ನಾನು ಭಯದಲ್ಲಿ ಬದುಕುತ್ತಿದ್ದೇನೆ…

‘ಅನಿವಾಸಿ’ ಅವರ ಬರಹಗಳು ಮೋಡಿ ಮಾಡುತ್ತವೆ. ಕುರೋಸಾವ ಅವರ ಚಿತ್ರದ ಬಗ್ಗೆ ಅನಿವಾಸಿ ಬರಹದ ಜ್ಹಲಕ್ ಇಲ್ಲಿದೆ-

ಹೈಡ್ರೋಜನ್ ಬಾಂಬ್ ಬಗ್ಗೆ ಆತಂಕ ಪಡಬೇಕೆಂದು ಜಪಾನೀಯರಿಗೆ ಹೇಳಿಕೊಡಬೇಕಾಗಿಲ್ಲ. ಹಿರೋಷಿಮಾ-ನಾಗಾಸಾಕಿಯ ಅನುಭವ ಮುಟ್ಟದೇ ಇರುವ, ಪ್ರತಿವರ್ಷ ಅದರ ನೆನಪಿಗೆ ಒಳಗಾಗದೇ ಇರುವ ಜಪಾನಿಯರೇ ಇರಲಿಕ್ಕಿಲ್ಲ.

ಅಂತಹ ದೇಶದಲ್ಲಿ ಅಕಿರಾ ಕುರೊಸಾವ “ಐ ಲೀವ್ ಇನ್ ಫಿಯರ್‍” ಎಂಬ ಚಿತ್ರ ಮಾಡಿದ್ದಾನೆ – ೧೯೫೫ರಲ್ಲಿ – ಅಟಾಮಿಕ್ ಬಾಂಬ್ ಸಿಡಿದ ಹತ್ತು ವರ್ಷಕ್ಕೆ. ಚಿತ್ರದ ನಾಯಕ ಒಂದು ಕೋಲ್ ಫೌಂಡ್ರಿಯ ಮಾಲೀಕ. ಬಾಂಬಿಂದ ತಪ್ಪಿಸಿಕೊಳ್ಳಲು ಬ್ರೆಜಿಲ್ಲಿಗೆ ವಲಸೆ ಹೋಗುವುದೊಂದೇ ಉಳಿದಿರುವ ದಾರಿ ಎಂಬ ಅಚಲವಾದ ನಿರ್ಧಾರಕ್ಕೆ ಬಂದಿದ್ದಾನೆ. “ಸಾಯುವುದು ಹೌದು, ಆದರೆ ಕೊಲ್ಲಲ್ಪಡಬಾರದು” ಎಂಬುದು ಅವನ ಸವಾಲು. ಕುಟುಂಬಕ್ಕೆ ಸೇರಿದ ಫೌಂಡ್ರಿಯನ್ನು ಮಾರಿ ಬಂದ ದುಡ್ಡಲ್ಲಿ ಕುಟುಂಬವೆಲ್ಲಾ ಬ್ರೆಜಿಲ್ಲಿಗೆ ಹೋಗಬೇಕೆಂದು ಅವನ ಯೋಚನೆ. ಅದಕ್ಕೆ ಅವನ ಮಕ್ಕಳಿಂದ ತೀವ್ರ ವಿರೋಧ. ಅವನಿಗೆ ಹುಚ್ಚೆಂದು ಸಾಬೀತು ಮಾಡಿ ವಲಸೆ ತಪ್ಪಿಸಲು ಅವನ ಮಕ್ಕಳು ಫ್ಯಾಮಿಲಿ ಕೋರ್ಟಿಗೆ ಹೋಗುತ್ತಾರೆ.

ಕೋರ್ಟು ಮಕ್ಕಳ ಪರವಾಗಿ ತೀರ್ಪಿತ್ತು ನಾಯಕನ ವಲಸೆಯ ನಿರ್ಧಾರಕ್ಕೆ ಆಧಾರವಿಲ್ಲ ಎನ್ನುತ್ತದೆ.

ಆ ತೀರ್ಪು ಕೊಟ್ಟ ಗುಂಪಿನಲ್ಲಿ ಒಬ್ಬ ಹಲ್ಲಿನ ಡಾಕ್ಟರ್‍ ಇದ್ದಾನೆ. ಅವನಿಗೆ ತೀರ್ಪು ಸರಿಯಾಗಲಿಲ್ಲ ಎಂಬ ಅಪರಾಧಿ ಭಾವ ಹತ್ತಿಕೊಂಡಿದೆ. ಮುಂಚೊಮ್ಮೆ ಕೋರ್ಟಿನ ಆಗುಹೋಗಿನಲ್ಲಿ ಅವನು ನಾಯಕನನ್ನು – “ಭಯದಿಂದಾಗಿ ಈ ನಿರ್ಧಾರಕ್ಕೆ ಬಂದೆಯ?” ಎಂದು ಕೇಳಿರುತ್ತಾನೆ. ಅದಕ್ಕೆ ನಾಯಕ “ಭಯವೇನೂ ಇಲ್ಲ. ಏಕೆಂದರೆ ತಪ್ಪಿಸಿಕೊಳ್ಳುವ ದಾರಿ ಇದೆಯಲ್ಲ!” ಎಂದು ಸಹಜವಾಗಿ ಹೇಳಿರುತ್ತಾನೆ.

ತೀರ್ಪಿತ್ತ ಎಷ್ಟೋ ದಿನದ ಬಳಿಕ ಆ ಡಾಕ್ಟರ್‍ ನಾಯಕನನ್ನು ಬಸ್ಸು ಲಾರಿ ಕಾರು ಗಿಜಿಗುಡುವ ಒಂದು ಬ್ರಿಡ್ಜಿನಡಿ ಎದುರಾಗುತ್ತಾನೆ. ನಾಯಕ “ಮುಂಚೆ ಭಯವಿರಲಿಲ್ಲ. ಆದರೆ ನಿಮ್ಮಿ ತೀರ್ಪಿನ ನಂತರ ನಾನು ಹಗಲಿರುಳು ಭಯದಿಂದ ನರಳುವಂತಾಗಿದೆ” ಎಂದು ಸಿಡಿಮಿಡಿಯಾಗಿ ಬಯ್ದು ನಡೆದು ಹೋಗುತ್ತಾನೆ. ಒಬ್ಬ ಮಹಾ ದುರಂತ ನಾಯಕನ ಹಾಗೆ ಕಾಣುತ್ತಾನೆ.

ತನ್ನ ಕುಟುಂಬವನ್ನು ಉಳಿಸಲಾಗದಕ್ಕೆ ವ್ಯಗ್ರನಾಗುತ್ತಾ, ಅಂತರ್ಮುಖಿಯಾಗುತ್ತಾ ಹೋಗುತ್ತಾನೆ. ತನ್ನ ಒಬ್ಬ ಕಾನೂನು ಬಾಹಿರ ಮಗಳ ಮಗುವನ್ನು ರಕ್ಷಿಸುತ್ತಿದ್ದೇನೆ ಎಂದು ಭ್ರಾಂತನಾಗುತ್ತಾನೆ. ಪಾರಾಗುವ ಯಾವ ದಾರಿಯೂ ಹೊಳೆಯದಾಗ, ತನ್ನ ಇಡೀ ಜೀವನದ ಬೆವರಿನ ಫಲವಾದ ನೆಚ್ಚಿನ ಫೌಂಡ್ರಿಗೇ ಬೆಂಕಿಯಿಡುತ್ತಾನೆ. ಅದು ಸುಟ್ಟಳಿದ ಮೇಲಾದರೂ ಮಕ್ಕಳು ತನ್ನೊಡನೆ ಬ್ರೆಜಿಲ್ಲಿಗೆ ಬರುತ್ತಾರೆ ಎಂಬ ಆಸೆಯವನಿಗೆ. ಆದರೆ, ಫೌಂಡ್ರಿಯ ಅವಶೇಷದ ಎದುರು ಅವನ ಕೆಲಸಗಾರರಲ್ಲೊಬ್ಬ – “ಹಾಗಾದರೆ ನಮ್ಮದು ನಾಯಿಪಾಡಾಗುತ್ತದಲ್ಲ, ಅದು ನಿಮಗೆ ಸರಿಯೆ?” ಎಂದು ಕೇಳುತ್ತಾನೆ. ಆ ಪ್ರಶ್ನೆ ಚಿತ್ರದ ಹರವು ಕುಟುಂಬದ ಪರಿಧಿಯನ್ನು ಮೀರಿ ತಟ್ಟನೆ ಹಿಗ್ಗಿಸಿಬಿಡುತ್ತದೆ. ಇಷ್ಟು ಹೊತ್ತಿಗಾಗಲೇ ತನ್ನ ಸೋಲಿನಿಂದಾಗಿ ಹುಚ್ಚಾಗಿರುವ ನಾಯಕ “ಬನ್ನಿ ಎಲ್ಲರೂ ಬ್ರೆಜಿಲ್ಲಿಗೆ ಹೋಗೋಣ” ಎನ್ನುತ್ತಾನೆ!

ಇನ್ಸೂರೆನ್ಸ್ ಫ್ರಾಡ್ ಆಪಾದನೆಯ ಮೇಲೆ ನಾಯಕನನ್ನು ಜೈಲಿಗೆ ತಳ್ಳುತ್ತಾರೆ. ಜೈಲಿನಲ್ಲಿ ಇಬ್ಬರು ಬಂಧಿಗಳು ಇವನನ್ನು ಕೆಣಕುತ್ತಾ “ಬ್ರೆಜಿಲ್ಲಿಗೆ ಹೋದರೆ ಲೋಕವನ್ನು ಸುಡುವ ಬಾಂಬಿನಿಂದ ತಪ್ಪಿಸಿಕೊಳ್ಳಬಲ್ಲೆ ಎಂದುಕೊಂಡೆಯ? ತಪ್ಪಿಸಿಕೊಳ್ಳಬೇಕಾದರೆ ನೀನು ಈ ಲೋಕವನ್ನೇ ತೊರೆದು ಹೋಗಬೇಕು” ಎಂದು ಹೀಯಾಳಿಸುತ್ತಾರೆ.

ಕುಟುಂಬದವರು ಜೈಲಿನಿಂದ ಬಿಡಿಸಿ ನಾಯಕನನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ. ತೀರ್ಪುಗಾರರಲ್ಲಿ ಒಬ್ಬನಾದ ಡಾಕ್ಟರ್‍ ಅವನನ್ನು ಬಂದು ಭೇಟಿ ಮಾಡುತ್ತಾನೆ. ನಮ್ಮ ದುರಂತ ನಾಯಕ “ಅತ್ತ ಕಡೆಯ ಲೋಕ ಹೇಗಿದೆ? ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ” ಎನ್ನುತ್ತಾನೆ. ಕಿಟಕಿಯಾಚೆ ಪ್ರಖರವಾಗಿ ಉರಿಯುತ್ತಿರುವ ಸೂರ್ಯನನ್ನು ನೋಡಿ ಸಂಕಟ ಮತ್ತು ನೋವಿನಿಂದ “ಅಯ್ಯೋ ಭೂಮಿ ಸುಟ್ಟು ಹೋಯಿತೆ?” ಎಂದು ಕೇಳುತ್ತಾನೆ.

ಆ ಡಾಕ್ಟರ್‍ ಅಲ್ಲಿಂದ ಹೊರಗೆ ಹೋಗುವಾಗ, ನಾಯಕನ ಕಾನೂನು ಬಾಹಿರ ಮಗಳು, ಅವನ ನೆಚ್ಚಿನ ಮೊಮ್ಮಗುವನ್ನು ಬೆನ್ನಿಗೆ ಸಿಕ್ಕಿಸಿಕೊಂಡು ಅವನಿಗೆ ಊಟ ತರುತ್ತಾಳೆ. ನಾಯಕನ ಬಗ್ಗೆ ಅಪಾರವಾದ ಕರುಣೆ ತೋರುವ ಇವರಿಬ್ಬರೂ ಒಬ್ಬರನ್ನೊಬ್ಬರು ದಾಟಿ ಹೋಗಿ ಒಂದು ಕ್ಷಣ ನಿಲ್ಲುತ್ತಾರೆ. ಮಾತಿಗೇನೂ ಉಳಿದಿಲ್ಲ ಎಂಬಂತೆ ಮುಂದುವರೆಯುತ್ತಾರೆ. ಅವರ ಹೆಜ್ಜೆ ಸಪ್ಪಳ ಆಸ್ಪತ್ರೆಯ ಆವರಣದಲ್ಲಿ ಪ್ರತಿಧ್ವನಿಯಾಗಿ ಮೊಳಗುತ್ತಾ ಚಿತ್ರ ಮುಗಿಯುತ್ತದೆ.

ಯಾವುದೇ ಪ್ರಣಾಳಿಕೆಯ ಬೆನ್ನುಹತ್ತದೆ, ಕುರೊಸಾವನಿಗೇ ವಿಶಿಷ್ಟವಾದ ಮಾನವೀಯ ನೆಲೆಯಲ್ಲಿ ಕತೆ ಬಿಚ್ಚಿಕೊಳ್ಳುತ್ತದೆ, ಹರಡಿಕೊಳ್ಳುತ್ತದೆ ಮತ್ತು ಸುತ್ತಿಕೊಳ್ಳುತ್ತದೆ. ಶಾಂತಿ, ಯುದ್ಧ, ಬಾಂಬುಗಳ ಬಗ್ಗೆಗಿನ ನಮ್ಮ ಚಿಂತನೆಗೆ ಹಲವಾರು ಸವಾಲುಗಳನ್ನು ಎಬ್ಬಿಸಿಟ್ಟು ಚಿತ್ರ ಕೊನೆಗೊಳ್ಳುತ್ತದೆ.

1 ಟಿಪ್ಪಣಿ (+add yours?)

 1. shivu.k
  ಸೆಪ್ಟೆಂ 18, 2008 @ 17:09:02

  ಅವಧಿಯಲ್ಲಿ ಕುರುಸೋವ ಸಿನಿಮಾ ಬಗ್ಗೆ ಓದಿದ ಮೇಲೆ ಆ ಸಿನಿಮಾ
  “ಐ ಲೀವ್ ಇನ್ ಫಿಯರ್” ನೋಡಬೇಕೆನಿಸುತ್ತದೆ.

  ಶಿವು.ಕೆ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: