ಹೀಗಿತ್ತು ಅವಳ ಸ್ವಗತ…

P For…

-ಲೀಲಾ ಸಂಪಿಗೆ

ಎಲ್ಲವೂ ವ್ಯವಸ್ಥೆಯಾಗಿತ್ತು. ಜೀವ ದಣಿದಿತ್ತು. ಅಂತಿಮ ಅಗ್ನಿ ಸ್ಪರ್ಶದೊಂದಿಗೆ ತನ್ನ ಬದುಕೇ ಮುಗಿದುಹೋದ ಭಾವವಿತ್ತು ಸುಶೀಲಳ ಮುಖದಲ್ಲಿ. ಸುಶೀಲಳ ಮಗಳು ಶಾರೀ ಅಗ್ನಿಯಲ್ಲಿ ಲೀನವಾಗಿದ್ದಳು. ಸುಶೀಲ ಆ ಕೆನ್ನಾಲಗೆ ನೋಡ್ತಾ ಮಂಡಿಯೊಳಗೆ ಮುಖವಿಟ್ಟಳು ಧ್ಯಾನಕ್ಕೆ ಕುಳಿತವಳಂತೆ.
ಅಲ್ಲೇ ಸ್ವಲ್ಪ ದೂರದಲ್ಲಿದ್ದ ಬಂಡೆಯೊಂದರ ಮೇಲೆ ಕುಳಿತೆ. ಶಾರೀ ನನ್ನ ಕಣ್ಣೆದುರು ಬಂದಳು. ಕೃಷ್ಣ ಸುಂದರಿ. ಆರೋಗ್ಯವಾಗಿದ್ದ ಆ ದೇಹಕ್ಕೆ ಹರೆಯದ ಮಿಂಚು. ಆ ಮುಗ್ಧತೆಯ ಮುಖ ಮುದ್ರೆ ಶಾಂತ.

ಸೊಣ್ಣಹಳ್ಳಿಪುರದ ಕೆನರಾಬ್ಯಾಂಕ್ ಪ್ರಾಯೋಜಿತ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆ ಕಟ್ಟಡದಲ್ಲಿ ಲೈಂಗಿಕವೃತ್ತಿ ಮಹಿಳೆಯರ ನಾಯಕತ್ವ ತರಬೇತಿ ಶಿಬಿರ ನಡೀತಾ ಇತ್ತು. ಸಂಜೆ ಪರಸ್ಪರ ವೈಯಕ್ತಿಕ ವಿಚಾರಗಳ ಹಂಚಿಕೆಯಿತ್ತು. ಇದ್ದಕ್ಕಿದ್ದಂತೆ ಸುಶೀಲಾ ತನ್ನ ಮಗಳು ಶಾರೀಗೆ ಮದ್ವೆ ಗೊತ್ತು ಮಾಡಿರೋ ವಿಚಾರ ತಿಳಿಸಿದ್ಲು. ಇಡೀ ಹಾಲ್ ಬೆಚ್ಚಿ ಬೀಳೋ ಹಂಗೆ ಎಲ್ಲರೂ ಹೋ ಅಂತ ಖುಷಿ ಹಂಚ್ಕೊಂಡ್ರು. ಶಾರೀ ಹುಟ್ಟಿದ ಹನ್ನೊಂದನೇ ದಿನವೇ ಮೆಜೆಸ್ಟಿಕ್ನ ರಸ್ತೆಗೆ ಅಮ್ಮನೊಂದಿಗೆ ಬಟ್ಟೆ ಸುತ್ತಿಕೊಂಡು ಮಾಂಸದ ಮುದ್ದೆಯಂತೆ ಕಿಚಿಪಿಚಿ ಅಂತ ಬಂದೋಳು. ಅವಳ್ ಬಿಟ್ಟು, ಇವಳ್ಬಿಟ್ಟು, ಅಮ್ಮ ನಂಬಿಟ್ಟು… ಅನ್ನೋಹಾಗೆ ಎಲ್ಲರ ಕೈಯಲ್ಲಿ ಬೆಳೆದವಳು. ಅಮ್ಮ ಗಿರಾಕಿಯೊಂದಿಗೆ ಹೋಗಿ ಬರುವಷ್ಟರ ಹೊತ್ತು ಇನ್ನಾರದೋ ಕೈಯ್ಯಲ್ಲಿರ್ತಾ ಇದ್ಲು. ಯಾರೂ ಇಲ್ಲದಿದ್ದರೆ 20 ರೂಪಾಯೀನ ಪಿಂಪ್ ಮಾದನ ಕೈಯಲ್ಲೇ ಇಟ್ಟು ಸುಶೀಲ ಹೋಗ್ಬಿಡ್ತಿದ್ಲು.

ಹೀಗೆ ಬೆಳೆದು ದೊಡ್ಡವಳಾದ ಶಾರೀ ಮದ್ವೇನ ಸಂಸ್ಥೆಯ ಎಲ್ರೂ ಸೇರಿ ಮಾಡೋ ನಿಧರ್ಾರ ಆಯ್ತಲ್ಲ.
ಆ ಸಂಸ್ಥೆಯ ನಿದರ್ೆಶಕರಾಗಿದ್ದ ಯರ್ರಿಸ್ವಾಮಿಯವರು ತಾಳಿ ಕೊಡಿಸೋಕೆ ಒಪ್ಪಿದ. ವಿಜಿ ಮದ್ವೆ ಸೀರೆ ಕೊಡಿಸೋಕೆ ಒಪ್ಪದ ಸಹನಾ ಕಾಲುಂಗುರ, ರಾಧಿಕಾ ಮುನ್ನೂರು ರೂಪಾಯಿ ಕೊಡ್ತೀನಿ ಅಂದ್ಲು. ಕಾಲಂದುಗೆ, ಸಾಧಾರಣ ಬಟ್ಟೆಗಳು, ಅವಳಿಗೊಂದು ಸೂಟ್ಕೇಸ್…ಹೀಗೇ ಎಲ್ಲವನ್ನೂ ನನ್ನ ಸಹಾಯಕ ವೇಣು ಪಟ್ಟಿ ಮಾಡಿಯೇ ಬಿಟ್ರು. ಮದುವೆ ನಂತರ ಒಂದು ಊಟದ ವ್ಯವಸ್ಥೇನ ಶಾರೀ ಅಮ್ಮ ಸುಶೀಲ ಮತ್ತು ನಾನು ಮಾಡೋದು ಅಂತ ಆಯ್ತು.

ಹುಡುಗ ಅನಾಥ ಅಂತ ಗುಸುಗುಸು ಅಂತಿದ್ರೂ ಸುರೇಶ ಶಾರೀಗೆ ತಕ್ಕನಾದವ ಎಂದು ಎಲ್ಲರಿಗೂ ಅನ್ನಿಸಿತ್ತು. ತನ್ನ ಬದುಕಿನ ಬಾಗಿಲಿಗೂ ಪ್ರವೇಶಿಸದ ಬದುಕು ತನ್ನ ಮಗಳಿಗೆ ಸಿಕ್ಕಿತು ಅಂತ ಸುಶೀಲ ಹಿಗ್ಗಿದ್ದಳು. ಹೆಜ್ಜೆಹೆಜ್ಜೆಗೂ `ಸೂಳೆ ಸೂಳೆ’ ಅಂತ ಮೂದಲಿಸಿಕೊಂಡೇ ಉಸಿರಾಡಿದ್ದ ಸುಶೀಲಳಿಗೆ ತನ್ನ ಮಗಳು ಯಾವ ಮೈಲಿಗೆಯೂ ಇಲ್ಲದೆ ಗೃಹಿಣಿಯಾದದ್ದು, ಧರ್ಮಪತ್ನಿಯಾದದ್ದು ಇವೆಲ್ಲ ಬದುಕಿನಲ್ಲಿ ಅದೆಂಥದೋ ಹೊಸತನ ತಂದೊಡ್ಡಿತ್ತು. ದಣಿವಾಗುವಷ್ಟು ದುಡಿದರೂ ಲೆಕ್ಕಿಸದ ಸುಶೀಲಾ ಶಾರೀಗೆ ಒಂದು ಪುಟ್ಟ ಮನೆಯನ್ನೂ, ಬದುಕನ್ನೂ ಜೋಡಿಸಿಕೊಟ್ಟಳು.

ಆದ್ರೆ ಕೆಲವೇ ತಿಂಗಳುಗಳಲ್ಲಿ ಶಾರೀಯ ಮೈಯ್ಯ ಮಿಂಚು ಮಾಯವಾಗ್ತಾ ಬಂತು. ಬದುಕೊಳಗೆ ಹೊಗೆಯಾಡೋಕೆ ಶುರುವಾಯ್ತು. ಗಂಡ ಕೆಲ್ಸಕ್ಕೆ ಹೋಗೋದು ನಿಲ್ಸಿದ್ದ. ಕುಡಿತವೂ ಅವನಿಗೆ ಗೊತ್ತು ಅನ್ನೋದು ಶಾರೀಗೆ ಗೊತ್ತಾಯ್ತು. ಕೆಲಸಕ್ಕೆ ಹೋಗು ಅಂತ ಗಂಡನನ್ನು ಒತ್ತಾಯಿಸಿದಾಗ ಅವನು ತನ್ನೊಳಗೆ ಅಡಗಿದ್ದ ಲಾವಾರಸಾನ ಹೊರ ಉಕ್ಕಿಸಿದ್ದ. `ನಿಮ್ಮಮ್ಮನ್ನ ತಂದ್ಹಾಕು ಅಂತಹೇಳು. ಒಬ್ಬ ಬೀದಿಸೂಳೆ ಮಗಳನ್ನು ನಾನು ಕೈ ಹಿಡಿದು ಜೀವನ ಕೊಟ್ಟಿಲ್ವ?’ ಎಂದಾಗ ಶಾರೀ ಬದುಕಿಗೇ ಬರಸಿಡಿಲು ಬಡಿದಿತ್ತು. ಉದ್ದಕ್ಕೂ ಇಂಥೋಳ ಮಗಳು ಅಂತ ಅನುಭವಿಸಿ ಬಂದ ಎಲ್ಲ ನೆನಪುಗಳು ರಾಚಿದವು. ಈ  ಸಂಸಾರ ಮರೀಚಿಕೆ, ತನಗೆಟುಕದ್ದು ಅನ್ನೋ ವಾಸ್ತವ ಶಾರಿಯನ್ನು ಕಂಗಾಲಾಗಿಸಿತ್ತು.

ಅದೊಂದು ದಿನ ಸುಶೀಲ ಮಾತಾಡ್ತಾ ನನ್ನೊಂದಿಗೆ ಶಾರೀಯ ಬದುಕಲ್ಲಿ ಸಾಮರಸ್ಯ ಬಿರುಕು ಬಿಟ್ಟ ಬಗ್ಗೆ ಹೇಳ್ಕೊಂಡು ಅತ್ಲು. ಆದರೂ ಎದೆಗುಂದದ ಸುಶೀಲಾ ಹೇಗಾದರೂ ತನ್ನ ಮಗಳ ಬದುಕನ್ನು ಹಸನುಗೊಳಿಸಲು ಉಸಿರುಗಟ್ಟಿ ದುಡಿದಳು. ಒಮ್ಮೆ ಎಲ್ಲವೂ ಸರಿಹೋದಂತೆ ಭಾಸವಾಗ್ತಿತ್ತು. ಮತ್ತೊಮ್ಮೆ ಸೌಧವೇ ಉರುಳಿಹೋಗಿಬಿಡುವ ಅಪಾಯ ಕಾಡ್ತಿತ್ತು. ಇನ್ನೂ ಚಿಕ್ಕ ವಯಸ್ಸು, ಎಲ್ಲವೂ ಸರಿಹೋಗುತ್ತೆ ಅಂತ ಸಮಾಧಾನಿಸಿಕೊಳ್ಳುತ್ತಿದ್ದಳು ಸುಶೀಲ.

ಊಹುಂ! ಸರಿಹೋಗಲೇ ಇಲ್ಲ. ಸುಶೀಲ ಮಾಡಿದ ಎಲ್ಲ ಪ್ರಯತ್ನಗಳೂ ಕಡಲತೀರದ ಮರಳ ಗುಡ್ಡೆಯ ಗೂಡುಗಳಂತಾಯ್ತು! ಈ ಕಳಂಕವನ್ನೇ ಬ್ಲಾಕ್ಮೇಲ್ ತಂತ್ರ ಮಾಡ್ಕೊಂಡ ಸುರೇಶನ ಕುಡಿತ ಮಿತಿಮೀರಿತ್ತು. ನೆಪ ಸುಶೀಲಳಾಗಿದ್ದಳು. ಆ ಅಮಲಲ್ಲೇ ಆ ಕೃಷ್ಣಸುಂದರಿ ಶಾರೀಯ ಮೈಗೆ ಸೀಮೆಎಣ್ಣೆ ಎರಚಿ ಗೀಚಿದ ಬೆಂಕಿಕಡ್ಡಿಯಿಂದ ತನ್ನ ಬೀಡಿ ಹೊತ್ತಿಸಿಕೊಂಡ ಸುರೇಶ ಉಳಿದ ಕಡ್ಡಿಯ ಪುಟ್ಟ ಬೆಂಕಿಯನ್ನು ಶಾರಿಯೆಡೆಗೆ ಎಸೆದುಬಿಟ್ಟಿದ್ದ.
ಇದನ್ನೆಲ್ಲ ಕೇಳಿ ಮನಸ್ಸು ಭಾರವಾಯ್ತು. ಸುಜಾತ, ವಿನ್ನಿ, ಯಶೋದ ಎಲ್ಲರಿಗೂ ಅಲ್ಲಿಗೆ ಹೋಗೋಣ ಅಂತ ಹೇಳ್ದೆ. ಸುಶೀಲಳನ್ನೂ ಕರ್ಕೊಂಡು ವಿಕ್ಟೋರಿಯಾ ಆಸ್ಪತ್ರೆಯ ಪಾರ್ಕಲ್ಲಿ ಕುಳಿತ್ವು. ಟೀ ತರ್ಸಿ ಸುಶೀಲಳಿಗೆ ಕೊಟ್ಟೆ. ಕಟ್ಟಿಕೊಂಡಿದ್ದ ದುಃಖ ಮೌನ ಒಡೆದು ಆಕ್ರಂದನ ಮಾಡ್ತು. `ಅತ್ತುಬಿಡು ಸುಶೀ, ಹಗುರಾಗ್ತೀಯಾ’ ಅಂದೆ. ನನಗೂ ಅತೀವ ನೋವಾಗಿತ್ತು. ಇವರು ಮನುಷ್ಯರಾಗಿ, ಸಹಜವಾಗಿ ಬದುಕೋಕೆ ಒಂದು ಐಡೆಂಟಿಟಿ ಹುಡುಕೋ ಯತ್ನದಲ್ಲಿ ಅವರೊಂದಿಗೆ ನಾನೂ ಸೋತು, ಸೋತು, ನಿರಾಶಳಾಗ್ತಿದ್ದೆ. ಹಾಗೆ ನಿರಾಶೆಯಾದಾಗಲೆಲ್ಲಾ ಅವರ ಕಣ್ಣೀರಲ್ಲಿ
ನಾನೂ ಸೇರ್ಕೊಂಡ್ ಬಿಡ್ತಿದ್ದೆ. ಇದ್ದಕ್ಕಿದ್ದಂತೆ, `ಅಮ್ಮಾ’ ಎಂದಳು ಸುಶೀಲ. ಅವರೆಲ್ಲರೂ ವಯಸ್ಸಿನ ಅಂತರವಿಲ್ಲದೆ ನನ್ನನ್ನು `ಅಮ್ಮಾ’ ಅಂತಲೇ ಸಂಬೋಧಿಸು ತ್ತಿದ್ದುದು. `ಶಾರೀ ಹೆಣವೂ ಕೂಡ ನನ್ನ ದೇಹದ ಕಿಮ್ಮತ್ತಿನ ಕಾಸನ್ನ ಬೇಡಿ ಬಿಡ್ತಮ್ಮ, ನೀನು ಅಂದ್ಕೊಂಡಿರೋ
ಹಾಗೆ ಯಾರ್ಯಾರೋ ನನ್ನ ಜೊತೆ ಕೈ ಜೋಡಿಸ್ಲಿಲ್ಲ. ಪಾಷಾ, ಶೇಖರ, ಮುನ್ನಿ ಎಲ್ರೂ ಬಂದಿದ್ರು. ಇಂಥಾ ಟೈಮಲ್ಲೂ ಅವರೆಲ್ಲಾ ಕೈ ಚೆಲ್ಲಿ ಬಿಟ್ರು. ಈಗ ಬರ್ತೀವಿ ಅಂಥ ಹೋದೋರು ಯಾರೂ ಬರ್ಲೇ ಇಲ್ಲಮ್ಮ. ಇಷ್ಟುದಿನ ನನ್ನನ್ನೇ ಹಿಡಿಹಿಡಿಯಾಗಿ ತಿಂದೋರು’ ಅಂತ ಕರುಳು ಕಿತ್ತು ಬರೋ ಸಂಕಟದ ಬುತ್ತಿಯನ್ನು ಸುಶೀಲ ಬಿಚ್ಚಿ ಬಿಟ್ಲು. ನಾನು ಮೂಕಳಾದೆ. ಸುಶೀಲ ಮಗಳನ್ನು ಶವಾಗಾರದಿಂದ ಹೊರತರಲು ಹಣ ಹೊಂಚಿದ ಪರಿಯನ್ನು ಅವಳ ಬಾಯಿಂದಲೇ ಕೇಳಿದೆ.

ಹೀಗಿತ್ತು ಅವಳ ಸ್ವಗತ:
`ಬಂದು ಸಾಂತ್ವನ ಹೇಳಿ ಹೋದವರು ಹಿಂದಿರುಗಿ ಬಾರದಾಗ ಪರಿಸ್ಥಿತಿ ಅರಿವಾಯ್ತು ನನಗೆ. ಮುಸ್ಸಂಜೆಯಾಗ್ತಿತ್ತು. ಅವಸರವಸರವಾಗಿ ತನ್ನ ಕೆಲಸ ಮುಗಿಸಿ ಹೊರಟವನಂತೆ ಸೂರ್ಯ ಕ್ಷಣಕ್ಷಣಕ್ಕೂ ಇಳಿಯತೊಡಗಿದ್ದ. ಬೆಳಕು ದುಪ್ಪಟ್ಟಿತ್ತು. ಬೆಳಕಿನ ಭ್ರಮೆ ಕಳೆದು ನನ್ನ ಜಗತ್ತು ಮಸುಕು ಮಸುಕಾಗಿತ್ತು. ಈ ವಾತಾವರಣವೇ ದಟ್ಟ ಕತ್ತಲಿಗೆ ನನ್ನನ್ನು ಒಡ್ಡುವುದು ಎಂಬುದರ ಅನುಭವ ನನ್ನನ್ನು ಎಚ್ಚರಿಸಿತು. ಬರೀ ದೇಹದ ಮಸಲ್ಸ್ಗಳನ್ನೇ ಮಾರಿದ ನನಗೆ ಹೆಣವನ್ನೂ ಕೊಳ್ಳಬೇಕಾಗಬಹುದಾದ ಕಲ್ಪನೆಯೂ ಸುಳಿದಿರಲಿಲ್ಲ. `ನನ್ನ ಒಡಲಕುಡಿಗೆ ನಾನೇ ತೆರಬೇಕಾದ ತೆರವನ್ನು ಹೊಂಚೋದಾದ್ರೂ ಹೇಗೆ?’ ಎನ್ನಿಸಿ ಎದ್ದು ನಿಂತೆ. ಸೀದಾ ರಸ್ತೆಗಿಳಿದೆ. ಮೆಜೆಸ್ಟಿಕ್ ಅಲೋಕ ಹೋಟೆಲಿನ ತಿರುವಿನ ಕಿರುದಾರಿಯ ಗೂಡಂಗಡಿಗೆ ಹೋದೆ. ಮಾಣಿಕ್ಚಂದ್ ಪೊಟ್ಟಣ ಒಡೆದು ಬಾಯಿಗೆ ಸುರುವಿಕೊಂಡೆ. ಮೂರನೇ ಗಲ್ಲಿಯಲ್ಲಿ ಶ್ರೀರಾಮ ವೈನ್ ಸ್ಟೋರಿನ ಮುಂಭಾಗದಲ್ಲಿ ನಿಂತೆ. ಅಂಗಡಿ ಮಾಲೀಕ ನಾರಾಯಣ ಪ್ರಶ್ನಾರ್ಥಕವಾಗಿ ನೋಡ್ದ. ಒಂದು ಪೆಗ್ ಕೊಡಣ್ಣ ಅಂದೆ. ಗಟಗಟನೆಸುರುವಿಕೊಂಡೆ. ಗಂಟಲು, ಎದೆ, ಹೊಟ್ಟೆ…ದಹಿಸ್ಕೊಂಡೇ ಒಳಸೇರ್ತು. ಹಾಗೇ ಹೊರಟೆ. ನಾರಾಯಣ ಅವಾಜ್ ಹಾಕ್ತಾನೇ ಇದ್ದ. `ಬರೋವಾಗ ದುಡ್ಡು ಕೊಟ್ಹೋಗು, ಮುಂಡೇವು ಕುಡೀದೇ ಇದ್ರೆ ಸೆರಗು ಬೀಳೋಲ್ಲ, ಸೆರಗು ಬೀಳ್ದೆ ದುಡ್ಡು ಕೊಡೋಲ್ಲ’ ಅಂತ ಗೊಣಗ್ತಾನೇ ಇದ್ದ. ಹಾಗಂತ ಗೊಣಗ್ತಾನೇ ಆತ ಅದೆಷ್ಟು ಸೆರಗುಗಳ ಸಂದಿಯ ನೋಟುಗಳನ್ನ ಎಣಿಸಿದ್ದಾನೆ ಅನ್ನೋದು ದಿನದಿಂದ ದಿನಕ್ಕೆ ಹೆಚ್ಚೋ ಅವನ ದವಲತ್ತು ನೋಡಿದ್ರೇ ಹೇಳ್ಬಹುದು.

`ರಂಭಾ ಥಿಯೇಟರಿನ ಗಲ್ಲಿಗಿಳಿದೆ. ಅದೆಷ್ಟು ವರ್ಷಗಳ ಪರಿಚಿತ ಸ್ಥಳ. ಆ ಗಲ್ಲಿಯ ಅಡಿಯಡಿಯ ಇತಿಹಾಸದ ಪರಿಚಿತಳು ನಾನು. ಎದುರಿಗೆ ಸ್ವಲ್ಪ ದೂರದಲ್ಲಿ ವ್ಯಕ್ತಿಯೊಬ್ಬ ಬಂದು ನಿಂತ. ಅವನೇ ಬೆರಳುಗಳ ಅಂಕಿ ಸೂಚಿಸಿದ. ಏನೂ ಪ್ರತಿಕ್ರಿಯಿಸದೆ ಅವನ ಹಿಂದೆ ನಡೆದೆ. ಅವನೇನೋ ಮಾತಾಡ್ತಾನೇ ಇದ್ದ. ಸಪ್ತಪದಿಯವಳೊಂದಿಗೆ ಎಂದೂ ಬೆತ್ತಲಾಗದ ತಾಕತ್ತಿಲ್ಲದವನು ನನ್ನಲ್ಲಿ ಆ ಭ್ರಮೆಗಳನ್ನು ಹುಟ್ಟಿಸ್ತಾನೇ ಇದ್ದ. ನನ್ನೊಡಲು ಮಾತ್ರ ಅಸಾಧ್ಯವಾದ ನೋವನ್ನು ಒಸರುತ್ತಿತ್ತು. ಅವನು ತೃಷೆಯ ಉತ್ತುಂಗದಲ್ಲಿ ತನ್ನೊಂದಿಗೆ ಬರಲು ರಮಿಸುತ್ತಲೇ ಇದ್ದ. ಕೊನೆಗೂ ನಿಸ್ತೇಜನಾದ. ಮಾತಾಡಿ ಬಂದದ್ದು ಇಡೀ ರಾತ್ರಿಗೆ, ಅರ್ಧ ಗಂಟೆಗೇ ಅವನ ಪೌರುಷ ಮುಗಿದಿತ್ತು. ಕಾವಿಳಿದ ಮೇಲೆ ಭರವಸೆಗಳೂ ಇಲ್ಲ. ಭ್ರಮೆಯೂ ಇಲ್ಲ. ಗಾಢನಿದ್ರೆಗೆ ಹೋದ ಹೆಣದಂತೆ!

`ದೇಹ, ಮನಸ್ಸು, ಬದುಕು ಎಲ್ಲವೂ ಚಿಂದಿಚಿಂದಿ. ಸುಮಾರು ಇಪ್ಪತ್ತೈದು ವರ್ಷಗಳಿಂದಲೂ ನನ್ನ ಜೊತೆ ನಡೆದವರು, ಕಸಿದವರು, ತಿಂದವರು, ಕುಡಿದವರು, ನನ್ನನ್ನೇ ಹೀರಿದವರು…ಲೆಕ್ಕವಿಲ್ಲದಷ್ಟು. ನೀರವತೆ ನನ್ನೊಂದಿಗಿತ್ತು. ಎಷ್ಟು ಬೇಡೆಂದರೂ ನಾನು ದುಡಿದುಡಿದು ಹಾಕಿದ ನೋಟುಗಳ ಲೆಕ್ಕ ಮಾಡುವ ವ್ಯರ್ಥ ಪ್ರಯತ್ನವನ್ನ ನನ್ನ ಮನಸ್ಸು ಮಾಡುತ್ತಲೇ ಇತ್ತು. ಎಂದೂ ಲೆಕ್ಕಕ್ಕೇ ಸಿಗದ ಆ ಕಾಂಚಾಣ ಸೊನ್ನೆ ಸೊನ್ನೆಗಳನ್ನು ಮಾತ್ರ ಸುತ್ತಿಸುತ್ತಿ ನನ್ನ ಮುಂದೆ ಗುಡ್ಡೆ ಹಾಕ್ತಿತ್ತು. ಗಳಿಸಿದ್ದೆಲ್ಲವೂ ದಕ್ಕಿದ್ದಾದರೂ ಎಲ್ಲಿ? ಇಂಥಾ ಅದೆಷ್ಟು ಪಾಷಾ, ಶೇಖರ, ಮುನ್ನಿಯಂತಹವರು ನುಂಗಿ ನೀರು ಕುಡಿದಿದ್ದರು. ಬೆತ್ತಲಾದ ಕತ್ತಲಾಟದಲ್ಲಿ ಬೆವರಿಳಿಸಿಕೊಂಡವರು ಕೊಟ್ಟಿದ್ದೂ ಲೆಕ್ಕವಿಲ್ಲ. ಬೆತ್ತಲೆ ದೇಹಕ್ಕೆ ಸೀರೆ ಸುತ್ತುವ ಮುನ್ನವೇ ಕಸಿದುಕೊಂಡ ಹದ್ದುಗಳದ್ದೂ ಲೆಕ್ಕವಿಲ್ಲ. ಎಷ್ಟು ರಾಶಿ ಸೊನ್ನೆಗಳಿದ್ದರೂ ಗುಣಿಸಿದ್ದು ಸೊನ್ನೆಯಿಂದಲೇ ಆದಾಗ ಎಲ್ಲವೂ ಶೂನ್ಯವಾಯ್ತು.’ಶಾರಿಯೆಂಬ ಬೆಳಕೂ ಕತ್ತಲೆಯಾಯಿತು.

2 ಟಿಪ್ಪಣಿಗಳು (+add yours?)

 1. lokesh mosale
  ಸೆಪ್ಟೆಂ 25, 2008 @ 10:20:45

  aah….yemba nittusiru mathra nannadaagide .
  lokesh mosale
  mysore

  ಉತ್ತರ

 2. NAVI
  ಜುಲೈ 24, 2008 @ 16:43:08

  ULTIMATE..

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: