ನೋವಿನ ಮುಂದೆ ನಿರಂತರ ಯುದ್ಧ

 chetana.jpg

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ

ತ್ತೆ ಮತ್ತೆ ಕ್ಲಿಪ್ಪು ಟಪಟಪಾರೆನಿಸಿ ಜುಟ್ಟು ಬಿಗಿದಳು.

ಊಹೂಂ… ಅವೆರಡು ಕೂದಲು ಒಳಸೇರ್ತಲೇ ಇಲ್ಲ. ತುದಿ ಬೇರೆ ಮಾವಿನ ಕಾಯಿ ಮೂತಿಯಾಗಿದೆ!
ಐ ಲೈನರು ತೀಡಿ, ಲಿಪ್ ಸ್ಟಿಕ್ಕು ಮೆತ್ತಿ, ಅಂತೂ ರೆಡಿ! ಟೈಮ್ ಟೇಬಲಿನಲ್ಲಿ ಅದಕ್ಕಂತಲೇ ಅರ್ಧ ಗಂಟೆ ನಿಗದಿಯಾಗಿದೆ.
ಹೀಗೆ ದಿನಕ್ಕೊಂದು ರೀತಿ ಡ್ರೆಸ್ಸು ಮಾಡ್ಕೊಂಡು ಛಿಲ್ಲನೆ ನಗುತ್ತ ಹುಡುಹುಡುಗಿಯಾಗಿ ಸಂತೂರ್ ಅಡ್ವರ್ಟೈಸಿನ ಮಾಡೆಲಾಗೋದು ಅವಳಿಗೆ ಖುಶಿ.

ಆದರೆ,
ಆದರೆ ಅದರಲ್ಲಿ ಬರುವ ಹಾಗೆ ‘ಮಮ್ಮೀ…’ ಅನ್ನುತ್ತ ಓಡಿ ಬರಲು ಮಗುವೊಂದು ಬಳಿಯಿಲ್ಲ.
ಇದು “ಅಷ್ಟೇ” ಅಂದು ಸುಮ್ಮನಾಗುವ ವಿಷಯವಲ್ಲ.

*

“ಹೆಣ್ಣಲ್ಲ, ಹೆಣ್ಣು ಹುಟ್ಟಲ್ಲ. ಮಗೂನ ಇಲ್ಲೇ ಬಿಟ್ಟು ರಾಜ್ಯ ಆಳೋಕೆ ಹೋಗಿದಾಳ್ನೋಡು ಹೆಮ್ಮಾರಿ!” “ಪಾಪ ಮಗು, ಅದಕ್ಕೆ ‘ನೀನೇ’ ಅನ್ನೋರು ಗತಿಯಿಲ್ಲ, ಅವಳ ತೆವಲಿಗಷ್ಟು!”

– ಹೀಗೆಲ್ಲ ಪುಕಾರು ಮಾಡಿ ಬಾಯಿ ಬೇಸರ ಬಂದ ಜನ ಈಗ ಸುಮ್ಮನಿದ್ದಾರೆ. ಜನ ಸುಮ್ಮನಾಗಿಬಿಟ್ಟ ತಲೆಬಿಸಿಗೆ ಅಂವ ಹೊಸತೇನಾದರೂ ಸ್ಕ್ರಿಪ್ಟು ರೆಡಿ ಮಾಡಿ ನಾಟಕವಾಡ್ತಲೇ ಇರುತ್ತಾನೆ. ಅವನ ಮನೆ ಮಂದಿ ಊರು ತುಂಬಾ “ಕೆಟ್ಟ ಮಕ್ಕಳಿರಬಹುದು, ಕೆಟ್ಟ ತಾಯಿ ಇರೋಲ್ಲ ಅನ್ನೋದು ಅದೆಷ್ಟು ಸುಳ್ಳು ನೋಡಿ! ಇವಳಿಗಿಂತ ಉದಾಹರಣೆ ಬೇಕೇ?” ಅಂದುಕೊಂಡು ತಿರುಗುತ್ತಾರೆ.

ಸರಿ- ತಪ್ಪು ಅರಿಯದ ಮಗು, ಅವರ ಪಾಲಿನ ಶಿಖಂಡಿ! ಅದನ್ನ ಎದುರಿಟ್ಟುಕೊಂಡು ಅವರ ಕಾಳಗ!!

*

ಅವಳಿನ್ನೂ ಈಗ ತಾನೆ ಹದಿಹರೆಯ ಕಳೆದವಳಂತೆ ಇದ್ದಾಳೆ. ಪ್ರಪೋಸು ಮಾಡಬರುವ ಹುಡುಗರಿಗೆ “ಎಂಟು ವರ್ಷದ ಮಗು ಫ್ರೀ” ಅಂದು ಕೆಣಕುತ್ತ ಬೇಸ್ತುಬೀಳಿಸುತ್ತಾಳೆ.

ಹೀಗೇ ಅಲೆಯುತ್ತಿರುತ್ತಾಳೆ ದಿನವೆಲ್ಲ. ದುಡಿತ ಮುಗಿದರೂ ಮನೆ ಸೇರದೆ ನಾಟಕ, ಉಪನ್ಯಾಸ, ಸೆಮಿನಾರುಗಳಲ್ಲಿ ಕಳೆದುಹೋಗುತ್ತಾಳೆ.

ಅವಳ ವ್ಯಾನಿಟಿ ಬ್ಯಾಗಲ್ಲಿ ಸೇಫ್ಟಿ ಪಿನ್ನಿನ ಗೊಂಚಲು. ಕಾಲಿಗೆ ಬೆಲ್ಟಿಲ್ಲದ ಚಪ್ಪಲಿ. ಒಂಟಿಹೆಣ್ಣಿನ ‘ಬೆಲೆ’ ಅವಳಿಗೆ ಗೊತ್ತಿದೆ.
ಅವಳ ರಾತ್ರಿಗಳೆಲ್ಲ ಬಾಲ್ಕನಿಯಲ್ಲಿ ಕುಂತೇ ಕಳೆಯುತ್ತದೆ.

ಅಲ್ಲಿ ರಾಜಕೀಯಕ್ಕೆ, ವ್ಯಾಪಾರಕ್ಕೆ, ಕೂಲಿಗೆ ಜನರನ್ನ ಸೆಳೆಯೋದಿಕ್ಕೆ- ಎಲ್ಲದಕ್ಕೂ ಅಮ್ಮ ಬಿಟ್ಟ ಮಗು ಚಲಾವಣೆಯಾಗುತ್ತಿರುತ್ತದೆ.

ತೊಳೆದ ಮುಖ ನೋಡುತ್ತ ಕನ್ನಡಿ ಎದುರು ಕುಂತ ಇವಳು ತುಟಿಯ ನಡುಕ ಕಾಣದ ಹಾಗೆ ಇರುಳಲ್ಲೂ ಲಿಪ್ ಸ್ಟಿಕ್ಕು ಮೆತ್ತಿಕೊಳ್ಳುತ್ತಾಳೆ. ಸೋತ ಕಣ್ಣಿನ ಕುರುಹು ಮುಚ್ಚಲು ಕಾಡಿಗೆ ತುಂಬುತ್ತಾಳೆ. ಮುಖದ ನೋವು ಮರೆಮಾಡಲು ಮತ್ತೆ ಮತ್ತೆ ಕಾಂಪ್ಯಾಕ್ಟು….

“ಅಮ್ಮಾ…” ಆಳದಿಂದೆದ್ದ ದನಿ ಎಲ್ಲವನ್ನೂ ಕೊಚ್ಚಿಹೋಗುತ್ತದೆ.
ಮುಖದ ರಂಗು ಕಳೆಯುತ್ತದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: