ಹೆಸರೇ ಇಲ್ಲದ ಮನುಷ್ಯ ಮತ್ತು ಅಂತಃಪುರ

ವಿಜಿ

ಹೆಸರಿಗೊಂದು ಹೆಸರೂ ಇಲ್ಲದ ವಿಚಿತ್ರ ಮನುಷ್ಯನೊಬ್ಬನಿದ್ದ. ಜಾತಿ-ಗೀತಿಯೆಂಬ ನಾಗರಿಕ ದಾಖಲಾತಿಗಳಿಗೆ ಅತೀತನಾಗಿದ್ದಂತಹ ಅವನಿಗೆ ಕೆಲವರು ತಮ್ಮ ಜಾತಿಯವ, ಇಲ್ಲ ತಮ್ಮ ಜಾತಿಯವ ಎಂದು ಜಾತಿಯ ಕಾರ್ಡು ಕೊಡಲು ಪೈಪೋಟಿಗಿಳಿದದ್ದು ಮಾತ್ರ ವಿಚಿತ್ರವಾಗಿತ್ತು. ಅವನು ಊರಿನ ಮೊಟ್ಟ ಮೊದಲ ಡಾಕ್ಟರ್. ಯಾರಿಗೆ ಗೊತ್ತು, ಅವನೇ ಈ ದೇಶದ ಮೊಟ್ಟ ಮೊದಲ ಡಾಕ್ಟರೋ ಏನೋ.

ಸಂತನೊ ಬೈರಾಗಿಯೊ ತಲೆತಿರುಕನೊ ಅಥವಾ ಇದಾವುದೂ ಆಗಿರದೆ ನಿಜವಾಗಿಯೂ ಎಲ್ಲರಂತೇ ಇರುವ ಮನುಷ್ಯನೇ ಆಗಿರುವವನೊ ಎಂಬಂತಿದ್ದ ಅವನ ಜೀವನ ರಹಸ್ಯ ಯಾರಿಗೂ ಯಾವತ್ತಿಗೂ ಪೂರ್ತಿಯಾಗಿ ಗೊತ್ತಾಗಲೇ ಇಲ್ಲ.

ಇಂತಿದ್ದವ ಕೊಡುತ್ತಿದ್ದ ಮದ್ದು ಮಾತ್ರ ಕೆಲಸ ಮಾಡುತ್ತಿತ್ತು. ಜನಕ್ಕೂ ದನಕ್ಕೂ ಅವನು ಕೊಡುವ ಮದ್ದೇ ಆಗಿಬರಬೇಕಿತ್ತು. ಅಕಸ್ಮಾತ್ ಗುಣವಾಗಲಿಲ್ಲಾ, ಎರಡನೇ ಸರ್ತಿ ಕೊಡುವ. ಆಗಲೂ ಗುಣ ಕಾಣದೆ ಮೂರನೇ ಬಾರಿಗೆ ಹೋದರೆ ಎಂದಿನ ಮೌನದೊಂದಿಗೆ ಕಣ್ಣುಗಳಲ್ಲಿ ನಿರಾಶಾ ಭಾವ ವ್ಯಕ್ತಗೊಳಿಸಿ ಎರಡೂ ಕೈಗಳನ್ನು ನೆತ್ತಿಯ ಮೇಲಕ್ಕೆತ್ತಿ ನಮಸ್ಕರಿಸುವ ರೀತಿಯಲ್ಲಿ ಹಸ್ತಗಳನ್ನು ಸಶಬ್ದವಾಗಿ ಜೋಡಿಸಿ ಬೆನ್ನು ಹಾಕಿ ಗುಡಿಸಲೊಳಗೆ ಹೋಗಿ ಸೇರಿಕೊಂಡು ಬಿಡುವ. ಅಲ್ಲಿಗೆ, ಮತ್ತೆ ಅವನು ಹೇಳುವುದಾಗಲೀ ಕೊಡುವುದಾಗಲೀ ಏನೂ ಉಳಿದಿಲ್ಲವೆಂದೇ ಅರ್ಥವಾಗಿತ್ತು. ಹೋದವರು ಇನ್ನು ಪೇಟೆ ಡಾಕ್ಟರೇ ಗತಿಯೆಂದು ಗಾಡಿ ಹತ್ತಬೇಕು.

hennu.jpgಅವನು ಈ ಊರಿಗೆ ಎಲ್ಲಿಂದ ಬಂದ, ಯಾವಾಗ ಬಂದ ಎಂದು ತಲೆಕೆಡಿಸಿಕೊಳ್ಳುವ-ನಯಾಪೈಸೆ ಉಪಯೋಗವೂ ಇಲ್ಲದ ಕೆಲಸಕ್ಕೆ ಊರು ಕೈಹಾಕಲಿಲ್ಲ. ಅದಕ್ಕಿಂತ, ಈ ಊರವನೇ ಆಗಿಬಿಟ್ಟಿದ್ದ ಅವನ ವಿಷಯದಲ್ಲಿ ಇಂತಾ ಚೌಕಾಸಿಯ ತುರ್ತು ಎದ್ದಿರಲೂ ಇಲ್ಲವೆಂದರೆ ಹತ್ತು ಮಂದಿ ತಲೆದೂಗುವುದಕ್ಕೆ ಯೋಗ್ಯವಾದ ಮಾತು.

ಅವನಿಂದ ಮದ್ದು ತಕ್ಕೊಳ್ಳುತ್ತಿದ್ದವರು ಕೊಡುತ್ತಿದ್ದ ದವಸ ಧಾನ್ಯಗಳೇ ಅವನ ಜೀವನಕ್ಕಾಗುತ್ತಿತ್ತು. ತಾನಾಗಿ ಕೇಳದ, ಕೊಟ್ಟರೆ ಬೇಡವೆನ್ನದ ಅವನ ಜೀವನ ನಿರ್ವಹಣೆಯ ಹೊಣೆಗಾರಿಕೆಯನ್ನು ಯಾವುದೇ ಶಾಸನ ಪಾಸು ಮಾಡುವ ಗರಜು ಇಲ್ಲದೆ ಊರು ಒಪ್ಪಿಕೊಂಡಿತ್ತು. ಅವನು ಕೇಳದೆಯೂ ಊರವರೇ ಅವನ ಹಟ್ಟಿಗೆ ಹೊಸ ಹುಲ್ಲು ಹೊದೆಸುತ್ತಿದ್ದರು. ಮನೆಯ ನೆಲ, ಗೋಡೆಯನ್ನೆಲ್ಲ ಸಗಣಿಯಿಂದ ಸಾರಿಸಿ ಚೆಂದ ಮಾಡಿ ಕೊಡುತ್ತಿದ್ದರು. ಊರಿಗೇ ಗೊತ್ತಿರುವಂತೆ, ಸಂಬಂಧದೋರು ಮತ್ತೊಬ್ಬರು ಅಂತಾ ಯಾರೂ ಅವನಿಗಿರಲಿಲ್ಲ. ಅವನನ್ನು ಅವಲಂಬಿಸಿದ್ದ ಜೀವವೆಂದರೆ ಒಂದು ಹೆಣ್ಣು ನಾಯಿ. ಅದು ಈ ಊರಲ್ಲಿ ತನಗೆ ಸಿಕ್ಕ ತನ್ನ ಕೆಲವು ಬಾಯ್ ಫ್ರೆಂಡುಗಳಿಗೂ ಅವನದೇ ಆಶ್ರಯದ ವ್ಯವಸ್ಥೆ ಮಾಡಿಸಿತ್ತೆಂಬುದು ಬೇರೆ ಮಾತು. ಅವನೂ ಅವುಗಳ ವಿಷಯದಲ್ಲಿ ವಹಿಸುತ್ತಿದ್ದ ಮುತುವರ್ಜಿ ಅಪಾರವಾಗಿತ್ತು.

ಇಂತಾ ಮನುಷ್ಯನ ಹಟ್ಟಿಗೆ ಒಂದಿನ ಮಧ್ಯಾಹ್ನದ ಬಿಸಿಲಲ್ಲಿ ಒಬ್ಬ ಪ್ರಾಯದ ಹೆಣ್ಣು ಬಂದಳು. 

ಇಡೀ ಜಗತ್ತಿನಲ್ಲಿರುವ ಬಿಸಿಲು, ಮಳೆ, ಚಳಿ, ಗಾಳಿಗಳೆಲ್ಲವನ್ನೂ ತಾನೇ ದಕ್ಕಿಸಿಕೊಳ್ಳುತ್ತೇನೆ ಎಂಬಂತೆ ಬಟಾ ಬಯಲಲ್ಲಿರುವ ಅವನ ಹಟ್ಟಿಗೆ ಇಂಥದೇ ದಾರಿ ಅಂತಾ ಒಂದಿರಲಿಲ್ಲ. ಊರೊಳಕ್ಕೆ ಬಂದು ಬಿದ್ದ ಯಾರೇ ಆದರೂ ಯಾವ ತುದಿಯನ್ನೇ ಸೇರಬೇಕಾದರೂ ಅವನ ಹಟ್ಟಿಯಿರುವ ಈ ಬಯಲಿನ ಕಕ್ಷೆಗೆ ಬರಲೇಬೇಕು. ಹಾಗಿತ್ತು ಅವತ್ತಿನ ಭೂಗೋಳ. ಹಾಗೆ ಮೈಯೆಲ್ಲಾ ದಾರಿಯಾಗಿರುವ ಬಯಲಲ್ಲೊಂದು ಭ್ರಾಂತಿಯಂತಿದ್ದ ಅವನ ಹಟ್ಟಿಗೆ ಮಟಮಟ ಮಧ್ಯಾಹ್ನದಲ್ಲಿ ಪ್ರಾಯದ ಹೆಂಗಸೊಬ್ಬಳು ಬಂದು ಹೊಕ್ಕಿದ್ದನ್ನು ಊರಿನ ಅರ್ಧಕ್ಕರ್ಧ ಕಣ್ಣುಗಳು ಕಂಡವು. ಏನಿದು ಏನು ಕತೆ ಎಂಬ ಪರಮದರಿದ್ರ ಕುತೂಹಲಗಳು ಗೋಡೆಗಳಿಗಿರುವ ಕಿಟಕಿಗಳೇ ಮೊದಲಾದ ಸಕಲ ತೂತುಗಳಿಂದಲೂ ಇಣುಕಿದವು. ಇವರೆಷ್ಟೇ ಕಾದರೂ, ಒಳಗೆ ಹೋದ ಅವಳು ಮಾತ್ರ ಹೊರಗೇ ಬರಲಿಲ್ಲ. ಅದು ಆ ಊರಿನ ರಕ್ತದೊತ್ತಡ ತೀರಾ ಅಧಿಕಗೊಂಡ ವೇಳೆಯಾಗಿತ್ತು ಎಂದು ಖಾತರಿಯಾಗಿ ಹೇಳಬಹುದು.

ಇದುವರೆಗೂ ಅವನ ಬಗ್ಗೆ ಇದ್ದ ಎಂಥದೋ ಭಯ, ಭಕ್ತಿಯ ಭಾವನೆಯೆಲ್ಲ ಬಚ್ಚಲ ಮೋರಿಯಲ್ಲಿ ತೊಳ್ಕಂಡು ಹೋಯಿತೇನೋ ಎಂಬಂತೆ ಇವರ ತಲೆಯಲ್ಲಿ ಬಲುಬಗೆಯ ಕಲ್ಪನೆಗಳು ಅಸಡ್ಡಾಳವಾಗಿ ಬೆಳೆದೊ. ಕೆಲವು ಹೆಂಗಸರಿಗಂತೂ ತಡೆಯಲೇ ಆಗಲಿಲ್ಲ. ತುರ್ತಾಗಿ ಒಂದೆಡೆಗೆ ಸೇರಿ ಗುಜುಗುಜು ನಡೆಸಿದರು. ಒಂದಿಬ್ಬರು ಹೆಂಗಸರು ಸುಮ್ಮನೆ ಮದ್ದು ಕೇಳಲು ಹೋದಂತೆ ಹೋಗುವುದೆಂದು ತೀರ್ಮಾನವಾಯಿತು.

ಇನ್ನೇನು, ಅವನ ಹಟ್ಟಿಯ ಕಡೆ ಕಾಲ್ತೆಗೆಯಬೇಕೆಂದಾಗ ಒಬ್ಬಳು ಭಾರೀ ಗಾತ್ರದ ಹೆಂಗಸು ಸೀರೆಗೆ ಕಾಲು ಸಿಕ್ಕಿ ಮುಗ್ಗರಿಸಿ ಬಿದ್ದಳು. ಹಾಗೆ ಬಿದ್ದವಳ ಮೂತಿ ಅಲ್ಲೇ ಇದ್ದ ಕಲ್ಲಿಗೇ ಬಡಿದಿದ್ದರಿಂದ ಜೀವನದುದ್ದಕ್ಕೂ ನೆನಪಾಗಿರುವಂತೆ ಮುಂದಿನೊಂದು ಹಲ್ಲು ಸಮಾ ಅರ್ಧಕ್ಕೇ ಮುರಿದಿತ್ತು. ಅವಳ ಮೂಗು ಬಾಯಿಂದ ಒಡೆದುಕೊಂಡ ನೆತ್ತರಿನ ರಾಶಿ ಕಂಡೇ ಮೀಡಿಯಮ್ಮು ಗಾತ್ರದ ಸಖಿಯರೆಲ್ಲ ಕಂಗಾಲಾದರು. ಈಗ ನಿಜವಾಗಿಯೂ ಅವನ ಹತ್ತಿರ ಮದ್ದಿಗೆ ಹೋಗಲೇ ಬೇಕಾಗಿದೆ ಎಂಬುದೂ ಹೊಳೆಯಲಾರದಷ್ಟು ಮಟ್ಟಿಗೆ ಅವರು ಭ್ರಾಂತರಾದರು.

ಅವನ ಹಟ್ಟಿಯೊಳಗೆ ಹೋದ ಹೆಂಗಸು ಹೊರಬರಲಿಲ್ಲವೆಂಬುದು ಅಸಾಧಾರಣ ಪ್ರಶ್ನೆಯಾಗಿ ಹೊಟ್ಟೆಯೊಳಗೆ ಗ್ಯಾಸಿನಂತೆ ಕಟ್ಟಿಕೊಂಡು ರಾತ್ರಿಯೆಲ್ಲ ಒದ್ದಾಡಿತು ಊರು. ಅಂತಾ ಚಹರೆಯ ಹೆಂಗಸೊಬ್ಬಳು ಈ ಹಿಂದೆಂದೂ ಅವನ ಹಟ್ಟಿಗೆ ಮದ್ದು ಕೇಳಿಕೊಂಡಾದರೂ ಬಂದುದಿಲ್ಲ. ಆ ಮಾತು ಹಾಗಿರಲಿ, ಹೊರ ಊರಿನ ಯಾರೂ ಅವನ ಹತ್ತಿರ ಮದ್ದು ಕೇಳಿಕೊಂಡು ಬಂದದ್ದೇ ಇರಲಿಲ್ಲ. ಹೀಗಿರುವಾಗ ಒಬ್ಬ ಪ್ರಾಯದ ಹೆಂಗಸು ಬಂದಳು, ಅದೂ ಅವನ ಹಟ್ಟಿಯೊಳಗೆ ಸೇರಿಕೊಂಡವನು ಹೊರಗೇ ಬೀಳಲಿಲ್ಲ ಎಂಬುದು ಬಗೆಹರಿಯದ ಒಗಟಾಗಿ ಊರನ್ನು ಕಾಡಿತು.

ಮಾರನೇ ದಿನ ಬೆಳಗ್ಗೆದ್ದು ನೋಡಿದರೆ, ಆಗಲೇ ತಲೆ ಮಿಂದು ಕಂಗೊಳಿಸುತ್ತಿದ್ದ ಆ ಪ್ರಾಯದ ಹೆಂಗಸು ಅವನ ಹಟ್ಟಿಯ ಬಾಗಿಲಲ್ಲಿ ರಂಗೋಲಿ ಬರೆಯುತ್ತ ಬಾಗಿದ್ದಳು. ಊರೇ ಬೆರಗು ಬಿದ್ದುಹೋಯಿತು. ಕಿವಿಯಲ್ಲಿ ನೀರು ಹಾಕಿದರೆ ಧಿಗ್ಗನೆದ್ದು ನಾಯಿ ತಲೆ ಕೊಡಹುವ ರೀತಿಯಲ್ಲಿ ತಲೆ ಕೊಡಹಿತು. ಅದರ ಹುಳು ತುಂಬಿದ ತಲೆಯಲ್ಲಿ ಮಾತ್ರ ಏನೂ ಹತ್ತಲೂ ಇಲ್ಲ, ಇಳಿಯಲೂ ಇಲ್ಲ.

ಇವಾವುದರ ಮುಲಾಜೂ ಇಲ್ಲವೆಂಬಂತೆ ಮಧ್ಯಾಹ್ನ, ಸಂಜೆ, ಬೆಳಗುಗಳು ನಿಯತವಾಗಿ ಮುಂದುವರಿದವು. ನಿತ್ಯ ಬೆಳಗಾದರೆ ಅವನ ಹಟ್ಟಿಯೆದುರು ಆ ಹೆಂಗಸು ರಂಗೋಲಿ ಹೊಯ್ಯುವಳು. ಮಧ್ಯಾಹ್ನದ ಬಿಸಿಲಿಗೆ ಅವನ ಒಂದೆರಡು ಅರಬಿಪುಡಿಗಳೊಂದಿಗೇ ತನ್ನ ಸೀರೆ, ಲಂಗಗಳನ್ನು ಒಗೆದು ಒಣಗಲು ಹಾಕಿ ರಂಗೇರಿಸುವಳು. ಸಂಜೆಯಾಗುತ್ತಲೇ ಹಟ್ಟಿಯ ಸುತ್ತ ಬಯಲ ತಂಗಾಳಿಯಲ್ಲಿ ಅವನನ್ನು ಕೈ ಹಿಡಿದು ಒಂದು ಸುತ್ತು ನಡೆಸಿಕೊಂಡು ಬರುವಳು. ಅವರಿಬ್ಬರೊಂದಿಗೆ ನಾಯಿಗಳೂ ಗಾರ್ಡ್ ಗಳಂತೆ ವಾಕ್ ಹೋಗುವುದು ಎಂಥದೋ ಪೆರೇಡ್ ನಡೆದಂತೆ ಕಾಣುವುದಕ್ಕೆ ತೊಡಗಿತ್ತು.

ಯುಗಯುಗಗಳಿಂದಲೂ ಅಲ್ಲೊಂದು ಹೆಣ್ಣು ಹೀಗೇ ಇದ್ದುಕೊಂಡು ಬಂದಿರುವಳೇನೋ ಎಂಬಂತೆ ನಳನಳಿಸುವ ವಾತಾವರಣವನ್ನು ಆ ಪ್ರಾಯದ ಹೆಂಗಸು ಕೆಲವೇ ದಿನಗಳಲ್ಲಿ ಅರಳಿಸಿಬಿಟ್ಟಿತು. ಅವಳೊಂದು ನಿಗೂಢವೂ ಆಗಿ ಊರ ಕಣ್ಣಲ್ಲಿ ಬೆಳೆದಳು.

ಮೊದಮೊದಲು ದುಷ್ಟ ಕುತೂಹಲದಿಂದ ಅವಳನ್ನಿರಿದಿದ್ದ ಊರು ಕಡೆಕಡೆಗೆ ಎಂಥದೋ ಶಕ್ತಿಯೆಂಬಂತೆ ಅವಳನ್ನು ಭಾವಿಸತೊಡಗಿತ್ತು. ಹೆಸರೇ ಇಲ್ಲದ ಆ ಮನುಷ್ಯ ಸಾಯುವುದಕ್ಕೂ ಒಂದಿನ ಮೊದಲೇ ಸತ್ತ ಅವಳ ಸಾವಿಗೆ ಕಣ್ಣೀರಾಗಿ ತನ್ನ ಪಾಪವನ್ನು ತೊಳೆದುಕೊಂಡಿತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: