ಯಾರೂ…?

 

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

 

 

ಟೆರೇಸಿನ ಮೂಲೆಯೊಂದರಲ್ಲಿ ಜಾಗ ಹಿಡಿದು ಯಾವುದೋ ಯೋಚನೆಯಲ್ಲಿ ಮಗ್ನಳಾಗಿದ್ದ ಬಬ್ಲಿಯ ಬಳಿಗೆ ಹೋಗಿ ಕೂತೆ. ಅವಳಿಗೆ ಏನೋ ಹೇಳಬೇಕಿತ್ತು ನಾನು. ಹೇಗೆ ಹೇಳುವುದೆಂದು ತಿಳಿಯುತ್ತಿರಲಿಲ್ಲ, ಹೇಳುವುದು ಹೇಗೆಂದು ಯೋಚಿಸುತ್ತಾ ಟೆರೇಸಿನ ಗೋಡೆಯ ಒರಟು ಚರ್ಮಕ್ಕೆ ನನ್ನ ಬೆನ್ನೊರಗಿಸಿ ಕೂತು ನಿಟ್ಟುಸಿರಿಟ್ಟೆ.

 

ಇದೆಲ್ಲಾ ಶುರುವಾಗಿದ್ದು ಮೂರುದಿನದ ಹಿಂದೆ, ನಾನು ಮಧು ರೂಮಿಗೆ ಹೋಗಿಬಂದಾಗಿನಿಂದ. ಮಾರನೇ ದಿನ ಸೈಕಾಲಜಿ ಇಂಟರ್ನಲ್ಸ್ ಇತ್ತು ನನ್ನ ಬಳಿ ಒಂದು ಪಾಠದ ನೋಟ್ಸ್ ಇರಲಿಲ್ಲ. ಇಡೀ ಹಾಸ್ಟಲ್ಲಿನ ಏಳ್ನೂರುಜನರಲ್ಲಿರುವ ನನ್ನ ಏಕೈಕ ಕ್ಲಾಸ್ ಮೇಟ್ ಎಂದರೆ ಮಧು. ಸರಿ ಈಗ ಮಲಗಿಬಿಡೋಣ ರಾತ್ರಿ ಒಂದು ಗಂಟೆಗೆ ಎದ್ದು ಮಧು ನೋಟ್ಸ್ ಓದಿದರಾಯ್ತು ಎಂದುಕೊಂಡು ಅವಳಿಗೆ ಮೆಸೇಜ್ ಮಾಡ್ದೆ. ಅವಳು ಸರಿ ನಾನು ರೂಮ್ ಬಾಗ್ಲ್ಲುತೆಗ್ದೇ ಇಟ್ಟಿರ್ತೀನಿ ನಾ ಮಲ್ಗಿದ್ರೂ ಫೋಟೋ ಕಾಪೀಸು ಟೇಬಲ್ ಮೇಲಿರುತ್ತೆ ತೊಗೊಂಡು ಹೋಗು ಎಂಬ ಉತ್ತರ ನೋಡಿ ಒಂದು ಗಂಟೆಗೆ ಅಲರಾಮ್ ಇಟ್ಟು ಮಲಗಿದೆ.

 

ಒಂದು ಗಂಟೆಗೆ ಅಲರಾಮ್ ಹೊಡೀತು ಎದ್ದು ದಡಬಡಿಸಿ ಆರಿಸಿದೆ. ಲಾಲಿ ಪ್ಚ್… ಎಂದು ಸದ್ದು ಮಾಡುತ್ತಾ ಮಗ್ಗಲು ಬದಲಿಸಿದಳು. ಕತ್ತಲಲ್ಲಿ ಚಪ್ಪಲಿ ಹುಡುಕಿ ಹಾಕಿಕೊಂಡು ರೂಮ್ ಹೊರಗೆ ಬಂದು ಲಿಫ್ಟ್ ಮುಂದೆ ಹೋಗಿ ನಿಂತು ಅದರ ಸ್ವಿಚ್ ಒತ್ತಿದೆ. ಎರಡು ನಿಮಿಷದ ನಂತರ ಅದು ಕೆಟ್ಟು ಹೋಗಿರುವುದು ನೆನಪಿಗೆ ಬಂತು. ಗ್ರೌಂಡ್ ಫ್ಲೋರ್ನಲ್ಲಿರುವ ನನ್ನ ರೂಮಿನಿಂದ ಐದನೇ ಮಹಡಿಯಲ್ಲಿರುವ ಮಧು ರೂಮಿಗೆ ಹೋಗುತ್ತಾ ಕೆಟ್ಟು ನಿಂತಿರುವ ಲಿಫ್ಟನ್ನೂ ಕೆಟ್ಟು ನಿಂತು ನಾಲ್ಕು ದಿನವಾದರೂ ಸರಿಮಾಡಿಸುವ ಗೋಜಿಗೆ ಹೋಗದ ವಾರ್ಡನ್ನನ್ನೂ ಶಪಿಸುತ್ತಾ ಸೆಕೆಂಡ್ ಫ್ಲೋರ್ ತಲುಪಿದೆ.

ಅಲ್ಲಿನ ಟ್ಯೂಬ್ ಲೈಟ್ ಬೆಳಕು ಎಲ್ಲಾ ಫ್ಲೋರುಗಳ ಬೆಳಕಿಗಿಂತ ಪ್ರಕಾಶಮಾನವಾಗಿದೆಯಾ ಎಂಬ ಅನುಮಾನವು ಬಗೆಹರಿಯುವ ಮೊದಲೇ ಮೂರನೇ ಮಹಡಿಯಲ್ಲಿ ಲೈಟೇ ಇಲ್ಲ ಎಂಬ ವಾಸ್ತವ ಲೈಟ್ ಆರಿಸಿದವರ ಮೇಲೆ ಸಿಟ್ಟು ತರಿಸಿತು. ಅದೇ ಸಿಟ್ಟಿನಲ್ಲಿ ಮೂರನೇ ಮಹಡಿ ತಲುಪಿ ಲೈಟ್ ಆನ್ ಮಾಡಲು ಸ್ವಿಚ್ ಬೋರ್ಡ್ ಬಳಿ ಹೋದರೆ ನನ್ನ ತಡೆದಿದ್ದು ಆಹ್… ಎಂದು ವಿಚಿತ್ರವಾಗಿ ನರಳುತ್ತಿರುವ ಸದ್ದು ಒಂದು ನಿಮಿಷ ಪ್ರೇತಾತ್ಮಗಳ ಕಲ್ಪನೆ ಬಂದು ಭಯವಾಗಿ ಸಹವಾಸ ಅಲ್ಲ ಎಂದುಕೊಂಡು ಲೈಟ್ ಹಾಕುವ ಸಾಹಸಕ್ಕೆ ಹೋಗದೆ ಅತ್ತಿತ್ತ ನೋಡದೆ ಮೆಟ್ಟಿಲುಗಳನ್ನು ತುಳಿದು ಮಧು ರೂಮ್ ಮುಟ್ಟಿ ಸಮಾಧಾನದ ಉಸಿರು ತೆಗೆದುಕೊಂಡೆ.

 

ಆದರೆ ತಕ್ಷಣ ನನ್ನ ಕಲ್ಪನೆಗಳ ಬಗ್ಗೆ ನನಗೇ ನಗು ಬಂತು. ಕೆಳಗೆ ಹೋಗುವಾಗಲಾದರೂ ಆ ಏನಿರಬಹುದೆಂದು ನೋಡಿಕೊಂಡೇ ಹೋಗಬೇಕೆಂಬ ಧೃಡ ನಿರ್ಧಾರ ಮಾಡಿ ಫೋಟೋಕಾಪಿಗಳನ್ನು ತೆಗೆದುಕೊಂದು ಮೂರನೇ ಫ್ಲೋರ್ ತಲುಪಿದೆ. ಆದರೆ ಅಲ್ಯಾವ ಸದ್ದೂ ಇರಲಿಲ್ಲ ಆದರೂ ಅಲ್ಲೆಲ್ಲಾ ಅಡ್ದಾಡಿದೆ. ಎನೂ ಕಾಣಲಿಲ್ಲ. ನಿರಾಸೆಗೊಂಡು ರೂಮ್ ತಲುಪಿ ಓದುತ್ತಾ ಕೂತೆ.

 

ಸುಮಾರು ಮೂರು ಗಂಟೆಯ ಹೊತ್ತಿಗೆ ಪಕ್ಕದ ರೂಮಿನಲ್ಲಿ ಯಾರೋ ಎದ್ದ ಸದ್ದಾಯಿತು. ಹೊರಬಂದು ನೋಡಿದೆ. ಬಬ್ಲಿ ಬ್ರಷು ಪೇಸ್ಟು ಹಿಡಿದುಕೊಂಡು ನಿದ್ದೆಗಣ್ಣಲ್ಲಿ ಬಾತ್ರೂಮ್ ಕಡೆಗೆ ಹೊರಟಿದ್ದಳು. ಅವಳಿಗೆ ನಾಳೆ ಬಿಸ್ನೆಸ್ ಎಕನಾಮಿಕ್ಸ್ ಪರೀಕ್ಷೆ ಇತ್ತು. ನಾನೂ ಅವಳೂ ಬೇರೆ ಬೇರೆ ಕೋರ್ಸ್ ತೆಗೆದುಕೊಂಡಿದ್ದರೂ ಚಿಕ್ಕಂದಿನಿಂದ ಒಳ್ಳೆಯ ಸ್ನೇಹಿತರು. ಅವಳಿಗೆ ದೇವರು ದೆವ್ವ ಎಲ್ಲದರಲ್ಲಿ ಅತ್ಯಂತ ನಂಬಿಕೆ. ನಾನು ನಂಬಿಕೆ ಇದೆಯೋ ಇಲ್ಲವೋ ಎಂದು ನನಗೇ ಗೊತ್ತಿಲ್ಲದ ಎಡಬಿಡಂಗಿ. ಅವಳನ್ನು ಸುಮ್ಮನೆ ಹೆದರಿಸೋಣವೆನ್ನಿಸಿತು. ‘ಬಬ್ಲಿ ಪ್ಲೀಸ್ ಕಣೇ ಈಗ ಮಾತ್ರ ಬಾತ್ರೂಮ್ಗಳ ಕಡೆ ಹೋಗ್ಬೇಡ ಎಂದೆ.’ ಇವಳಿಗೇನಾಗಿತು ಎನ್ನುವಂತೆ ವಿಚಿತ್ರವಾಗಿ ನೋಡಿದಳು. ‘ಹೋಗಬೇಡ ಅಷ್ಟೇ ನಾ ಹೇಳಿದ್ದನ್ನ ಕೇಳು.’ ಎಂದು ನನ್ನ ರೂಮಿಗೆ ಎಳೆದುಕೊಂಡು ಹೋಗಿ ನನಗಾದ ಅನುಭವವನ್ನ ವಿತ್ ಆಡಿಯೋ ವೀಡಿಯೋ ಎಫೆಕ್ಟ್ ವಿವರಿಸಿ ಹೇಳಿದೆ.

 

ಆಮೇಲೆ ನಮ್ಮ ಸಂವಾದ ಹೀಗಿತ್ತು

ಬಬ್ಲಿ: ಎಷ್ಟ್ ಗಂಟೆಗೆ ನೆಡೆದಿದ್ದು ಹೇಳು?

ನಾನು: ಒಂದು ಗಂಟೆಗೆ!

ಬಬ್ಲಿ: ಹಂಗಾದ್ರೆ ಆ ಸದ್ದು ಖಂಡಿತ ದೆವ್ವದ್ದೇ..

ನಾನು: ಆಂ.. ಯಾಕೆ? (ನನಗೆ ನಗು ಬರುತ್ತಿತ್ತು)

ಬಬ್ಲಿ: ಮಂಗನ್ ಥರ ಆಡ್ಬೇಡ ಸ್ವಲ್ಪ ಸೀರಿಯಸ್ಸಾಗಿರೋದು ಕಲಿ ರಾತ್ರಿ ಒಂದು ಗಂಟೆಗೆ ಈವಿಲ್ ಸ್ಪಿರಿಟ್ಸ್ ಇವೋಕ್ ಆಗುತ್ತೆ ಅಂತಾರೆ

ನಾನು: ಯಾರು ಅಂತಾರೆ?

ಬಬ್ಲಿ: ನಾನು ದಿ ಎಕ್ಸಾರ್ಸಿಸ್ಟ್  ಮೂವಿಲಿ ನೋಡಿದ್ದೆ (ನನಗೆ ನಗು ತಡೆಯಲಾಗಲಿಲ್ಲ) ನಗ್ಬೇಡ ಆ ಸಿನೆಮಾನ ನೈಜ ಘಟನೆ ಆಧರಿಸಿ ಮಾಡಿರೋದು.

ನಾನು: ಸರಿ ಹಂಗಾದ್ರೆ ನಾಳೆನೂ ಒಂದ್ ಗಂಟೆಗೆ ಹೋಗಿ ನೋಡಣ ಬರ್ತೀಯಾ. ನಿನ್ ದೆವ್ವ ಕಾಣ್ಸುತ್ತಾ ಅಂತ? ಬಬ್ಲಿ: ಬೇಕಾದ್ರೆ ನಿಂಗ್ ತಲೆ ಕೆಟ್ಟಿದ್ರೆ ನೀ ಹೋಗು ನಾನು ಬರಲ್ಲ!

ನಾನು: ಏ ಹೆದ್ರ್ಬೇಡ ಕಣೇ ಈ ಹುಡ್ಗೀರು ಹೊತ್ತಲದ್ ಹೊತ್ನಲ್ ಫೋನಲ್ ಮಾತಾಡ್ತಿರಲ್ವ? ಆ ಸೌಂಡೇ ಇರ್ಬೇಕು ಅದು. ದೆವ್ವ ಅಲ್ಲ ಅಂತ ನಾ ಪ್ರೂವ್ ಮಾಡ್ತಿನಿ ಬಾ ನನ್ಜೊತೆ.

ಬಬ್ಲಿ: ನಾ ಬರಲ್ಲ! ನೀನೂ ಹೋಗಬಾರದು . ಸಾಕು ಆ ವಿಷ್ಯ ಮಾತಾಡಿದ್ದು ಓದ್ಕ. ಎಂದು ಎದ್ದು ಹೋಗಿ ಮತ್ತೆ ಮಲಗಿಕೊಂಡಳು!

 

ಆ ಸದ್ದು ಹೇಗೆ ಬರುತ್ತಿತ್ತೆಂದು ಕಂಡುಹಿಡಿಯಲೇಬೇಕೆನ್ನಿಸಿತು ನನಗೆ. ಈ ಗೂಬೆ ಬರ್ದೇ ಹೋದ್ರೆ ಪರವಾಗಿಲ್ಲ ನಾನಂತೂ ಹೋಗಿ ನೋಡೋದೇ ಎಂದು ನಿರ್ಧರಿಸಿದೆ. ಇಂಟರ್ನಲ್ಸ್ ಮುಗಿದ ರಾತ್ರಿ ‘ಮೊಗ್ಗಿನ ಮನಸು’ ಸಿನೆಮಾ ನೋಡಿ ಬಂದು ಸುಮಾರು ಹತ್ತು ಗಂಟೆಯ ಹೊತ್ತಿಗೆ ಮಲಗಿದೆವು.

 

ರಾತ್ರಿ ಒಂದು ಗಂಟೆಗೆ ಅಲರಾಮ್ ಹೊಡೀತು. ಎದ್ದು ರೂಮಿನಿಂದ ಹೊರಬರುವ ಹೊತ್ತಿಗೆ ಬಬ್ಲಿಯೂ ನಿಂತಿದ್ದಳು. ‘ನೀನೂ ಬರ್ತೀಯಾ? ‘ ನನಗೆ ಆಶ್ಚರ್ಯವಾಯಿತು. ‘ನಿನ್ ಫ್ರೆಂಡಾದ್ಮೇಲೆ ಇನ್ನೇನ್ ಮಾಡಕ್ಕಾಗತ್ತೆ ನನ್ ಕರ್ಮ!’ ಬೈದುಕೊಂಡಳು. ಇಬ್ಬರೂ ಸದ್ದು ಮಾಡದೆ ಮೂರನೇ ಫ್ಲೋರ್ಗೆ ಹೋದೆವು. ಅದೇ ರೀತಿಯ ಸದ್ದು ಬಬ್ಲಿ ನನ್ನ ಮುಖ ನೋಡಿ ಬಾರೆ ಹೋಗಣ ಇದು ಖಂಡಿತಾ ದೆವ್ವಾನೇ ಪಿಸುಗುಟ್ಟಿದಳು. ನೀನು ಬೇಕಾದ್ರೆ ಹೋಗು ನಂಗೆ ಡಿಸ್ಟರ್ಬ್ ಮಾಡ್ಬೇಡ ಬೈದೆ. ಅಲ್ಲೇ ನಿಂತಳು.

 

ನೀ ಇಲ್ಲೇ ನಿಂತಿರು ನಾನು ಆ ಕಾರಿಡಾರಿನ ಕಡೆಯಲ್ಲಿ ನೋಡ್ಕೊಂಡ್ ಬರ್ತೀನಿ ಎಂದು ನಾನು ಹೇಳುವ ಹೊತ್ತಿಗೆ, ಸರಿ ನಾನು ಇಲ್ಲಿ ಬಾತ್ ರೂಮ್ಗಳ ಕಡೆ ನೋಡಿ ಬರ್ತೀನಿ ಅಂದ್ಲು. ಕೆಟ್ಟ ಧೈರ್ಯದಿಂದ ಉದ್ದದ ಕತ್ತಲೆ ಕಾರಿಡಾರಿನ ತುಂಬ ಅಲೆದಾಡಿದೆ. ಉದ್ದಕೆ ಚಾಚಿಕೊಂಡಿರುವ ಕಾರಿಡಾರು, ಕಾರಿಡಾರಿನ ಎರಡೂ ಬದಿಗೆ ರೂಮುಗಳು. ಅಲ್ಲಿ ಯಾರೂ ಇರಲ್ಲಿಲ್ಲ! ಬಾತ್ರೂಮ್ನ ಕಡೆಯಿಂದ ಬಬ್ಲಿ ಜೋರಾಗಿ ಕಿರುಚಿಕೊಂಡಳು! ಆ ದಿಕ್ಕಿಗೆ ಓಡಿದೆ. ಅಲ್ಲಿಂದ ಹೊರಬಂದ ಬಬ್ಲಿ ನನ್ನ ಕೈಹಿಡಿದುಕೊಂಡು ದಡ ದಡ ಕೆಳಗಿಳಿಯತೊಡಗಿದಳು! ‘ಏನಾಯ್ತು ಏನಿತ್ತು ಅಲ್ಲಿ..?’ ‘ಹೌದು ನೀ ಹೇಳಿದ್ದೇ ಸರಿ ಯಾವ್ದೋ ಹುಡ್ಗಿ ಫೋನ್ನಲ್ಲಿ ಮಾತಾಡ್ತಿದ್ಲು. ನಾನು ಅವ್ಳನ್ನೇ ಕಾನ್ಸಂಟ್ರೇಷನ್ನಿಂದ ನೋಡ್ತಾ ಏನ್ ಮಾತಾಡ್ತಿದಾಳೆ ಅಂತ ಕೇಳ್ತಿದ್ನಾ ಅಷ್ಟರೊಳಗೆ-‘ ‘ಅಷ್ಟರೊಳಗೆ ದೆವ್ವಾ ಬಂದ್ಬಿಡ್ತಾ?’ ನನ್ನ ಪ್ರಶ್ನೆ. ‘ಥೂ ನಿನ್ನ! ಜಿರಳೆ .. ಜಿರಳೆ ಬಿತ್ತು ನನ್ ಮೇಲೆ! ಅದ್ಕೆ ಕಿರಿಚ್ಕೊಂಡೆ.’ ಅಂದ್ಲು.

 

ಥೂ ಈ ಜಿರಳೆ ಹಲ್ಲಿಗಳಿಗೆಲ್ಲಾ ಹೆದ್ರುಕೊತೀಯಲ್ಲ ಎಂದು ಬೈದುಕೊಂಡರೂ ನಾನೂ ಅಂಥವಳೇ ಆದ್ದರಿಂದ ಸುಮ್ಮನಾದೆ.

 

+++

 

ಈ ಘಟನೆ ನೆಡೆದ ಮರುದಿನ ಸಂಜೆ ಕಾಲೇಜು ಮುಗಿದಮೇಲೆ ಕಾಲೇಜು ಬಸ್ಸಿಗೆ ಎಂದಿನಂತೆ ಕಾಯುತ್ತಾ ನಿಂತಿದ್ದೆ. ಬಸ್ಸು, ಬಾಧೂಳಿಯನ್ನು(ಗೋಧೂಳಿ ಥರ-ಬಸ್ಸು ಸೃಷ್ಟಿಸುವ ಧೂಳು) ಅಲ್ಲಿ ನಿಂತವರಿಗೆಲ್ಲಾ ಅಭಿಷೇಕ ಮಾಡಿಸುತ್ತಾ ಬಂದು ನಮ್ಮೆಲ್ಲರ ಮುಂದೆ ನಿಂತಿತು. ಹತ್ತಲು ಹೋದೆ ಯಾರೋ ಬ್ಯಾಗ್ ಹಿಡಿದು ಎಳೆಯುತ್ತಿದ್ದಾರೆ ಹತ್ತಲು ಬಿಡುತ್ತಿಲ್ಲ ಅನ್ನಿಸಿತು, ತಿರುಗಿ ನೋಡಿದೆ ಯಾರೂ ಇಲ್ಲ. ಆದರೆ ಹತ್ತಲು ಮಾತ್ರ ಆಗುತ್ತಿಲ್ಲ ‘ಎಂತದಾ ಬೇಗ ಬೇಗ ಹತ್ತಿ ಲೇಟ್ ಮಾಡದ್ ಎಂತಕ್ಕೆ’ ಅಂದರು ಡ್ರೈವರ್ ಅಣ್ಣ. ಅಣ್ಣಾ ಯಾರೋ ಬ್ಯಾಗ್ ಎಳೀತಿದಾರೆ ಹತ್ತಕ್ ಬಿಡ್ತಿಲ್ಲ ಅಂತ ಹೇಳಕ್ ಹೋದೋಳು ಹುಚ್ಚು ಅಂದುಕೊಂಡಾರೆಂದು, ಅಣ್ಣಾ ಹತ್ತಕ್ ಆಗ್ತಿಲ್ಲ ಅಂದೆ. ಅಲ್ಲಿಂದ ಧಡಾರೆಂದು ಎದ್ದ ಅಣ್ಣ ಮೇಲೆಳೆದು ಹತ್ತಿಸಿಕೊಂಡು ನನ್ನ ಕೈಗೆ ಬಸ್ ಕೀ ಕೊಟ್ಟು, ನೀರು ಬೇಕಾ? ಸುಸ್ತಾಗ್ತಿದೆಯಾ? ಅಂದರು ನನಗೆ ಒಂದೂ ಅರ್ಥವಾಗಲಿಲ್ಲ. ಪಾಪ ಎಷ್ಟು ವರ್ಷದಿಂದ ಫಿಟ್ಸ್ ಇದೆ ಅಂತ ಪರಿತಾಪ ಬೇರೆ. ನಾನು ತಲೆ ಚಚ್ಚಿಕೊಳ್ಳುವುದೊಂದು ಬಾಕಿ!

 

ಹಾಸ್ಟಲ್ಲಿಗೆ ಬಂದು ಅಟೆಂಡೆನ್ಸ್ ಕೊಡಲು ಹೋದೆ ವಾರ್ಡನ್ನು ‘ನಯ್ನಿ ನಿನ್ ಫ್ರೆಂಡ್ ಬಬ್ಲಿಗ್ಯಾರೋ ಸಿ.ಡಿ ಕೊಟ್ಟೋಗಿದಾರೆ ಕೊಟ್ಬಿಡು ಅವ್ಳಿಗೆ. ಅವ್ಳಿನ್ನು ಕಾಲೇಜಿನಿಂದ ಬಂದಿಲ್ಲ ಅಲ್ವ?’ ಎನ್ನುತಾ ಸಿಡಿಯೊಂದನ್ನು ನನ್ನ ಕೈಗಿತ್ತರು. ಮ್ಯಾಮ್ ಯಾರ್ ಕೊಟ್ಟಿದ್ದು ಕೇಳಿದೆ. ಗೊತ್ತಿಲ್ಲ ನಾನು ಮೆಸ್ ಬಿಲ್ಲ್ ಬರೀತಿದ್ದೆ ಈ ಸಿ ಡಿನ ಬಬ್ಲಿಗೆ ಕೊಟ್ಬಿಡಿ ಅಂದ್ರು ಸರಿ ಅಂದೆ. ನಿಮ್ಮ್ ಹೆಸ್ರೇನು ಅಂತ ಕೇಳಬೇಕು ಅನ್ಕೊಳೋ ಹೊತ್ತಿಗೆ ಅವ್ರು ಹೋಗ್ಬಿಟ್ಟಿದ್ರು. ಯಾವ್ದೋ ಹುಡ್ಗಿ ಅಂದ್ರು. ಸಿಡಿ ಮೇಲೂ ಯಾವ ಹೆಸರೂ ಇರಲಿಲ್ಲ. ಥ್ಯಾಂಕ್ ಯೂ ಹೇಳಿ ತೆಗೆದುಕೊಂಡು ಬಂದೆ. ಬಬ್ಲಿ ಬಂದ ಮೇಲೆ ಅವಳಿಗೆ ಸಿ ಡಿ ಕೊಟ್ಟು ವಾರ್ಡನ್ ಹೇಳಿದ್ದನ್ನೇ ಹೇಳಿ, ಯಾವ ಸಿ ಡಿ ಹಾಕಿ ನೋಡು ಅಂದೆ ಅದಕ್ಕವಳು ನಾನು ಲ್ಯಾಪ್ ಟಾಪ್ ತಂದು ಒಂದು ವಾರನೂ ಆಗಿಲ್ಲ ನನ್ ಹತ್ರ ಲ್ಯಾಪ್ ಟಾಪ್ ಇದೆ ಅಂತ ನಿನ್ಗೆ ಲಾಲಿಗೆ ಬಿಟ್ರೆ ಯಾರಿಗೂ ಗೊತ್ತಿಲ್ಲ. ಲಾಲಿಗೆ ಏನಾದ್ರೂ ಕೊಡಕ್ಕಿದ್ರೆ ನಂಗೇ ಡೈರೆಕ್ಟಾಗಿ ಕೊಟ್ಟಿರೋಳು ಮತ್ತ್ಯಾರು ನಂಗೆ ಕೊಡ್ತಾರೆ ಇದನ್ನ ಅಂತ ತಲೆಕೆಡೆಸಿಕೊಂಡಳು. ಯಾರಾದ್ರೂ ತಂದು ಕೊಟ್ಟಿರಲಿ ಏನಿದೆ ನೋಡಣ ಹಾಕು ಅಂದೆ. ಬೇಡ ಕಣೇ ಪ್ಲೀಸ್. ಆಮೇಲ್ ನೋಡಣ ಈಗ ಬೇಡ ಅಂದಳು. ಇವಳಿಗೇನೋ ಆಗಿದೆ ಅನ್ನಿಸಿತು. ಸಂಜೆ ಬಸ್ ಹತ್ತುವಾಗ ನಡೆದ ಘಟನೆಯನ್ನು ಹೇಳಬೇಕೆನಿಸಿದರೂ, ಇದಕ್ಕೂ ದೆವ್ವದ ಕೈವಾಡವೇ ಕಾರಣ ಎಂದಾಳೆಂದೆನ್ನಿಸಿ ಏನೂ ಹೇಳದೇ ಸುಮ್ಮನಾದೆ.

 

ಅವತ್ತು ರಾತ್ರಿ ಒಂದು ಗಂಟೆಗೆ ಮತ್ತೆ ಎಚ್ಚರವಾಯಿತು, ಅಲರಾಮ್ ಇಟ್ಟಿರಲಿಲ್ಲ. ಎದ್ದು ಕೂತೆ ಮತ್ತೆ ಆ ಸದ್ದು ಥೇಟ್ ಅದೇ ರೀತಿ. ಲಾಲಿಗೂ ರಾತ್ರಿಯೆಲ್ಲಾ ಫೋನಲ್ಲಿ ಮಾತಾಡುತ್ತಾ ನರಳುವ ಬುದ್ದಿ ಅಂಟಿಕೊಂಡಿತಾ ಎಂದು ಅನುಮಾನವಾಗಿ ಲೈಟ್ ಆನ್ ಮಾಡಿದೆ, ಸದ್ದು ನಿಂತಿತು. ನೋಡಿದರೆ ಲಾಲಿ ಹೊದ್ದು ಮಲಗಿದ್ದಳು. ಬೆಡ್ಶೀಟ್ ಒಳಗೆ ನುಸುಳಿಕೊಂಡೇ ಮಾತಾಡುತ್ತಿರಬಹುದಾ ಎಂದು ಮತ್ತೊಂದು ಅನುಮಾನವಾಯಿತು. ಲಾಲಿ ನಿನ್ ಮೊಬೈಲ್ ಕೊಡು ಅಂದೆ. ಅದಕ್ಕೆ ಲಾಲಿ ಏನೇ ನಿಂದು ಹಿಂಸೆ ಈ ರಾತ್ರಿ ಹೊತ್ನಲ್ಲಿ ಮೊಬೈಲ್ ಅಲ್ಲೇ ಟೇಬಲ್ ಮೇಲಿದೆ ನೋಡು ಚಾರ್ಜ್ ಗೆ ಹಾಕಿದೀನಿ ಅಂದಳು. ನನಗೆ ನಿದ್ದೆ ಬರಲಿಲ್ಲ.

 

+++

 

ಮಾರನೇ ದಿನ ಮತ್ತೆ ಬಸ್ ಹತ್ತುವಾಗ ಅದೇ ಅನುಭವವಾಯಿತು. ‘ದಿಸ್ ಈಸ್ ಟೂ ಮಚ್’ ನನಗೇನಾಗಿದೆ ಸೈಕಾಲಜಿಕಲ್ ಡಿಸಾರ್ಡರ್ ಏನಾದರೂ ಶುರುವಾಗಿದೆಯೇನೋ ಅನುಮಾನವಾಯಿತು. ಖಂಡಿತ ಅದೇ ಇಲ್ಲಾಂದ್ರೆ ಹಿಂಗೆಲ್ಲಾ ಆಗೋಕ್ಕೆ ಸಾಧ್ಯನೇ ಇಲ್ಲ. ಅವತ್ತು ಸೈಕಾಲಜಿ ಲೆಕ್ಚರರ್ ಹೇಳುತ್ತಿದ್ದು ಜ್ನಾಪಿಸಿಕೊಂಡೆ. ವಿಸ್ಯುಯಲ್ ಹಾಲೋಸಿನೇಷನ್, ಆಡಿಟರಿ ಹಾಲೊಸಿನೇಷನ್, ಗಸ್ಟೇಟರೀ ಹಾಲೋಸಿನೇಷನ್… ಥೂ ನನಗೇ ಎಲ್ಲಾ ಕಷ್ಟಾ ಅಂತ ದುಃಖ ಬೇರೆ ಆಗುತ್ತಿತ್ತು… ಇದನ್ನೆಲ್ಲಾ ಹೇಳಿಕೊಳ್ಳೋಣವೆಂದೇ ಬಬ್ಲಿ ಬಳಿ ಕೂತಿದ್ದೆ. ಹೇಳೋದನ್ನು ಕೇಳಿ ನಕ್ಕುಬಿಟ್ಟರೆ ಅನುಮಾನವಾಯಿತು. ನಕ್ಕರೆ ನಗಲಿ ಎಂದುಕೊಂಡು ಹೇಳೂಬಿಟ್ಟೆ. ಬಾ ಎಂದು ರೂಮಿಗೆಳೆದುಕೊಂಡು ಹೋದಳು ಬಬ್ಲಿ. ಏನೆಂದು ಕೇಳಿದರೆ ಮಾತೇ ಆಡುತ್ತಿಲ್ಲ. ರೂಮ್ ಬಾಗಿಲ ಬೋಲ್ಟ್ ಜಡಿದು ಲ್ಯಾಪ್ ಟಾಪ್ ಆನ್ ಮಾಡಿದಳು. ಇದು ನೆನ್ನೆ ನೀನು ಕೊಟ್ಯಲ್ಲ, ನಂಗ್ಯಾರೋ ಕೊಟ್ಟುಹೋದರು ಅಂತ ಆ ಸಿಡಿ ಎನ್ನುತ್ತಾ ಅದನ್ನು ಹಾಕಿ ಪ್ಲೇ ಮಾಡಿದಳು. ಅಲ್ಲೂ ಅದೇ ಸದ್ದು ಅದೇ ನರಳುವ ಸದ್ದು. ನನ್ಗೆ ಚಿಟ್ಟು ಹಿಡಿಯುವುದೊಂದು ಬಾಕಿ.

 

ಅಷ್ಟರೊಳಗೆ ಬಾಗಿಲು ಬಡಿದರು. ಲ್ಯಾಪ್ ಟಾಪ್ ಆಫ್ ಮಾಡಿ ರೂಮ್ ಬಾಗಿಲು ತೆರೆದರೆ ಲಾಲಿ ‘ಗೊತ್ತಾಯ್ತೇನ್ರೇ ವಿಶ್ಯಾ.. ಆ ಮಲೆಯಾಳಿ ಹುಡುಗೀರಿದ್ರಲ್ಲಾ ಯಾವಾಗ್ಲೂ ಜೊತೆಗೇ ಓಡಾಡ್ಕೊಂಡಿದ್ರಲ್ಲಾ ನರ್ಸಿಂಗ್ ಕಾಲೇಜೋರು ಅವ್ರಿಬ್ಬರ ಡೆಡ್ ಬಾಡೀಸ್ ಫಾರ್ಮರ್ ಫುಡ್ ಬಾವೀಲಿ ಸಿಕ್ಕಿದ್ಯಂತೇ ಪೋಲೀಸೆಲ್ಲಾ ಬಂದಿದಾರಂತೆ ನೋಡ್ಕೊಂಡ್ ಬರಣಾ ಬನ್ರೇ’ ಎಂದಳು ಏದುಸಿರಿಡುತ್ತಾ.. ನಂಗೆ ಆಶ್ಚರ್ಯವಾಯಿತು. ಬಾರೆ ಬಬ್ಲಿ ಹೋಗಣ ಅಂದ್ರೆ ಇಲ್ಲ ಬೇಡ ನಾ ಬರಲ್ಲ ನೀನೂ ಹೋಗ್ಬೇಡ. ಲಾಲಿ ನೀನು ಹೋಗು ನಾವು ಬರಲ್ಲ ಅಂದ್ಲು. ಎಲ್ಲದಕ್ಕೂ ಬೇಡ ಬೇಡ ಅಂತೀಯಲ್ಲ ಏನಾಗಿದೆ ನಿಂಗೆ ಅಂದೆ. ಅವಳ ಕಣ್ಣಲ್ಲಿ ಜಲಪಾತ.

 

ನಯ್ನೀ ಎರೆಡು ದಿನದ ಹಿಂದೆ ಥರ್ಡ್ ಫ್ಲೋರ್ ಬಾತ್ ರೂಮಿನಿಂದ ಕಿರುಚಿಕೊಂಡು ಬಂದ್ನಲ್ಲ ಆವಾಗ ನಾನು ನೋಡಿದ್ದು ಜಿರಲೆನಲ್ಲ ಅಲ್ಲ್ಯಾರೂ ಫೋನ್ನಲ್ಲೂ ಮಾತಾಡುತ್ತಿರಲಿಲ್ಲ. ಈಗ ಲಾಲಿ ಹೇಳಿದ್ಲಲ್ಲ ಆ ಹುಡ್ಗೀರು ಬಾತ್ ರೂಮ್ನಲ್ಲಿ ಈ ಲೋಕದ ಪ್ರಗ್ನೇನೇ ಇಲ್ಲದೋರ ಥರ ಒಬ್ಬರ ಬೆತ್ತಲೆ ದೇಹನ ಇನ್ನೊಬ್ಬರು ತಬ್ಬಿಕೊಂಡು ಮಲ್ಗಿದ್ರು, ನಂಗೆ ಅಸಹ್ಯ ಆಗಿ ಕಿರುಚಿಕೊಂಡೆ. ನಾ ನೋಡಿದೆ ಅಂತಾನೇ ಅವ್ರು ಆತ್ಮಹತ್ಯೆ ಮಾಡ್ಕೊಂದಿರ್ಬೇಕು ಬಿಕ್ಕಳಿಸಿದಳು. ನನಗೆ ಆಘಾತ! ಹೇಗೆ ಪ್ರತಿಕ್ರಯಿಸಬೇಕೆಂದೇ ತಿಳಿಯಲಿಲ್ಲ.. ಇಬ್ಬರೂ ಆ ವಿಶಯವನ್ನು ಯಾರಿಗೂ ಹೇಳಬಾರದೆಂದು ನಿರ್ಧರಿಸಿದೆವು.

 

ಮಾರನೇ ದಿನ ಕಾಲೇಜಿಗೆ ಹೊರಟೆ ಹೊರಡುವ ಮೊದಲು ಇಂಟರ್ನಲ್ಸ್ ಮಾಕ್ಸಿಗೆ ಸೈನ್ ಹಾಕಿಸಿಕೊಳ್ಳೋಣವೆಂದು ವಾರ್ಡನ್ ರೂಮಿಗೆ ಹೋದೆ. ವಾರ್ಡನ್ ಜೊತೆ ಪೋಲೀಸ್ ಮಾತಾಡುತ್ತಾ ಕೂತಿದ್ದರು ಅವರು ಹೇಳೋದು ಕೇಳಿಸಿತು ‘ಪೊಸ್ಟ್ ಮಾರ್ಟಮ್ ರಿಪೋರ್ತ್ಸ್ ಬಂದಿದೆ ಈ ಹುಡುಗೀರು ಸತ್ತು ಆಗ್ಲೇ ಐದು ದಿನ ಆಗಿದೆ…. ಮುಂದಿನದೇನು ಕೇಳಿಸಲಿಲ್ಲ. ಬಬ್ಲಿ ಎರಡು ದಿನದ ಹಿಂದಷ್ಟೇ ಅವರನ್ನು ನೋಡಿದೆ ಎಂದಳಲ್ಲ ಅವಳು ನೋಡಿದ್ದಾದರೂ ಏನು! ಅವಳು ಹೇಳಿದ್ದು ನಿಜವಾ ಏನೂ ಅರ್ಥ ಆಗಲಿಲ್ಲ ನನಗೆ. ನಾನು ಕುಸಿದು ಕೂತೆ!

ಒಂದು ಹುಚ್ಚು ಬೆನ್ನ ಏರಿ…

 

ಹತ್ತು ಹಲವು ಹುಚ್ಚುಗಳಲ್ಲಿ ಒಂದು

ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್ 
ಇದು ಮೇ ೨೦೦೮ರಲ್ಲಿ ಕೈಗೊಂಡ ೧೮ ದಿನಗಳ ಕಾಲ್ನಡಿಗೆ ಪ್ರವಾಸ. ಎಂದೂ ಮರೆಯಲಾಗದ ಅನುಭವಗಳಲ್ಲಿ ಒಂದು. ಕೆಲವು ಅನುಭವಗಳನ್ನು ಮಾತಿನಲ್ಲಿ ವಿವರಿಸಲಸಾಧ್ಯ ಅಥವಾ ಅಂತಹದೇ ಅನುಭವ ಓದುವವರಿಗೆ ಸಿಗುವಂತಾಗಲು ತುಂಬಾ ಬರೆಯಬೇಕಾಗುತ್ತೇನೊ, ಅಂತೂ ಅಮ್ಮ ನನ್ನ ಹಿಂದೆ ಬಿದ್ದು, ತಾನು ಓದುವ ಆಸೆಯಲ್ಲಿ ಇದನ್ನು ಬರೆಯಲು ಪ್ರೊತ್ಸಾಹಿಸಿದರು. ಆದರೂ ಇದನ್ನು ಬರೆದು ಮುಗಿಸಲು ಸಮಯ ಬೇಕು. ಈ ಬಿಸಿಲಿನಲ್ಲಿ ಕುಳಿತುಕೊಂಡು ಆ ಥಂಡಿಯನ್ನು ಅನುಭವಿಸಿಕೊಂಡು ಬರೆಯುವುದು ಕಷ್ಟವೇ ಸರಿ.
ಸಂಪೂರ್ಣ ಓದಿಗೆ ಭೇಟಿ ಕೊಡಿ : ಜೀವ ಜಾಲ
+++
ಬಾಲು ಮ್ಯಾಜಿಕ್
ಇನ್ನಷ್ಟು ಚಿತ್ರಗಳಿಗಾಗಿ ಭೇಟಿ ಕೊಡಿ: ಚಿತ್ರ ಛಾಯಾ

ಹೀಗೆ ಸುಮ್ಮನೆ ನೆನಪಾದರು ಗಾಂಧಿ..