ಕನ್ನಡದ ಪ್ರಸಿದ್ದ ವಾರಪತ್ರ್ರಿಕೆಯೂಂದು ‘ನನ್ನ ದೇವರು’ ಹೆಸರಡಿ ಲೇಖಕರ, ಚಿಂತಕರ ಅನಿಸಿಕೆಗಳನ್ನು ಪ್ರಕಟಿಸುತ್ತಿತ್ತು. ಅಕಸ್ಮಾತ್ ನನ್ನನ್ನು ಕೇಳಿದರೆ ಇರಲಿ ಎಂದು ನಾನು ಬರೆಯ ಬೇಕಾದುದನ್ನು ಅಂದಾಜಿಸಿಕೊಂಡಿದ್ದೆ. ಆದರೆ ಪತ್ರಿಕೆಯವರು ನನಗೆ ದೇವರಿಲ್ಲ ಎಂದು ಅಂದಾಜಿಸಿಕೂಂಡೋ ಏನೋ ನನ್ನನ್ನು ಕೇಳಲೇ ಇಲ್ಲ.
ನಾನು ಅಂದಾಜಿಸಿಕೊಂಡಿದ್ದ ನನ್ನ ದೇವರು ನನ್ನೊಳಗೇ ಉಳಿಯಿತು.
ನನ್ನ ದೇವರು ನನ್ನೊಳಗೆ ಉಳಿದಿರುವುದು ಹೀಗೆ:
ಕವಿ ಸಿದ್ದಲಿಂಗಯ್ಯ ನನಗೆ ಒಮ್ಮೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ-ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ಒಂದು ಗುಡಿ ಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿ ಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈ ಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ‘ನಿಲ್ಸಿ ನನ್ ಮಕ್ಕಳಾ’ ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ.
‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’
‘ನಿನಗೊಂದು ಗುಡಿ ಮನೆ ಕಟ್ತಾ ಇದ್ದೀವಿ ತಾಯಿ’
‘ಓಹೋ, ನನಗೇ ಗುಡಿಮನೆ ಕಟ್ತಾ ಇದ್ದಿರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?’
‘ನನಗಿಲ್ಲ ತಾಯಿ’-ಅಲ್ಲೊಬ್ಬ ಹೇಳ್ತಾನೆ.
‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೆ ಮನೆ ಬೇಡ’
ಹೀಗೆಂದ ಮಂಚಮ್ಮ ಮನೆಮಂಚಮ್ಮನಾಗಿ ಬಿಡುತ್ತಾಳೆ!
ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆ ಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿಯಲ್ಲಿ ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ-ಅದೇ ನನ್ನ ದೇವರಾಗುತ್ತದೆ.
ಆಕ್ಟೋ 22, 2008 @ 14:18:59
In kannada only devanoor have this kind of unique talent to write huge thing in a short way. Mr. panditaraadhya’s comment is too abrupt, I think he failed to catch the real insight and input of the devanoor’s writing. Any how I’m grateful to Devanoora mahadeva for giving buddha has a monument of harmony & humanity.
ಆಕ್ಟೋ 04, 2008 @ 06:28:33
ಕಾರುಣ್ಯ ಸಮತೆ ಸಾಕು. ಬುದ್ಧ ಏಕೆ ? ಸಾಕು.
ಆಕ್ಟೋ 04, 2008 @ 06:27:14
ಕಾರುಣ್ಯ ಸಮತೆ ಸಾಕು. ಬುದ್ಧ ಏಕೆ ಸಾಕು?
ಆಕ್ಟೋ 02, 2008 @ 20:31:36
ದೇವನೂರ ಮಹಾದೇವರ ಬರಹವನ್ನು ಅನೇಕ ದಿನಗಳ ಬಳಿಕ ಓದಿ ಪುಲಕಿತನಾದೆ.
ಅವರ ಕತೆಗಳಲ್ಲಿ ಇರುವ insight ಈ ಬರವಣಿಗೆಯಲ್ಲೂ ಕಾಣಿಸುತ್ತದೆ.