ಅಲ್ಬಮ್’ನಿಂದ

ಜಿ ಎಸ್ ಸದಾಶಿವ ಪತ್ನಿ ಗೀತಾ ಅವರೊಂದಿಗೆ

ಫೋಟೋ ಕೃಪೆ: ಮನಸ್ವಿ 

ಜೋಗಿ ಬರೆದಿದ್ದಾರೆ: ಅನುಭವದರಮನೆ ಮುಂದೆ ಅಕ್ಷರದ ಭಿಕ್ಷಾಪಾತ್ರೆ

ಒಳ್ಳೆಯ ಕತೆ ಹೇಗೆ ಹುಟ್ಟುತ್ತದೆ.

 

ಆಕಸ್ಮಿಕವಾಗಿ,ಅದೃಷ್ಟದಿಂದ, ಪ್ರತಿಭೆಯಿಂದ, ಪರಿಶ್ರಮದಿಂದ, ಅಭ್ಯಾಸ ಬಲದಿಂದ,ಒತ್ತಡದಿಂದ, ಒತ್ತಾಯದಿಂದ, ಬರೆಯಲೇ ಬೇಕು ಅನ್ನುವ ಹಟದಿಂದ?

ಇದ್ಯಾವುದೂ ಉತ್ತರ ಅಲ್ಲ, ಇವೆಲ್ಲವೂ ಉತ್ತರವೇ. ಒಬ್ಬೊಬ್ಬರ ಪಾಲಿಗೆ ಒಂದೊಂದು ನಿಜ. ಎಲ್ಲರ ಪಾಲಿಗೂ ಎಲ್ಲವೂ ಸುಳ್ಳು. ಒಂದು ಒಳ್ಳೆಯ ಕತೆ ಹೇಗೆ ಸೃಷ್ಟಿಯಾಗುತ್ತದೆ ಅನ್ನುವುದು ಬಹುಶಃ ಕತೆಗಾರನಿಗು ಗೊತ್ತಿರುವುದಲ್ಲ. ಕವಿಗೂ ಗೊತ್ತಿರುವುದಲ್ಲ.

 

ಆಳದನುಭವವನ್ನು ಮಾತು ಕೈ ಹಿಡಿದಾಗ

ಕಾವು ಬೆಳಕಾದಾಗ ಒಂದು ಕವನ.

ಆದರೆ ಆಳದನುಭವವನ್ನು ಮಾತು ಕೈ ಹಿಡಿಯುವುದು ಯಾವಾಗ? ಕಾವು ಯಾವಾಗ ಬೆಳಕಾಗುತ್ತದೆ? ಅದು ಯಾವ ಕವಿಗೂ ಬಹುಶಃ ಗೊತ್ತಿರುವುದಿಲ್ಲ. ಏಕಾಂತ, ಏಕಾಗ್ರತೆ ಧ್ಯಾನಸ್ಧ ಸ್ಧಿತಿ ಅಂತೆಲ್ಲ ನಾವೆಷ್ಟೇ ಹೇಳಿಕೊಂಡರೂ ಕೊನೆಗೂ ಅಕ್ಷರವಾದಾಗ ಏನು ಉಳಿಯುತ್ತದೆ ಎಂಬುದು ನಿಗೂಢವೇ.

ಏನು ಬರೀಬೇಕು ಅಂತ ನಾನು ತೀರ್ಮಾನ ಮಾಡಿ ಕೊಂಡಿದ್ದೀನಿ. ಕತೆ ಹೀಗೆ ಶುರುವಾಗುತ್ತೆ, ಹೀಗೆ ಮುಂದುವರಿಯುತೆ, ಹೀಗೆ ಕೊನೆಯಾಗುತ್ತೆ ಅಂತ ನಿರ್ಧರಿಸಿ ಬರೆಯುವುದಕ್ಕೆ ಹೊರಡುವ ಕತೆಗಾರ ಕೂಡ ಎಡುವುತ್ತಾನೆ. ಹಾಗೆ ಎಡವಿದಾಗಲೇ ಅಂದುಕೊಳ್ಳದೇ ಇದ್ದದ್ದು ಹೊಳೆಯುತ್ತದೆ. ಹಾಗೆ ಹೊಳೆದಾಗಲೇ ಕತೆ ಗಾರನ ಊಹೆಯನ್ನೂ ಮೀರಿದ್ದೇನೋ ಸೃಷ್ಟಿಯಾಗುತ್ತದೆ.

 

ಅದು ಮ್ಯಾಜಿಕ್ ಅಧವಾ ಪವಾಡ. ಅಂತದೊಂದು ಮಾಂತ್ರಿಕ ಶಕ್ತಿ ಇರುವುದರಿಂದಲೇ ಕತೆಯೋ ಕವಿತೆಯೋ ಎಲ್ಲರ ಸೊತ್ತಾಗುತ್ತದೆ. ಎಲ್ಲರಿಗೂ ಆಪ್ತವಾಗುತ್ತದೆ. ಲೆಕ್ಕಾಚಾರ ಹಾಕಿ ಬರೆದದ್ದು ಗಣಿತದ ಸೂತ್ರಗಳ ಪ್ರಕಾರ ಬಿಡಿಸಿದ ಬೀಜರೂಪ ಸಮಸ್ಯೆಯಂತೆ ಕಂಡರೆ, ಲೆಕ್ಕ ತಪ್ಪಿದಾಗ ಮೂಡಿದ್ದು ಎಲ್ಲಾ ಲೆಕ್ಕಾಚಾರಗಳನ್ನೂ ಮೀರಿಸಿ ಬೆಳೆದುಬಿಡುತ್ತದೆ. ಅದಕ್ಕೆ ಕವಿ ಪರವಶಜೀವಿ. ದೇವರು ರುಜು ಮಾಡುತ್ತಾನೆ. ಕವಿ ಪರವಶನಾಗುತ್ತಾ ಅದನ್ನು ನೋಡುತ್ತಾನೆ.

 

ಇಲ್ಲದೇ ಹೋದರೆ ಯಾವುದು ಒಳ್ಳೆಯ ಸಾಹಿತ್ಯ, ಒಳ್ಳೆಯ ಪ್ರಸಂಗ ಅನ್ನುವುದು ಎಲ್ಲರಿಗೂ ಗೊತ್ತಿರುತೆ ತಾನೇ. ಮಹಾಭಾರತ, ರಾಮಾಯಣದಂಧ, ಅಣ್ಣಾ ಕರೆನಿನಾದಂತ, ವಾರ್ ಅಂಡ್ ಪೀಸ್ ನಂಥ , ಮಾರ್ಕ್ವೆಸ್ ನ ‘ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ನಂಥ ಒಂದು ಕೃತಿಯನ್ನು ಯಾರು ಬೇಕಾದರೂ ಬರೆಯಬಹುದಲ್ಲ. ಅಂಥ ಕೃತಿಗಳ ಹೂರಣ ಏನು, ಕತೆಯನ್ನು ಅದೇ ಶೈಲಿಯಲ್ಲಿ ಹೇಳಿ ಗೆಲ್ಲಬಹುದಲ್ಲ.

 

ಕತೆ ಹೇಳುವುದು ಕಲಿಯುವನ್ತಹದ್ದು ಅಲ್ಲ. ಹತ್ತಿಪ್ಪತ್ತು ಒಳ್ಳೆಯ ಪ್ರಸಂಗಗಳನ್ನು ಒಟ್ಟಾಗಿಸಿದರೆ ಅದು ಒಳ್ಳೆಯ ಕತೆಯೋ ಕಾದಂಬರಿಯೊ ಆಗುವುದಿಲ್ಲ. ಅದು ಹಾಗೊಂದು ಪ್ರೀತಿಸುವಂಥ ಕತೆಯೋ ಕವಿತೆಯೊ ಕಾದಂಬರಿಯೋ ಆಗುವುದು ಆಯಾ ಕವಿಯ ಪುಣ್ಯ ಅಷ್ಟೇ.

 

ಸಿನೆಮಾ ಕೂಡ ಅಷ್ಟೇ. ಕತೆ ಏಕಾಂತದಲ್ಲಿ ಹುಟ್ಟಿದರೆ, ಸಿನೆಮಾ ಲೋಕಾಂತದಲ್ಲಿ ಹುಟ್ಟುತ್ತದೆ. ಪ್ರತಿಯೊಂದು ದೃಶ್ಯವೂ ಸೊಗಸಾಗಿರಬೇಕು, ಅರ್ಥಪೂರ್ಣ ವಾಗಿರಬೇಕು ಎಂಬ ಒತ್ತಾಯದಲ್ಲೇ ಹಲವಾರು ಮಂದಿಕುಳಿತು ಸಿನೆಮಾದ ಕತೆ ಮಾಡುತ್ತಾರೆ. ಹಾಗೆ ಮಾಡಿದ ಕತೆ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಅದೇ ಅಂತಿಮ ಅಲ್ಲ. ಚಿತ್ರಕತೆ, ಸಂಭಾಷಣೆ ಸೊಗಸಾಗಿದ್ದ ಮಾತ್ರಕ್ಕೆ ಸಿನೆಮಾ ಕೂಡ ಸೊಗಸಾಗಿರಬೇಕು ಎಂದೇನಿಲ್ಲ. ಸಿನೆಮಾ ಸೊಗಯಿಸುವುದು ಮತ್ತದೇ ಮ್ಯಾಜಿಕ್ ನಿಂದ. ಕತೆಯೇ ಬೇರೆ ಚಿತ್ರಕತೆಯೇ ಬೇರೆ, ಸಿನೆಮಾ ರೂಪವೇ ಬೇರೆ. ಅಲ್ಲಿ ಅದು ಇನ್ನೇನೋ ಆಗಿ ಸಿನೆಮಾ ಆಗಬೇಕು.

 

ಒಂದು ಒಳ್ಳೆಯ ಕಾದಂಬರಿ ಬರೆದವನ ಮತ್ತೊಂದು ಕಾದಂಬರಿಯೋ ಕತೆಯೋ ಚೆನ್ನಾಗಿರುತ್ತದೆ ಅನ್ನುವ ನಿರೀಕ್ಷೆ ಇಟ್ಟುಕೊಳ್ಳುವ ಹಾಗೂ ಇಲ್ಲ. ಅದು ಸ್ವತಃ ಲೇಖಕನಿಗೂ ಗೊತ್ತಿರುವುದಲ್ಲ. ಬರೆಯತ್ತಾ ಅವನು ಬಿಡುಗಡೆ ಹೊಂದುತ್ತಾ ಹೋಗುತ್ತಾನೆ. ಆಕ್ಷಣದಲ್ಲಿ ಅವನು ಅನುಭವಿಸಿದ ಸಂತೋಷ ಮಾತ್ರವೇ ಅವನದು. ಬರೆದಾದ ಮೇಲೆ ಅದನ್ನು ತಿದ್ದುತ್ತೇನೆ, ಮತ್ತೆ ಬರೆಯುತ್ತೇನೆ ಅನ್ನುವುದು ಸುಳ್ಳು. ಹಾಗೆ ಮತ್ತೊಮ್ಮೆ ಬರೆಯಲು ಹೋದಾಗ ಅದು ಬೇರೆಯೇ ಆಗುತ್ತದೆ. ಬೇರೆ ಆಗದೆ ಹೋದರೆ ಅವನು ಕವಿಯಲ್ಲ, ಕತೆಗಾರನೂ ಅಲ್ಲ, ವರದಿಗಾರ.

 

ಹೀಗಾಗಿ ನಾವು ಒಬ್ಬ ಲೇಖಕನ ಪದಪ್ರಯೋಗ, ಶಬ್ದ ಭಂಡಾರ, ಶೈಲಿಗಳನ್ನು ಊಹಿಸಬಹುದೇ ಹೊರತು ಕತೆ ಕಟ್ಟಿಕೊಡುವ ಅಪೂರ್ವ ಮಾಂತ್ರಿಕತೆಯನ್ನು ಖಂಡಿತಾ ಊಹಿಸಲಾರೆವು. ಅದು ಕತೆಗಾರನೂ ಸೇರಿದಂತೆ ಎಲ್ಲರ ಪಾಲಿಗೂ ನಿಗೂಢವೇ. ಆ ಮಿಸ್ಟರಿಯೇ ಇವತ್ತು ಕಲೆಯನ್ನು ವಿಜ್ಘಾನ. ವ್ಯಾವಹಾರಿಕತೆ, ದುಡ್ಡಿನ ದರ್ಪ ಮತ್ತು ನಾನು ಏನು ಬೇಕಾದರೂ ಮಾಡಿ ಗೆಲ್ಲ ಬಲ್ಲೆ ಎಂಬ ಅಹಂಕಾರ ದಿಂದ ಕಾಪಾಡಿರುವುದು ಸೃಜನಶೀಲ ಬರವಣಿಗೆ ಅನ್ನುವುದು ಮೂಲಭೂತ ಪ್ರವೃತಿಯ ಹಾಗೆ. ಆಹಾರ ನಿದ್ರೆ ಮೈಥುನದ ಹಾಗೆ. ಆ ಕ್ಷಣಕ್ಕೆ ಎಷ್ಟೆಷ್ಟು ಒದಗುತ್ತದೊ ಅಷ್ಟು. ಒಮ್ಮೊಮ್ಮೆ ಮೃಷ್ಟಾನ್ನವೂ ಸವಿಯಾಗಿರುತ್ತದೆ.

 

ಕವಿಯೋ, ಕತೆಗಾರನೋ, ಕಾದಂಬರಿಕಾರನೋ ಹೆಗಲಿಗೊಂದು ಜೋಳಿಗೆ ಹಾಕಿಕೊಂಡು ಅಲೆಯುತ್ತಿರುತ್ತಾನೆ. ಭವತಿ ಭಿಕ್ಷಾಂ ದೇಹಿ ಎನ್ನುತ್ತಾ ವರ್ತಮಾನದ ಮುಂದೆ ನಿಲ್ಲುತ್ತಾನೆ. ಆ ಕ್ಷಣ ಅವನಿಗೆ ಏನನ್ನು ದಾನ ಮಾಡುತ್ತದೋ ಅದೇ ಅವನ ಆ ಹೊತ್ತಿನ ಭಿಕ್ಷೆ. ಆ ಭಿಕ್ಷೆಯ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ. ಅದನ್ನು ಅವನು ನಿರಾಕರಿಸುವ ಹಾಗೂ ಇಲ್ಲ.

 

ಇಂಧ ಅಕ್ಷರದ ಭಿಕ್ಷಾಪಾತ್ರೆ ಹಿಡಿದು, ಅನುಭವದರ ಮನೆಯ ಮುಂದೆ ನಿಂತವನ ಜೋಳಿಗೆಯಲ್ಲಿ ಆ ದಿನ, ಆ ಕ್ಷಣ ಏನಿರುತ್ತೆ ಅಂತ ಯಾರಿಗೆ ಗೊತ್ತು? ಕವಿಗೂ ಗೊತ್ತಿಲ್ಲದ್ದನ್ನು ತಮಗೆ ಗೊತ್ತು ಎನ್ನುವ ವಿಮರ್ಶಕರ ಬಗ್ಗೆ ಏನನ್ನೋಣ?

+++

ಒಂದು ಕೃತಿಯನ್ನು ಯಾರಾದರೂ ಯಾಕೆ ಓದುತ್ತಾರೆ? ಆ ಕ್ಷಣದ ಸಂತೋಷಕ್ಕೆ, ಖುಷಿಗೆ, ಅದು ಒದಗಿಸುವ ಸಾಂತ್ವನಕ್ಕೆ, ಸಮಾಧಾನಕ್ಕೆ. ಅದಕ್ಕೊಂದು ಸಾಂಸ್ಕೃತಿಕ ತಳಹದಿ, ತಾತ್ವಿಕ ನೆಲೆಗಟ್ಟು ಇರಬೇಕಾ? ಒಂದು ಕೃತಿ ಸಾಮಾಜಿಕವಾಗಿ ಮಹತ್ವದ್ದನ್ನೇನಾದರೂ ಹೇಳುತ್ತಿರಬೇಕಾ?

 

ರಸಗ್ರಹಣ, ಕಾವ್ಯಾಸ್ವಾದನೆ ಎಲ್ಲವೂ ಒಂದು ವಿಚಿತ್ರ ಕಾಲಘಟ್ಟದಲ್ಲಿ ಅರ್ಥ ಕಳೆದುಕೊಂಡು ನಿಂತಿವೆ. ತೆಯನ್ನೂ ಕಾದಂಬರಿಯನ್ನೂ, ಕವಿತೆಯನ್ನೂ ಕೇವಲ ಕವಿತೆಯಾಗಿಯೋ ಕಾವ್ಯವಾಗಿಯೋ ಕಾದಂಬರಿಯಾ ಗಿಯೋ ನೋಡುವುದನ್ನು ಬಿಟ್ಟು ನಮ್ಮ ಬಹುತೇಕ ವಿಮರ್ಶಕರು, ಸಾಮಾಜಿಕವಾಗಿ ಅದು ಯಾವ ಸ್ಟೇಟ್ಮೆಂಟ್ ಮಾಡುತ್ತದೆ ಎನ್ನುವುದನ್ನು ನೋಡುತ್ತಾರೆ. ಸಂಸ್ಕೃತಿ ವಿಮರ್ಶೆ ಎನ್ನುವುದು ಕಾವ್ಯದ ಸಾಹಿತ್ಯದ ವಿರುದ್ದವಾಗಿ ಕೆಲಸ ಮಾಡಲು ಆರಂಭಿಸಿ ವರ್ಷಗಳೇ ಕಳೆದಿವೆ.

 

ಸಂಸ್ಕೃತಿ ವಿಮರ್ಶೆ ಯಾಕೆ ಅಪಾಯಕಾರಿ ತಪ್ಪಾಗುತ್ತದೆ. ಸಂಸ್ಕೃತಿ ವಿಮರ್ಶೆ ಎಂಬುದು ಸಾಹಿತ್ಯ ವಿಮರ್ಶೆಯ ವ್ಯಾಪ್ತಿಯನ್ನು ಮೀರಿದ್ದು. ಅದು ಸಾಹಿತ್ಯದ ಜೊತೆಗೇ, ತಾತ್ವಿಕತೆಯನ್ನು ಸಾಮಾಜಿಕ ಸ್ಧಿತಿಗತಿಯನ್ನು ಏಕಕಾಲದಲ್ಲಿ ಒಳಗೊಳ್ಳುತ್ತದೆ. ಹೀಗಾಗಿ ಸಾಹಿತ್ಯ ಕೃತಿಯ ಮೌಲ್ಯ ಮಾಪನ, ರಸಗ್ರಹಣ ಹಿಂದಕ್ಕೆ ಸರಿದು, ಆ ಕೃತಿಯ ಮೂಲಕ ಇನ್ನೇನನ್ನೋ ಹುಡುಕುವ ಚಾಳಿ ಶುರುವಾಗುತ್ತದೆ.

 

ಲೇಖಕನ ನಿಲುವು ಸರಿಯೋ ತಪ್ಪೋ, ಅವನು ಪಾತ್ರ ಗಳ ಮೂಲಕ ಸದ್ಯದ ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಗ್ರಹಿಸುವ ಪ್ರಯತ್ನ ಮಾಡಿದ್ದಾನಾ? ಎಲ್ಲ ವರ್ಗಗಳಿಗೂ ಅಲ್ಲಿ ಪ್ರಾತಿನಿಧ್ಯ ಸಿಕ್ಕಿದೆಯಾ? ಒಂದು ಪಾತ್ರವನ್ನು ಒಬ್ಬ ಕತೆಗಾರ ಸೃಷ್ಟಿಸುವ ಹೊತ್ತಿಗೆ ಅವನ ಅಭಿಪ್ರಾಯ ಏನು? ಅವನು ಯಾರನ್ನು ಬೆಂಬಲಿಸುತ್ತಾನೆ? ಅಲ್ಪಸಂಖ್ಯಾತರ ಕುರಿತು ಅವನು ಏನನ್ನು ಹೇಳುತ್ತಾನೆ? ಅವನು ಸನಾತನ ವಾದಿಯೇ? ಹೀಗೆ ಕೃತಿಗೆ ಏನಕೇನ ಸಂಬಂಧವಿಲ್ಲದ ಅಂಶಗಳನ್ನು ಮುಂದಿಟ್ಟುಕೊಂಡು ಕೃತಿಯನ್ನು ಚರ್ಚಿಸಲಾಗುತ್ತದೆ.

 

ಬಹುಶಃ ಓದುಗ ಸಾಹಿತ್ಯ ಕೃತಿಯ ಮೇಲಿನ ಪ್ರೀತಿ, ನಂಬುಗೆ ಕಳೆದುಕೊಳ್ಳಲು ಇದೂ ಒಂದು ಕಾರಣವಿರಬಹುದು. ಆಧುನಿಕ ಸಮಾಜದ ಎಲ್ಲ ಸಮಸ್ಯೆಗಳ ತಾಯಿಬೇರು ಎನ್ನುತ್ತಾರೆ ಮನೋ ವಿಜ್ಘಾನಿಗಳು. ನಮ್ಮ ಒತ್ತಡ, ಉದ್ವೇಗ, ನಿರುತ್ಸಾಹ, ಲೋಲುಪತೆ-ಎಲ್ಲದರ ಹಿಂದೆ ಕೆಲಸ ಮಾಡುವ ಶಕ್ತಿ ಸ್ವಾರ್ಥವಲ್ಲ. ಅಹಂಕಾರವಲ್ಲ, ಲೋಭ, ಮೋಹ, ಮಾತ್ಸರ್ಯವಲ್ಲ. ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುವ ಪಾಪಪ್ರಜ್ಞೆ. ಪುರಾಣಗಳಲ್ಲಿ ಬರುವ ಪಾಪದ ಕಲ್ಪನೆಗೆ ವರ್ತಮಾನದಲ್ಲಿ ಉದಾಹರಣೆಗಳು ಸಿಗುತ್ತಿವೆ.

ಈ ಬಗ್ಗೆ ಮೊದಲ ಮಾತಾಡಿದವನು ಕಾಫ್ಕಾ. ಈ ಕಾಫ್ಕಾನ ಡೈರಿಯೇ ಕುತೂಹಲಕಾರಿ.

ಎಲ್ಲ ಚಳವಳಿಗಳ ಮೊದಲನೇ ಮಹಿಳೆ

 

ಪೊನ್ನಮ್ಮಾಳ್ ಎಂಬ ಸಮಾಜವಾದೀ ದೇವತೆ

ಶಿವಮೊಗ್ಗದ ಸಮಾಜವಾದೀ ಕುಟುಂಬದಲ್ಲಿ ಕೆಲವರಿಗೆ ಅಕ್ಕನಂತೆಯೂ ನಮ್ಮಂಥ ಎಳೆಯರಿಗೆ ತಾಯಿಯಂತೆಯೂ ಇದ್ದ ಪೊನ್ನಮ್ಮಾಳ್ ನಿಧನ ನನ್ನ ಮಟ್ಟಿಗೆ ಅತೀವ ದುಃಖದ ಸಂಗತಿ. 

ನಮ್ಮ ಎಲ್ಲ ಚಳವಳಿಗಳಲ್ಲೂ ಭಾಗವಹಿಸುತ್ತಿದ್ದ ಮೊದಲನೇ ಮಹಿಳೆಯೆಂದರೆ ಪೊನ್ನಮ್ಮಾಳ್. ಚಳವಳಿಗಳಲ್ಲಿ ಮಾತ್ರವಲ್ಲ ನಮ್ಮ ಗಾಢವಾದ ತಾತ್ವಿಕ ಚರ್ಚೆಯಲ್ಲೂ ಅವರು ಪಾಲುದಾರರು. ಆದರೆ ಸ್ವಂತದ್ದಾದ ಯಾವ ರಾಜಕೀಯ ಆಸೆಯೂ ಅವರಿಗಿರಲಿಲ್ಲ. ಕನ್ನಡದ ಅನೇಕ ಮಹತ್ವದ ಲೇಖಕರಂತೆಯೇ ಪೊನ್ನಮ್ಮಾಳ್ ಮನೆಯಲ್ಲಿ ಕನ್ನಡ ಮಾತನಾಡದಿದ್ದರೂ ಸಂಪೂರ್ಣ ಕನ್ನಡಿಗರೇ ಆಗಿದ್ದವರು. ನಮಗೆ ಯಾರು ಯಾವ ಜಾತಿ ಇತ್ಯಾದಿ ಕುತೂಹಲಗಳೂ ಇಲ್ಲದಿದ್ದಾಲದಲ್ಲಿ ಪೊನ್ನಮ್ಮಾಳ್ ನಮ್ಮವರಾದರು.

 

ಸಂಪೂರ್ಣ ಓದಿಗೆ ಭೇಟಿ ಕೊಡಿ: ಋಜುವಾತು 

 

+++

 

ಗುಲಾಬಿ ಟಾಕೀಸಿಗೆ ಒಂದ್ಸಲ ಹೋಯ್ ಬಪ್ರ್ಯಲ…

ಅಂತೂ ಕಳ್ದ್ ವಾರ ಪಿ.ವಿ.ಆರ್ ಟಾಕೀಸಿಗ್ ಹೋಯಿ ಗುಲಾಬಿ ಟಾಕೀಸ್ ಕಂಡ್ಕಂಡ್ ಬಂದೆ. ವೈದೇಹಿ ಬರದ್ ಕತಿದ್ ಒಂದ್ ಸಣ್ಣ್ ಎಳಿ ಮಾತ್ರ ಇಟ್ಕಂಡಿರ್. ಕತಿ ಬದ್ಲ್ ಮಾಡ್ರೂ ಪಿಚ್ಚರ್ ಭಾರಿ ಲಾಯ್ಕ್ ಆಯಿ ಬಂದಿತ್. ಉಮಾಶ್ರೀಯಂತೂ ಕುಂದಾಪ್ರ್ ಬದ್ಯರ್ ಅಲ್ಲ ಅಂದೇಳಿ ಹೇಳುಕ್ ಯಡ್ಯ. ಹಾಂಗ್ ಕಾಂಬುಕ್ ಹೋರೆ ಎಂ.ಡಿ.ಪಲ್ಲವಿ ಮಾಡದ್ ನೇತ್ರ ಕುಂದಾಪ್ರ ಕನ್ನಡ ಮಾತಾಡ್ವತಿಗೆ ಒಂಚೂರ್ ಬೇರೆ ನಮ್ನಿ ಕೇಂತಿತ್ತ್. ಆರ್ ಇದೆಲ್ಲ ಅಷ್ಟ್ ದೊಡ್ ತಪ್ಪೇನಲ್ಲ ಬಿಡಿ. ನಾವ್ ಹುಟ್ಟಿನ್ ಲಗಾಯ್ತ್ ಊರಗೇ ಇದ್ದದ್. ಈಗೊಂದ್ ನಾಲ್ಕಾರ್ ವರ್ಷದ್ ಈಚಿಗೆ ಊರ್ ಬಿಟ್ಟದ್. ಆರೂ ಮಾತಾಡ್ವತಿಗೆ ಬ್ಯಾಡ ಅಂದ್ರೂ ಈ ಬದಿ ಕನ್ನಡ ಎಷ್ಟೋ ಸಲ ಎಳಿತ್ತ್. ಇನ್ ಅವ್ರ ನಾಕ್ ದಿನ್‌ದಗೆ ಅಷ್ಟಪ ಕಲ್ತ್ ಮಾತಾಡುದೇ ಹೆಚ್ಚ್…

ಸಂಪೂರ್ಣ ಓದಿಗೆ ಭೇಟಿ ಕೊಡಿ: ಕುಂದಾಪ್ರ ಕನ್ನಡ

%d bloggers like this: