ಹೀಗೂ ಒಂದು ನಿವೇದನೆ

chetana.jpg 

ಭಾಮಿನಿ ಷಟ್ಪದಿ
————–
ಚೇತನಾ ತೀರ್ಥಹಳ್ಳಿ 

ಹಳ ನಾಚಿಕೆಯಿಂದ ಬರೀತಿದೀನಿ. ಇದನ್ನ ನಿನಗೆ ಕೊಡ್ತೀನಿ ಅನ್ನೋ ನೆಚ್ಚಿಕೆಯೇನಿಲ್ಲ. ಇಂಥದನ್ನೆಲ್ಲ ಹೇಳಿಕೊಂಡು ಮೈಮೇಲೆ ಇರುವೆ ಬಿಟ್ಟುಕೊಳ್ಳಬಾರದು ಅನ್ನುತ್ತೆ ಸ್ತ್ರೀ ಸೂತ್ರ. ಆದರೇನು ಮಾಡಲಿ? ನನ್ನೊಳಗಿಂದ ಇದು ಹೊರಗೆ ಬಾರದೆ ನೆಮ್ಮದಿಯಿಲ್ಲ. ಹೆಣ್ಣುಹೊಟ್ಟೆಯೊಳಗೆ ಗುಟ್ಟು ಬಚ್ಚಿಟ್ಟುಕೊಳ್ಳಲು ಸಾಧ್ಯವಾ ಹೇಳು!?

*

ಅವನೊಬ್ಬ ಹಳೆಗೆಳೆಯ. ಬಹಳ ಹಿಂದೆ, ಕಾಲೇಜಿನ ದಿನಗಳಲ್ಲಿ ನಂಗೆ ಲೈನು ಹೊಡೀತಿದ್ದವರ ಸಾಲಿನಲ್ಲಿ ಅವನೂ ಇರುತ್ತಿದ್ದ. ಅವತ್ತು… ನಾನೆಷ್ಟು ಬೇಡವೆಂದು ಗೋಗರೆದರೂ ನೀ ನಿನ್ನ ಗೆಳೆಯರೊಟ್ಟಿಗೆ ಟ್ರಕಿಂಗ್ ಗೆ ಹೋದೆ ನೋಡು, ಅವತ್ತು… ಆ ದಿನ ಅಂವ ಫೋನು ಮಾಡಿದ್ದ. ತನ್ನ ಮದುವೆಗೆ  ಕರೆಯೋದಕ್ಕಂತಲೇ ಕಷ್ಟಪಟ್ಟು ನನ್ನ ನಂಬರು ಸಂಪಾದಿಸಿದ್ದ.

ನನ್ನ ಪ್ರೀತಿಗೂ, ಮುನಿಸಿಗೂ ಬಗ್ಗದೆ ಏನೋ ಸಾಹಸ ಮಾಡ್ತೀವೀಂತ ಹೋಗಿದ್ದ ನಿನ್ನ ಮೇಲೆ ಕೋಪ ಕುದಿಯುತ್ತಿತ್ತು. ನಿನ್ನ ಕಲೀಗಿನ ಹೆಂಡತಿಯ ಒಂದೇ ಮಾತಿಗೆ ಅಂವ ನಿಮ್ಮೊಟ್ಟಿಗೆ ಹೊರಟಿರಲಿಲ್ಲ. ನೀನು ನನ್ನ ಮಾತಿಗೆ ಬೆಲೆ ಕೊಡಲೇ ಇಲ್ಲ…

ಅಂವ ಆ ದಿನಗಳಲ್ಲಿ ನನ್ನದೊಂದು ಸ್ಮೈಲಿಗಾಗಿ ಕಿಲೋಮೀಟರುಗಟ್ಟಲೆ ಸೈಕಲ್ ತುಳಿದು ಬರ್ತಿದ್ದಿದ್ದು ನೆನಪಾಯಿತು. ನನ್ನ ಮದುವೆ ದಿನ ತಾನು ತಲೆಬೋಳಿಸ್ಕೊಂಡು ನನ್ನ ನೆನಪಿನ ವಸ್ತುಗಳನ್ನೆಲ್ಲ ತುಂಗೆಯಲ್ಲಿ ತೇಲಿಬಿಟ್ಟಿದ್ದನಂತೆ ಹುಡುಗ!

ಮೆದುವಾಗಿಬಿಟ್ಟೆ ನಾನು.
ಅಂವ ಮನೆಗೆ ಬಂದ. ‘ಹತ್ತು ವರ್ಷ ಆಯ್ತಲ್ಲೇ ನಿನ್ನ ನೋಡಿ!’ ಅಂದ. ‘ಇನ್ನೂ ಹಾಗೇ ಇದೀಯ ಬಿಡು’ ಅಂದವ ಮೆಲ್ಲಗೆ ‘ಸೆಕ್ಸಿಯಾಗಿ’ ಅಂತ ಸೇರಿಸಿದ.
ನಾನು ಗಿಲ್ಲನೆ ನಕ್ಕು ತಲೆತಗ್ಗಿಸಿ ಕುಳಿತೆ ನೋಡು, ಅಲ್ಲಿಂದ ಶುರುವಾಯ್ತು ಇದೆಲ್ಲ.
ನೀನು ಮೂರು ದಿನದಿಂದ ಮನೆಯಲ್ಲಿಲ್ಲ ಅಂದಿದ್ದು ಅವನಿಗೇನನಿಸ್ತೋ, “ಸುಖವಾಗಿದೀ ತಾನೆ?” ಕೇಳಿದ.
ನಾನು ಗೊಳೋ ಅತ್ತುಬಿಟ್ಟೆ!

ಅಂವ ಕಾಲೇಜಿನ ದಿನಗಳಲ್ಲಿ ನನ್ನನೊಲಿಸಿಕೊಳ್ಳಲು ಪಟ್ಟ ಪಡಿಪಾಟಲುಗಳನ್ನೆಲ್ಲ  ಹೇಳಿ ಹೇಳಿ ನಗಿಸಿದ. ಹಾಗೇ ಸಮಯ ಕಾದು “ಪ್ಲೀಸ್ ಒಮ್ಮೆ ಪೂರ್ತಿಯಾಗಿ ಸಿಕ್ತೀಯಾ?” ಅಂದವನ ಕಣ್ಣಲ್ಲಿ ಕೆಂಡದ ನಿಗಿನಿಗಿ.
ಆ ಕ್ಷಣಕ್ಕೂ ಹೆಂಡತಿ ಮಾತು ಕೇಳಿ ಟ್ರಕಿಂಗಿಗೆ ಹೋಗದ ನಿನ್ನ ಕಲೀಗು, ನಾನು ಗೋಳಾಡಿದರೂ ಹೋಗೇ ಸಿದ್ಧ ಅಂತ ಹೊರಟುಬಿಟ್ಟ ನೀನು…

ನಾನು ಗುಂಡಗುಂಡಗೆ ತಲೆಯಾಡಿಸಿದ್ದು ನೆನೆಸಿಕೊಂಡರೆ…. ನಂಬು, ನನ್ನ ಬಾಲಿಶತನ ಅದು.
ಮನೆಯಿಂದೆದ್ದು ಇಬ್ಬರೂ ರೆಸ್ಟೊರೆಂಟಿಗೆ ಹೋಗಿದ್ದಾಯ್ತು. ಆಗಲೂ ನಾನೇನು ಮಾಡ್ತಿರುವೆ ಅನ್ನುವ ಅರಿವಿಲ್ಲ ನನಗೆ.
ಟೇಬಲ್ಲಿನಲ್ಲಿ ನನ್ನೆದುರು ಕುಂತ ಅವನು ಸರಕ್ಕನೆ ನನ್ನ ಕೈಹಿಡಿದು ಸವರತೊಡಗಿದ.
ಹೊಟ್ಟೆ ತೊಳಸಿ ವಾಕರಿಕೆ ಬರುವಂತಾಯ್ತು! “ರೂಮ್ ಬುಕ್ ಮಾಡ್ಲಾ?” ಪಿಸುಗುಟ್ಟಿದವನ ತುಟಿ ಅಸಹ್ಯ ತರಿಸಿತು.
ನಾನಲ್ಲಿಂದ ಏಳುವ ಹೊತ್ತಿಗೆ ಅಂವ ಕೆನ್ನೆ ಮೇಲೆ ಕೈಯಿಟ್ಟುಕೊಂಡು ದುರಿದುರಿ ನೋಡ್ತಿದ್ದ.
ನಾನು ಅವನಿಗೆ ಹೊಡೆದುಬಿಟ್ಟಿದ್ದೆ!

ಜೋರು ಜೋರಾಗಿ ನನ್ನ ಫ್ಲರ್ಟ್ ಅಂತೆಲ್ಲ ಬಯ್ಯುತ್ತ ಅಂವ ಕೊಳಕುಕೊಳಕು ಗೊಣಗಾಡಿಕೊಂಡು ಹೊರಟುಹೋದ.
ನನ್ನ ತಿಕ್ಕಲು ಇಳಿದಿತ್ತು. ಅಳುತ್ತಾ ಮನೆಗೆ ಬಂದುಬಿಟ್ಟೆ.

*

ರೆಸ್ಟೊರೆಂಟಿನ ವೈಟರು ನಿನ್ನ ಪರಿಚಯದವ. ಅಂವ ನನ್ನ ಗಲಾಟೆ ಹೇಳಿಯೇ ಇದ್ದಾನೆ ನಿಂಗೆ. ಅಷ್ಟಾದರೂ ನೀ ಯಾಕೆ ಸುಮ್ಮನಿರುವೆ?

ಅಕಸ್ಮಾತ್ ನೀನು ಹಳೆ ಗೆಳತಿಯೊಟ್ಟಿಗೆ ಅಗತ್ಯ ಬಿದ್ದು ಹೋಟೆಲಿಗೆ ಹೋಗಿದ್ದರೂ ನಾನು ರಾದ್ಧಾಂತ ಮಾಡಿಬಿಡ್ತಿದ್ದೆ. ನಿನ್ನ ಮೇಲಿನ ಒಂದು ದಿನದ ಕೋಪ ನನ್ನನ್ನ ವಿದ್ರೋಹಕ್ಕೆ ಇಳಿಸಿಬಿಡ್ತಿತ್ತಲ್ಲ! ಆದರೂ ನನ್ನ ಮೇಲಿನ ಪ್ರೀತಿಗೆ, ನಂಬಿಕೆಗೆ ನೀ ಸುಮ್ಮನಿರುವೆ…

ನನಗದೇ ಸಂಕಟ. ನಾನು ತೀರ ಕೆಟ್ಟವಳು. ನೀ ಯಾಕೆ ಇಷ್ಟು ಒಳ್ಳೆಯವನಿದ್ದೀ?

4 ಟಿಪ್ಪಣಿಗಳು (+add yours?)

  1. ನಾ.ಸೋಮೇಶ್ವರ
    ಮಾರ್ಚ್ 31, 2008 @ 14:51:38

    `ನೀನು ನಿನ್ನ ಮನದೊಳಗೆ ಹೂತಿಡಬೇಕಾಗಿದ್ದ ವಿಷಯವನ್ನು ಹೀಗೆ ಖುಲ್ಲಂ ಖುಲ್ಲಾ
    ಬರೆದಿದ್ದೀಯಲ್ಲ…ಇಂತಹ ನೈತಿಕ ದೈರ್ಯ ನಿಜಕ್ಕೂ ಒಳ್ಳೆಯವರಾಗಿರುವವರಿಗೆ
    ಮಾತ್ರ ಸಾಧ್ಯವಾಗುತ್ತೆ…..`

    -ನಾಸೋ

    ಉತ್ತರ

  2. zameer
    ಮಾರ್ಚ್ 03, 2008 @ 12:28:19

    olleya ondu nivedane…. keep it up…..

    ಉತ್ತರ

  3. ಕೇಶವ
    ಮಾರ್ಚ್ 02, 2008 @ 14:19:15

    ಚೇತನಾ,

    ತುಂಬ ಸೊಗಸಾದ ಬರಹ. ಇಷ್ಟು ಚಂದದ ಪತ್ರ ಓದಿಯೇ ಇರಲಿಲ್ಲ ಇತ್ತೀಚಿಗೆ! ಯಾಕೋ, ಬಸು ಭಟ್ಟಾಚಾರ್ಯನ ಆಸ್ಥಾ ನೆನಪಾಯಿತು.

    ಕೇಶವ

    ಉತ್ತರ

  4. malathi S
    ಮಾರ್ಚ್ 02, 2008 @ 10:06:52

    Some emotions are hard to explain.
    🙂 Good one again
    malathi S

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ