂರ್ತಿಯವರಿಗೆ ಮರೆತುಹೋಯಿತು. ಅಂದರೆ ಸಾಹಿತ್ಯಲೋಕದ ಸ್ವಾಯತ್ತತೆಯ ಬಗ್ಗೆ ಅವರು ಈತನಕ ಹಾಗೂ ಇನ್ನುಮುಂದೆ ಆಡಲಿರುವ ಮಾತುಗಳೆಲ್ಲ ಅರ್ಥಹೀನ ಎಂದಂತಾಯಿತು. ಇನ್ನುಮುಂದೆ ಹಿರಿಯ ಲೇಖಕರಾದ ಅನಂತಮೂರ್ತಿಯವರ ‘ಅಗ್ರಪಂಕ್ತಿ’ಯನ್ನುನುಸರಿಸಿ ಗೋಪಾಲಗೌಡರಿಗೆ ಅನ್ಯಾಯವಾಗಿದೆ ಎಂದು ಗೋಪಾಲಗೌಡರ ಅಭಿಮಾನಿಗಳು ಈಗ ಅವರ ‘ಅವಸ್ಥೆ’ ಕಾದಂಬರಿಗೆ ತಡೆಯಾಜ್ಞೆ ತಂದರೆ ಅವರೇನು ಮಾಡುತ್ತಾರೆ?

0087bannedbooks

ಈ ಬಗೆಯ ‘ಹಿರಿಯ’ ಲೇಖಕರು ನಮ್ಮ ನಡುವೆ ಇರುವಾಗ ಪಿ.ವಿ.ನಾರಾಯಣ ಬರೆದ ‘ಧರ್ಮಕಾರಣ’ ಎಂಬ ಕಾದಂಬರಿಯನ್ನು ರದ್ದುಮಾಡುವುದು ಸಮಾಜವಾದಿ ಜೆ.ಎಚ್.ಪಟೇಲರಿಗೆ ಅಷ್ಟು ಕಷ್ಟವಾಗುವುದಿಲ್ಲ. ಪಟೇಲ್ ಸರ್ಕಾರದ ಮೂರ್ಖ ಅಧಿಕಾರಿಯೊಬ್ಬ ‘ಸಾಹಿತಿಗಳಿಗೆ ಸೆನ್ಸಾರ್ ಮಂಡಳಿ ಬೇಕು’ ಎಂದು ಚೀರುವುದು ಕೂಡ ಈಗ ಸುಲಭ. ಅನಂತಮೂರ್ತಿಯವರು ‘ಧರ್ಮಕಾರಣ’ದ ವಿಚಾರದಲ್ಲಿ ಪಟೇಲರ ನಡೆಯನ್ನು ಖಂಡಿಸಲು (ಅದೂ ಎಚ್ಚರಿಕೆಯಿಂದ ಆಯ್ದ ಜಾಣ ಮಾತುಗಳಲ್ಲಿ ಖಂಡಿಸಲು) ತಿಂಗಳುಗಟ್ಟಲೆ ತೆಗೆದುಕೊಂಡರು. ಸದ್ಯ, ಸರ್ಕಾರ ಸಾಹಿತ್ಯಿಕ ವಿಚಾರದಲ್ಲಿ ಅತಿಕ್ರಮ ಪ್ರವೇಶ ಮಾಡಿದಾಗ ಕೆಲವರಿಗಾದರೂ ಅದನ್ನು ಪ್ರಶ್ನಿಸಬೇಕೆಂಬ ದಿಟ್ಟತನ ಬಂದಿದ್ದು ಕನ್ನಡ ಸಾಹಿತ್ಯದ ಅದೃಷ್ಟ. ಬರಗೂರು, ಸಿ.ಎಚ್.ಹನುಮಂತರಾಯ ಮುಂತಾದವರಿಗೆ ‘ಧರ್ಮಕಾರಣ’ದ ಹಾಗೂ ತನ್ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯನ್ನೆತ್ತಿಕೊಂಡು ಕೋರ್ಟಿಗೆ ಹೋಗಬೇಕೆನ್ನಿಸಿತು. ದುರಂತವೆಂದರೆ ಬುದ್ಧಿಜೀವಿಗಳು ಹಾಗೂ ಸಾಹಿತ್ಯ ವಿಮರ್ಶೆ ನಿರ್ಧರಿಸಬೇಕಾದ ಪ್ರಶ್ನೆಯನ್ನು ನಿರ್ಧರಿಸುವುದು ಕೋರ್ಟಿಗೆ ಅಷ್ಟು ಸುಲಭವಲ್ಲ. ಆದರೂ ಕೋರ್ಟು ತನಗೆ ದೊರಕಿದ, ‘ಚಾರಿತ್ರಿಕ’ವೆಂದು ಹೇಳಲಾದ, ಆಧಾರಗಳ ಮೇಲೆ ‘ಧರ್ಮಕಾರಣ’ದ ರದ್ದತಿಯನ್ನು ಎತ್ತಿ ಹಿಡಿದಿದೆ ಅಥವಾ ವಿವಾದಾಸ್ಪದವಾದ ನಾಲ್ಕು ಪುಟಗಳನ್ನು ಬಿಟ್ಟು ಅದನ್ನು ಮಾರಾಟ ಮಾಡಬಹುದೆಂದು ಹೇಳಿದೆ.

ಆದರೆ ಕಾದಂಬರಿಯೊಂದರ ಬಗ್ಗೆ ದೊರೆತನಕ ದೂರು ಒಯ್ದು, ನಂತರ ಅದನ್ನು ಕೋರ್ಟಿಗೆ ಒಯ್ಯಲು ಕಾರಣವಾದ ಘಟನಾವಳಿಗಳ ಹಿನ್ನಲೆಯಲ್ಲಿ ಸ್ವತಃ ಪ್ರಗತಿಶೀಲ ಸಾಹಿತಿಯೂ, ನ್ಯಾಯವಾದಿಯೂ ಆದ ಕೋ. ಚೆನ್ನಬಸಪ್ಪನವರೂ ಇದ್ದರು. ಅಂದರೆ ‘ಪ್ರಗತಿಶೀಲ’ ಸಾಹಿತಿಯಾದ ಕೋ.ಚೆ.ಯವರೂ ‘ಪ್ರಗತಿಪರ’ ಸಾಹಿತಿಯಾದ ಅನಂತಮೂರ್ತಿಯವರೂ ತಮಗೆ ಒಪ್ಪಿತವಾಗದ ಪುಸ್ತಕದ ಬಗ್ಗೆ ಸರ್ಕಾರವನ್ನೂ , ಕೋರ್ಟನ್ನೋ ಮೊರೆ ಹೋಗುವುದರ ಬಗ್ಗೆ ಒಂದೇ ಅಭಿಪ್ರಾಯ ಹೊಂದಿದ್ದಾರೆಂದಾಯಿತು. ಆದರೆ ಲಂಡನ್ನಿಗೆ ಹೋಗಿ ರಶ್ದಿ ವಿಚಾರದಲ್ಲಿ ಭಾರತೀಯ ಲೇಖಕರು ತಪ್ಪು ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸುವುದು ಮಾತ್ರ ಅನಂತಮೂರ್ತಿಯವರಿಗೆ ನೀರು ಕುಡಿದಷ್ಟೇ ಸಲೀಸು. ನೈತಿಕ ವಿಚಾರಗಳ ಬಗ್ಗೆ, ಸಾಂಸ್ಕೃತಿಕ ವಿಚಾರಗಳ ಬಗ್ಗೆ ಚಿಲ್ಲರೆ ಕಾರಣಗಳಿಗಾಗಿ ಸರ್ಕಾರ, ಕೋರ್ಟುಗಳ ಮೊರೆಹೋಗುವವರು ತಮ್ಮ ಸೃಜನಶೀಲತೆಗೆ ತಾವೇ ಕೋಳ ಹಾಕಿಕೊಳ್ಳುತ್ತಿದ್ದಾರೆಂಬುದನ್ನು ಅರಿತಂತಿಲ್ಲ. ಒಮ್ಮೆ ಪ್ರಭುತ್ವಕ್ಕೆ ಸಾಹಿತಿಯ, ಕಲಾವಿದರ ರಕ್ತದ ರುಚಿ ಸಿಕ್ಕರೆ ಪರಿಣಾಮ ಎಷ್ಟು ಭಯಂಕರ ಎಂಬುದನ್ನು ಚಣ ಮರೆತರೂ ಮುಂದೆ ದುರಂತ ತಪ್ಪಿದ್ದಲ್ಲ.

ಲೇಖಕನ ಪುಸ್ತಕ, ಕಲಾವಿದನ ಪೇಂಟಿಂಗ್, ಲೈವ್ ಬ್ಯಾಂಡ್ ನಲ್ಲಿ ಗಿಟಾರಿಸ್ಸ್ಸ್ಟಗಿಟಾರ್ ಅಥವಾ ಹಾಡುಗಾರ್ತಿಯ ಹಾಡು ಮುಂತಾದ ಕೋಮಲ ಲೋಕಗಳಿಗೆ ಸರ್ಕಾರದ ಕೊಳಕು ಮೂಗು, ಪೋಲಿಸರ ಬೂಟು, ಮೂಲಭೂತವಾದಿಗಳ ದೊಣ್ಣೆ ಇವೆಲ್ಲ ನುಗ್ಗುವುದು ಸರ್ವಾಧಿಕಾರಿ ವ್ಯವಸ್ಥೆ ಬರುವುದು ಗುರುತು. ಇಂಥದನ್ನು ಬರೆಯಬೇಡ ಎನ್ನಬಲ್ಲ ಸರ್ಕಾರವೇ ಇಂಥದನ್ನು ಬರೆ ಎಂದು ತಾಕೀತು ಮಾಡುತ್ತದೆ. ಹಿಂದೆ ರಷ್ಯಾದಲ್ಲಿ, ಯಾವುದಾದರೂ ಕವಿತೆಯಲ್ಲಿ ಸ್ಟ್ಯಾಲಿನ್ ಹೆಸರು ಬಂದರೆ ‘ಯಾಕೆ ಬಂತು?’ ಎಂದು ಪೋಲಿಸರು ಗುಡುಗುತ್ತಿದ್ದರಂತೆ. ಆದರೆ ಬಡಪಾಯಿ ಕವಿಯೊಬ್ಬನ ಸ್ಟ್ಯಾಲಿನ್ ಹೆಸರು ಕೈಬಿಟ್ಟರೆ, ಸ್ಟ್ಯಾಲಿನ್ ಸಾಹೇಬರ ಹೆಸರು ಯಾಕೆ ಸಲ್ಲ? ಎಂದು ಲಾಠಿ ಕುಟ್ಟುತ್ತಿದ್ದರಂತೆ. ಅಷ್ಟೇಕೆ, ಇಂಡಿಯಾದ ಎಮರ್ಜೆನ್ಸಿಯಲ್ಲಿ ಮೊನ್ನೆ ಮೊನ್ನೆ ನಡೆದದ್ದು ಸಾಹಿತಿಗಳಿಗೆ, ಕಲಾವಿದರಿಗೆ ಇಷ್ಟು ಬೇಗ ಮರೆತುಹೋದಂತಿದೆ. ಅದು ಮರೆತುಹೋಗಿದ್ದರೆ ಮೊನ್ನೆ ಮತ್ತೆ ಮುಂಬಯಿಯಲ್ಲಿ ಶಿವಸೇನೆ ಸರ್ಕಾರದ ಹೆಬ್ಬೆರಳಿನಡಿಯಲ್ಲಿ ಬಜರಂಗಿಗಳು ಹರಿದು ಹಾಕಿದ ಎಂ.ಎಫ್.ಹುಸೇನರ ಪೇಂಟಿಂಗಿನ ಚೂರುಗಳಾದರೂ ಅದನ್ನು ನೆನಪಿಸಲಿ.            

ಮೇ 13, 1998

‘ಗಾಳಿ ಬೆಳಕು’ ಕೃತಿಯಿಂದ  

7 ಟಿಪ್ಪಣಿಗಳು (+add yours?)

 1. aijoor
  ಡಿಸೆ 24, 2008 @ 12:38:59

  ಇವತ್ತು ಕನ್ನಡದಲ್ಲಿ ಅತಿ ಹೆಚ್ಚು ಜನಪ್ರೀತಿ ಮತ್ತು ಕಟು ಟೀಕೆಗೆ ಒಳಗಾದ ಲೇಖಕರಲ್ಲಿ ಹಿರಿಯರಾದ ಅನಂತಮೂರ್ತಿಯವರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಒಬ್ಬ ಸಿನಿಮಾ ನಟನೋ, ಪುಡಿ ರಾಜಕಾರಣಿಯೋ ಅಥವಾ ಒಂದು ಸಮುದಾಯದ ಪ್ರಭಾವಿ ವ್ಯಕ್ತಿಯೊಬ್ಬ ತನ್ನೊಳಗೆ ಅಹಂಕಾರ ತುಂಬಿಕೊಂಡು ಜನರಿಂದ ದೂರವಾಗ ಬಯಸಬಹುದಾದರೂ ಇಂಥ ಅಹಂಕಾರ ಬರಹಗಾರನಲ್ಲಿ ಮಾತ್ರ ಯಾವತ್ತೂ ಬೆಳೆಯಬಾರದು ಎಂಬ ವಿವೇಕವನ್ನು ನಾನು ಕಲಿತದ್ದು ಅನಂತಮೂರ್ತಿಯವರಿಂದಲೇ.

  ಹತ್ತು ವರ್ಷಗಳ ಹಿಂದಿನ ಬರಹವೊಂದು (ಬಹುಶಃ ಈ ಲೇಖನವನ್ನು ದಶಕದ ಹಿಂದೆ ಅನಂತಮೂರ್ತಿಯವರು ಓದಿ ಮರೆತಿರಬಹುದು ಅಥವಾ ಓದದೆಯೂ ಇರಬಹುದು) ಈಗ ಹಠಾತ್ ಕಾಣಿಸಿಕೊಂಡು ಅನಂತಮೂರ್ತಿಯವರ ಪೇಚಾಟಕ್ಕೆ ಕಾರಣವಾಗಿದ್ದರೆ ಅದು ಸಹಜವೇ. ಅನಂತಮೂರ್ತಿಯವರ ಬದುಕು, ಸಾಹಿತ್ಯ, ಜ್ಞಾನಪೀಠ, ಡಾಲರ್ಸ್ ಕಾಲನಿಯ ಮನೆಯ ಕುರಿತು ಈಗಾಗಲೇ ಅನೇಕರು ಅನೇಕ ಬಗೆಯಲ್ಲಿ ಬರೆದಿದ್ದಾರೆ. ಈ ಹಿಂದೆ ಡಾಲರ್ಸ್ ಕಾಲನಿ ಮನೆಯ ಕುರಿತಂತೆ ಕೆಲವರ ಮೂರನೇ ದರ್ಜೆ ಮಾತುಗಳು ಅನಂತಮೂರ್ತಿಯವರನ್ನು ಘಾಸಿಗೊಳಿಸಿರಬಹುದು. ಇವತ್ತು ಅವರ ಡಾಲರ್ಸ್ ಕಾಲನಿ ಮನೆಯ ಬಣ್ಣ ಫೇಡಾಗಿರಬಹುದು, ಆದರೆ ನಟರಾಜ್ ಹುಳಿಯಾರರು ತಮ್ಮ ಲೇಖನದಲ್ಲಿ ಎತ್ತಿರುವ ಪ್ರಶ್ನೆಗಳು ತಳೆದಿರುವ ನಿಲುವು ಮತ್ತು ಒತ್ತಾಸೆಯಿಂದಾಗಿ ದಶಕದ ಹಿಂದಿನ ಲೇಖನವೊಂದು ಔಟ್ ಡೇಟೆಡ್ ಆಗದೆ ಇವತ್ತಿಗೂ ಜೀವಂತವಾಗುಳಿದಿದೆ. ಅನಂತಮೂರ್ತಿಯವರಾಗಲಿ ಅವರನ್ನು ಓದಿ ಇಷ್ಟ ಪಟ್ಟ ಅನೇಕರ ಬೇಸರಕ್ಕೆ ಕಾರಣವಾಗಬಲ್ಲ ಒಂದೇ ಒಂದು ಪದ ಲೇಖನದ ಯಾವ ಮೂಲೆಯಲ್ಲೂ ಪ್ರಸ್ತಾಪವಾಗಿಲ್ಲ.

  ಕಳೆದ ಒಂದು ದಶಕದಲ್ಲಿ ಕರ್ಣಾಟಕದ ಉದ್ದಗಲಕ್ಕೂ ಅನೇಕ ಸ್ಥಿತ್ಯಂತರಗಳು ಹಾದುಹೋಗಿವೆ. ಇವತ್ತು ಪರಮನೀಚರ ಕೂಗಾಟದಲ್ಲಿ ಸಭ್ಯರ ಮೆಲುದನಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಎಸ್.ಎಲ್.ಭೈರಪನವರ ವಿ’ಕೃತಿ’ ಯೊಂದರ ಬಗ್ಗೆ ಅನಂತಮೂರ್ತಿಯವರು ತಕರಾರು ತೆಗೆದಾಗ ಗೊಡ್ಡು ಸನಾತನಿಗಳು, ಚಡ್ಡಿಚತುರರು ಮತ್ತು ಎಸ್.ಎಲ್. ಭೈರಪ್ಪ ಭಜನಾ ಮಂಡಳಿಯ ಆಜೀವ ಸದಸ್ಯರು ಅವರ ಮೇಲೆ ಯಾವ ಪರಿ ಬಿದ್ದರು ಎನ್ನುವುದು ಇಡೀ ನಾಡಿಗೆ ಗೊತ್ತು. ಆಗ ಅನಂತಮೂರ್ತಿಯವರು ಬೆನ್ನಿಗೆ ನಿಂತದ್ದು ಇದೇ ನಟರಾಜ್ ಹುಳಿಯಾರ್ ಮತ್ತು ‘ಕನ್ನಡ ಟೈಮ್ಸ್’ ಎಂಬ ವಾರಪತ್ರಿಕೆ. ಈ ಸಂಗತಿ ‘ಕನ್ನಡ ಟೈಮ್ಸ್’ ಬಲ್ಲ ಕೆಲವರಿಗಾದರೂ ಗೊತ್ತಿರುವಂತದ್ದೇ.

  ಲೇಖನದ ಹಿಂದಿರುವ ಸಾತ್ವಿಕ ಸಿಟ್ಟನ್ನು ಅನಂತಮೂರ್ತಿಯವರು ಅರ್ಥಮಾಡಿಕೊಂಡರೆ ಸಾಕು. ಅವರ ವಿವೇಕ ಅವರನ್ನು ಇನ್ನಷ್ಟು ಜೀವಂತ ಆಲೋಚನೆಗಳಿಗೆ ಒಡ್ಡಲಿ.

  -ಕೆ.ಎಲ್. ಚಂದ್ರಶೇಖರ್ ಐಜೂರ್

  ಉತ್ತರ

 2. eshakumar h n
  ಡಿಸೆ 14, 2008 @ 22:49:55

  buddi jeevigala lakshanavallave adu KRUTI tammadadare srujanatmaka vadadu.bereyavaru endigu tamma helike haagu nadeyanu prashnisuva naitika hone illa embude
  samaajavaadigalendu mogavaada darisiruva barahagaraara dhaati.

  ಉತ್ತರ

 3. ಕೆ.ಫಣಿರಾಜ್
  ಡಿಸೆ 11, 2008 @ 23:45:27

  ಅಹಾ!ಜಾಣ ಎಮ್ಮೇ ಕೋಣ! ಮೊಘಲೇಜಮ್, ಸತ್ಯಹರಿಚ್ಚಂದ್ರಕ್ಕೆ ಬಣ್ನ ಹಾಕಿ ರಿಲೀಜ್ ಮಾಡ್ಬಿಟ್ಟಿ, ೧೯ಫಿಪ್ಟಿಸ್ ಪಿಲ್ಮು, ಆ ಕಾಲ್ದಂಗ್ ನೋಡ್ದಂಗೆ ನೋಡಿ ಅಂದ್ರೆ ಹೆಂಗ್ರಣ್ಣ!ಇವತ್ತಲ್ವರಾ ಆ ಸಿನುಮ ನಾವ್ ನೋಡದು 36 years young bad boy! ಪೋಸ್ಟ್ ಮಾಡ್ರನಿಸಮ್ಮಿಸಮ್ಮಲ್ಲಿ ಅದೆಂತೋಂದೋ ಅಂತರಲ್ಲಪ್ಪ- EVERY TEXT HAS IT’S CONTEXT ಅಂತ.
  ಬಿಡಿ. ಇದನ್ನು ಪೋಶ್ತ್ ಮಾಡಿದ ಅವಧಿಯ ಗೆಳೆಯರಿಗೂ, ಮಿತ್ರ ನಟರಾಜನಿಗೂ, ಮತ್ತು ನಿಮ್ಮೆಲ್ಲರ ತರಹವೇ ಇರುವ ನನಗೂ ಪಾಠವಾಗಿ ಒಂದು ವಿವೇಕಯುತ ಉದಾಹರಣೆಯನ್ನು ನೀಡುತ್ತಿದ್ದೇನೆ: ಇಂದಿಗೂ ಮಂಡೆ ಸಮಾ ಇಟ್ಟುಕೋಡಿರುವ ಕನ್ನಡದ ಖ್ಯಾತ ಗದ್ಯ ಬರಹಗಾರೊಬ್ಬರು, ಮೂರು ದಶಕಗಳಿಗೂ ಮಿಕ್ಕಿದ ತಮ್ಮ ಬಿಡಿ ಬರಹಗಳನ್ನು ಪುಸ್ತಕ ರೂಪದಲ್ಲಿ ತರಬೇಕೆಂದು ಕನ್ನಡದ ಮಾಹಾಮಹಿಮ ಲೇಖಕರು ಒತ್ತಾಯಿಸಿದರೂ, ಅದಕ್ಕೆ ಸುತಾರಾಮ್ ಅನುಮತಿ ನೀಡುತ್ತಿಲ್ಲ. ಈ ನಿಲುವಿಗೆ ಅವರು ಕೊಡುವ ಕಾರಣ ಸರಳವಾದದ್ದು- ನಾನು ಹಿಂದೊಮ್ಮೆ ಬರೆದ ಬರಹದ ನಿಲುವಿನ ಬಗ್ಗೆ ಇಂದು ನನಗೇ ಒಪ್ಪಿಗೆ ಇಲ್ಲ; ಹಾಗಿರುವಾಗ ಓದುಗರ ಮೇಲೆ ಹೇರುವುದು ತೀರ ಅಸಹ್ಯ. ನಾವೆಲ್ಲ ವರ ಹಾಗೆ ಇರಬೇಕು ಎಂಬುದು ನನ್ನ ವಾದವಲ್ಲ. ಆ ಅಪರೂಪದ ವಿವೇಕದಿಂದ ನಾವು ಒಂದಿಷ್ಟಾದರೂ ಪಾಠ ಕಲಿಯುವುದು ಒಳ್ಳೆಯದು ಎನ್ನುವುದಷ್ಟೇ ನನ್ನ ವಿನಂತಿ. WITH NO MALICE TOWARDS NONE.

  ಉತ್ತರ

 4. natarajhuliyar
  ಡಿಸೆ 11, 2008 @ 10:23:33

  priya phaniraj.

  thanks for your reaction. Please see the date of publication and you will know that the article was written 10 years ago and I Can’t undo it now.What you say of the excessive moral tone in the essay is perhaps true.But that is how a thirty six year ‘boy’ wrote !

  ಉತ್ತರ

 5. ಕೆ.ಫಣಿರಾಜ್
  ಡಿಸೆ 10, 2008 @ 14:09:03

  ಪ್ರಿಯ ನಟರಾಜ್,
  ಮತ್ತೊಮ್ಮೆ ಜಗಳಕ್ಕೆ ಸಿಕ್ಕಿಯಲ್ಲ-ಥ್ಯಾಂಕ್ಸ್. ನಿನ್ನ ಬರಹದ ನೈತಿಕ ಮೇಲುಗಾರಿಕೆಯ ಧೋರಣೆಯೇ ನನ್ನಲ್ಲಿ ಹೆದರಿಕೆ ಹುಟ್ಟಿಸುತ್ತಿದೆ ಗುರುವೇ! ಸದಾನಂದ ಗೌಡರು ‘ಅನಂತ ಮೂರ್ತಿ ಸುಳ್ಳು ಅಫಡಿವಿಟ್ ಸಲ್ಲಿಸಿ ಮನೆ ಪಡೆದಿದ್ದಾನೆ’ ಎಂದು ಕತ್ತಿ ಮಸೆದ ಹೊತ್ತಿನಲ್ಲೇ ನೀನು ಅ.ಮೂ.ರ ನೈತಿಕತೆ ಪ್ರಷ್ನಿಸುತ್ತಿರುವುದು ಸರಿಯಾ ಎಂಬ ಪಾರ್ಟಿ ವಾದಕ್ಕೆ ನಾನು ಹೋಗುವುದಿಲ್ಲ. ಆದರೆ, ನೈತಿಕತೆ ಎನ್ನುವುದು ಲೌಕಿಕದಿಂದ ಮುಕ್ತವಾದದ್ದ? ಇವೆರಡು ಪರಸ್ಪರ ಸ್ಪರ್ಷವಿಲ್ಲದವು ಎಂದು ಮಾತನಾಡುವುದು ಸರಿಯಾ? ಅ.ಮೂ.ರ ಡಾಲರ್ ಕಾಲನಿಯ ಮನೆಯ ಬಗೆಗಿನ ಲೌಕಿಕ ವಿವರಗಳನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೆ, ಶುದ್ಧ ನೈತಿಕತೆಯಲ್ಲಿ ಮಾತನಾಡಿದ್ದು ಸರಿಯಾ! ಲಂಕೇಶ್ ಪತ್ರಿಕೆಯಿಂದ ಸ್ವಲ್ಪ ನೆಮ್ಮದಿಯ ಬದುಕು ನಡೆಸುತ್ತಿದ್ದಾಗ, ಡಿ.ಆರ್. ವಿದ್ವತ್ತ್ ವಲಯದಲ್ಲಿ ಕೊಂಚ ಮೇಲೇರಿ, ವಿಮಾನ-ಕಾರುಗಳ ಸಹವಾಸದಲ್ಲಿದ್ದಾಗ, ನಮ್ಮ ಕನ್ನಡ ‘ನೈತಿಕರು’ ಆದಿಕೊಂಡದ್ದು ಏನು? ಹಾಗೆ ಆಡಿಕೊಳ್ಳುವವರು ತಮ್ಮ ಲೌಕಿಕ-ನೈತಿಕ ಸ್ಥಿತಿಯನ್ನು ಒಂಚೂರಾದರೂ ಹೊರಳಿ ನೋಡಿಕೊಂಡಿದ್ದರ? ಇದನ್ನೆಲ್ಲ, ನಾನು ಸ್ವಲ್ಪ ವ್ಯಘ್ರನಾಗಿಯೇ ಕೇಳುತ್ತಿದ್ದೇನೆ. ಇದು, ಬರಿ ಅ.ಮೂ. ಪ್ರಶ್ನೆಯಲ್ಲ ಎನ್ನುವುದು ನಿನಗೂ ಗೊತ್ತು. ಲೌಕಿಕ ಗೋಜಲುಗಳ ಪರಿವೆ ಇಲ್ಲದೆ, ಈ ರೀತಿ ಲಂಕೇಶ್, ಡಿ.ಆರ್. ಬಗ್ಗೆ ಕನ್ನಡದ ಮಹಾ ‘ನೈತಿಕ ಸೇನಾನಿಗಳು’ ಮಾತನಾಡಿದಾಗಲು ಸಿಟ್ಟು ಬರುತ್ತಿತ್ತು; ನೀನು ಅದೇ ಭಾಷೆಯಲ್ಲಿ ಮಾತಾಡುತ್ತಿದ್ದಿ ಎಂದು ಕಂಡು ರೇಗಿ ಹೋಗಿದೆ.

  ಉತ್ತರ

 6. natarajhuliyar
  ಡಿಸೆ 09, 2008 @ 23:43:36

  DEAR SAGAR ,My collection of articles GaaliBelaku is available at Avadhi.Please contact them for the book.

  ಉತ್ತರ

 7. varsa sagar
  ಡಿಸೆ 09, 2008 @ 19:10:05

  very good piece of writing. as i do not have teh facility to write in kannada, i writing this in Eng. huliyar raised a very good point. someone even called ura as Jagadguru, he thinks he is right when it comes to “Naitikate”. Huliyar, why not bring a book of your articles

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: