ಆತನ ಹೆಸರು: ಶೇಷ ಅಲಿಯಾಸ್‌ ಶೇಷ ನಾಯ್ಕ.


ಶ್ರೀಸಾಮಾನ್ಯನಿಗೆ ನಮಸ್ಕಾರ!

-ವಿಕಾಸ ನೇಗಿಲೋಣಿ
ಕಳ್ಳ-ಕುಳ್ಳ ಬ್ಲಾಗ್ ನಿಂದ-

ಆತ ತೀರಿಕೊಂಡ ಸುದ್ದಿ ನಮ್ಮ ಊರಿಗೆ ಒಂದೆರಡು ದಿನಗಳ ನಂತರ ಗೊತ್ತಾಯಿತು, ನಮ್ಮಂಥ ಪೇಟೆವಾಸಿ ಹುಡುಗರಿಗೆ ಇಪ್ಪತ್ತು, ಮೂವತ್ತು ದಿನಗಳ ನಂತರ ಗೊತ್ತಾಯಿತು.

ಆತನ ಹೆಸರು: ಶೇಷ ಅಲಿಯಾಸ್‌ ಶೇಷ ನಾಯ್ಕ.

ಆತ ರಾಜ್ಯ ಮಟ್ಟದ, ಹೋಗಲಿ ಜಿಲ್ಲಾ, ತಾಲೂಕು ಮಟ್ಟದ ಪ್ರಸಿದಿಯನ್ನೂ ಪಡೆದವನಾಗಿರಲಿಲ್ಲವಾದರೂ (ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ) `ಹಳೆನಗರ’ದಂಥ ಸಣ್ಣ ಹೋಬಳಿಗೆ, ರ್ಯಾವೆಯಂಥ ಹತ್ತು ಹಲವು ಗ್ರಾಮಗಳಿಗೆ ಬೇಕಾದವನಾಗಿದ್ದ. ಆತ ಊರಿಗೆ ಪೋಸ್ಟ್‌ ತಂದುಕೊಡುತ್ತಿದ್ದ, ಪೇಪರ್‌ ತೆಗೆದುಕೊಂಡು ಬರುತ್ತಿದ್ದ, ಅಗತ್ಯ ಬಿದ್ದರೆ ದೂರದ ಪೇಟೆಯಿಂದ ದನ ಕರುಗಳಿಗೆ ಹಿಂಡಿ, ಹತ್ತಿಕಾಳು ತರುತ್ತಿದ್ದ. ಆತ ಪೋಸ್ಟ್‌ ಮ್ಯಾನ್‌ ಆಗುವ ಜತೆಜತೆಗೇ ನಗರಕ್ಕೂ ಊರಿಗೂ ಒಂದು ಕೊಂಡಿಯೇ ಆಗಿದ್ದ. ಊರ ಮದುವೆ, ತಿಥಿ ಊಟದ ಖಾಯಂ ಅತಿಥಿಯಾಗಿ, ಯಾರ ಆರೋಗ್ಯವೇ ಹದಗೆಡಲಿ ಅವರಿಗೆ ಔಷಧ ಒದಗಿಸುವ ವ್ಯಕ್ತಿಯಾಗಿ ಶೇಷ ನಾಯ್ಕ ಕಾರ್ಯ ನಿರ್ವಹಿಸುತ್ತಿದ್ದ.

ಅಂಥ ಶೇಷ ಎರಡು ವರ್ಷಗಳ ಹಿಂದೆ ಪೋಸ್ಟ್‌ ಹಂಚುವ ಕೆಲಸವನ್ನು ಕೈಬಿಟ್ಟು, ಇಪ್ಪತ್ತು ಇಪ್ಪತ್ತೈದು ದಿನಗಳ ಹಿಂದೆ ಹೃದಯಾಘಾತದಿಂದ ಸ್ವಗೃಹದಲ್ಲಿ ತೀರಿಕೊಂಡ. ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ನೂರಾರು ಅನಾಮಿಕ ಸಾವುಗಳ `ಫ್ಲಾಷ್‌ ನ್ಯೂಸ್‌’ಗಳೆದುರು ಮೂಕ ವಿಸ್ಮಿತರಾಗಿ ಕುಳಿತಿದ್ದ ನಮ್ಮ ಊರಿನ ಮಂದಿ ತಮ್ಮವನೇ ಆದ ಈ ಶೇಷನ ಸಾವನ್ನು ಒಂದೆರಡು ದಿನ ಕಳೆದು ತಿಳಿದುಕೊಂಡರಂತೆ. ಕೆಲವರು ಅವನನ್ನು ಬಗೆ ಬಗೆಯಾಗಿ ನೆನಪು ಮಾಡಿಕೊಂಡರು. ಕೆಲವರು ಅವನ ದುರ್ಗುಣಗಳನ್ನು ನೆನೆದರು. ಕೆಲವರು ಅವನ ಬಾಯಿ ಚಪಲವನ್ನೂ, ಕೆಲವರು ಅವನ ಸಿಟ್ಟನ್ನೂ, ಕೆಲವರು ಅವನ ಪರನಾರೀ ಸಹೋದರತ್ವವನ್ನೂ ಆಡಿಕೊಂಡರು, ಕೊಂಡಾಡಿದರು.

ಆದರೆ ಅದು ಬರೀ ಶೇಷನೆಂಬ ಹೆಸರಿನವನ ಸಾವಾಗಿ, ಒಬ್ಬ ಸರ್ಕಾರಿ ಕೆಲಸಗಾರನ ನಿಧನವೆಂಬುದಾಗಿ, ಅನೇಕ ಊರುಗಳ ಜತೆ ವೃತ್ತಿಬಾಂಧವ್ಯವನ್ನಷ್ಟೇ ಇಟ್ಟುಕೊಂಡ ವ್ಯಕ್ತಿಯೊಬ್ಬನ ಅವಸಾನವೆಂದಾಗಲೀ ನೋಡಲು ಸಾಧ್ಯವೇ ಆಗುತ್ತಿಲ್ಲ ಈಗ. ಯಾಕೆಂದರೆ ಪತ್ರ ಬಟವಾಡೆ ಎಂಬ ಪರಮಾಪ್ತ ಸರ್ಕಾರಿ ವೃತ್ತಿ ಒಂದು ಬಾಂಧವ್ಯರಹಿತ ಚಾಕರಿ ಅಲ್ಲ. ಆ ವೃತ್ತಿಯ ಮೂಲಕ ಒಬ್ಬ ವ್ಯಕ್ತಿ ಊರೂರನ್ನು, ಊರು ಊರುಗಳು ಬದಲಾಗುತ್ತಾ ಹೋಗಿದ್ದನ್ನು, ಆ ಊರಿನ ಮಂದಿ ಹುಟ್ಟಿ ಬೆಳೆದು, ದೊಡ್ಡವರಾಗಿ ನಗರ ಸೇರಿ, ಸ್ವಂತ ಊರಿಗೇ ಹಬ್ಬಕ್ಕೊಮ್ಮೆ ಅತಿಥಿಯಾಗಿ ಬರುವುದನ್ನು ನೋಡುವ ವಿಶಿಷ್ಟ ಪರಿ. ಇನ್ಯಾರಿಗೂ ದಕ್ಕದ ಭಿನ್ನ ಭಿನ್ನ ಊರುಗಳ ಒಡನಾಟ, ಎಲ್ಲಾ ಮನೆಗಳ ನಾಡಿ ಮಿಡಿತ, ದುಗುಡ, ದುಮ್ಮಾನ, ಅಗತ್ಯ, ತುರ್ತುಗಳು ಆ ವ್ಯಕ್ತಿಯನ್ನು ತಾಕುತ್ತವೆ, ದಕ್ಕುತ್ತವೆ. ಸರ್ಕಾರದ ಸಂಬಳಕ್ಕೆ ಊರಿನ ಬಂಧುತ್ವವನ್ನು ಸಂಪಾದಿಸಿಕೊಳ್ಳುವ ಒಂದು `ಬಾಂಧವ್ಯ ವೃತ್ತಿ’ ಅದು.

ಶೇಷ ನಮ್ಮ ಸುತ್ತಮುತ್ತಲ ಗ್ರಾಮಗಳಿಗೆ ಪೋಸ್ಟ್‌ ಮ್ಯಾನ್‌ ಆಗಿ ನೇಮಕಗೊಂಡ ಹೊತ್ತಿಗೆ ನಗರ- ಹಳ್ಳಿಯ ನಡುವಿನ ಸಂಪರ್ಕ ದುಸ್ತರವಾಗಿತ್ತು. ಏಳೆಂಟು ಕಿಲೋ ಮೀಟರ್‌ ದೂರ ಕ್ರಮಿಸಿ, ಅಲ್ಲಿಂದ ಬಸ್ಸು ಹಿಡಿಯುವುದು ದೊಡ್ಡ ಪಟ್ಟಣದ ಸಂಪರ್ಕಕ್ಕಿದ್ದ ಒಂದು ದಾರಿ. ಸಣ್ಣ ಪಟ್ಟಣಕ್ಕೆ ಹೋಗಬೇಕಾದರೆ ಹನ್ನೆರಡು ಕಿಲೋ ಮೀಟರ್‌ ದೂರವಿರುವ ಆ ಪಟ್ಟಣಕ್ಕೆ ನಡೆದುಕೊಂಡೇ ಹೋಗುವ ಸ್ಥಿತಿ ಇತ್ತು.

ಇಂಥ ಹೊತ್ತಿಗೆ ಪೋಸ್ಟ್‌ ಮ್ಯಾನ್‌ ವೃತ್ತಿ ಪ್ರಾರಂಭಿಸಿದ ಶೇಷ, ಸುತ್ತ ಹತ್ತು ಹಳ್ಳಿಯ ಅನೇಕ ಅಗತ್ಯಗಳನ್ನು ಪೂರೈಸುವ ಮಹಾ ಪುರುಷನಾಗಿದ್ದ. ಆತ ಪೇಟೆಯಿಂದ ದಿನ ನಿತ್ಯದ ದಿನಸಿ, ಎಣ್ಣೆ, ಕಾಳುಗಳನ್ನು ಹೊತ್ತು ತರುತ್ತಾ ಕಿಲೋಮೀಟರ್‌ಗಟ್ಟಲೆ ನಡುಗೆಯನ್ನು ಸ್ವತಃ ಸಾಸಿಕೊಂಡಿದ್ದ. ಜಾನುವಾರುಗಳಿಗೆ ಹಿಂಡಿ, ಹತ್ತಿಕಾಳು ತರುತ್ತಾ `ಗೋಪಾಲಕ’ನಾಗಿದ್ದ. ಕಾಲುನೋವಿಗೆ ತೈಲ, ಜ್ವರ, ಥಂಡಿ, ತಲೆನೋವಿಗೆ ಮಾತ್ರೆ, ಇತ್ತೀಚಿನ ವರ್ಷಗಳಲ್ಲಿ ಪೇಪರ್‌- ಮ್ಯಾಗಜಿನ್‌ಗಳನ್ನು ತಂದುಕೊಡುತ್ತಿದ್ದ. ಇವುಗಳ ಜತೆ ಅವನ ಪೋಸ್ಟ್‌ ಮ್ಯಾನ್‌ ಕೆಲಸವೂ ಸಾಗಿತ್ತು.

ಶೇಷನಿಗೆ ಎಲ್ಲಾ ಮನುಷ್ಯರಿಗಿರುವಂತೆ ರಾಗ ದ್ವೇಷಗಳಿದ್ದವು. ಸಣ್ಣತನಗಳಿದ್ದವು. ಕ್ಷುಲ್ಲಕತನವಿತ್ತು. ತೀವ್ರ ಹಸಿವಿತ್ತು. ಜತೆಗೆ ಒಳ್ಳೆಯ ಗುಣಗಳೂ ಸಾಕಷ್ಟಿದ್ದವು. ಆತ ಪ್ರತಿ ಮನೆಗೆ ಪೋಸ್ಟ್‌ ಕೊಟ್ಟಾಗಲೂ ಅಡಕೆಯನ್ನು ನೀಡಬೇಕೆಂಬ ಮೌನ ಕರಾರು ಮಾಡಿಕೊಂಡಿದ್ದ. ಅದರಲ್ಲೂ ನಾಲ್ಕು ಅಡಕೆ ನೀಡದೇ ಎರಡೇ ಕೊಟ್ಟರೆ ಸಿಟ್ಟು ಬಂದುಬಿಡುತ್ತಿತ್ತು. ಮಧ್ಯಾಹ್ನದ ಬಿಸಿಲಿಗೆ ಮಜ್ಜಿಗೆ ಕೊಡುವ ಮಾನವೀಯತೆ ತೋರಲು ಪ್ರಾರಂಭಿಸಿದ ಮನೆಗಳಲ್ಲಂತೂ ಅವ್ಯಾಹತವಾಗಿ ಆ ಮಜ್ಜಿಗೆ ಸರಬರಾಜು ನಡೆಯುತ್ತಲೇ ಇರಬೇಕಾಗುತ್ತಿತ್ತು. ಇಲ್ಲದಿದ್ದರೆ ಮತ್ತೆ ಸಿಟ್ಟು, ದಾರಿಯಲ್ಲಿ ಒಬ್ಬನೇ ಹೋಗುವಾಗ ಆ ಮನೆಯವರಿಗೆ `ಬೋ… ಮಕ್ಕಳು, ಸೂ… ಮಕ್ಕಳು’ ಬೈಗುಳಗಳ ಅಭಿಷೇಕ ನಡೆಯುತ್ತಿತ್ತು.

ಶೇಷನಿಗೆ ಹಸಿವು ಜಾಸ್ತಿ. ಇದನ್ನು ತಿಳಿದಿದ್ದ ಅನೇಕ ಮನೆಯವರು ಆತನಿಗೆ ಏನನ್ನಾದರೂ ಕೊಡುತ್ತಿದ್ದರು. ಆದರೆ ಹಸುಗಳಿಗೆ ಹಿಂಡಿ, ಹತ್ತಿಕಾಳು ತರಲು ದುಡ್ಡುಕೊಟ್ಟರೆ ತರುವ ಹಿಂಡಿಯಲ್ಲಿ ಅರ್ಧರ್ಧ ಕೇಜಿಯನ್ನು ಸ್ವತಃ ತಿಂದುಕೊಂಡು ಬಂದುಬಿಡುತ್ತಾನೆ ಎಂಬ ಮಾತೂ ಆಗಾಗ ಊರಲ್ಲಿ ಕೇಳಿ ಬರುತ್ತಿತ್ತು. ಮೊನ್ನೆ ಶೇಷ ಸತ್ತಾಗ ಹಲವರು ಇದನ್ನು ನೆನಪು ಮಾಡಿಕೊಂಡರು ಊರಲ್ಲಿ. ಅಂಗಡಿಯ ಹಿಂಡಿ, ಹತ್ತಿಕಾಳು ಬೇಜಾರು ಮಾಡಿಕೊಂಡವು ಗುಟ್ಟಲ್ಲಿ!

ಆದರೆ ಶೇಷ ಮಾನವೀಯತೆಯ ಗಣಿಯಾಗಿ ಹಲವು ಸಂದರ್ಭಗಳಲ್ಲಿ ವರ್ತಿಸಿದ್ದ. ಆಸ್ಪತ್ರೆಗೆ ಊರ ಹೆಂಗಸರು ಹೋಗಬೇಕಾಗಿ ಬಂದಾಗ ವಾಹನ ಸೌಕರ್ಯ ಒಂದು ಕಾಲಕ್ಕೆ ಇರಲಿಲ್ಲ. ನಡೆದುಕೊಂಡೇ ಹೋಗಬೇಕಾದ ಅನಿವಾರ್ಯ. ಮನೆಯಲ್ಲಿ ಗಂಡಸರಿಗೆ ನೂರಾರು ಕೃಷಿ ಕೆಲಸ ಕಾರ್ಯಗಳ ಒತ್ತಡ ಇರುತ್ತಿದ್ದುದರಿಂದ ಅವರನ್ನು ಆಸ್ಪತ್ರೆಗೆ ಜಾಗ್ರತೆಯಾಗಿ ಕರೆದುಕೊಂಡು ಹೋಗಿ, ಆಸ್ಪತ್ರೆಗೆ ಬಿಟ್ಟು, ಪೋಸ್ಟ್‌ ತೆಗೆದುಕೊಂಡು ಬರುವಾಗ ಅಷ್ಟೇ ಜಾಗ್ರತೆಯಿಂದ ಕರೆದುಕೊಂಡು ಬಂದು ಮನೆಗೆ ಬಿಡುವ ಕೆಲಸವನ್ನು ಶೇಷ ಮುತುವರ್ಜಿಯಿಂದ ಮಾಡುತ್ತಿದ್ದ. `ಯಾರೂ ಅವನನ್ನು ನಂಬಿ, ಅವನ ಜತೆ ಮನೆಯ ಹೆಂಗಸರನ್ನು ಕಳಿಸಬಹುದಿತ್ತು. ಅಷ್ಟು ನಿಷ್ಠಾವಂತನಾಗಿದ್ದ’ ಎಂದು ಮೊನ್ನೆ ಆತನ ಪರನಾರಿ ಸಹೋದರತ್ವವನ್ನು ನೆನೆದು, ಒಬ್ಬರು ನುಡಿ ನಮನ ಸಲ್ಲಿಸಿದರು.

***

ಚೀನಿ ಭಾಷೆಯಲ್ಲಿ ಒಂದು ಅಪೂರ್ವ ಸಿನಿಮಾ ಬಂದಿದೆ. ಆ ಚಿತ್ರದ ಹೆಸರು: ಪೋಸ್ಟ್‌ಮ್ಯಾನ್‌ ಇನ್‌ ದಿ ಮೌಂಟೇನ್‌. (ಗುಡ್ಡಗಾಡಿನ ಪೋಸ್ಟ್‌ ಮ್ಯಾನ್‌). ಈ ಸಿನಿಮಾದ ಬಗ್ಗೆ ಹಿಂದೊಮ್ಮೆ ಜಯಂತ ಕಾಯ್ಕಿಣಿ ತಮ್ಮ ಅಂಕಣ ಬರೆಹದಲ್ಲಿ ಪ್ರಸ್ತಾಪಿಸಿದ್ದರು. ಇದು ಎರಡು ಜನರೇಷನ್‌ನ ಕೊಂಡಿಯ ಕತೆ. ಪೋಸ್ಟ್‌ ಮ್ಯಾನ್‌ ಆಗಿ ವೃತ್ತಿ ನಿರ್ವಹಿಸಿ, ನಿವೃತ್ತಿ ಅವಯಲ್ಲಿ ತನ್ನ ಜವಾಬ್ದಾರಿಯನ್ನು ಮಗನಿಗೆ ವಹಿಸುವ ಕತೆ ಅದು. ಆ ಅವಯಲ್ಲಿ ಒಬ್ಬ ಪೋಸ್ಟ್‌ಮ್ಯಾನ್‌ ಹಳ್ಳಿಗಳ ಜತೆ ಇಟ್ಟುಕೊಂಡಿರುವ ಒಂದು ಮಾನವೀಯ ಸಂಬಂಧವನ್ನು ಆ ಸಿನಿಮಾ ಕಣ್ಣುಗಳು ತುಂಬಿಕೊಂಡು ಮಂಜಾಗುವಂತೆ ಕಟ್ಟಿಕೊಡುತ್ತದೆ.

ಆ ಚಿತ್ರದ ವಯಸ್ಸಾದ ಪೋಸ್ಟ್‌ಮ್ಯಾನ್‌ಗೂ ನಮ್ಮೀ ಅಂಚೆಯ ಶೇಷನಿಗೂ ಸಂಬಂಧವೊಂದು ಮೂಡಿ, ನಮ್ಮ ನಿಮ್ಮೆಲ್ಲರ ಊರಿನ ಪ್ರತಿ ಪೋಸ್ಟ್‌ಮ್ಯಾನ್‌ಗಳೂ ಇದೀಗ ನೆನಪಾಗತೊಡಗಿದ್ದಾರೆ.

ಮೊಬೈಲ್‌, ಈಮೇಲ್‌, ಚಾಟ್‌ಗಳ ಈ ಯುಗದ ಆದಿ ಪರ್ವದಲ್ಲಿ ಕೈ ಬರೆಹದ ಪತ್ರಗಳನ್ನು ಜೋಪಾನವಾಗಿ ತಂದುಕೊಡುತ್ತಿದ್ದ, ಟೀವಿಯೆಂಬ ಮಾಯಾಂಗನೆಯರು ನಮ್ಮ ಮನೆಗಳನ್ನು ಆಕ್ರಮಿಸಿಕೊಳ್ಳುವ ಮೊದಲು ಪತ್ರಿಕೆ, ನಿಯತಕಾಲಿಕೆ ತಂದು ಕೊಟ್ಟು ಹೊಸ ತಲೆಮಾರಿನಲ್ಲಿ ಓದಿನ ಗೀಳನ್ನು ಹಚ್ಚುತ್ತಿದ್ದ, ಈಗಿನ ಅಪಾರ್ಟ್‌ಮೆಂಟ್‌ಗಳೆಂಬ ಸಂಪರ್ಕರಹಿತ ವಸಾಹತುಗಳ ಹೊರತಾದ ಒಂದು ಹಳ್ಳಿ ಪ್ರಪಂಚದಲ್ಲಿ ಮಾನವೀಯ ತಂತುವನ್ನು ಬೆಸೆದಿದ್ದ ಶೇಷನಂಥವರು ಒಬ್ಬೊಬ್ಬರೇ ಕೀರ್ತಿಶೇಷರಾಗುತ್ತಿದ್ದಾರೆ.

ಶೇಷ,

ನಮ್ಮೊಳಗೀಗ ನೆನಪುಗಳ ಅವಶೇಷ.

%d bloggers like this: