ಅಹಂಕಾರಗಳ ಎದುರು ಒಂದು ಗೆಲುವು

chetana.jpg

ಭಾಮಿನಿ ಷಟ್ಪದಿ

ಚೇತನಾ ತೀರ್ಥಹಳ್ಳಿ

ದು ಅವನಿಗೆ ತೀರ ಸುಲಭವಾಗಿತ್ತು.
ಹಾಗೆ `ಬೇಡ’ ಅಂದು ಮುಖ ತಿರುವಿಬಿಡುವುದು ಗಂಡಸರಿಗೆ ತೀರ ಸುಲಭ!
ಕನ್ನಡಿಯೆದುರು ನಿಂತು ಮುಂಗುರುಳು ತೀಡಿಕೊಳ್ಳುವಾಗ ಒಳಗೆಲ್ಲ `ಝುಮ್’ಗುಡುತ್ತಿತ್ತು. ಇಡಿಯ ಮೈಯಲ್ಲಿ ಏನಿದೆ ಕೊರತೆ? ನೋಡಿಕೊಂಡಳು. “ಜಗವೆಲ್ಲ ನನ್ನ ಹಿಂದೆ, ನಾನು ಅವನ ಹಿಂದೆ!” ಹಾಗಂತ ಹಾಡಿದೆಯಾ? ಮಾಡು ನೋಡಿ ನಕ್ಕಳು. ಖುಶಿ ಜಾಸ್ತಿಯಾದಾಗ ಅಳು ಬರುತ್ತೆ, ಗೊತ್ತು. ದುಃಖ ಜಾಸ್ತಿಯಾದಾಗ ನಗು ಬರೋದು ಗೊತ್ತಾ!?

ಅವಳಿಗೆ ಚೆನ್ನಾಗಿ ಗೊತ್ತು. ಅಂವ ಬೇಡ ಅಂದಿದ್ದಕ್ಕೆ ಕಾರಣ ತನ್ನ ರೂಪವಂತೂ ಅಲ್ಲ. ಗುಣವಲ್ಲ, ಬುದ್ಧಿವಂತಿಕೆ ಕೊರತೆಯಲ್ಲ, ಯಾವುದೂ ಅಲ್ಲ.
ಅದೇ, ತಾನು ಕಾರಣಗಳೇ ಇಲ್ಲದೆ ಅಂವನ್ನ ಬೇಡವೆಂದಿದ್ದರೆ, ಜನದ ಮಾತು ಹೇಗಿರುತ್ತಿತ್ತು?
ತುಟಿ ಕಚ್ಚಿ ನೋಯಿಸ್ಕೊಂಡಳು. ಇನ್ಯಾರನ್ನ ನೋಯಿಸಿ ಸಿಟ್ಟು ತಣಿಸಿಕೊಳ್ಳಬಹುದಿತ್ತು ಅವಳು?

ಅಂವ ವಿನಾಕಾರಣ ಅವಳನ್ನ ನಿರಾಕರಿಸಿಬಿಟ್ಟಾಗಿನಿಂದ ಅಪ್ಪ ಮಾತುಮಾತಿಗೆ ಸಿಡುಕತೊಡಗಿದ್ದ.
ಸದಾ ಹಾಡು ಗುನುಗುತ್ತ ಓಡಾಡುತ್ತಿದ್ದ ಹುಡುಗಿ. ಅವಳನ್ನ `ನೀ ಏನು ಸೂಳೆಗೆ ಕೆಟ್ಟುಹೋದೆಯೇನೇ?’ ಅಂತ ಗದರಿಬಿಟ್ಟ. ಪ್ರಭಾವೀ ಗಂಡೊಂದು ಕೈಬಿಟ್ಟ ಉರಿ ಅವನಿಗೆ!
ಅಮ್ಮ ಅಡುಗೆ ಮನೆಯಲ್ಲಿ `ಮಂಗಳವಾರ ಹುಟ್ಟಿದ ಅನಿಷ್ಟ ಅಂತ ಒಗ್ಗರಣೆ ಹಾಕಿದಳು. ಅವಳು ಹಾಗೆ ಮಗಳ ಮೇಲೆ ಉರಿಹಾಯಲಿಕ್ಕೆ ಅಸಹಾಯಕತೆಯೇ ಕಾರಣವೇನೋ? ಪಾಪ. ಹುಡುಗಿಗೆ ಅದೆಲ್ಲ ಹೇಗೆ ತಿಳಿಯಬೇಕು?
ತಂಗಿ ಬೇರೆ ಸುಖಾಸುಮ್ಮನೆ ಮುಖ ಊದಿಸ್ಕೊಂಡು `ಅಕ್ಕ ಅಶೋಕ ಪಿಲ್ಲರಿನ ಹತ್ತಿರ ಯಾವನೋ ಸಾಬಿಯ ಜತೆ ಹರಟುತ್ತ ನಿಂತಿದ್ದಳು’ ಅಂತ ಪುಕಾರುಮಾಡತೊಡಗಿದ್ದಳು. ಅವಳ ಮನಸಲ್ಲಿ ಏನಿತ್ತು?

ಹಾಗಂತ, ಹುಡುಗಿ ಅಶೋಕ ಪಿಲ್ಲರಿನ ಬಳಿ ಆ ಚೆಂದದ ಹುಡುಗನೊಟ್ಟಿಗೆ ಮಾತಾಡಿದ್ದೇನೋ ಹೌದು. ಹಾಗವಳು ಪಿಲ್ಲರಿನ ಕೆಳಗೆ ನಿಂತು ಹುಡುಗನ ಪ್ರಪೋಸಲ್ಲನ್ನ ನಿರಾಕರಿಸ್ತಿದ್ದಳು. ಅಪ್ಪ- ಅಮ್ಮನಿಗೆ ಆಘಾತ ಮಾಡಲಾರೆ ಅಂತ ತನ್ನ ಬಯಕೆ ನಿಂಗುತ್ತಿದ್ದಳು. ಇರುವೊಬ್ಬ ತಂಗಿಯ ಮದುವೆಗೆ ಅಡ್ಡಿಯಾದರೆ? ಬೆಚ್ಚಿದ್ದಳು. ಹುಡುಗ ಹೃದಯ ಮುರಕೊಂಡು ತಲೆ ತಗ್ಗಿಸಿ ನಡೆದುಬಿಟ್ಟಿದ್ದ.

ಯಾಕೋ ಅನುಮಾನವಾಯ್ತು. ಅಂವ ಏನಾದರೂ ತನ್ನ ಬಗ್ಗೆ ಇಲ್ಲಸಲ್ಲದ….
ಥೂ..! ತನ್ನ ಯೋಚನೆಗೆ ತಾನೇ ಉಗಿದು ಉಪ್ಪು ಹಾಕಿದಳು. ಇವಳು ಒಲ್ಲೆನೆಂದ ಮರುದಿನದಿಂದ ಅಂವ ತನ್ನಪಾಡಿಗೆ ತಾನು ಇದ್ದುಕೊಂಡಿದ್ದ. ಮತ್ತೆ… ಈ ಅವಮಾನದ ಕಾರಣ?
ಅಂವ ಯಾರನ್ನಾದರೂ ಪ್ರೀತಿಸ್ತಿರಬಹುದು. ಅಥವಾ, ಅವನಿಗೆ ಮದುವೆಯೇ ಬೇಡವಿರಬಹುದು. ಇಲ್ಲಾ,  ಅದನ್ಯಾವುದನ್ನೂ ಬಾಯ್ಬಿಟ್ಟು ಹೇಳದೆ ಮುಷಂಡಿಯ ಹಾಗೆ ಮುಖತಿರುವಿದ ಅಂವ…. ನಾಮರ್ದನಿರಬಹುದು!?

ಹೀಗೆ ಅನಿಸಿದ್ದೇ, ಅವಳು ಗೆಲುವಾದಳು. ಅವತ್ತಿನ ಸಂಜೆ ಹುಡುಗಿ ತಾನುತಾನೇ ಮನೆಮಂದಿ ಮೈಮೇಲೆ ಬಿದ್ದು ಬಾಯ್ತುಂಬ ಮಾತಾಡಿದಳು. ಸುಳ್ಳುಸುಳ್ಳೆ ನಕ್ಕಳು. “ಅಮ್ಮಾ ತಲೆಗೆ ಎಣ್ಣೆ ಹಾಕೇ” ನುಲಿದಳು. ತಂಗಿಯೊಟ್ಟಿಗೆ ಪಗಡೆ ಆಡಿ ಬೇಕೆಂದೇ ಸೋತಳು.
ಮನೆ ಮಂದಿಯ ಪ್ರತಿ ಉದಾಸೀನಕ್ಕೂ ಅವನ ನಾಮರ್ದತನವನ್ನ ನೆನೆದು ನಕ್ಕು ಸಹಿಸಿಕೊಂಡಳು.
ತನ್ನ ತಲೆಪ್ರತಿಷ್ಠೆಗೆ ಅವಳನ್ನ ಬೇಡ ಅಂದವನ ಅಹಂಕಾರವನ್ನ ಹೀಗೆ ನೀವಾಳಿಸಿದಳು ಹುಡುಗಿ, ತನ್ನ ಅವಮಾನಕ್ಕೆ ಸೇಡು ತೀರಿಸ್ಕೊಂಡಳು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: