ದಂಡೆಯ ಅಳುವನ್ನು ಕೇಳಿಸಿಕೊಂಡಿತು.

ಅಲ್ಲೀಗ ಅವನಿಲ್ಲ
ಅವಳೂ…
ಆ ಕಸದತೊಟ್ಟಿಯ ಮಾಂಸದ ಮುದ್ದೆ ಮಗುವಾ?

ಮೊದಲನೇ ಅಲೆ
ಮರಳು, ಕಪ್ಪೆಚಿಪ್ಪು ಹೊತ್ತು ತಂದಿತು
ಎರಡನೇ ಅಲೆ
ಲೇಡಿಸ್ ವಾಚು, ಹರಿದ ರವಿಕೆ ಎಸೆಯಿತು
ಮೂರನೇ ಅಲೆ
ದಂಡೆಯ ಅಳುವನ್ನು ಕೇಳಿಸಿಕೊಂಡಿತು.

ಕೋಮು ಸೌಹಾರ್ದತೆ ಇರಬೇಕು, ಸೌಹಾರ್ದತೆ ಕೋಮಾದಲ್ಲಿರಬಾರದು

ಕಳ್ಳ-ಕುಳ್ಳ ಬ್ಲಾಗ್ ಹೊಸ ರೂಪು ಪಡೆದಿದೆ. ಮೊದಲ ಬಾರಿಗೆ ಕಳ್ಳ ಯಾರು? ಕುಳ್ಳ ಯಾರು ಎಂದು ಗೊತ್ತಾಗುವಂತೆ ಒಂದು ಫೋಟೋ ಸಹಾ ಇದೆ. ಒಳ್ಳೆ ಬರಹಗಳಿಂದ ಅಪ್ಡೇಟ್ ಆಗುತ್ತಿದೆ. ಒಂದು ಕಳಕಳಿಯ ಬರಹದೊಂದಿಗೆ ಹೊಸ ವೇಷದ ಕಳ್ಳ-ಕುಳ್ಳರಿಗೆ ಸ್ವಾಗತ.

 

ದೇವರು ಕೋಣೆಯಲ್ಲಿರಲಿ

 

ವಿಕಾಸ ನೇಗಿಲೋಣಿ

ಡೀ ಮಂಗಳೂರು ಮನೆ ಬಾಗಿಲು ಹಾಕಿಕೊಂಡು, ಕಿಟಕಿಯಲ್ಲಿ ಆಗಾಗ ಹಣಕಿ ಹಣಕಿ ನೋಡುತ್ತಿದೆ. ಚೆಲ್ಲಾಪಿಲ್ಲಿಯಾದ ಕಲ್ಲು, ಮಣ್ಣು, ರಕ್ತದ ಕಲೆ, ಕೋಲು,ಚಪ್ಪಲಿ, ಕನ್ನಡಕದ ಗ್ಲಾಸ್‌, ಒಡೆದ ಗಾಜು, ಮುರಿದ ಗೇಟುಗಳು ರಸ್ತೆಗಳನ್ನು ಕುಶಲ ಕೇಳುತ್ತಿವೆ.

 

ಆಸ್ಪತ್ರೆಗೆ ಹೋಗುವವರೂ, ಮೆಡಿಕಲ್‌ ಶಾಪ್‌ನಲ್ಲಿ ಕ್ರೋಸಿನ್‌, ಜೆಲುಸಿನ್‌ ತೆಗೆದುಕೊಂಡು ಬರಲು ಅಂದುಕೊಂಡವರೂ, ಭಾನುವಾರ ಹೊಸ ಸಿನಿಮಾ ನೊಡಿಕೊಂಡು ಬರೋಣ ಎಂದು ಆಸೆಪಟ್ಟವರೂ, ಈಶ್ವರ ದೇವಸ್ಥಾನದಲ್ಲಿ ಸೋಮವಾರ ಪೂಜೆ ಮಾಡಿಸೋಣ ಎಂದು ಭಾವಿಸಿದವರೂ ಟೀವಿಯಲ್ಲಿ ನ್ಯೂಸ್‌ ಫ್ಲಾಷ್‌ ನೋಡುತ್ತಾ ತಟಸ್ಥವಾಗಿದ್ದಾರೆ.

 

ಹೊರಗಡೆ ವಾಹನಗಳ ಸದ್ದಿಲ್ಲ, ತರಕಾರಿಯನ್ನು ಗಾಡಿ ಮೇಲೆ ಇಟ್ಟುಕೊಂಡು ಕೂಗುವವನ ದನಿ ಕೇಳುತ್ತಿಲ್ಲ. ಗಂಡಸರಿಗೆ ಆಫೀಸಿಲ್ಲ, ಕಾಫಿ ಮಾಡಲು ಹೆಂಗಸರ ಅಡುಗೆ ಮನೆಯಲ್ಲಿ ಹಾಲಿಲ್ಲ. ಆಗಾಗ ಆಂಬುಲೆನ್ಸ್‌, ಪೊಲೀಸ್‌ ವ್ಯಾನ್‌ಗಳು ವರವರವರ ಕೂಗುತ್ತಾ ತಿರುಗುತ್ತಿವೆ. ಮಂಗಳೂರಿನ ಸುತ್ತಮುತ್ತಲ ಹಳ್ಳಿ, ಸಣ್ಣ ನಗರಗಳಿಗೂ ಏನೋ ಭಯ, ಆತಂಕ, ತಳಮಳ. ಫೋನ್‌ ನಂಬರ್‌ಗಳು ಎಲ್ಲರಿಂದಲೂ ಒತ್ತಿಸಿಕೊಂಡು ಮೈಕೈನೋವಿಂದ ನರಳುತ್ತಿವೆ.

 

***

ದಕ್ಷಿಣ ಕನ್ನಡ ಯಾವತ್ತೂ ಸೌಹಾರ್ದ ವಾತಾವರಣದ ರೂಪಕಾಲಂಕಾರ. ಅತ್ತ ಧರ್ಮಸ್ಥಳಕ್ಕೆ ಹೋದರೆ ಜೈನರು ಪೂಜೆ ಸಲ್ಲಿಸುವ ಹಿಂದೂ ದೇವಳ. ಎರಡೂ ಧರ್ಮದ ಸ್ನೇಹದಲ್ಲಿ ನಡೆದುಕೊಂಡು ಹೋಗುತ್ತಿರುವ ಭಕ್ತಿಗೀತೆ, ಭಜನೆ. ಅಲ್ಲಿಂದ ಮುಂದೆ ಹೋಗಿ ಉಜಿರೆಯಲ್ಲಿ ಇಳಿದರೆ ಎಲ್ಲಾ ಧರ್ಮ, ಕೋಮುಗಳು ಸೇರಿಕೊಂಡು ವಿದ್ಯಾಭ್ಯಾಸ ನಡೆಸಲು ಅನುಕೂಲವಾಗುವಂತೆ `ಸಿದ್ಧವನ ಗುರುಕುಲ’.

ಮಂಗಳೂರು ಹಾಗೂ ಸುತ್ತಮುತ್ತಲ ತಾಲೂಕುಗಳಲ್ಲಿ ಅದೆಷ್ಟು ಕ್ರಿಶ್ಚಿಯನ್‌ ಮಿಷನರಿಗಳು ಶಾಲಾ ಕಾಲೇಜುಗಳನ್ನು ನಡೆಸುತ್ತಿಲ್ಲ? ಸೈಂಟ್‌ ಅಲೋಷಿಯಸ್‌ ಕಾಲೇಜು, ಫಿಲೋಮಿನಾ ಕಾಲೇಜು, ಆಗ್ನೇಯಸ್‌ ಕಾಲೇಜುಗಳು ಎಷ್ಟು ಹುಡುಗರನ್ನು ತಮ್ಮಲ್ಲಿ ಇಟ್ಟುಕೊಂಡು ಓದಿಸಿಲ್ಲ? ಜಾತಿ, ಧರ್ಮ, ಕೋಮುಗಳ ಗಡಿಯನ್ನು ಮೀರಿ ಅವು ವಿದ್ಯಾರ್ಥಿಗಳಿಗೆ ಕಲಿಸಿವೆ, ಕಲಿಸಿ ಕಲಿಸಿ ದೊಡ್ಡ ದೊಡ್ಡ ಉದ್ಯೋಗಕ್ಕೆ ಕಳಿಸಿಕೊಟ್ಟಿವೆ.

ದಕ್ಷಿಣ ಕನ್ನಡ ವಿದ್ಯಾಭ್ಯಾಸದ ತವರು. ಇದಕ್ಕೆ ಏನಾದರೂ ಯಾರಾದರೂ ಕಾರಣರಾಗಿದ್ದರೆ ಅದು ಹೆಚ್ಚಿನ ಮಟ್ಟಿಗೆ ಕ್ರಿಶ್ಚಿಯನ್‌ ವಿದ್ಯಾಸಂಸ್ಥೆಗಳು. ಆ ವಿಷಯದಲ್ಲಿ ಅನಾದಿ ಕಾಲದಿಂದ ಇವು ಕೊಡುಗೆ ನೀಡುತ್ತಾ ಬಂದಿವೆ. ಕನ್ನಡ ಕೆಲಸ ಮಾಡುತ್ತಾ, ಭಾವೈಕ್ಯತೆಯನ್ನು ಸಾರುತ್ತಾ ಇವೆ. ಇದರ ಜತೆ ಮಂಗಳೂರಿನ ಸುತ್ತಮುತ್ತ ಅದೆಷ್ಟು ಚರ್ಚ್‌ಗಳು ನಾಡಿನ ಐತಿಹ್ಯವಾಗಿ ಉಳಿದುಕೊಂಡಿಲ್ಲ? ಅಲ್ಲಿಗೆ ಭೇಟಿ ಕೊಡುವ ಯಾತ್ರಾರ್ಥಿಗಳು ಅದೆಷ್ಟು ಮಂದಿ ಈಗಲೂ ಇದ್ದಾರೆ.
ಇದರ ಜತೆ ಮುಸ್ಲಿಂ- ಹಿಂದೂ ಬಾಂಧವ್ಯಕ್ಕೂ ದಕ್ಷಿಣ ಕನ್ನಡ ದೊಡ್ಡ ಉದಾಹರಣೆ. ಇಲ್ಲಿ ಬಪ್ಪ ಬ್ಯಾರಿಯ ಕತೆಗಳು ಯಕ್ಷಗಾನದಂಥ ಹಿಂದೂ ಕಲೆಯಲ್ಲಿ ಕತೆಯಾಗಿ ಪ್ರೇಕ್ಷಕರ ಕಣ್ಣು, ಕಿವಿಗಳನ್ನು ತಲುಪುತ್ತಿವೆ. ಶೇಣಿ ಗೋಪಾಲಕೃಷ್ಣ ಭಟ್ಟರ `ಬಪ್ಪ ಬ್ಯಾರಿ’ ಪಾತ್ರ ಯಕ್ಷಗಾನಕ್ಷೇತ್ರಕ್ಕೆ ಹೊಸ ಹೊಳಹನ್ನೂ, ಭಾವೈಕ್ಯತೆಯನ್ನೂ ನೀಡಿದೆ.

ಹೀಗೆ ಎಲ್ಲಾ ಧರ್ಮ, ಕೋಮು, ಜಾತಿಯ ಭಾಂಧವ್ಯವನ್ನು ಸದ್ಯದ ದಕ್ಷಿಣ ಕನ್ನಡದ ಹಿಂಸಾಚಾರದ ಹೊತ್ತಿಗೆ ನೆನಪು ಮಾಡಿಕೊಳ್ಳಬೇಕು.
***

ಇದೆಲ್ಲಾ ಐತಿಹ್ಯ ಇಲ್ಲದಿದ್ದರೂ ಕರ್ನಾಟಕದಲ್ಲಿ ಎಲ್ಲಾ ಕೋಮುಗಳೂ ಒಂದಾಗಿ ಇರುತ್ತಾ ಬಹಳ ಕಾಲವಾಗಿದೆ. ಅವರ ರಂಜಾನ್‌ಗೆ, ಇವರ ಕ್ರಿಸ್‌ಮಸ್‌ಗೆ, ಮತ್ತವರ ಗಣಪತಿಹಬ್ಬ, ದೀಪಾವಳಿ, ಯುಗಾದಿಗೆ ಮತ್ತೊಬ್ಬರು ಶುಭ ಹಾರೈಸುತ್ತಾ ಬಂದಿದ್ದಾರೆ. ಅವರ ಮನೆಯಲ್ಲಿ ಇವರು ಊಟ ಮಾಡುತ್ತಾ, ಇವರ ಮನೆಯ ಕರ್ರಿಯನ್ನು, ಕಬಾಬ್‌ಅನ್ನು ಅವರು ತಿನ್ನುತ್ತಾ, ಎಲ್ಲರ ಮಕ್ಕಳೂ ಎಲ್ಲರ ಮನೆಯಲ್ಲೂ ಬೆಳೆಯುತ್ತಾ ಇದ್ದಾರೆ.

ಸಂಜೆಯಾದ ಕೂಡಲೇ ಇವರು ಮಸೀದಿಗೆ ಹೊರಟು ನಿಂತಿದ್ದಾರೆ. ಹೋಗುತ್ತಾ ಯಾರಾದರೂ ಮತ್ತೊಂದು ಕೋಮಿನವರು ಸಿಕ್ಕರೆ `ಓಹೋ ಚೆನ್ನಾಗಿದ್ದೀರಾ, ಪ್ರಾರ್ಥನೆಗೆ ಹೊರಟೆ’ ಎಂದು ಸುದ್ದಿ ಹಂಚಿಕೊಂಡಿದ್ದಾರೆ. ಭಾನುವಾರ ಚರ್ಚ್‌ಗೆ ಹೋದ ಗಂಡ- ಹೆಂಡತಿ, ಬರುವಾಗ ಪಕ್ಕದ ಮನೆಯ ಇನ್ನೊಂದು ಧರ್ಮದ ಹುಡುಗನಿಗೆ ಕ್ಯಾಡ್‌ಬರೀಸ್‌ ತಂದುಕೊಟ್ಟಿದ್ದಾರೆ. ಎಲ್ಲಾ ಕೋಮಿನ ಮಕ್ಕಳೂ ಒಟ್ಟಿಗೇ ಶಾಲೆಗೆ ಹೋಗಿದ್ದಾರೆ, ಕಾಲೇಜು ಮುಗಿಸಿ ಬಂದಿದ್ದಾರೆ, ಪೇಟೆ ಕೆಲಸ ಮುಗಿಸಿ ಎಲ್ಲರೂ ಜತೆಗೆ ಬಂದು ಪರಸ್ಪರ ವಿಶ್‌ ಮಾಡಿಕೊಂಡು, ತಮ್ಮ ತಮ್ಮ ಮನೆಗೆ ಹೋಗಿ ದೀಪ ಹಚ್ಚಿ, ಮನೆಯನ್ನು ಬೆಳಗಿದ್ದಾರೆ.

ಹೀಗಿರುವ ಆ ಮಂದಿ ಇದೀಗ ಮನೆ ಮನೆಗಳ ದೀಪ ಆರಿಸಿ, ಬೆಂಕಿ ಹಚ್ಚಬಾರದು. ಶಾಲೆಗೆ ಹೋದ ಮಕ್ಕಳು ಮನೆಗೆ ಸುರಕ್ಷಿತವಾಗಿ ಮರಳಬೇಕು, ಪೇಟೆಯಿಂದ ಅಪ್ಪ ಹುಶಾರಾಗಿ ಬರಬೇಕು. ಮಕ್ಕಳು ಮನೆಯಲ್ಲಿ ಕಾಯುತ್ತಿದ್ದಾರೆ, ಅಮ್ಮ ಬರುವ ಬಸ್‌ಗೆ ಏನೂ ಆಗಬಾರದು. ತಮ್ಮನ ಜ್ವರ ಬೇಗ ಹುಷಾರಾಗಲು ಆಸ್ಪತ್ರೆಯ ಬಾಗಿಲು ತೆರೆಯಬೇಕು.

ಎಲ್ಲರ ದೇವರೂ ದೇವಸ್ಥಾನದಲ್ಲಿ, ಚರ್ಚ್‌ನಲ್ಲಿ, ಮಸೀದಿಯಲ್ಲಿ, ಮನೆಯ ಕೋಣೆಯಲ್ಲಿ ಸುರಕ್ಷಿತವಾಗಿರಲಿ. ದೇವರು ಹೊರಗೆ ಹೋಗುವುದು ಬೇಡ, ಗಲಾಟೆಯಾಗುವುದು ಬೇಡ, ಹೊರಗೆ ಹೋದ ಮಂದಿಗೆ ಏನೂ ಆಗುವುದು ಸಲ್ಲ.
ಕೋಮು ಸೌಹಾರ್ದತೆ ಇರಬೇಕು, ಸೌಹಾರ್ದತೆ ಕೋಮಾದಲ್ಲಿರಬಾರದು.

%d bloggers like this: