ಕವಿ ಜೋಗಿ ಇಲ್ಲಿದ್ದಾರೆ…

ಇಲ್ಲಿಯೂ ಅಲ್ಲಿಯೂ ಸಲ್ಲುತ್ತಾ..

 -ಜೋಗಿ

ಹತ್ತೋ ಹದಿನಾರೋ?

ಜೋಗಿ ಸುಮ್ಮನೆ ಕೂತರೆ

ಸೋಮಾರಿತನ.

ಯೋಗಿ ಕುಳಿತರೆ ಧ್ಯಾನ.

ಬಾಣಂತಿಗಾದರೆ ವಿರಾಮ.

ಕವಿಗೆ ರಸನಿಮಿಷ, ಕಡುಶ್ರೀಮಂತನಿಗೆ

ಐಷಾರಾಮ.

 

ಏಕಾಂತವೆಂದರೆ

ಜಂಗುಳಿ.

ಒಳಮನೆಯಲ್ಲಿ ಜನಸಂದಣಿ.

ತೂಗುಮಂಚದ ಮೇಲೆ

ಅಡ್ಡಾದಿಡ್ಡಿ ಕೈಕಾಲು.

ಅಷ್ಟು ಕಾಲ ಹೊತ್ತು ಸಾಗಿದ

ರುಂಡಮುಂಡದ

ಪ್ರಚಂಡ ವೈರಾಗ್ಯ.

 

ಇಪ್ಪತ್ತೋ ಎಪ್ಪತ್ತೋ?

ಹಾಗೇ ಸುಮ್ಮನೆ ಕೂತರೆ

ದಿವಂಗತ.

ಪ್ರಾಣಪಕ್ಷಿ ಹಾರಿಹೋಗಿ

ಕಾಯಕದ ಕಾಯ

ಕಾಲವಾದ ಮೇಲೆ

ನನ್ನ ಆಲೋಚನೆ, ವ್ಯಾಮೋಹ,

ಮತ್ಸರ, ಕಾಮ, ಒಳ್ಳೇತನ,

ಅಹಂಕಾರ

ನೆಲೆ ಕಳಕೊಂಡು

ಎಲ್ಲಿ ನೆಲೆಸುತ್ತದೆ ಎಂಬ

ಶೇಷಪ್ರಶ್ನೆಯ ಮುಂದೆ

ನಾನು ಪ್ರಶ್ನಾರ್ಥಕ ಚಿನ್ಹೆ

ಮತ್ತು

ವಿನಯವಂತ

ಹತ್ತೋ ಹದಿನಾರೋ

ಇಪ್ಪತ್ತೋ ಎಪ್ಪತ್ತೋ

ಶ್ರಾದ್ಧದ ಮುನ್ನಾದಿನ ಹಿರಿಮಗನಿಗೆ ಒಪ್ಪತ್ತು.

ಬೆಕ್ಕಿನ ಕೊರಳಿಗೆ ಗಂಟೆ

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದು ಸುಲಭದ ವಿಚಾರವೇನೂ ಅಲ್ಲ. ಅದರಲ್ಲೂ ಮಾಧ್ಯಮವೆಂಬ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದು ಇನ್ನೂ ಕಷ್ಟದ ಕೆಲಸ.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುತ್ತದೆ. ಹಾಗೆ ಕುಡಿದಾಗಲೆಲ್ಲಾ ಅದು ಬೇರೆಯವರಿಗೆ ಗೊತ್ತಾಗಿಲ್ಲ ಎಂದುಕೊಳ್ಳುತ್ತದೆ. ಬೆಕ್ಕು ಹಾಗೆ ಭಾವಿಸಿದೆ ಅಷ್ಟೆ.‘ಸುದ್ದಿಮಾತು’ ಎಂಬ ಅವರೇ ಘೋಷಿಸಿಕೊಂಡ ಹಾಗೆ ಐವರು ಪತ್ರಕರ್ತರ ಬಳಗ ಈಗ ಮಾಧ್ಯಮದ ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯಲು ಹೊರಟಿದೆ.

ಮಂಗಳೂರಿನಲ್ಲಿ ಈ ಹಿಂದೆ ವಾರೆ-ಕ್ವಾರೆ ಎನ್ನುವ ಪ್ರಯತ್ನ ಆಗಿತ್ತು. ಸುಧಾ ಆಕಾರದಲ್ಲಿ ಬರುತಿದ್ದ ಪತ್ರಿಕೆ ಮಾಧ್ಯಮಗಳ ಹುಳುಕುಗಳಿಗೆ ಒಂದಿಷ್ಟು ಬಿಸಿ ಮುಟ್ಟಿಸಿತ್ತು. ಆದರೆ ಆ ನಂತರ ಕಾಲ ಇನ್ನಷ್ಟು ಬದಲಾಯಿತು. ಮಾಧ್ಯಮಗಳ ಟ್ರಾಫಿಕ್ ಹೆಚ್ಚಾಯಿತು. ಇನ್ನಷ್ಟು ಗೊಂದಲ ಹೆಚ್ಚಾಗಿದೆ. ಅಂತಹ ಸಂದರ್ಭದಲ್ಲಿ ಸುದ್ದಿಮಾತು ತಲೆ ಎತ್ತಿದೆ.

ಇದು ಪುಟ್ಟ ಪ್ರಯತ್ನ ಖಂಡಿತಾ ಅಲ್ಲ. ಬೆಕ್ಕಿಗೆ ಪರಚುವುದು ಗೊತ್ತಿದೆ ಎಂದು ಗೊತ್ತಿದ್ದೂ ಗಂಟೆ ಕಟ್ಟಲು ಹೊರಟಿರುವುದು ಮೆಚ್ಚಬೇಕಾದ ವಿಚಾರ. ಸುದ್ದಿಮಾತು ಬರೆದದ್ದೆಲ್ಲಾ ಸರಿ ಎಂದೇನೂ ಭಾವಿಸಬೇಕಾಗಿಲ್ಲ. ಆದರೆ ಸುದ್ದಿಮಾತು ಒಂದಷ್ಟು ವಿಚಾರಗಳನ್ನ ಚರ್ಚೆಗಾಗಿ ಮುಂದಿಡುತ್ತಿದೆ ಎಂದು ಭಾವಿಸುವುದೇ ಆರೋಗ್ಯಕರ ಅನಿಸುತ್ತದೆ.

ಹಿಂದೆ ಪಿ ಸಾಯಿನಾಥ್, ಸುಧೀಂದ್ರ ಕುಲಕರ್ಣಿ ಮುಂಬೈನಲ್ಲಿ –ನಡೆಸುತ್ತಿದ್ದರು. ಅದು ಹುಟ್ಟುಹಾಕಿದ ಮಾಧ್ಯಮ ವಿಮರ್ಶಾ ಪ್ರಜ್ಞೆ ದೊಡ್ಡದು. ಸುದ್ದಿಮಾತು ತಾನೂ ವಿಮರ್ಶೆಗೆ ಒಳಗಾಗುವ ಒಂದು ಬ್ಲಾಗ್ ಎಂಬ ಎಚ್ಚರದೊಂದಿಗೆ ಎಚ್ಚರ ಮೂಡಿಸುವ ಸಾಹಸಕ್ಕೆ ಕೈಹಾಕಲಿ ಇದರೊಂದಿಗೆ ಸುದ್ದಿಮಾತು ಬಳಗ ಬರೆದ ಬರಹವೊಂದು ಇದೆ- 

ಸುದ್ದಿಮಾತು ಸಂಪಾದಕೀಯ…

ಸುದ್ದಿಮಾತು ಮಾತನಾಡಲು ಆರಂಭಿಸಿ ವಾರಗಳೇ ಉರುಳಿ ಹೋದವು. ಓದುಗರಲ್ಲಿ ನೂರೆಂಟು ಅನುಮಾನಗಳು. ನಾವು ನಿರೀಕ್ಷಿಸಿದಂತೆ, ಪತ್ರಕರ್ತ ಸಮೂಹವೇ ಬ್ಲಾಗ್ ನ ಬಹುತೇಕ ಓದುಗರು. ಬ್ಲಾಗ್ ಗೆ ಭೇಟಿ ಕೊಟ್ಟವರೆಲ್ಲ, view my complete profile ಮೇಲೆ ಮರೆಯದೆ ಕ್ಲಿಕ್ ಮಾಡಿದರು. ಖಾಲಿ-ಖಾಲಿ ಇದ್ದದ್ದನು ಕಂಡು ‘ಯಾರಿರಬಹುದು’ ಎಂದು ಲೆಕ್ಕಾಚಾರಕ್ಕೆ ಶುರುಹಚ್ಚಿದರು.
‘ಯಾರೋ ನಮ್ಮ ಮಧ್ಯೆ ಇರೋ ಪತ್ರಕರ್ತನೇ ಇಂತಹ ಕೆಲಸ ಮಾಡುತ್ತಿರಬೇಕು’ ಎಂದು ಹಲವರು ಅಂದುಕೊಂಡದ್ದೂ ಬ್ಲಾಗ್ ಕಿವಿಗೆ ಕೇಳಿಸಿದೆ. ಬ್ಲಾಗ್ ಪ್ರತಿದಿನ update ಆಗುತ್ತೆ ಅಂದರೆ, ‘ಯಾವನೋ ಕೆಲಸ ಇಲ್ಲದ ಆಸಾಮಿ ಇರಬೇಕು’; ‘ಪದೇ ಪದೇ ಯಡಿಯೂರಪ್ಪನ್ನ ಬಯ್ಯೋದು ನೋಡಿದರೆ ಇವ ಕಾಂಗ್ರೆಸ್ ನವನೋ, ಎಡಪಂಥೀಯವನೋ ಇರಬೇಕು’; ಪತ್ರಿಕಾ ಭಾಷೆ ಬಗ್ಗೆ, ಪತ್ರಕರ್ತರ ಅವಾಂತರಗಳ ಬಗ್ಗೆ ಬರೆಯೋದು ನೋಡಿದ್ರೆ ‘ಯಾರೋ ಪತ್ರಕರ್ತನೇ ಇರಬೇಕು…’ ಹೀಗೆ ಹತ್ತಾರು ಊಹೆಗಳು ಓದುಗರಲ್ಲಿ ಎದ್ದಿರುವುವುದು ಸಹಜ.
ಈ ಎಲ್ಲಾ ಸಂಶಯಗಳಿಗೆ ಉತ್ತರ ನೀಡುವ ಸಮಯ ಈಗ ಬಂದಿದೆ. ಮೊದಲನೆಯದಾಗಿ ಇದು ಯಾರೋ ಒಬ್ಬ ಮಾಡುತ್ತಿರುವ ಬ್ಲಾಗ್ ಅಲ್ಲ. ಐದು ಮಂದಿ ಇದ್ದೇವೆ. ನಾವ್ಯಾರೂ ಪತ್ರಕರ್ತರಲ್ಲ. ಹಾಗಂತ ಪತ್ರಿಕೋದ್ಯಮ ಪರಿಚಯ ಇಲ್ಲ ಅಂತಲ್ಲ. ನಾವೆಲ್ಲರೂ ಬೇರೆ ಬೇರೆ ಪತ್ರಿಕೆಗಳಲ್ಲಿ 4-5 ವರ್ಷ ಕಾಲ ಕೆಲಸ ಮಾಡಿ ಈಗ ಬೇರೆಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಹಾಗಾಗಿ ಪತ್ರಿಕೋದ್ಯಮದೆಡೆಗೆ ಇಂಥ ಕಾಳಜಿ. ಪತ್ರಿಕೆ, ಪತ್ರಿಕೋದ್ಯಮ ಬಗ್ಗೆನೇ ಬರೆದರೆ ಹೇಗೆ ಅಂತ ನಾವೆಲ್ಲಾ ಕೂಡಿ ನಿರ್ಧಾರ ಮಾಡಿ ಬ್ಲಾಗ್ ಆರಂಭಿಸಿದೆವು.
ನಮ್ಮ ಹೆಸರು ಯಾಕೆ ಹೇಳ್ತಿಲ್ಲ ಅನ್ನೋದು ನಿಮ್ಮ ಪ್ರಶ್ನೆ ಇರಬಹುದು. ಆದರೆ ಹೆಸರಲ್ಲೇನಿದೆ? ಹೆಸರು ಹೇಳಿದ್ರೆ – ಇವ ಘಟ್ಟದ ಕೆಳಗಿನವನು, ಅವನು ಉತ್ತರ ಕರ್ನಾಟಕದವನು, ಮತ್ತೆ ಅವನೋ ಮಹಾನ್ ಚಡ್ಡಿ, ಇನ್ನೊಬ್ಬನೋ ಆ ಜಾತಿಯವನು.. ಹೀಗೆ ಏನೇನೋ ಕಾರಣ ಕೊಟ್ಟು ಬರಹಗಳನ್ನು ಓದೋ ಸನ್ನಿವೇಶ ಸೃಷ್ಟಿಯಾಗುತ್ತೆ. ಅದೆಲ್ಲಾ ಯಾಕೆ?
Ronald Bartes ಹೇಳೋ ಹಾಗೆ author is dead. ಬ್ಲಾಗ್ ನಲ್ಲೂ ಹಾಗೆ. ಬರಹಗಾರರಿಗೆ ಅಸ್ತಿತ್ವವಿಲ್ಲ. ಬರಹಗಳಿಗೆ ಮಾತ್ರ ಆಧಾರ ಇರುತ್ತೆ. ಬದ್ಧತೆ ಇರುತ್ತೆ. ನಿಮಗನ್ನಿಸಿದ್ದನ್ನ ನಮ್ಮೊಂದಿಗೆ ಹೇಳಿಕೊಳ್ಳಿ..
ಅಂದಹಾಗೆ ಯಾರನ್ನು ಬಯ್ಯುವ ಉದ್ದೇಶ ನಮ್ಮದಲ್ಲ. ತಪ್ಪು ಮಾಡಿದಾಗ ಸುದ್ದಿಮಾತು ಆಡಿಕೊಳ್ಳುತ್ತದೆ. ಸರಿ ಮಾಡಿದಾಗ ಮೆಚ್ಚಿಕೊಳ್ಳುತ್ತದೆ. ಹಾಗೆಯೇ
ರಂಜನೆಯು ಇರಲಿ ಎಂದು ಇನ್ನುಮುಂದೆ ಪ್ರತಿ ಶುಕ್ರವಾರ “ಸಿನಿಮಾತು” ನಿಮ್ಮ ಬ್ಲಾಗ್ ಅಂಗಳದಲ್ಲಿ.

%d bloggers like this: