ಈ ಮೂಲೆ ಹಳ್ಳಿಯಲ್ಲಿ ಕುವೆಂಪು

 


ವಿಮರ್ಶಕ ರಹಮತ್ ತರೀಕೆರೆ,  ಕುವೆಂಪು ಕುರಿತ ತಮ್ಮ ಬರಹವೊಂದರಲ್ಲಿ (ಕೃತಿ: “ಕತ್ತಿಯಂಚಿನ ದಾರಿ”), ತಮಗಾದ ಎರಡು ಅನುಭವಗಳನ್ನು ದಾಖಲಿಸಿದ್ದಾರೆ. ಕುವೆಂಪು ಚಿಂತನೆ ಹೇಗೆ ಜಾತ್ಯತೀತವಾಗಿ ಹರಡಿದೆ ಎಂಬುದನ್ನು ಆ ಮೂಲಕ ನಿರೂಪಿಸಿದ್ದಾರೆ. ಆ ಎರಡು ಸಂಗತಿಗಳು ಇಲ್ಲಿವೆ.

* * *

ku.jpg

ನಾನು ಭೈರವಾರಾಧಕ ಒಕ್ಕಲಿಗರು ನಡೆದುಕೊಳ್ಳುವ ಮೂಡಿಗೆರೆ ತಾಲೂಕು ಮಾಕೋನಹಳ್ಳಿಗೆ ಹೋಗಿದ್ದೆ. ಅಲ್ಲಿದ್ದ ಭೈರವ ಗುಡಿ ನೋಡಿಕೊಂಡು, ಅಲ್ಲೇ ಪಕ್ಕದಲ್ಲಿದ್ದ ಒಬ್ಬ ಒಕ್ಕಲಿಗರ ಮನೆಗೆ ಹೋದೆ- ಅಲ್ಲಿನ ಭೈರವಾರಾಧನೆಯ ಆಚರಣೆಗಳನ್ನು ತಿಳಿಯಲು. ಅವರು ವಿಶ್ವಾಸದಿಂದ ಒಳಗೆ ಕರೆದು, ಕಾಫಿ ಕೊಟ್ಟು ತಮಗೆ ಗೊತ್ತಿದ್ದನ್ನೆಲ್ಲ ತಿಳಿಸಿದರು. ಅದೊಂದು ಕಾಫಿ ಪ್ಲಾಂಟರರ ದೊಡ್ಡ ಮನೆ. ಹೆಂಚಿನ ಮನೆಯಾದರೂ ಒಳಗೆ ಅರಮನೆ ವೈಭವವಿತ್ತು. ಮನೆಯ ಯಜಮಾನರು ಒಕ್ಕಲಿಗರ ಸಂಘದ ಸಮುದಾಯ ಭವನದಲ್ಲಿ ಮಾಡಿದ ಮಗನ ಮದುವೆಯ ಆಲ್ಬಂ ನೋಡಲು ಕೊಟ್ಟರು. ಫೋಟೋಗಳು ಮದುವೆಯ ಸಿರಿವಂತಿಕೆಯನ್ನು ಸೂಚಿಸುತ್ತಿದ್ದವು. ಮದುವೆಗೆ ಬ್ರಾಹ್ಮಣ ಪುರೋಹಿತರನ್ನು ಕರೆಸಲಾಗಿತ್ತು. ಕುವೆಂಪು ಅವರ ಮಂತ್ರಮಾಂಗಲ್ಯ ಕಲ್ಪನೆ ಅವರು ಹುಟ್ಟಿಬಂದ ಸಮುದಾಯ ಹಾಗೂ ಪ್ರದೇಶದಲ್ಲಿ ಅಷ್ಟೇನೂ ಪ್ರಭಾವ ಬೀರಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಮನೆಯಲ್ಲಿ ಕುವೆಂಪು ಫೋಟೋವಾಗಲಿ ಪುಸ್ತಕವಾಗಲಿ ಕಾಣಲಿಲ್ಲ. ನಾನು “ನಿಮ್ಮ ಸಮುದಾಯದಲ್ಲಿ ಹುಟ್ಟಿದ ದೊಡ್ಡ ಚಿಂತಕ ಅವರು. ಅವರ ಪುಸ್ತಕ ನಿಮ್ಮಲ್ಲಿ ಇಲ್ಲವಲ್ಲ ಯಾಕೆ?” ಎಂದು ಕೇಳಿದೆ. ಅವರಿಗೆ ನನ್ನ ಮಾತು ಕೊಂಚ ಸೆಡವು ತಂದಿತು. ಅವರು ನೇರವಾಗಿ ತೀಕ್ಷ್ಣವಾಗಿ ಮರುಪ್ರಶ್ನೆ ಕೇಳಿದರು: “ಕುವೆಂಪು ನಮ್ಮ ಜನಾಂಗಕ್ಕೆ ಏನು ಮಾಡಿದ್ದಾರೆ? ದೊಡ್ಡ ದೊಡ್ಡ ಪುಸ್ತಕ ಬರೆದಿರಬಹುದು. ಆದರೆ ಚುಂಚನಗಿರಿಸ್ವಾಮಿ ನೋಡಿ. ಅವರು ಪಟ್ಟಕ್ಕೆ ಬಂದ ಮೇಲೆ ಊರೂರಲ್ಲಿ ಸಮುದಾಯ ಭವನ ಕಟ್ಟಿಸಿದ್ದಾರೆ. ಮೆಡಿಕಲ್ ಕಾಲೇಜು ಕಟ್ಟಿಸಿದ್ದಾರೆ. ಬೇಕಾದಷ್ಟು ಡೆವಲಪ್ ಮೆಂಟ್ ಆಗಿದೆ. ಕುವೆಂಪು ಅವರಿಂದ ಏನಾಗಿದೆ?”

*

ಬಾಗಲಕೋಟೆ ಜಿಲ್ಲೆಯ ಐಹೊಳೆ ಪಕ್ಕದಲ್ಲಿ ಕೆಲೂರು ಎಂಬ ಹಳ್ಳಿಯಲ್ಲಿ ಮಂಟೆಸ್ವಾಮಿಯ ಗುಡಿ ಇದೆಯೆಂದು ತಿಳಿದು ನೋಡಲು ಗೆಳೆಯರೊಂದಿಗೆ ಹೋಗಿದ್ದೆ. ಅಲ್ಲಿದ್ದ ಕೋರಿಶೆಟ್ಟರ್ ಎಂಬ ೮೦ ವರ್ಷದ ಹಿರಿಯರು (ಈಗ ಅವರು ತೀರಿಕೊಂಡಿದ್ದಾರೆ) ನಮ್ಮನ್ನು ತಮ್ಮ ಮನೆಗೆ ಕರೆದುಕೊಂಡುಹೋಗಿ ಟೀ ಮಂಡಾಳು ಕೊಟ್ಟು ಉಪಚರಿಸಿದರು. ಅವರ ಮೇಜಿನ ಮೇಲೆ ಕುವೆಂಪು ಅವರ ಮುಖ್ಯ ಕೃತಿಗಳಿದ್ದವು. ಅವು ಮೊದಲ ಮುದ್ರಣಗಳು. ಓದಿ ಓದಿ ಜೀರ್ಣವಾಗಿದ್ದವು. ಉತ್ತರಕರ್ನಾಟಕದ ಈ ಮೂಲೆ ಹಳ್ಳಿಯಲ್ಲಿ ಕುವೆಂಪು ಅವರನ್ನು ನೋಡಿ ಆನಂದವಾಯಿತು. “ಕುವೆಂಪು ಬಗ್ಗೆ ನಿಮಗೆ ಒಲವು ಹೇಗೆ ಬಂತು?” ಎಂದು ಕೇಳಿದೆ. ಶೆಟ್ಟರು ಅಭಿಮಾನದಿಂದ ಕಣ್ಮುಚ್ಚಿ “ನನ್ನ ಬದುಕನ್ನು ಬದಲಾಯಿಸಿದ ಲೇಖಕ” ಎಂದರು. ಜಾತಿಯಿಂದ ಲಿಂಗಾಯತರಾದ ಅವರು ಬಸವಣ್ಣನ ಬಗ್ಗೆ ಈ ಮಾತು ಹೇಳಿದ್ದರೆ ವಿಶೇಷ ಅನ್ನಿಸುತ್ತಿರಲಿಲ್ಲ. ಕುವೆಂಪು ಬಗ್ಗೆ ಹೇಳಿದ್ದು ವಿಶೇಷ ಅನ್ನಿಸಿತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: