ಶ್ರಾವಣಿ
ಈ ಸಲದ ಸುಗ್ಗಿಯೂ ಎದ್ದಾಯಿತು.
ಹಗ್ಣದ ಗಾಡಿಗಳು. ಉಂಗ್ಲ ಚಪ್ಪರ. ಹಣ್ಣಿನಂಗಡಿಗಳು. ಐಯ್ಸ್ ಕ್ರೀಮು ಡಬ್ಬಿಗಳು. ಮರಕಾಲು ಕೊಣ್ತಗಳು. ಕರಡಿ ಯಾಸಗಳು. ಕಾಗದದ ಹುಲಿಗಳು. ಬೇಲೆಗೆ ಬಂದು ಬಡಿಯುತ್ತಲೇ ಇರುವ ಕಡ್ಲ ತೆರೆಗಳಂತೆ ಅಲೆಯುತ್ತಿರುವ ಜನ. ಅವರ ನಡುವೆ ಜಾನಕಿ. ಅವಳೊಂದಿಗೆ ಅವಳ ನಿರೀಕ್ಷೆ, ಕಾತರ, ಬಯಕೆ, ಲಜ್ಜೆ. ಉಳಿದ ಹುಡುಗಿಯರೆಲ್ಲ ಈ ಸಲ ಅವಳು ತನ್ನ ಹುಡುಗನೊಂದಿಗೆ ಓಡಾಡಿಕೊಳ್ಳಲು ತೊಂದರೆಯಾಗಬಾರದು ಹೇಳಿ ಅವಳನ್ನು ಅವಳ ಪಾಡಿಗೆ ಬಿಟ್ಟು ತಮ್ಮ ದಾರಿ ನೋಡಿದ್ದರು.
ಜಾನಕಿ ಮೇಲಿಂದ ಕೆಳಗೆ, ಈ ದಿಕ್ಕಿನಿಂದ ಆ ದಿಕ್ಕಿಗೆ ಅಲೆದಳು. ಕಾಜೂಬಾಗದ ಹುಡುಗ ಕಾಣಲಿಲ್ಲ. ಮತ್ತೂ ಅಲೆದಳು. ಅರೆ, ಇಲ್ಲೇ ಇದ್ದಾನಲ್ಲ ಎಂದು ಕಣ್ಣುಗಳಲ್ಲಿ ಮಿಂಚೆದ್ದಿತು. ಇನ್ನೇನು ಅವನನ್ನು ಕೂಗಬೇಕು ಅನ್ನುವಾಗ ಅವನ ಜತೆ ಯಾವುದೋ ಹುಡುಗಿ – ತಾನು ಒತ್ತಿಕೊಂಡು ನಡೆಯುತ್ತಿದ್ದ ಹಾಗೇ – ಒತ್ತಿಕೊಂಡಿರುವುದನ್ನು ಕಂಡಳು. ಯಾವ ತಾಟಗಿತ್ತಿಯೋ ಅದು ಎಂದು ಒಳಗೇ ಬುಸುಗುಟ್ಟಿದಳು. ತಳಮಳವಾಯಿತು. ಕಾಲುಗಳು ಬತ್ತಿದಂತಾಯಿತು. ಬೆವರೊಡೆದು ಮೈತೋಯಿಸಿತು. ಹಾಗೇ ನಡೆದಳು. ನಡೆದಳು. ನಡೆದಳು. ಯಾವ ದಿಕ್ಕು ಎಂದು ಯೋಚಿಸಲಿಲ್ಲ. ಅದು ತೋಚಲೂ ಇಲ್ಲ. ಅಷ್ಟೊಂದು ಜನರನ್ನು ದಾಟಿ ಬಂದಿದ್ದೇನೆ ಎಂದು ಗೊತ್ತಾಗುವಂತೆ ಜನರ ಓಡಾಟ ತೆಳ್ಳಗೆ ಇದ್ದಲ್ಲಿಗೆ ಬಂದು ಮುಟ್ಟಿದಳು.
ಅಲ್ಲೊಂದು ಅರಳೀಕಟ್ಟೆ. ಸುಗ್ಗಿ ಹಬ್ಬಕ್ಕೆ ಬಂದ ಹೆಂಗಸರಲ್ಲಿ ಕೆಲವರು ತಮ್ಮ ಮಕ್ಕಳೊಂದಿಗೆ ಅಲ್ಲಿ ಕೂತು ಪುಗ್ಗಿಗೆ ಬಾಯಿ ಹಾಕಿ ಊದಿ ಮಕ್ಕಳಿಗೆ ಕೊಡುತ್ತ ಖುಷಿಪಡುತ್ತಿದ್ದರು.
ಅವರ ನಡುವೆಯೇ ಮುಖ ಸಪ್ಪಗೆ ಮಾಡಿಕೊಂಡು ಕೂತ ತನ್ನದೇ ಪ್ರಾಯದ ಹುಡುಗಿಯನ್ನು ನೋಡಿದ್ದೇ ಜಾನಕಿಗೆ ಅವಳೂ ತನ್ನಂತೇ ಕಾಣಿಸಿದಳು. ಅವಳ ಹತ್ತಿರ ಹೋದಳು. ಅವಳ ಕಣ್ಣಂಚಿನಲ್ಲಿ ನೀರು ಅಲೆದು ನಿಂತಿರುವುದನ್ನು ಕಂಡಳು. ಏನು ಎಲ್ಲಾಯ್ತು ಕೇಳಿದಳು. ಅಷ್ಟು ಕೇಳಿದ್ದೇ ಮುಖ ಮುಚ್ಚಿಕೊಂಡು ಧುಮಗುಟ್ಟಿ ಅಳತೊಡಗಿದಳು ಆಕೆ. ಅಳುತ್ತಳುತ್ತಲೇ ತಾನು ಅಗ್ರಗೋಣದ ಮೀನಾಕ್ಷಿ ಎಂಬುದನ್ನು ಹೇಳಿದಳು. ತನ್ನನ್ನು ಮದುವೆಯಾಗ್ತೆ ಹೇಳಿ ನಂಬಿಸಿದೋನು ಈಗ ಬ್ಯಾರೆ ಹುಡುಗಿ ಸಂಗ್ತಿಗೆ ಓಡಾಡ್ತಿವ ಹೇಳಿದಳು. ಮತ್ತೂ ಅತ್ತಳು. ಈಗಂತೂ ತನ್ನದೇ ಭಾಗವಾಗಿದ್ದಾಳೆ, ತನ್ನದೇ ಮತ್ತೊಂದು ರೂಪವಾಗಿದ್ದಾಳೆ ಈ ಅಗ್ರಗೋಣದ ಮೀನಾಕ್ಷಿ ಎನ್ನಿಸಿ ಅವಳನ್ನು ತಬ್ಬಿಕೊಂಡು ಬೆನ್ನು ನೇವರಿಸುತ್ತಾ ಸಂತೈಸತೊಡಗಿದಳು ಜಾನಕಿ. ಹಾಗೆ ಸಂತೈಸುತ್ತಲೇ ಹುಡುಗ ಎಲ್ಲಿಯವನೆ ಕೇಳಿದಳು. ಅವಳು ಉತ್ತರಿಸಿದಾಗ ಸಿಡಿಲೇ ಎರಗಿದಂತೆ ಬೆಚ್ಚಿದಳು. ಮರುಕ್ಷಣವೇ, ತಾನು ದಿಗಿಲಾದದ್ದು ಮೀನಾಕ್ಷಿಗೆ ತಿಳಿಯಬಾರದೆಂದು ಸಾವರಿಸಿಕೊಂಡಳು. ಅಗ್ರಗೋಣದ ಹುಡುಗಿಗೂ ಕಾಜೂಬಾಗದ ಹುಡುಗನಿಗೂ ಸುಗ್ಗಿ ಹಬ್ಬದ ದೋಸ್ತಿಯೇನೆ, ತುದಿ ಬುಡ ಒಂದೂ ಇಲ್ಲದ ಬಿಸಿ ಗಡಿಬಿಡೀಲಿ ಹುಟ್ಟೂ ದೋಸ್ತಿ ಖರೇ ಹೇಳೇ ತಿಳದ್ಯೇನೆ ಮಳ್ಳಿ ಎಂದು ಕೇಳುತ್ತ ಅವಳ ಕೆನ್ನೆ ಹಿಂಡಿದಳು.
ಮೀನಾಕ್ಷಿ ಈಗ ಕಣ್ಣೊರೆಸಿಕೊಳ್ಳುತ್ತ, ತಡೆಯಲಾರದ ಬಿಕ್ಕಳಿಕೆಗಳಲ್ಲಿ ತೋಯುತ್ತ ನಿಂತಿದ್ದಳು. ಅವಳಿಗೆ ಅರಳೀಕಟ್ಟೆಯ ಮೇಲೆ ಕೂತ ಹೆಂಗಸರು ಪುಗ್ಗಿಗೆ ಗಾಳಿ ತುಂಬುತ್ತಿರುವುದನ್ನು ಕಾಣಿಸಿದಳು. ಮೀನಾಕ್ಷಿಯ ಮುಖದಲ್ಲೀಗ ಸಾವಕಾಶವಾಗಿ ನಗೆಯ ರೇಖೆ ಅರಳತೊಡಗಿತ್ತು. ಅದನ್ನು ಕಂಡು ಖುಷಿಯಾದಳು. ಕಾಜೂಬಾಗದ ಹುಡುಗ ಮದುವೆಯಾಗುವ ಹುಡುಗಿ ತಾನೇ ಆಗಿ ಇಂದು ಅವನ ಜತೆ ತಾನೇ ಓಡಾಡಿಕೊಂಡಿದ್ದರೆ ಇಂತಾ ಮುದ್ದು ಹುಡುಗಿಯ ಕಣ್ಣೀರಿಗೆ ತಾನು ಕಾರಣಳಾಗುತ್ತಿದ್ದೆನಲ್ಲ ಎಂಬುದು ಮನಸ್ಸಲ್ಲಿ ಹಾದದ್ದೇ, ಆ ಪಟಿಂಗನ ಸಾವಾಸ ತಪ್ಪಿದ್ದೇ ಚಲೋದಾಯ್ತು ಎಂದುಕೊಂಡು ನಿರಾಳವಾದಳು. ಮಳ್ಳು ದೋಸ್ತೀಲಿ ಬಿದ್ದು ಖರೇ ಸುಗ್ಗಿ ಹಬ್ಬ ನೋಡೂದೇ ತಪ್ಪಿಸ್ಕಂಡೆ ನೀನು, ಈಗ ಬಾ ಸುಗ್ಗಿ ಹಬ್ಬ ಅಂದ್ರೆ ಎಂತಾ ಕುಶಾಲ ಹೇಳಿ ಕಾಣಿಸ್ತೆ ಎಂದವಳೇ ಅವಳ ಕೈಹಿಡಿದು ಎಳಕೊಂಡು ಓಡಿದಳು. ಪ್ರಾಯದ ಪೋರಿಯರಿಬ್ಬರು ಹಾಗೆ ಸಣ್ಣ ಮಕ್ಕಳಂಗೆ ಕೈ ಕೈ ಹಿಡಕೊಂಡು ಸುಗ್ಗಿ ತಾಡಿದ ಬಯಲಲ್ಲಿ ಓಡುವುದು ಕಂಡು ಕಟ್ಟೆ ಮೇಲಿನ ಹೆಂಗಸರೂ ಹುರುಪುಗೊಂಡರು.
ಮತ್ತೆ ಜನದ ಅಲೆಯಲ್ಲಿ ಅವರಿಬ್ಬರೂ ಸೇರಿಹೋದರು. ಇಬ್ಬರೂ ಜತೆಯಲ್ಲೇ ಬಳೆಯಂಗಡಿಗೆ ಹೋಗಿ ಕಾಜಿನ ಬಳೆ ಹಾಕಿಸಿಕೊಂಡರು. ಗೊಂಡೆ ಹೂ ಇರುವ ಒಂದೇ ಬಣ್ಣದ ಜಡೆಬಳ್ಳಿ ತಕ್ಕೊಂಡರು. ಉಂಗ್ಲಚಪ್ಪರ ಹತ್ತಿಬಂದರು. ಐಯ್ಸ್ ಕ್ರೀಮ್ ಅಂಗಡಿಯ ಹತ್ತಿರ ಬಂದಾಗ ಅಗ್ರಗೋಣದ ಮೀನಾಕ್ಷಿ ಇದ್ದಕ್ಕಿದ್ದಂತೆ ಸೆಟೆದು ನಿಂತಳು. ಏನಾಯಿತಿವಳಿಗೆ ಎಂದು ಜಾನಕಿಗೂ ಹೊಳೆಯಲಿಲ್ಲ. ಮೀನಾಕ್ಷಿ ದುರುಗುಟ್ಟಿಕೊಂಡು ನೋಡುತ್ತಿದ್ದ ಕಡೆಗೇ ನೋಡಿದರೆ, ಅಲ್ಲಿ ಕಾಜೂಬಾಗದ ಹುಡುಗ ಮತ್ತು ಆ ಹುಡುಗಿ ನಿಂತಿದ್ದರು. ಅವರ ನದರು ಎಲ್ಲೋ ಇದ್ದಂಗಿತ್ತು. ಜಾನಕಿ ಈಗ ಆ ಹುಡುಗಿಯನ್ನು ಸರಿಯಾಗಿ ನೋಡಿದಳು. ಹುಡುಗರಂತೆ ಪ್ಯಾಂಟು ಶರ್ಟು ತೊಟ್ಟಿದ್ದ ಅವಳ ಬಗ್ಗೆ ಮೂಗು ಮುರಿದಳು.
ಅವ್ಳಿಗೆ ಕಾಣಿಸ್ತೆ ನೋಡು ಈಗ ಎಂದು ಮೀನಾಕ್ಷಿ ಎಂಥದಕ್ಕೋ ತಯಾರಾದವಳಂತೆ ಕಂಡಾಗ ಜಾನಕಿ ಆತಂಕಗೊಂಡಳು. ದೊಡ್ಡದೊಂದು ಐಯ್ಸ್ ಕ್ರೀಮನ್ನು ಜಬರ್ದಸ್ತಿಯಿಂದ ಕೇಳಿದಳು. ಇವಳೇನು ಮಾಡುತ್ತಾಳೆ ಎಂಬುದು ಜಾನಕಿಯ ಊಹೆಗೆ ಸಿಕ್ಕುವ ಮೊದಲೇ ಮೀನಾಕ್ಷಿ ಅದನ್ನು ಆ ಹುಡುಗಿಗೇ ಗುರಿ ಮಾಡಿ ಬೀಸಿದ್ದಳು. ಅದು ಹೋಗಿ ಅವಳ ಮುಖಕ್ಕೆ ಪಚಕ್ಕನೆ ಬಡಿದಿತ್ತು. ಏನಾಯಿತೆಂದೇ ಗೊತ್ತಾಗದ ಆ ಹುಡುಗಿ ಬೆದರಿ ಬೊಬ್ಬೆ ಹುಯ್ದುಕೊಂಡಳು. ದಿಗಿಲಾದ ಕಾಜೂಬಾಗದ ಹುಡುಗ ಏನೆಂದು ದೃಷ್ಟಿ ಹಾಯಿಸಿದ. ಜಾನಕಿ ಮತ್ತು ಅಗ್ರಗೋಣದ ಮೀನಾಕ್ಷಿ ಕಣ್ಣಿಗೆ ಬಿದ್ದದ್ದೇ ಪ್ಯಾಂಟು ಶರ್ಟಿನ ಹೂಡುಗಿಯನ್ನು ಅದೇ ಸ್ಥಿತಿಯಲ್ಲಿ ಬಿಟ್ಟು, ಇದ್ದೆನೊ ಸತ್ತೆನೊ ಎಂಬ ತುರ್ತಿನಲ್ಲಿ ಬಿದ್ದವನಂತೆ ದಿಕ್ಕಾಪಾಲಾಗಿ ಓಡಿ ಜನರ ನಡುವೆ ಇಲ್ಲವಾದ. ಅವಳು ಮುಖಕ್ಕೆಲ್ಲ ಮೆತ್ತಿದ ಐಸ್ ಕ್ರೀಮಿನ ನಡುವೆಯೇ ತಬ್ಬಲಿಯಂತೆ ಅಳುತ್ತಲೇ ಇದ್ದಳು.
ಪ್ಯಾಂಟು ಶರ್ಟು ಹಾಕಿಕೊಂಡರೂ ಅಳುತ್ತಿರುವಾಗ ಅವಳು ತನ್ನ ಹಾಗೇ, ಅಗ್ರಗೋಣದ ಮೀನಾಕ್ಷಿಯ ಹಾಗೇ, ಸುಗ್ಗಿ ಹಬ್ಬಕ್ಕೆ ನೆರೆದ ಇಷ್ಟೆಲ್ಲಾ ಹೆಂಗಸರ ಹಾಗೇ ಕಂಡಾಗ ಜಾನಕಿ ಬೆರಗಾದಳು. ಆ ಪಾಪದ ಹುಡುಗಿಯ ಬಗ್ಗೆ ಇನ್ನಿಲ್ಲದ ಕಕ್ಕುಲಾತಿ ಮೂಡಿತು. ಈ ಬದಿಗೆ ನೋಡಿದರೆ ಅಗ್ರಗೋಣದ ಮೀನಾಕ್ಷಿಯೂ ತನ್ನಿಂದ ತಪ್ಪಾಗಿ ಹೋಯ್ತು ಎಂದುಕೊಂಡವಳಂತೆ ಕಣ್ಣಿಂದ ಬಳಬಳನೆ ನೀರಿಳಿಸುತ್ತಾ ನಿಂತುಬಿಟ್ಟಿದ್ದಾಳೆ. ಸಾವಕಾಶವಾಗಿ ಆ ಹುಡುಗಿಯ ಹತ್ತಿರ ನಡೆದ ಜಾನಕಿ, ಅವಳ ಮುಖದ ಮೇಲೆ ಚೆಲ್ಲಿದ್ದ ಐಸ್ ಕ್ರೀಮನ್ನು ತನ್ನ ಸೆರಗಿನಿಂದ ಮೆಲ್ಲಗೆ ಒರೆಸತೊಡಗಿದಳು.
ಇತ್ತೀಚಿನ ಟಿಪ್ಪಣಿಗಳು