ಕನ್ನಡಿಯಿಂದ ಎಷ್ಟು ದೂರ?

ಗಾಳಿಬೆಳಕು

ನಟರಾಜ ಹುಳಿಯಾರ್

ಮೈಗಾಡ್! ಭಯವಾಗುತ್ತೆ ಎಂದು ಆ ಕಲಾವಿದೆ ಪುಸ್ತಕ ವಾಪಸ್ ಕೊಟ್ಟಳು. ಕೇವಲ ಎರಡು ದಿನದ ಹಿಂದೆ ‘ಶಿವಗಂಗಾ’ ಎಂಬ ಸ್ತ್ರೀವಾದಿ ಕಾದಂಬರಿಯನ್ನು ಆ ಕಲಾವಿದೆಗೆ ಕೊಟ್ಟಿದ್ದೆ. ಫೆಮಿನಿಸ್ಟ್ ಚಳುವಳಿಗಳಲ್ಲಿ ಭಾಗಿಯಾಗಿರುವ ಚಂಪಾವತಿ ಎಂಬ ಇಂಗ್ಲೀಷ್ ಅಧ್ಯಾಪಕಿ ಪ್ರಕಟಿಸಿರುವ ಕಾದಂಬರಿ ಇದು. ತನ್ನ ವರ್ಣಚಿತ್ರಗಳಲ್ಲಿ ಹೆಣ್ಣಿನ ಅಂತರಂಗ ಕುರಿತ ಪ್ರತಿಮೆಗಳನ್ನೇ ಹೆಚ್ಚು ಬಳಸುವ ಕಲಾವಿದೆಯೊಬ್ಬಳಿಗೆ ಈ ಸ್ತ್ರೀವಾದಿ ಕಾದಂಬರಿಯಿಂದ ಒಳ್ಳೊಳ್ಳೆಯ ಐಡಿಯಾಗಳು ಸಿಗಬಹುದು ಎಂಬ ಭ್ರಮೆಯಲ್ಲಿ ನಾನಿದ್ದರೆ, ಆಕೆ ಆ ಕಾದಂಬರಿ ಓದುವುದನ್ನು ಅರ್ಧಕ್ಕೇ ನಿಲ್ಲಿಸಿ, ಹೆದರಿ ಹಿಂದಕ್ಕೆ ಕೊಟ್ಟಿದ್ದಳು.

ಕಳೆದ ತಿಂಗಳು ಈ ಕಾದಂಬರಿಯ ಕೆಲಭಾಗಗಳನ್ನು ಓದಿದಾಗ ಲೇಖಕಿ ಸ್ವಲ್ಪ ಬೋಲ್ಡ್ ಆಗಿ ಬರೆದಿರುವಂತೆ ಕಂಡರೂ ಬಹಳಷ್ಟು ಕಡೆ ಬರವಣಿಗೆ ಹಸಿಹಸಿಯಾಗಿದೆಯೆನ್ನಿಸಿತ್ತು. ಆ ಬಗ್ಗೆ ಏನೂ ಹೇಳದೆ, ಈ ಕಾದಂಬರಿಯಲ್ಲಿ ಹೆಣ್ಣಿನ ಬಗ್ಗೆ ಕಹಿಸತ್ಯಗಳಿವೆ ಎಂದು ಭಯವಾಗಿಯೆ? ಎಂದೆ.

mirror_images

ಅಯ್ಯೋ, ಅದಲ್ಲ.. ನನ್ನ ಹಲ್ಲು ಎಂದು ಕಲಾವಿದೆ ಇಳಿಮುಖ ಮಾಡಿಕೊಂಡಳು. ಅರ್ಥವಾಗಲಿಲ್ಲ.
ಇನ್ನೇನು ಕಣ್ಣಂಚಿನಿಂದ ಹನಿ ಉರುಳಲಿತ್ತು. ಈಚೆಗೆ ಪರಿಚಯವಾದ ಈ ಕಲಾವಿದೆ ಗಂಭೀರ ಮುಖವನ್ನಷ್ಟೇ ಕಂಡಿದ್ದೆನೇ ಹೊರತು ಅಳು ಮುಖವನ್ನು ಕಂಡಿರಲಿಲ್ಲ. ನಿನ್ನ ಹಲ್ಲು ಏನಾಯಿತು? ಅಂದೆ.

ಪ್ರಶ್ನೆ ಮುಗಿಯುವ ಮುನ್ನವೇ ಆಕೆಯ ಕಣ್ಣಿಂದ ನೀರು ಒಸರತೊಡಗಿತು. ಆ ಕಾದಂಬರೀಲಿ ಬರೋ ಗಂಗಾ ಚಿಕ್ಕವಯಸ್ಸಿನಲ್ಲೇ ಎಲ್ಲ ಹಲ್ಲುಗಳನ್ನೂ ಕೀಳಿಸಿಕೋಬೇಕಾಗುತ್ತೆ. ನಾನು ಮೂರು ದಿವಸದಿಂದ ಯಾವ ಮಾತ್ರೆ ತಗೊಂಡ್ರೂ ಹಲ್ಲುನೋವು ನಿಂತಿಲ್ಲ. ಇಷ್ಟು ಚಿಕ್ಕವಯಸ್ಸಿಗೇ ಹಲ್ಲು ಕಳಕೊಂಡ್ರೆ ಎಂದು ಕಲಾವಿದೆ ಸಣ್ಣಗೆ ಬಿಕ್ಕತೊಡಗಿದಳು.

ನಾನು ನಗತೊಡಗಿದೆ. ಅವಳ ಭಯ ಅರ್ಥವಾಗಿತ್ತು. ಆಕೆಗೆ ಹಲ್ಲು ನೋವಿರುವುದು ಮೊದಲೇ ಗೊತ್ತಿದ್ದರೆ ಈ ಕಾದಂಬರಿ ಕೊಡುತ್ತಿರಲಿಲ್ಲ! ಒಮ್ಮೆ ಜರ್ಮನ್ ವಿಮರ್ಶಕ ವಾಲ್ಟರ್ ಬೆಂಜಮಿನ್ ಗೆ ಹುಷಾರಿರಲಿಲ್ಲ. ಅಂದು ಸಂಜೆ ಅವನು ನಾಟಕಕಾರ ಬ್ರೆಕ್ಟ್ ಮನೆಗೆ ಹೋದಾಗ ಏನು ಓದುತ್ತೀಯ? ಎಂದು ಕೇಳುತ್ತಾನೆ ಬ್ರೆಕ್ಟ್ ದಾಸ್ತೋವಸ್ಕಿ ಯ ‘ಕ್ರೈಂ ಅಂಡ್ ಪನಿಷ್ಮೆಂಟ್’ ಓದುತ್ತಿದ್ದೇನೆ ಎನ್ನುತ್ತಾನೆ ಬೆಂಜಮಿನ್. ತಕ್ಷಣ ಹೌಹಾರುವ ಬ್ರೆಕ್ಟ್ ತಾನು ಹರೆಯದಲ್ಲಿ ಬಹುಕಾಲ ನರಳಿದ ಖಾಯಿಲೆಯೊಂದು ಶುರುವಾಗಿದ್ದು ತನ್ನ ಕ್ಲಾಸ್ಮೇಟನೊಬ್ಬ ಷಿಯಾನೋದಲ್ಲಿ ಷಾಪಿನ್ (ಸಾಮಾನ್ಯವಾಗಿ ಕಳವಳ, ವಿಷಾದಗಳ ಭಾವವನ್ನು ಸೃಷ್ಟಿಸುವ ಸಂಗೀತಗಾರ) ನುಡಿಸಿದಾಗ ಎಂದು ನೆನೆಸಿಕೊಳ್ಳುತ್ತಾ ಹೇಳುತ್ತಾನೆ: “ಷಾಪಿನ್ ಮತ್ತು ದಾಸ್ತೋವ್ಸ್ಕಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲರು”.

ಬ್ರೆಕ್ಟ್ ಹೇಳಿದ್ದರಲ್ಲಿ ಅರ್ಧ ತಮಾಷೆ, ಅರ್ಧ ಸತ್ಯ ಎರಡೂ ಇದ್ದಿರಬಹುದು. ಈ ಮಾತನ್ನು ಓದಿದಾಗ, ಖಾಯಿಲೆಯಾದಾಗ ಎಂಥ ಪುಸ್ತಕ ಓದಬೇಕು ಎಂದು ಪ್ರತ್ಯೇಕ ಪಟ್ಟಿಯನ್ನೇ ಮಾಡಿಕೊಳ್ಳಬೇಕೇನೋ ಎನ್ನಿಸಲಾರಂಭಿಸಿತು. ಬೇಂದ್ರೆಯವರ ‘ಒಲವೆ ನಮ್ಮ ಬದುಕು’, ಕಾರಂತರ ‘ಬೆಟ್ಟದ ಜೀವ’, ಕುವೆಂಪು ಅವರ ‘ಕಾನೂರು ಹೆಗ್ಗಡತಿ’, ತೇಜಸ್ವಿಯವರ ‘ಕರ್ವಾಲೋ’, ಲಂಕೇಶರ ‘ಟೀಕೆ-ಟಿಪ್ಪಣಿ’, ಜೇನ್ ಆಸ್ಟಿನ್, ವುಡ್ ಹೌಸ್, ಶೇಕ್ಸ್ಪಿಯರನ ಸಾನೆಟ್ಟುಗಳು ಹೀಗೆ ಖಾಯಿಲೆಯ ಸಮಯದಲ್ಲಿ ತಾಯಿಯಂತೆ ನಮ್ಮನ್ನು ಸಂತೈಸಬಲ್ಲ ಕೆಲವು ಪುಸ್ತಕಗಳು ಹಾಸಿಗೆಯ ಪಕ್ಕದಲ್ಲಿರಬೇಕೆನ್ನಿಸುತ್ತದೆ.

ಆದರೆ ಮೇಲೆ ಹೇಳಿದ ಕಲಾವಿದೆಯ ಸಮಸ್ಯೆ ಒಂದು ಪುಸ್ತಕದ ಪಾತ್ರಗಳು, ಘಟನೆಗಳನ್ನು ನೋಡುವಾಗ ಸರಿಯಾದ ಅಂತರ ಇರಿಸಿಕೊಳ್ಳದ್ದರಿಂದಲೂ ಹುಟ್ಟಿರಬಹುದೆಂದು ಈಗ ಅನ್ನಿಸುತ್ತಿದೆ. ನಾವು ಸಾಹಿತ್ಯವನ್ನು ಕನ್ನಡಿಯೆಂದೂ ಕೈದೀವಿಗೆಯೆಂದೂ ಕರೆದರೂ ಕನ್ನಡಿಯಿಂದ ಎಷ್ಟು ದೂರ ನಿಂತು ಮುಖ ನೋಡಿಕೊಳ್ಳಬೇಕೆಂಬ ಎಚ್ಚರ ಅತ್ಯಂತ ನಿರ್ಣಾಯಕವಾದದ್ದು. ಆದರೆ ನಾವು ಏನೆಲ್ಲ ಅಂತರದ, ವಿಮರ್ಶೆಯ ಮಾತಾಡಿದರೂ ಒಂದು ಕಾದಂಬರಿಯನ್ನೋ, ಕತೆಯನ್ನೋ, ಭಾವಗೀತೆಯನ್ನೋ ಬಹಳಷ್ಟು ಸಲ ಪರ್ಸನಲ್ ಆಗಿಯೇ ಓದುತ್ತಿರುತ್ತೇವೆ. ಒಮ್ಮೆ ‘ಬಾಂಬೆ’ ಎಂಬ ಜನಪ್ರಿಯ ಸಿನಿಮಾ ನೋಡುವಾಗ ತಮಗೆ ಅಳು ಬಂದದ್ದರ  ಬಗ್ಗೆ ಲಂಕೇಶರು ಬರೆದಾಗ, ನನ್ನ ಪರಿಚಿತರೊಬ್ಬರು ಪರವಾಗಿಲ್ಲಯ್ಯ, ನಿಮ್ಮ ಮೇಷ್ಟ್ರು ಕಡು ವಿಚಾರವಾದಿ ಅಂದುಕೊಂಡಿದ್ದರೆ, ಅವರೂ ನಮ್ಮ ಥರವೇ! ಎಂದು ಸಮಧಾನಪಟ್ಟಿದ್ದರು. ಹಾಗಾದರೆ ಒಂದು ಸಿನಿಮಾ ನೋಡುವಾಗ ಕಛೇರಿಗಳಲ್ಲಿ ತಲೆದೂಗುತ್ತಾ ಕೂರುವ ನಾವು ಬರಬರುತ್ತಾ ಯಾಕೆ ತಲೆದೂಗುತ್ತಿದ್ದೇವೆ ಎಂಬುದೇ ಮರೆತು ಹೋಗಿ ಅಭ್ಯಾಸಬಲದಿಂದ ಕತ್ತು ಹಾಕುತ್ತಿರುತ್ತೇವೆ ಎಂದು ಮಿಲನ್ ಕುಂದೇರ ಒಮ್ಮೆ ಹೇಳಿದ್ದ. ಇದೊಂದು ವಿಚಿತ್ರ ಸ್ಥಿತಿ. ನಾಟಕ, ಸಿನಿಮಾ ನೋಡುವಾಗ ಅಥವಾ ಕಾದಂಬರಿ ಓದುವಾಗ ತನ್ಮಯತೆಯಿರದಿದ್ದರೆ ಮನ ಕರಗುವುದಿಲ್ಲ. ಆದರೆ ಮನ ಕರಗಿ ಮಾತುಮಾತಿಗೆ  ಅಳುವವನಿಗೆ ಕೃತಿಯ ನೋಟ ಸಿಕ್ಕುವುದಿಲ್ಲ. ಹಾಗಾದರೆ ಒಂದು ಕೃತಿಯನ್ನು ಖಾಸಗಿ ಅನುಭವದಂತೆ ನೋಡಿಯೂ ವಿಮರ್ಶಾತ್ಮಕವಾಗಿರುವುದು ಸಾಧ್ಯವೆ?

ಮ್ಯಾಡಲನ್ ಸ್ಪ್ರೆಗ್ನೇಥರ್ ಎಂಬ ವಿಮರ್ಶಕಿ ಇನ್ನೂ ಹುಡುಗಿಯಾಗಿದ್ದಾಗ ‘ಹ್ಯಾಮ್ಲೆಟ್’ ನಾಟಕ ನೋಡಲು ಹೋಗುವ ಮುನ್ನ ಮನೆಯಲ್ಲಿ ನಡೆಯುತ್ತಿದ್ದ ಒಂದು ಮಾತುಕತೆ ಕಿವಿಗೆ ಬೀಳುತ್ತದೆ. ಮ್ಯಾಡಲನ್ ಳ ತಂದೆ ಸತ್ತ ಐದು ವರ್ಷಗಳ ನಂತರ ಇನ್ನೊಬ್ಬನನ್ನು ಮದುವೆಯಾಗಿ ಕೆಲವರ್ಷ ಬಾಳಿರುವ ಅವಳ ತಾಯಿ ಇದೀಗ ತನ್ನ ಎರಡನೆಯ ಗಂಡನಿಂದ ಡೈವೋರ್ಸ್ ಪಡೆಯುವ ಮಾತಾಡುತ್ತಿದ್ದಾಳೆ. ಇದನ್ನು ಕೇಳಿದ ಹುಡುಗಿ ಮ್ಯಾಡಲನ್ ಗೆ ದುಃಖ, ಭಯ ಎಲ್ಲವೂ ಶುರುವಾಗುತ್ತದೆ. ಅವತ್ತು ಮ್ಯಾಡಲನ್ ಥಿಯೇಟರಿಗೆ ಹೋಗುವುದು ಇಂಥ ಮನಸ್ಥಿತಿಯಲ್ಲಿ. ಎಲ್ಲರಿಗೂ ಪರಿಚಿತವಿರುವ ‘ಹ್ಯಾಮ್ಲೆಟ್’ ಕತೆಯನ್ನು ಇಲ್ಲಿ ಚಿಕ್ಕದಾಗಿ ನಿರೂಪಿಸುತ್ತೇನೆ: ಡೆನ್ಮಾರ್ಕ್ ನ ದೊರೆಯನ್ನು ಕೊಂದ ಅವನ ತಮ್ಮ ಕ್ಲಾಡಿಯಸ್ ಸಿಂಹಾಸನವೇರುತ್ತಾನೆ. ನಂತರ ತನ್ನ ಅಣ್ಣನ ಪತ್ನಿ ಗಟ್ರೂಡ್ಳನ್ನು ಮದುವೆಯಾಗುತ್ತಾನೆ. ಇದನ್ನು ಕಂಡು ಗತಿಸಿದ ದೊರೆಯ ಮಗ ಹ್ಯಾಮ್ಲೆಟ್ ಗೆ  ದಿಗ್ಭ್ರಮೆಯಾಗುತ್ತದೆ. ಈ ದಿಗ್ಭ್ರಮೆಯಿಂದ ಪಾರಾಗುವ, ಅಥವಾ ಅದನ್ನೇ ಹಿಂಜಿ ಕಾವ್ಯಾತ್ಮಕವಾಗಿ ಹೇಳಿಕೊಂಡು ಸುಖಿಸುವ, ತಂದೆಯ ಕೊಲೆಯ ಸೇಡನ್ನು ತೀರಿಸಿಕೊಳ್ಳುವ, ಗಂಡನ ಶವವನ್ನು ಹಿಂಬಾಲಿಸಿ ರುದ್ರಭೂಮಿಗೆ ನಡೆದಾಗ ಮೆಟ್ಟಿದ ಚಪ್ಪಲಿಗಳು ಹಳೆಯದಾಗುವ ಮುನ್ನವೇ ಇನ್ನೊಬ್ಬನನ್ನು ಮದುವೆಯಾದ ತಾಯಿಗೆ ಪಾಠ ಕಲಿಸುವ ಬಯಕೆ, ಒತ್ತಡ, ತಹತಹಗಳೆಲ್ಲ ಸೇರಿ ಹ್ಯಾಮ್ಲೆಟ್ ನನ್ನು ಭಯಂಕರ ತಾಕಲಾಟಗಳಿಗೆ ದೂಡುತ್ತವೆ.

ಅವತ್ತು ಈ ನಾಟಕ ನೋಡುವ ಮ್ಯಾಡಲನ್ ಗೆ  ತನ್ನ ತಂದೆಯ ಸಾವು ನೆನಪಾಗುತ್ತದೆ. ಹ್ಯಾಮ್ಲೆಟ್ ನ  ತಳಮಳ ತನ್ನದೂ ಎನಿಸಲಾರಂಭಿಸುತ್ತದೆ. ಹ್ಯಾಮ್ಲೆಟ್ ಗೆ ಅನಿಸುವಂತೆಯೇ ಮ್ಯಾಡಲನ್ ಗೆ ಕೂಡ ತನ್ನ ತಾಯಿ (ಗಂಡ ಸತ್ತ ಐದು ವರ್ಷದ ನಂತರ ಬೇರೆ ಮದುವೆಯಾಗಿದ್ದರೂ) ತೀರಾ ಅವಸರದಿಂದ ಮದುವೆ ಮಾಡಿಕೊಂಡು ತನ್ನ ಪತಿಗೆ ದ್ರೋಹವೆಸಗಿದಳು ಎಂದು ಸಿಟ್ಟು ಬರುತ್ತದೆ. ಹ್ಯಾಮ್ಲೆಟ್ನಂತೆ ಇವಳಿಗೂ ತನ್ನ ತಂದೆಯೊಬ್ಬ ಆದರ್ಶ ಪುರುಷ ಎನಿಸಿತೊಡಗುತ್ತದೆ. ತನ್ನ ತಂದೆಯನ್ನು ಮರೆತ ತಾನು ಪಾಪಿ ಎನಿಸತೊಡಗುತ್ತದೆ. ಆದರೆ ತನ್ನ ಮಲತಂದೆ ಸತ್ತುಹೋಗಲಿ ಎಂಬ ಯೋಚನೆ ಮತ್ತೆ ಸುಳಿದ ತಕ್ಷಣ ತಾನೊಬ್ಬ ಕೊಲೆಪಾತಕಿ ಎನ್ನಿಸಿ ನಡುಕ ಹುಟ್ಟುತ್ತದೆ.

ಮ್ಯಾಡಲನ್ ಅಷ್ಟಕ್ಕೇ ನಿಂತಿದ್ದರೆ ಹ್ಯಾಮ್ಲೆಟ್ ನ ತಳಮಳ, ಬಿಕ್ಕಟ್ಟಿನ ನಿಜಸ್ವರೂಪ ಅವಳಿಗೆ ಅರ್ಥವಾಗುತ್ತಿರಲಿಲ್ಲ. ಶೇಕ್ಸ್ಪಿಯರ್ ದೊಡ್ಡ ಲೇಖಕನಾದ್ದರಿಂದ ಓದುಗನನ್ನು ಅಥವಾ ನೋಡುಗನನ್ನು ಅಲ್ಲಿಗೇ ಬಿಡದೆ ಕೈಹಿಡಿದು ಮೇಲೆತ್ತಿ ಮುಂದಕ್ಕೆ ಕರೆದೊಯ್ಯುತ್ತಾನೆ. ಮ್ಯಾಡಲನ್ ತನ್ನ ಖಾಸಗಿ ಪ್ರತಿಕ್ರಿಯೆಯಿಂದ ಮುಂದೆ ಸಾಗಿ ನಾಟಕದ ಘರ್ಷಣೆಯನ್ನು ಅರ್ಥಮಾಡಿಕೊಳ್ಳುತ್ತಾ ಈ ನಾಟಕಕ್ಕೆ ಒಂದು ಆತ್ಮಚರಿತ್ರಾತ್ಮಕ ವ್ಯಾಖ್ಯಾನ ಕೊಡಲೆತ್ನಿಸುತ್ತಾಳೆ.

ಆದರೆ ನಾಟಕದ ಒಂದು ಘಟ್ಟದಲ್ಲಿ ಮ್ಯಾಡಲನ್ಗೆ ಬರುವ ವಿಮರ್ಶಾತ್ಮಕ ಎಚ್ಚರ ಎಲ್ಲರಿಗೂ ಬರುತ್ತದೆಂದು ನಿರೀಕ್ಷಿಸಲಾಗದು. ಶೇಕ್ಸ್ಪಿಯರ್ ಎಷ್ಟೇ ಶ್ರೇಷ್ಠ ಲೇಖಕನಾಗಿದ್ದರೂ ಅವನ ‘ಒಥೆಲೊ’ ನಾಟಕ ನೋಡುವ ಸಂಶಯಪ್ರವೃತ್ತಿಯ ವ್ಯಕ್ತಿಯೊಬ್ಬ ಮನೆಗೆ ಬಂದು ತನ್ನ ಹೆಂಡತಿಯನ್ನು ಸಂಶಯದಿಂದ ನೋಡುವ ಸಾಧ್ಯತೆ ಇರುತ್ತದೆ. ಈ ಬಗೆಯ ಸಾಧ್ಯತೆಗಳನ್ನು ಚರ್ಚಿಸುತ್ತಾ ಎಡ್ವರ್ಡ್ ಬುಲ್ಲೋ ಎಂಬ ವಿಮರ್ಶಕ ಒಂದು ಕೃತಿಯನ್ನು ನೋಡುವಾಗ ಇರಬೇಕಾದ ‘ಮಾನಸಿಕ ದೂರ’ (ಠಿಥಿಛಿಛಿಚಿಟ ಜಣಚಿಟಿಛಿಜ) ಎಂಬ ಕಲ್ಪನೆಯನ್ನು ರೂಪಿಸಿದ್ದಾನೆ. ಆತ ಕೊಡುವ ಉದಾಹರಣೆ ಇದು: ಸಮುದ್ರದಲ್ಲಿ ಪ್ರಯಾಣ ಮಾಡುತ್ತಿರುವವರಿಗೆ ಎದುರಿಗೆ ದಟ್ಟ ಮಂಜು ಕಂಡಾಗ ಕಾತುರ, ಭಯ ಹಾಗೂ ಮುಂದೆ ಒದಗಬಹುದಾದ  ಅಪಾಯಗಳು ಎಲ್ಲವೂ ಗೋಚರವಾಗತೊಡಗಿ ಇದೊಂದು ಭಯಾನಕ ಅನುಭವಾಗತೊಡಗುತ್ತದೆ. ಆದರೆ ಇದೇ ದೃಶ್ಯವನ್ನು ದೂರನಿಂತು ನೋಡುವವರಿಗೆ ಇದೊಂದು ಸೌಂದರ್ಯಾನುಭವ. ಅದೇ ರೀತಿ ಈ ಸಮುದ್ರಯಾನದಲ್ಲಿರುವವರು ಕೂಡ ಸಧ್ಯದ ಭಯದಿಂದ ಪಾರಾದ ಮೇಲೆ ಅವರಿಗೂ ಇಂಥ ಸೌಂದರ್ಯಾನುಭಾವವಾಗುತ್ತದೆ. ಬುಲ್ಲೋನ ಪ್ರಕಾರ ಈ ಅನುಭವ ಸಾಧ್ಯವಾಗುವುದು ನಾವು ವಸ್ತುವಿನೊಡನೆ ಸಾಧಿಸಿದ ‘ದೂರ’ದಿಂದ.

ಆದರೆ ಅತಿವಾಸ್ತವವನ್ನು ಹಸಿಯಾಗಿ ಸೃಷ್ಟಿಸುವ ಬರವಣಿಗೆಯನ್ನು ಓದುವ ಸಾಮಾನ್ಯನಿಗೆ ಇಂಥ ‘ದೂರ’ ಸಾಧ್ಯವಾಗದೇ ಹೋಗಬಹುದು. ಆದರೆ ಘನತೆಯಿಂದ ಬರೆಯುವ ಲೇಖಕ (‘ಒಥೆಲೊ’ ನಾಟಕವನ್ನು ನೋಡುವ ಸಂಶಯಪೀಡಿತ ವ್ಯಕ್ತಿಯನ್ನೂ ಶೇಕ್ಸ್ಪಿಯರ್ ತಿದ್ದುವ ಹಾಗೆ) ಓದುಗನನ್ನು ತಿದ್ದಿ ಸರಿಪಡಿಸುತ್ತಿರುತ್ತಾನೆ. ಆಲ್ಬರ್ಟ್ ಕಾಮುವಿನ ‘ದಿ ಔಟ್ಸೈಡರ್’ ಕಾದಂಬರಿಯಲ್ಲಿ ತನ್ನ ತಾಯಿ ಸತ್ತಾಗ ಅಳದ ಯುವಕನೊಬ್ಬನನ್ನು ಸಮಾಜ ಹಾಗೂ ಕೋರ್ಟು ‘ಅಪರಾಧಿ’ಯೆಂದು ತೀರ್ಮಾನಿಸುವುದನ್ನು ಕಂಡಾಗ ನಮಗೆ ಅಳು ಬರುವುದಿಲ್ಲ. ಬದಲಿಗೆ ಪರಕೀಯತೆಯ ಅನುಭವದ ಬಗ್ಗೆ ಹೊಸ ಅರಿವು ಬರುತ್ತದೆ. ಕಾಫ್ಕಾನ ಕತೆ, ಕಾದಂಬರಿಗಳ ಭೀಕರ ಲೋಕಕ್ಕೆ ಓದುಗರ ಅವ್ಯಕ್ತ ಭಯ, ದಿಗ್ಭ್ರಮೆಗಳು ಅತ್ಯಂತ ಗುಪ್ತವಾಗಿ, ಆಳದಲ್ಲಿ ಪ್ರತಿಕ್ರಿಯಿಸುತ್ತಿರುತ್ತವೆಂದು ಕಾಫ್ಕಾ ಕತೆಗಳನ್ನು ಚರ್ಚಿಸುವ ಲೇಖಕನೊಬ್ಬ ಹೇಳುತ್ತಾನೆ. ಸೋಫೋಕ್ಲಿಸ್ ನ ‘ಈಡಿಪಸ್’ ನಾಟಕದಲ್ಲಿ ದೊರೆ ಈಡಿಪಸ್ ತನಗರಿವಿಲ್ಲದೆಯೇ ತಂದೆಯನ್ನು ಕೊಂದು, ತಾಯಿಯನ್ನೇ ಮದುವೆಯಾಗಿ, ಇದ್ದಕ್ಕಿದ್ದಂತೆ ಸತ್ಯ ತಿಳಿದು ತನ್ನ ಕಣ್ಣನ್ನೇ ಕಿತ್ತುಕೊಳ್ಳುವುದನ್ನು ನೋಡುತ್ತಿದ್ದರೆ ಕಣ್ಣೀರ ಕೋಡಿ ಹರಿಯದಿರಬಹುದು. ಆದರೆ ತಾನು ಮಾಡದ ತಪ್ಪಿಗಾಗಿ ಮನುಷ್ಯ ಯಾಕೆ ಶಿಕ್ಷೆ ಅನುಭವಿಸುತ್ತಾನೆ ಎಂಬ ದಿಗ್ಭ್ರಾಂತಿ ಹುಟ್ಟಿ ನಮ್ಮಲ್ಲಿ ಅಸ್ತಿತ್ವವಾದಿ ತಳಮಳ ಹುಟ್ಟಬಹುದು. ಆದರೆ ಅದೇ ಅಗ್ಗದ ಐತಿಹಾಸಿಕ ಕಾದಂಬರಿಯೊಂದು ‘ಯವನರು’ ಬಂದು ಭಾರತದ ರಾಜನೊಬ್ಬನ ಕಣ್ಣು ಕೀಳಿಸಿದರೆಂದು ಅತಿರಂಜಿತವಾಗಿ ವರ್ಣಿಸಿ ನಿಮ್ಮನ್ನು ಅಳುವಂತೆ ಮಾಡಬಹುದು. ಆದರೆ ಅದು ಆಳವಾದ ದುರಂತ ಪ್ರಜ್ಞೆ ತರಲಾರದು. ‘ಏಕ್ ದೂಜೆ ಕೆ ಲಿಯೇ’ ಎಂಬ ಸಿನಿಮಾದ ಕೊನೆಯಲ್ಲಿ ಯುಪ್ರೇಮಿಗಳಿಬ್ಬರು ಕಡಲದಂಡೆಯ ಮೇಲೆ ಸತ್ತುಬಿದ್ದಿರುವ ದೃಶ್ಯ ಕಂಡು ನಿಮಗೆ  ಕರುಳು ಕಿತ್ತು ಬರುತ್ತಿದೆ ಎನ್ನಿಸಬಹುದು. ಆದರೆ ‘ಟೈಟಾನಿಕ್’ ಸಿನಿಮಾದಲ್ಲಿ ಯುವ ಪ್ರೇಮಿಯೊಬ್ಬ ಹಡಗಿನೊಂದಿಗೇ ಮುಳಗಿಹೋಗಿ ಅವನ ಪ್ರಿಯತಮೆ ಕೊನೆಯ ತನಕ ಒಬ್ಬಂಟಿಯಾಗಿ ಉಳಿಯುವುದು ನಮ್ಮಲ್ಲಿ  ಕಣ್ಣೀರು ಉಕ್ಕಿಸದೆಯೋ ದಟ್ಟ ವಿಷಾದ ಮೂಡಿಸಿ ಈ ದುರಂತ ನಮ್ಮಲ್ಲಿ ಬಹುಕಾಲ ಉಳಿಯಬಹುದು.

ಅಂದರೆ ತಾನು ಹೇಳುವ ಕತೆಯೊಂದಿಗೆ, ಮಂಡಿಸುವ ದೃಶ್ಯದೊಂದಿಗೆ ಕತೆಗಾರ ಅಥವಾ ನಿರ್ದೇಶಕನಿಗೆ  ಕೂಡ ಓದುಗನಂತೆಯೇ ಅಂತರ ಕಾಯ್ದುಕೊಳ್ಳಬೇಕಾದ ಎಚ್ಚರವಿರಬೇಕಾಗುತ್ತದೆ. ಓದುಗ, ಇದು ನನ್ನ ಕಣ್ಣೀರ ಕತೆ, ಕಿವಿಗೊಟ್ಟು ಕೇಳು ಎಂದು ಅಗ್ಗವಾಗಿ ಬರೆದು ಜನಪ್ರಿಯವಾಗಲೆತ್ನಿಸುವ ಲೇಖಕ ಮೂಲತಃ ಸಮಾಜ ವಿರೋಧಿಯಾಗಿರುತ್ತಾನೆ. ಕಾರಣ, ಈತ ಓದುಗನನ್ನು ತನ್ನ ತಲೆಯೊಳಗಿನ ಕಸವನ್ನೆಲ್ಲ ಎಸೆಯಬಲ್ಲ ಕಸದಬುಟ್ಟಿಯಂತೆ ಕಾಣತ್ತಿರುತ್ತಾನೆ. ‘ಶರಪಂಜರ’ ಎಂಬ ಸಿನಿಮಾದಲ್ಲಿ ಹುಚ್ಚಿಯಾಗಿ ಹಲುಬುವ ಮಿನುಗುತಾರೆಯ ಅತಿರಂಜಿತ ನಟನೆ ಕಂಡು ಅನೇಕ ಹೆಂಗಸರು ಹುಚ್ಚಾಸ್ಪತ್ರೆ ಸೇರಿದರು ಎಂದು ಆ ಸಿನಿಮಾದ ನಿರ್ದೇಶಕ ಹೆಮ್ಮೆಪಟ್ಟರೆ, ಮೊದಲು ಆತನನ್ನು ಹುಚ್ಚಾಸ್ಪತ್ರಗೆ ಸೇರಿಸಬೇಕಾಗುತ್ತದೆ.

ಹಾಗಾದರೆ ತಾನು ಓದುತ್ತಿರುವ ಕಾದಂಬರಿಯಲ್ಲಿ ಎಲ್ಲ ಹಲ್ಲುಗಳನ್ನೂ ಕಳೆದುಕೊಳ್ಳುವ ನಾಯಕಿಯನ್ನು ನೋಡಿ ಹಲ್ಲು ನೋವಿನಿಂದ ನರಳುತ್ತಿರುವ ಓದುಗಳೊಬ್ಬಳು ಭಯಗೊಂಡರೆ, ಅದಕ್ಕೆ ಆಕೆಯ ಮುಗ್ಧ ಓದಿನ ರೀತಿ ಕಾರಣವಾಗಿರುವಂತೆ, ಸದರಿ ಕಾದಂಬರಿಯ ದೋಷಮಯ ಬರವಣಿಗೆಯೂ ಕಾರಣವಿರಬಹುದು.

(‘ಗಾಳಿ ಬೆಳಕು’ ಕೃತಿಯಿಂದ)

2 ಟಿಪ್ಪಣಿಗಳು (+add yours?)

 1. Laxminarasimha
  ನವೆಂ 26, 2008 @ 11:36:26

  ನಟರಾಜ್ ಹೇಳುವುದನ್ನು ಸ್ವಲ್ಪಮಟ್ಟಿಗೆ ಒಪ್ಪಬಹುದಾದರೂ, ಇದು ಹೀಗೇ ಮುಂದುವರೆದರೆ ವಿಮರ್ಶಕರ ಪ್ರಿಸ್ಕ್ರಿಪ್ಶನ್ ಇಲ್ಲದೇ ಸಾಮಾನ್ಯ ಓದುಗರು ಏನನ್ನೂ ಓದುವಂತಿಲ್ಲ-ಲಕ್ಷ್ಮೀನರಸಿಂಹ

  ಉತ್ತರ

 2. Laxminarasimha
  ನವೆಂ 26, 2008 @ 11:00:52

  ನಟರಾಜ್ ಅವರು ಹೇಳುವುದರಲ್ಲಿ ಸ್ವಲ್ಪಮಟ್ಟಿನ ಸತ್ಯಾಂಶ ಇರಬಹುದಾದರೂ. ಇದೇ ದಿಕ್ಕಿನಲ್ಲೇ ಹೋದರೆ ವಿಮರ್ಶಕರ ಪ್ರಿಸ್ಕಿಪ್ಶನ್ ಇಲ್ಲದೇ ಏನನ್ನೂ ಓದುವಂತಿಲ್ಲ ಎಂದಾಯಿತಲ್ಲ? – ಲಕ್ಷ್ಮೀನರಸಿಂಹ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: