“ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎಂಬುದು ಕೂಡ ಒಂದು ಗಾದೆ. ಯಾವುದೂ ನಿಲ್ಲದಿದ್ದರೂ ಕಡೆಗೆ ಗಾದೆ ನಿಂತುಬಿಡುತ್ತದೆ. ಹಾಗೆ ಸ್ಥಾಪಿಸಿಕೊಳ್ಳಬಲ್ಲ ಸ್ವಯಂ ಶಕ್ತಿಯ ಕಾರಣದಿಂದಾಗಿಯೇ ಗೆಲ್ಲುತ್ತದೆ. ಗ್ರಾಮೀಣ ಬದುಕಿನಲ್ಲಿ, ಕೃಷಿಗೆ ಹತ್ತಿರಾದ ಬದುಕಿನಲ್ಲಿ ಗಾದೆಗೆ ಘನವಾದ ಸ್ಥಾನಮಾನ. ಅಂಥ ಕೆಲವು ಗಾದೆಗಳನ್ನು ಇಲ್ಲಿ ಕೊಡಲಾಗಿದೆ.
* * *
ನಾಚಿಕೆ ಇಲ್ಲದಳಿಯ ನಾಗರ ಹಬ್ಬಕ್ಕೆ ಬಂದ್ಯ ಅಂದ್ರೆ, ಇಲ್ಲ ಕಣತ್ತೆ ನೇಗಿಲ ಕೊರಡಿಗೆ ಬಂದೆ ಅಂದ
ಅಳಿಯನಾದವನು ಪದೇ ಪದೇ ಅತ್ತೆ ಮನೆಗೆ ಬಂದರೆ ಅಗ್ಗವೇ. ಅತ್ತೆಗೂ ಅಸಡ್ಡೆಯೇ. ನಾಗರ ಹಬ್ಬ ಹೆಣ್ಣುಮಕ್ಕಳ ಹಬ್ಬ. ಅಳಿಯನನ್ನು ಅತ್ತೆ ಸುಮ್ಮನೆ ಬಿಡುವುದಿಲ್ಲ. ನಾಗರ ಹಬ್ಬಕ್ಕೆ ಬಂದಿದ್ದೀಯಲ್ಲ, ನಾಚಿಕೆಯಾಗೋದಿಲ್ವೇ ಎಂದು ಮೂದಲಿಸುತ್ತಾಳೆ. ಅಳಿಯನ ಉತ್ತರವೇ ಬೇರೆ. ನೇಗಿಲ ತುಂಡಿಗಾಗಿ ಬಂದೆ ಅನ್ನುತ್ತಾನೆ. ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂತಾರಲ್ಲ, ಹಾಗೆ ಅತ್ತೆ ಮೂದಲಿಸೋ ಹೊತ್ತಲ್ಲಿ ಬಚಾವಾಗೋಕೆ ಅಂತಾ ಮಹಾ ಜವಾಬ್ದಾರಿ ಇರೋ ಮನುಷ್ಯನ ಥರಾ ಪೊಸು ಕೊಡೋಕೆ ಟ್ರೈ ಮಾಡ್ತಾನೆ ಈ ಘನಂದಾರಿ ಅಳಿಯ.
ಹೂವಿಗೆ ಹೋದ ಹೊನ್ನೇಗೌಡ, ಮದುವೆಯಾದ ಆರು ತಿಂಗಳಿಗೆ ಬಂದ
ಮದುವೆಯೆಂಬುದು ಯಾರದೇ ಜೀವನದಲ್ಲಿ ಮರೆಯಲಾರದ, ಮಧುರ ಕ್ಷಣಗಳಿಂದ ಕೂಡಿದ ಪವಿತ್ರ ಕಾರ್ಯ. ಅಂಥ ಕಾರ್ಯಕ್ಕೆ ಹೂವು ತರಲು ಹೋದ ಹೊನ್ನೇಗೌಡ, ಅದನ್ನು ಮರೆತು ಮತ್ತೆಲ್ಲೋ ಹೋಗಿ, ಮದುವೆಯೆಲ್ಲಾ ಮುಗಿದು ಬಹಳ ಸಮಯವಾದ ಮೇಲೆ ಹಿಂತಿರುಗಿ ಬಂದನಂತೆ. ಯಾರ್‍ಯಾರ ಮದುವೇಲಿ ಎಷ್ಟೆಲ್ಲ ಹೊನ್ನೇಗೌಡರು ಹೀಗೆ ಹೂ ತರ್ತೀವಿ ಹೇಳಿ, ಕಾಯ್ತಿದ್ದವರ ಕಿವಿಗೆ ಹೂ ಇಟ್ಟಿದ್ದಾರೊ.
*
ಆಮೆ ಸಾವಿರ ಮೊಟ್ಟೆಯಿಟ್ಟರೂ ಯಾರಿಗೂ ತಿಳಿಯೋದಿಲ್ಲ, ಕೋಳಿ ಒಂದಿಟ್ಟರೂ ಊರಿಗೆಲ್ಲಾ ತಿಳಿಯುತ್ತೆ
ಏಕಕಾಲಕ್ಕೇ ಸಹಸ್ರಾರು ಮೊಟ್ಟೆಗಳನ್ನಿಡುತ್ತದೆ ಆಮೆ. ಅಷ್ಟಿದ್ದೂ ಮಹಾ ಮೌನಿ ಅದು. ಕೋಳಿ ಹಾಗಲ್ಲ. ಒಂದು ಸಲ ಒಂದೇ ಮೊಟ್ಟೆ ಇಡುತ್ತೆ. ಮೊಟ್ಟೆ ಇಟ್ಟ ತಕ್ಷಣ ತಾನು ಮಾಡಿದ ಘನ ಕಾರ್ಯ ಊರಿಗೆಲ್ಲಾ ತಿಳೀಲಿ ಅನ್ನೋ ಥರಾ ಒಂದೇ ಸವನೆ ಅರಚುತ್ತೆ. ಕೋಳಿ ಬುದ್ಧಿ ಅನ್ನೋದು ಸುಮ್ನೇನಾ?
*
ಕುಟ್ಟೋದು ಬೀಸೋದು ನಿನಗಿರಲಿ, ಕುಸೂಲಕ್ಕಿ ನನಗಿರಲಿ
ಮೈಮುರಿಯ ಕೆಲಸ ಇದ್ರೆ ಬೇರೆ ಯಾರಾದ್ರೂ ಮಾಡ್ಬೇಕು, ನೆರಳಲ್ಲಿ ಕೂತು ಉಣ್ಣೋದಿದ್ರೆ ಮಾತ್ರ ಬೇರೆಯವರಿಗೆ ಛಾನ್ಸೇ ಕೊಡಕೂಡದು ಅನ್ನೋ ಜಾಯಮಾನದವರಿಗೆ ಏನು ಕಮ್ಮಿ? ಪ್ರಕೃತಿಯಲ್ಲಾದರೆ ಇಂಥ ಇಂಬ್ಯಾಲನ್ಸ್ ಇರೋಲ್ಲ. ಮನುಷ್ಯರ ಲೋಕದಲ್ಲಿ ಮೈಗಳ್ಳರದೇ ಭಾರ.
*
ನರಿಗೆ ಯಜಮಾನಿಕೆ ಕೊಟ್ಟದ್ದಕ್ಕೆ ಊರಿಗೊಂದು ಕೋಳಿ ತಿಂತಂತೆ
ಠಕ್ಕತನಕ್ಕೆ ನರಿ ಫೇಮಸ್ಸು. ಊಟಕ್ಕೂ ಕಡಿಮೆಯಿಲ್ಲ. ಚಿಕನ್ನು ಅಂದ್ರೆ ಎಲ್ಲಾದ್ರೂ ಹೊಕ್ಕುತ್ತೆ. ಊರಿಗೇ ನುಗ್ಗಿ ಕೋಳೀನ ಎತ್ತಾಕ್ಕೊಂಡು ಹೋಗೋ ಪ್ರಾಣಿ ಅದು. ಅಂಥಾದ್ದಕ್ಕೆ ಊರ ಯಜಮಾನಿಕೆ ಕೊಟ್ರೆ ಹೆಂಗಿದ್ದೀತು? ಊರಲ್ಲಿರೋ ಕೋಳಿಗಳನ್ನೆಲ್ಲ ಗುಳುಂ ಮಾಡದೇ ಬಿಟ್ಟೀತೇ? ಇವತ್ತಿನ ರಾಜಕಾರಣ ನೋಡ್ತಿದ್ರೆ, ಕೋಳೀನೇ ವಸಿ ವಾಸಿ, ಮತದಾರ ಪ್ರಭುಗಿಂತ ಅಂತನ್ಸುತ್ತೆ.
ಇತ್ತೀಚಿನ ಟಿಪ್ಪಣಿಗಳು